ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮನುಜ ಮತಿ ಮತ್ತು ಗಣಪತಿ

By Staff
|
Google Oneindia Kannada News

ಆಧುನಿಕ ಯುಗದಲ್ಲಿ ಗಣಪನ ಗೆಟಪ್ಪೇ ಚೇಂಜಾಗಿ ಹೋಗಿದೆ. ಕುಂಚ ಕಲಾವಿದರು, ಮೂರ್ತಿ ಕಲಾವಿದರು ಕಾಲಕ್ಕೆ ತಕ್ಕಂತೆ ಗಣೇಶನಿಗೂ ಚಿತ್ರವಿಚಿತ್ರ ವೇಷ ತೊಡಿಸುತ್ತಿದ್ದಾರೆ. ಮರಳಿನಲ್ಲಿ, ಮಣ್ಣನಲ್ಲಿ ನಾನಾ ರೂಪ ಪಡೆಯುವ ಗಣಪ ತರಕಾರಿಯಲ್ಲಂತೂ ಈ ಬಾರಿ ರೂಪುತಾಳಲಾರ! ಈ ಹೈಟೆಕ್ ಜಮಾನಾದಲ್ಲಿ ಗಜಾನನ ಡಿವಿಡಿಗಳಲ್ಲಿ ಚಡ್ಡಿ ಹಾಕ್ಕೊಂಡು ಕುಣೀತಾನೆ, ಬರಿಮೈ, ಬರಿಗಾಲಲ್ಲೇ ಹಿಮಾಲಯದಲ್ಲಿ ಸ್ಕೇಟಿಂಗೂ ಆಡುತ್ತಾನೆ. ಎಲ್ಲರಿಗೂ ಪ್ರಿಯವಾಗಿರುವ ವಿನಾಯಕ ಸಣ್ಣವರಿಗೆ, ದೊಡ್ಡವರಿಗೆ, ಪಡ್ಡೆಗಳಿಗೆ, ಕಲಾವಿದರಿಗೆ ಎಲ್ಲರಿಗೂ ಇಷ್ಟಾರ್ಥ ಸಿದ್ಧಿ ದಯಪಾಲಿಸಲಿ.

ಅಂಕಣಕಾರ : ಶ್ರೀನಿಧಿ ಡಿ.ಎಸ್.

ನನಗೊಬ್ಬ ಕಲಾವಿದ ಗೆಳೆಯ ಇದಾನೆ. ಅವನದೊಂದು ಸ್ಟುಡಿಯೋ ಇದೆ. ಸಮಯ ಕಳೆಯೋಕೆ ಅಂತ ಅಲ್ಲಿಗೆ ಯಾವಾಗಾದ್ರೂ ಹೋಗ್ತಿರ್ತೀನಿ. ಒಂದಿನ ಅವನ ಹಳೆಯ ಭಂಡಾರ ಬಿಚ್ಚಿಕೊಂಡು ಕೂತಿದ್ದ. ಕಟ್ಟು ಕಟ್ಟು ಚಿತ್ರಗಳನ್ನ ತೆಗೆತೆಗೆದು ಇಡುತ್ತಿದ್ದರೆ, ನಾನು ಒಂದೊಂದಾಗಿ ನೋಡುತ್ತ ಕೂತೆ. ಗಣಪತಿಯ ಸೀರೀಸ್ ಚಿತ್ರಗಳು ಅವು. ಸುಮಾರೊಂದು ಐವತ್ತರವತ್ತು ವಿನಾಯಕರುಗಳು. ಪ್ರತಿಯೊಂದು ಒಂದಕ್ಕೊಂದು ಭಿನ್ನ. ಅಡ್ದ ಗೆರೆ, ಉದ್ದ ಗೆರೆ, ಸುಮ್ಮನ್ನೆ ಚೆಲ್ಲಿದ ಬಣ್ಣ, ಗೀಚಿದ ಎಳೆಗಳು, ಓಂಕಾರ - ಎಲ್ಲವೂ ವಕ್ರತುಂಡರೇ, ಪ್ರಣವ ಸ್ವರೂಪಿಗಳೇ! ಬೇರಾವ ದೇವರನ್ನು, ಹೀಗೆ ಚಿತ್ರಿಸುತ್ತಾರೆ ಹೇಳಿಬಿಡಿ ನೋಡೋಣ?

