ಸಂಗೀತಪ್ರಿಯ, ನಾದಲೋಲ ನಮ್ಮ ಗಣೇಶ
| ತಿರುಚೆಂಗಾಟಂಗುಡಿಯಲ್ಲಿರುವ ವಾತಾಪಿಗಣಪತಿ. |
*ಹಂಸಾನಂದಿ
ಈ ಬಾರಿ ಸೆಪ್ಟೆಂಬರ್ 3ರ ಭಾದ್ರಪದ ಶುಕ್ಲ ಚೌತಿಯಂದು ಗಣೇಶನನ್ನು ತೊಡಕುಗಳನ್ನು ಕಳೆಯುವವನೆಂದು ನಾವೆಲ್ಲ ಪೂಜಿಸುತ್ತೇವೆ. ನಮ್ಮ ಹಿಂದಿನ ಹರಿದಾಸರು, ಮತ್ತೆ ಹಲವು ಕವಿಗಳು ವಿನಾಯಕನನ್ನು ಬಗೆಬಗೆಯಾಗಿ ಹೊಗಳಿರುವವರೇ. ಕನಕದಾಸರ ಹಾಡೊಂದು ಎಲ್ಲರ ಮನದಲ್ಲಿ ನೆಲೆಯಾಗಿ ನಿಲ್ಲುವಂತೆ ವಿದ್ಯಾಭೂಷಣರು ಹಾಡಿರುವುದು ನಮಗೆಲ್ಲ ತಿಳಿದಿರುವುದೇ "ನಮ್ಮಮ್ಮ ಶಾರದೆ ಉಮಾಮಹೇಶ್ವರಿ ನಿಮ್ಮೊಳಗಿಹನ್ಯಾರಮ್ಮ" ಅನ್ನುವ ಈ ಹಾಡು ಹಂಸಧ್ವನಿ ರಾಗದಲ್ಲಿದೆ.
ಅದೇ ಹಂಸದ್ವನಿ ರಾಗದಲ್ಲಿ ಮತ್ತೊಂದು ಪ್ರಖ್ಯಾತ ರಚನೆ ಇದೆ. ಅದು ಮುತ್ತುಸ್ವಾಮಿ ದೀಕ್ಷಿತರ "ವಾತಾಪಿಗಣಪತಿಂ ಭಜೇಹಂ" ಅನ್ನುವ ಕೃತಿ. ಸುಮಾರು ಒಂದು ನಾಲ್ಕಾರು ಸಂಗೀತ ಕಚೇರಿಗಳಿಗಾದರೂ ನೀವು ಹೋಗಿದ್ದರೆ ನಿಮಗೆ ಈ ರಚನೆ ತಿಳಿದೇ ಇರಬೇಕು ಎನ್ನುವಷ್ಟು ಪ್ರಖ್ಯಾತವಾದ ರಚನೆ ಇದು.
ಮುತ್ತುಸ್ವಾಮಿ ದೀಕ್ಷಿತರು (ಕ್ರಿ.ಶ.1776-1835) ಕರ್ನಾಟಕಸಂಗೀತದ ತ್ರಿಮೂರ್ತಿಗಳಲ್ಲೊಬ್ಬರು ಎಂದು ಹೆಸರಾದವರು. ಇವರು ಸುಮಾರು ನಾನೂರು ರಚನೆಗಳನ್ನು ರಚಿಸಿದ್ದಾರೆ. ಅದರಲ್ಲಿ 3-4 ಮಾತ್ರ ತೆಲುಗು/ಮಣಿಪ್ರವಾಳದಲ್ಲಿದ್ದು ಉಳಿದದ್ದೆಲ್ಲ ಸಂಸ್ಕೃತದಲ್ಲಿವೆ. ಅಷ್ಟು ಸರಳವಲ್ಲದಿದ್ದರೂ ದೀಕ್ಷಿತರ ರಚನೆಗಳು ಸಂಗೀತರಸದಿಂದ ತುಂಬಿವೆ. ತಂಜಾವೂರಿನ ಬಳಿಯ ತಿರುವಾರೂರಿನಲ್ಲಿ ಜನಿಸಿದ ಇವರು ದೇಶದ ಹಲವೆಡೆಗಳಿಗೆ ಯಾತ್ರಿಕರಾಗಿ ಹೋಗಿ, ಅಲ್ಲಿನ ದೇವಾಲಯಗಳ ದೇವಾನುದೇವತೆಗಳ ಬಗ್ಗೆ ತಮ್ಮ ಕೃತಿಗಳನ್ನು ರಚಿಸಿದ್ದಾರೆ.