ಎಲ್ಲ ಕಲಾವಿದರಿಗೂ ಗಣಪ ಆಪ್ತ. ಅವನನ್ನು ಹೇಗೆ ಬೇಕಾದರೂ ಚಿತ್ರಿಸಬಹುದು, ಅಷ್ಟು ಚಂದದ ದೇವರು ಅವನು. ಗಣೇಶನ ಚಿತ್ರಗಳು ಮತ್ತು ಮೂರ್ತಿಗಳಿಗಿದ್ದಷ್ಟು ವೈವಿಧ್ಯ ಜಗದ ಯಾವುದೇ ಧರ್ಮದ ಯಾವುದೇ ದೇವರಿಗಿರಲಾರದು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಮೋಹನ ಆಳ್ವರದೋ, ರಮಣಶ್ರೀ ಗ್ರೂಪ್‌ನ ಷಡಕ್ಷರಿಯವರ ಗಣಪರುಗಳ ಸಂಗ್ರಹ ನೋಡಿದವರಿಗೆ ಇದರ ಅರಿವಾಗುತ್ತದೆ. ದೇಶ ವಿದೇಶದ ಭಿನ್ನ ವಿಭಿನ್ನ ವಿಘ್ನೇಶರು ಇಲ್ಲಿದ್ದಾರೆ. ಒಂದೊಂದೂ ಮತ್ತೊಂದಕ್ಕೆ ಭಿನ್ನ.

ಆದರೆ, ಸಾರ್ವಜನಿಕ ಗಣಪತಿ ಮೂರ್ತಿಗಳ ಕಥೆ ಮತ್ತೊಂಥರ. ಪ್ರತಿ ವರ್ಷದ ರಾಜಕೀಯ ಪರಿಸ್ಥಿತಿ, ಸಾಮಾಜಿಕ ಸ್ಥಿತಿಗತಿ -ಪ್ರತಿಯೊಂದರ ಪರಿಣಾಮ ಕೂಡ ವಿಗ್ರಹಕ್ಕೆ ಬಿದ್ದು ಭಾರ ಹೆಚ್ಚಾಗುತ್ತದೆ. ವೀರಪ್ಪನ್ ಕೊಂದ ಪೋಲೀಸು, ಮನಮೋಹನ್ ಸಿಂಗ್, ಕಿಂಗ್ ಕಾಂಗ್, ಸ್ಪೈಡರ್ ಮ್ಯಾನ್, ಮದರ್ ಮೇರಿ ಮಗಗಣೇಶರುಗಳನ್ನು ನೋಡಿಯೇ ಇರುತ್ತೀರಿ ನೀವು. ಈ ಬಾರಿ ಅಭಿನವ್ ಬಿಂದ್ರಾ, ವಿಜೇಂದರ್ ಕುಮಾರ್ ಗಣಪರೂ ಮಾರುಕಟ್ಟೆಯಲ್ಲಿ ಸಿಗುತ್ತಾರೆ, ಬಂದೂಕು, ಕೈಗವಸುಗಳ ಸಮೇತರಾಗಿ. ಸುಶೀಲ್ ಕುಮಾರ್ ಮಾಡೆಲ್ ಮಾಡೋದು ಸ್ವಲ್ಪ ಕಷ್ಟ ಇರುವುದರಿಂದ, ತಯಾರಿಸಿರೋದು ಅನುಮಾನ.

ಗಣೇಶ ಎಲ್ಲರಿಗೂ ಒಲಿವ ದೇವ. ಹಂಪೆಯ ಸಾಸಿವೆ ಕಾಳಿನ ಗಣಪನಿಂದ ಹಿಡಿದು, ಅಲಸೂರಿನ ಲೇಕ್ ವ್ಯೂ ಗಣಪತಿ ದೇವಸ್ಥಾನದ ತನಕ ತರಹೇವಾರಿ ದೇವಸ್ಥಾನಗಳು ಗಣೇಶಂಗಿವೆ. ಉತ್ತರ ಕನ್ನಡ ಇಡಗುಂಜಿಯ ಗಣಪತಿಯನ್ನು ನೀವು ಸೀದಾ ಗರ್ಭಗುಡಿಗೇ ಹೋಗಿ ಮಾತನಾಡಿಸಬಹುದು, ಅಡ್ಮಿಶನ್ ಓಪನ್ ಟು ಆಲ್! ದಕ್ಷಿಣ ಕನ್ನಡದ, ಧರ್ಮಸ್ಥಳ ಸಮೀಪದ ಸೌತಡ್ಕದ ಸಿದ್ಧಿವಿನಾಯಕನಿಗಂತೂ ಸೂರೇ ಇಲ್ಲ, ಹಾಗಂತ ಅವನೂ ಬೇಜಾರೇನೂ ಮಾಡಿಕೊಂಡಿಲ್ಲ. ಆವಾಗಾವಾಗ ಅಲ್ಲಿ ಜನ ಹಣ್ಣಲ್ಲಿ, ತರ್ಕಾರೀಲೀ, ತೆಂಗಿನ್ ಕಾಯ್ಲಿ ಅಲಂಕಾರ ಮಾಡ್ತಾರೆ. ಜನರ ಇಷ್ಟಾರ್ಥ ಈಡೇರ್ಸೇ ಈಡೇರ್ಸ್ತಾನೆ ಅನ್ನೋ ಕಾರಣಕ್ಕೆ ಸೂರಿಲ್ಲದ, ಮಳೆ, ಬಿಸಿಲು, ಗಾಳಿಗೆ ತೆರೆದುಕೊಂಡಿರೋ ಏಕದಂತನ ಸುತ್ತ ಜನರ ಗೋಡೆ ಇದ್ದೇ ಇರತ್ತೆ.

ಇನ್ನು ಈ ಸಾರ್ವಜನಿಕ ಗಣೇಶೋತ್ಸವಗಳ ಗಣಪ.. ಬಾಲಗಂಗಾಧರ ತಿಲಕರೇನಾದರೂ ಈಗ ಇದ್ದಿದ್ದರೆ ಮತ್ತು ಬೆಂಗಳೂರಿಗೆ ಬಂದಿದ್ದರೆ ಶ್ಯಾನೇ ಬೇಜಾರಂತೂ ಮಾಡಿಕೋತಿದ್ದರು. ಅವರೇನೋ ಜನ ಎಲ್ಲ ಒಗ್ಗಟ್ಟಾಗಲಿ ಅನ್ನೋ ಕಾರಣಕ್ಕೆ ಸಾರ್ವಜನಿಕವಾಗಿ ಗಣೇಶೋತ್ಸವ ಶುರು ಮಾಡಿದ್ರು. ನಮ್ ಗಣಪತೀನೂ ಎಲ್ಲಿಗೂ ಬರೋದಿಲ್ಲ ಅನ್ನೋದಿಲ್ಲ ನೋಡಿ, ಹಾಗಾಗಿ ಎಲ್ಲ ಕಡೆ ಭರ್ಜರಿ ಪೂಜೆ ಸಂದಾಯ ಆಗೋಕೂ ಶುರುವಾಯಿತು. ಆದ್ರೆ, ಈ ಒಗ್ಗಟ್ಟು ಅನ್ನೋದು ಮಾತ್ರ ಎಲ್ಲಿ ಮಾಯ ಆಯ್ತೋ ಗೊತ್ತಿಲ್ಲ.

ಈಗ್ ನಮ್ ಏರಿಯಾನೇ ತಗಂಡ್ರೆ ಹೋದ ವರ್ಷ ಕ್ರಾಸಿಗೊಂದು ಗಣಪತಿ ಕೂರ್ಸಿದ್ರು. ಈ ವರ್ಷದ ಫ್ಲೆಕ್ಸ್ ಬ್ಯಾನರುಗಳನ್ನು ನೋಡಿ ಈಗ್ಲೇ ಮೈನಡ್ಕ ಶುರುವಾಗಿದೆ. ಕ್ರಾಸುಗಳ ವಿನಾಯಕರ ಜೊತೆಗೆ ಅಡ್ಡ ಕ್ರಾಸು ಲಂಬೋದರ, ಖಾಲಿ ಸೈಟು ಕರಿವದನರೂ ಬರುತ್ತಿದ್ದಾರೆ. ಕಳೆದ ವರ್ಷ ಜತೆಗಿದ್ದವರು ಈ ಬಾರಿ ಡಿವೈಡಾಗಿ ಪಕ್ಕದ ಕ್ರಾಸಿಗೆ ಶಿಫ್ಟಾಗಿದ್ದಾರೆ. ಹಳೇ ಬೋರ್ಡಿನ ಎರಡು ಮೂರು ಹೆಸರುಗಳಿಗೆ ಬಿಳಿ ಪಟ್ಟಿ ಹಚ್ಚಲಾಗಿದೆ. ಗಜಾನನನ ಡ್ಯೂಟಿ ಹೆಚ್ಚಾಗಿದೆ. ಆದರೆ ಅವನು ಸ್ವಲ್ಪ ರಿಲಾಕ್ಸಾಗಿ ಇರಬಹುದು, ಯಾಕಂದ್ರೆ, ತೀರ ನಾಳೆಯೇ ಇವರೆಲ್ಲ ಗಣ್ಪತೀನ ಕರಿಯೋದಿಲ್ಲ. ಕನ್ನಡ ರಾಜ್ಯೋತ್ಸವ ಶುರುವಾಗುವವರೆಗೆ ಯಾವತ್ತು ಬೇಕಿದ್ದರೂ ಇಲ್ಲೆಲ್ಲ ಶಾಮಿಯಾನ ಹರಡಬಹುದು, ಮೈಕು ವದರಬಹುದು. ಗಣಪತಿ ಆವಾಗ ಬಂದರೆ ಸಾಕು, ಒಂದ್ ರೌಂಡು ಜೀರ್ಣ ಆದ ಮೇಲೆ.