ಬಾದಾಮಿಯ ಚಾಲುಕ್ಯ ರಾಜ ಎರಡನೇ ಪುಲಿಕೇಶಿ ಪಲ್ಲವರನ್ನು ಕಾಂಚಿಗೇ ಹೋಗಿ ಸೋಲಿಸಿದ್ದ. ಅದರ ಪ್ರತೀಕಾರಕ್ಕೆ, ಕ್ರಿ.ಶ. 643ರ ಸುಮಾರಿನಲ್ಲಿ ಪಲ್ಲವರು ಬಾದಾಮಿಗೇ ಬಂದು ಲಗ್ಗೆ ಹಾಕಿ ಪುಲಿಕೇಶಿಯನ್ನು ಸೋಲಿಸಿಯೂಬಿಟ್ಟರು. ಆ ಸಮಯದಲ್ಲಿ, ಬಾದಾಮಿಯಲ್ಲಿದ್ದ ಗಣಪತಿಯ ದೇವಾಲಯದಿಂದ ಮೂಲ ವಿಗ್ರಹವನ್ನು ಪಲ್ಲವರ ಸೈನ್ಯಾಧಿಕಾರಿಯಾಗಿದ್ದ ಪರಂಜ್ಯೋತಿ (ಸಿರುತ್ತೊಂಡನ್ ಎಂಬ ಹೆಸರೂ ಇವನಿಗಿದೆ) ಎನ್ನುವವನು ಎತ್ತಿ ಒಯ್ದು ಅವನ ಊರಾದ ತಿರುಚೆಂಕಾಟಂಗುಡಿಯಲ್ಲಿ ಸ್ಥಾಪಿಸಿದನಂತೆ. ಈಗ ಬಾದಾಮಿ ಕೋಟೆಯಲ್ಲಿ ಕೆಳಗಿನ ಶಿವಾಲಯ ಎಂದು ಕರೆಯುವ ದೇವಾಲಯವೇ ಮೊದಲಿಗೆ ಈ ಗಣಪತಿಯಿದ್ದ ದೇವಾಲಯ ಎಂದು ಹೇಳಲಾಗುತ್ತೆ.
ಕೆಳಗಿನ ಚಿತ್ರದಲ್ಲಿ ಕಾಣುವ ಬಾದಾಮಿ ಕೋಟೆಯ ತುತ್ತತುದಿಯಲ್ಲಿ ಕಾಣುವುದು ಮೇಲಿನ ಶಿವಾಲಯ. ಚಿತ್ರದ ಎಡಭಾಗದಲ್ಲಿ, ಸುಮಾರು ನಡುವಿನಲ್ಲಿ ಇರುವುದೇ ಕೆಳಗಿನ ಶಿವಾಲಯ. ಈಗ ಗುಡಿಯ ಒಳಗೆ ಯಾವ ವಿಗ್ರಹವೂ ಇಲ್ಲ. ಇದೇ ವಾತಾಪಿಗಣಪತಿಯ ಮೂಲ ನೆಲೆ ಎನ್ನಲಾಗಿದೆ.
![]() |
| ಚಿತ್ರ ಕೃಪೆ: ಲಕ್ಷ್ಮೀ ಶ್ರೀನಾಥ್ |
ಬಾದಾಮಿಯ ಮೊದಲ ಹೆಸರು ವಾತಾಪಿ. ಹಾಗಾಗಿ, ತಿರುಚೆಂಗಾಟಂಗುಡಿಯಲ್ಲಿ ಸ್ಥಾಪನೆ ಆದಮೇಲೆ, ಈ ಗಣಪತಿ ವಾತಾಪಿಗಣಪತಿಯಿಂದೇ ಪ್ರಖ್ಯಾತವಾಗಿದ್ದರಲ್ಲೇನೂ ಅಚ್ಚರಿಯಿಲ್ಲ.