ಹೊಸ ತಲೆಮಾರಿಗೆ ಅತ್ಯಂತ ಬೇಗ ಅಡ್ಜಸ್ಟ್ ಆಗಿರುವ ಭಗವಂತರುಗಳಲ್ಲಿ ಗಣಪತಿಗೇ ಮೊದಲ ಸ್ಥಾನ ಕೊಡಬಹುದು. ಏಕೆಂದರೆ ಪ್ರತಿ ವರುಷವೂ ಅಸಂಖ್ಯಾತ ಗಣಪತಿ ಪೆಂಡಾಲುಗಳಲ್ಲಿ ಆತನ ಪಕ್ಕಕ್ಕೇ ಕಿವಿ ತೂತು ಬೀಳುವ ಸಾಮರ್ಥ್ಯದ ಆರ್ಕೆಷ್ಟ್ರಾಗಳು ಜರುಗೀ ಜರುಗೀ, ಆತನಿಗೆ ಅಭ್ಯಾಸ ಆಗಿ ಹೋಗಿದೆ. ಅಷ್ಟಕ್ಕೊ ಅವರುಗಳು ಭಕ್ತರು ತಾನೆ, ಅವರುಗಳು ಅದೇನು ಮಾಡಿದರೂ, ಒಬ್ಬ ಒಳ್ಳೆಯ ಅರ್ಚಕರನ್ನಿಟ್ಟು, ಅವನಿಗೆ ಕಾಲಕಾಲಕ್ಕೆ ತಕ್ಕ ಹಾಗೆ ಪೂಜೆ ಮಾಡಿಸುತ್ತಾರೆ ತಾನೆ? ಹಾಗಾಗಿ ಉಳಿದ ವಿಷಯಗಳ ಬಗ್ಗೆ ಆತ ತಲೆ ಕೆಡಿಸಿಕೊಳ್ಳಲಾರ. ಅಲ್ಲದೇ ಈ ಗಣಪತಿಗೆ ಮಕ್ಕಳು ಅಂದರೆ ತುಂಬ ಅಚ್ಚುಮೆಚ್ಚು. ಇದು ಅವರಿಗೂ ಗೊತ್ತಾಗಿಬಿಟ್ಟಿದೆ. ಹಾಗಾಗಿ ದೊಡ್ಡವರ ಹಾಗೆ ಚಿಳ್ಳೆಪಿಳ್ಳೆಗಳೂ ಗಣೇಶನ್ ಕೂರ್ಸೋಕೆ ಶುರು ಮಾಡಿದಾರೆ. ದಿನಕ್ಕೆರಡು ಟೀಮು ಹುಡುಗರದು, ಮನೆ ಮುಂದೆ ಬರುತ್ತದೆ, ನಿಷ್ಕಲ್ಮಶ ನಗು ಮತ್ತು ಪೆಕರುಪೆಕರಾಗಿ ಆಡುವ ಅವರಿಗೆ ಗಣೇಶನೇ ಒಲಿದ್ದಾನೆ ಅಂದ ಮೇಲೆ, ನೀವೇನು ಮಾಡುತ್ತೀರಿ ಹೇಳಿ? ಸುಮ್ನೆ ದುಡ್ ಕೊಟ್ ಬಿಡಿ, ರಿಸ್ಕ್ ಯಾಕೆ? ಪವರ್‌ಫುಲ್ ದೇವ್ರು ಬೇರೆ. ಅವ್ರು ಅದೆಲ್ಲಿ ವಿಘ್ನೇಶ್ವರ ಪ್ರತಿಷ್ಠಾಪನೆ ಮಾಡುತ್ತಾರೆ ಅಂತ ನೋಡೋಕೆ ಹೋಗಬೇಡಿ. ತಪ್ಪು ಅದು, ಮಕ್ಕಳನ್ನು ಇಂತಹ ವಿಷಯದಲ್ಲಿ ಪರೀಕ್ಷೆ ಮಾಡಬಾರದು, ಮನಸ್ಸಿಗೆ ನೋವಾಗುವ ಸಾಧ್ಯತೆ ಇದೆ- ನಿಮ್ಮ ಮನಸ್ಸಿಗೆ!