ಕೆಲವು ಕಾಲದ ನಂತರ ತಿರುವಾರೂರಿನ ತ್ಯಾಗರಾಜ ದೇವಾಲಯದ ಪ್ರಾಕಾರದಲ್ಲಿಯೂ ಈ ಮೂರ್ತಿಯ ರೀತಿಯದೇ ಇನ್ನೊಂದು ಮೂರ್ತಿಯನ್ನು ಪ್ರತಿಷ್ಟಾಪನೆ ಮಾಡಲಾಯಿತಂತೆ. ಆ ಗಣಪತಿಯನ್ನೂ ವಾತಾಪಿಗಣಪತಿ ಎಂದೇ ಕರೆಯಲಾಗುತ್ತೆ.ತಿರುವಾರೂರಿನ ತ್ಯಾಗರಾಜ ದೇವಾಲಯ ಬಹಳ ದೊಡ್ಡದು. ಅಲ್ಲಿನ ಪ್ರಾಕಾರದಲ್ಲಿ ಹದಿನಾರು ಬಗೆಯ ಗಣಪತಿಯ ಗುಡಿಗಳಿದ್ದು, ಅವು ತಿರುವಾರೂರು ಷೋಡಶ ಗಣಪತಿಗಳು ಎಂದೇ ಪ್ರಸಿದ್ದವಾಗಿವೆ. ಮುತ್ತುಸ್ವಾಮಿ ದೀಕ್ಷಿತರು ವಾತಾಪಿ ಗಣಪತಿಂ ಭಜೇಹಂ ಎಂದು ಹಾಡಿದ್ದು ತಿರುವಾರೂರಿನಲ್ಲಿನ ಗಣಪನ ಮೇಲೇ. ಅವರು, ಎಲ್ಲಿರುವ ಹದಿನಾರೂ ಗಣಪತಿಗಳ ಬಗ್ಗೆಯೂ ಒಂದೊಂದು ಕೃತಿ ರಚನೆ ಮಾಡಿದ್ದಾರೆ. ಆಸಕ್ತರಿಗಾಗಿ, ವಾತಾಪಿಗಣಪತಿಂ ಭಜೇಹಂ ಕೃತಿಯ ಸಾಹಿತ್ಯ ಇಲ್ಲಿದೆ:
ಪಲ್ಲವಿ:
ವಾತಾಪಿ ಗಣಪತಿಂ ಭಜೇಹಂ ವಾರಣಾಸ್ಯಂ ವರಪ್ರದಂ ಶ್ರೀ
ಅನುಪಲ್ಲವಿ:
ಭೂತಾದಿ ಸಂಸೇವಿತ ಚರಣಂ ಭೂತಭೌತಿಕ ಪ್ರಪಂಚಾಭರಣಮ್
ವೀತರಾಗಿಣಂ ವಿನುತಯೋಗಿಣಂ ವಿಶ್ವಕಾರಣಂ ವಿಘ್ನವಾರಣಂ
ಚರಣ:
ಪುರಾ ಕುಂಭಸಂಭವ ಮುನಿವರ ಪ್ರಪೂಜಿತಮ್ ತ್ರಿಕೋಣಮಧ್ಯಗತಂ
ಮುರಾರಿ ಪ್ರಮುಖಾದ್ಯುಪಾಸಿತಮ್ ಮೂಲಾಧಾರ ಕ್ಷೇತ್ರಸ್ಥಿತಂ
ಪರಾದಿ ಚತ್ವಾರಿ ವಾಗಾತ್ಮಕಂ ಪ್ರಣವಸ್ವರೂಪ ವಕ್ರತುಂಡಂ
ನಿರಂತರಂ ನಿಟಿಲ ಚಂದ್ರಖಂಡಮ್ ನಿಜವಾಮಕರ ವಿಧೃತೇಕ್ಷುದಂಡಂ
ಕರಾಂಬುಜ ಪಾಶ ಬೀಜಾಪೂರಂ ಕಲುಶವಿದೂರಂ ಭೂತಾಕಾರಂ
ಹರಾದಿ ಗುರುಗುಹ ತೋಷಿತ ಬಿಂಬಂ ಹಂಸಧ್ವನಿ ಭೂಷಿತ ಹೇರಂಬಂ
ಕೆಲ ಸಂಶೋಧಕರು ಮೂಲ ವಾತಾಪಿಗಣಪತಿಯೇ ತಿರುವಾರೂರಿನಲ್ಲಿದೆ ಎಂದೂ, ತಿರುಚೆಂಗಾಟಂಗುಡಿಯದ್ದೇ ನಂತರದ್ದು ಎಂದೂ ಹೇಳುತ್ತಾರೆ. ಅಂತೂ ಒಟ್ಟಿನಲ್ಲಿ ಬಾದಾಮಿಯಿಂದ ಹೊರಟ ಈ ಗಣಪತಿ ದಕ್ಷಿಣ ತಮಿಳುನಾಡಿನಲ್ಲಿ ಸುಮಾರು ಸಾವಿರದ ಮುನ್ನೂರುವರ್ಷಕ್ಕೂ ಹೆಚ್ಚಿಗೆ ಮನೆ ಮಾಡಿದ್ದಾನೆ. ಇನ್ನೂರು ವರ್ಷಗಳಿಂದ, ಮುತ್ತುಸ್ವಾಮಿದೀಕ್ಷಿತರ ರಚನೆಯಿಂದ ಎಲ್ಲೆಡೆಯೂ ಪ್ರಖ್ಯಾತನಾಗಿದ್ದಾನೆ.













Click it and Unblock the Notifications