ಮಕ್ಕಳೂ ಮತ್ತು ಗಣಪತಿ ಅಂದ್ ಕೂಡ್ಲೇ, ಈ ವಿಷ್ಯ ನೆನ್ಪಾಯ್ತು. ಇಂಗ್ಲೀಷಲ್ಲಿ, ಮೈ ಫ್ರೆಂಡ್ ಗಣೇಶಾ ಅನ್ನೋ ಮಕ್ಕಳ ಸಿನ್ಮಾ ಇದೆ. ಮೊನ್ ಮೊನ್ನೆ ಅದರ ಎರಡನೇ ಭಾಗ ಕೂಡ ರಿಲೀಸಾಯ್ತು. ಒಬ್ಬ ದೇವರನ್ನು ಬಹಳ ಭಿನ್ನವಾಗಿ ತೋರಿಸಿರೋ ಸಿನಿಮಾಗಳು ಇವು. ಇಲ್ಲಿ ಗಣೇಶ ಗಿಟಾರು, ಡ್ರಮ್ಮುಗಳನ್ನು ಬಾರಿಸುತ್ತಾನೆ! ಅಂಗಿ ಚಡ್ಡಿ ಹಾಕಿಕೊಂಡು ಓಡಾಡುತ್ತಾನೆ. ಪ್ರಾಯಶ: ಬೇರೆ ದೇವರಾಗಿದ್ದರೆ, ಕೋಮು ಭಾವನೆಗಳನ್ನು ಕೆರಳಿಸುತ್ತಾನೆ ಅನ್ನುವ ಗುಲ್ಲೆದ್ದು ಗಲಾಟೆಯಾಗುತ್ತಿತ್ತೇನೋ. ಆದರೆ ಈ ಸಿನಿಮಾದ ವಿಷಯದಲ್ಲಿ ಹೀಗಾಗಲಿಲ್ಲ. ಗಣಪತಿಯೇ ಹಾಗೆ!

ಮತ್ತೆ ಗಣೇಶನಿಗೆ ತಿಂಡಿಗಳಂದ್ರೆ ಇಷ್ಟ ಅನ್ನೋದು ನಾವೇ ಮಾಡಿಕೊಂಡ ರೂಲ್ಸಿದ್ದರೂ ಇರ್ಬೋದೇನೋಪಾ! ಅಲ್ಲಾ, ಆಷ್ಟಷ್ಟ್ ಬೆಸ್ಟ್ ರುಚ್ ರುಚಿ ತಿಂಡಿ ಇಲ್ಲಾಂದ್ರೆ ಒಂದೇ ದಿನ ಮಾಡಕಾಗ್ತಿತ್ತಾ? ದಟ್ಸ್ ಕನ್ನಡದಲ್ಲೂ ಕಡ್ಬು ಗಿಡ್ಬು ಮಾಡೋದು ಹ್ಯಾಂಗೆ ಅಂತ ಹೇಳಿದಾರೆ, ನೋಡ್ಕಳಿ. ತೀರಾ ಹರಟೇ ಹೋಡೀತಾ ಕೂರದಿಲ್ಲ, ಕೈಗೆ ಬಾಯ್ಗೆ ಕೆಲ್ಸ ಕೊಟ್ಗೊಳಿ!

ಗಣೇಶ ಚತುರ್ಥಿ, ಶುಭ ತರಲಿ.

ಓದಿಗೆ ಮತ್ತು ತಿನಿಸಿಗೆ
ಗಣೇಶ ಬಂದ... ಎಷ್ಟೊಂದು ಕಡುಬು ತಂದ...
ಸಂಗೀತಪ್ರಿಯ, ನಾದಲೋಲ ನಮ್ಮ ಗಣೇಶ
ಕಲಾವಿದನ ಕುಂಚಕ್ಕೆ ಕುಣಿಯುವ ಕೈಗೊಂಬೆಯೋ!

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X