Kriti Sanon: ನಟರಿಗೆ ಸಿಗುವ ಸೌಲಭ್ಯ ನಟಿಯರಿಗೆ ಇಂದಿಗೂ ಇಲ್ಲ, ಸಂಭಾವನೆಯಲ್ಲೂ ತಾರತಮ್ಯ: ನಟಿ ಕೃತಿ ಸನೊನ್ ಆಕ್ಷೇಪ
ಬಾಲಿವುಡ್‌ನ ಜನಪ್ರಿಯ ನಟಿ ಕೃತಿ ಸನೊನ್ ಚಿತ್ರರಂಗದಲ್ಲಿ ಇಂದಿಗೂ ಮನೆಮಾಡಿರುವ ಲಿಂಗ ತಾರತಮ್ಯ ಮತ್ತು ನಾಯಕಿಯರು ಎದುರಿಸುತ್ತಿರುವ ಆರ್ಥಿಕ ಸವಾಲುಗಳ ಬಗ್ಗೆ ಮುಕ್ತವಾಗಿ ಧ್ವನಿ ಎತ್ತಿದ್ದಾರೆ. ಚಿತ್ರರಂಗದಲ್ಲಿ ಪಿತೃಪ್ರಧಾನ ಮನಸ್ಥಿತಿಯು ಇಂದಿಗೂ ಆಳವಾಗಿ ಬೇರೂರಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಚಿತ್ರರಂಗದಲ್ಲಿ ಸಮಾನತೆಯನ್ನು ಸಾಧಿಸಲು ಇದನ್ನು ಸತತವಾಗಿ ಪ್ರಶ್ನಿಸಬೇಕಾಗಿದೆ ಎಂದಿದ್ದಾರೆ.
ಬಜೆಟ್ ಕಡಿತದಲ್ಲಿ ನಟಿಯರೇ ಟಾರ್ಗೆಟ್
ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ಚಿತ್ರರಂಗದಲ್ಲಿ ಹಣಕಾಸಿನ ವಿಚಾರವಾಗಿ ತಾರತಮ್ಯದ ಹೋರಾಟಗಳು ಇನ್ನೂ ನಡೆಯುತ್ತಿವೆ ಎಂದು ಕೃತಿ ಒಪ್ಪಿಕೊಂಡಿದ್ದಾರೆ. ಚಿತ್ರದ ಬಜೆಟ್ ಅನ್ನು ಕಡಿತಗೊಳಿಸಬೇಕಾದ ಸಂದರ್ಭ ಎದುರಾದಾಗ, ನಿರ್ಮಾಪಕರು ಹೆಚ್ಚಾಗಿ ನಾಯಕಿಯರ ಸಂಭಾವನೆಯನ್ನೇ ಗುರಿ ಮಾಡುತ್ತಾರೆ. ಚಿತ್ರದ ಬಜೆಟ್‌ನ ಬಹುಪಾಲು ಸಂಭಾವನೆ ನಾಯಕ ನಟನಿಗೆ ಹೋಗುತ್ತಿದ್ದರೂ, ವೆಚ್ಚ ಉಳಿಸುವ ಪ್ರಯತ್ನದಲ್ಲಿ ನಾಯಕಿಯರ ಸಂಭಾವನೆಯಲ್ಲಿ ಮಾತ್ರ ಕಡಿತ ಮಾಡಲು ಚೌಕಾಶಿ ನಡೆಸಲಾಗುತ್ತದೆ. ಇದು ಕೇವಲ ಹಣದ ವಿಷಯವಲ್ಲ, ಬದಲಿಗೆ ಒಬ್ಬ ಕಲಾವಿದೆಗೆ ನೀಡುವ ಗೌರವದ ಪ್ರಶ್ನೆಯಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಹೀರೋಗಳು ಕಾಯಬಾರದು ಅಂತಾರೆ
ತಮ್ಮ ಆರಂಭಿಕ ದಿನಗಳ ಅನುಭವಗಳನ್ನು ಹಂಚಿಕೊಂಡ ಕೃತಿ, ಸೆಟ್‌ಗಳಲ್ಲಿಯೂ ನಾಯಕ ಮತ್ತು ನಾಯಕಿಯರ ನಡುವೆ ತಾರತಮ್ಯ ಮಾಡಲಾಗುತ್ತದೆ ಎಂದು ದೂರಿದ್ದಾರೆ. ನಾಯಕ ನಟರು ಕಾಯಬಾರದು ಎಂಬ ಕಾರಣಕ್ಕೆ ನಾಯಕಿಯರನ್ನು ಮುಂಚಿತವಾಗಿಯೇ ಮೇಕಪ್‌ಗೆ ಕರೆಯುವುದು ಅಥವಾ ನಾಯಕರಿಗೆ ನೀಡುವಂತಹ ಉತ್ತಮ ದರ್ಜೆಯ ಸೌಲಭ್ಯಗಳನ್ನು ನಾಯಕಿಯರಿಗೆ ನೀಡದಿರುವುದು ಪಿತೃಪ್ರಧಾನ ವ್ಯವಸ್ಥೆಯ ಭಾಗವಾಗಿದೆ ಎಂದು ಅವರು ಹೇಳಿದ್ದಾರೆ.
ಹೀರೋಗಳಿಗೆ ಐಷಾರಾಮಿ ಕಾರು ಕೊಡ್ತಾರೆ
ಚಿತ್ರೀಕರಣದ ಸೆಟ್‌ಗಳಲ್ಲಿ ನಾಯಕ ನಟ ಕಾಯಬಾರದು ಎಂಬ ಕಾರಣಕ್ಕೆ, ನಾಯಕಿಯರು ಸಿದ್ಧರಿದ್ದಾರೆಯೇ ಎಂದು ಮೊದಲು ಪರಿಶೀಲಿಸುವ ಪ್ರವೃತ್ತಿ ಇರುತ್ತದೆ. ಇದು ಬದಲಾಗಬೇಕಿದೆ ಎಂದು ಅವರು ಹೇಳಿದ್ದಾರೆ. ವೃತ್ತಿಜೀವನದ ಆರಂಭಿಕ ದಿನಗಳಲ್ಲಿ ತಮಗಿಂತ ಹಿರಿಯರಲ್ಲದ ನಾಯಕ ನಟರಿಗೆ ತಮಗಿಂತ ಉತ್ತಮ ಸೌಲಭ್ಯಗಳು ಅಥವಾ ಐಷಾರಾಮಿ ಕಾರುಗಳನ್ನು ನೀಡಲಾಗುತ್ತಿತ್ತು. ಇದು ಕೇವಲ ಕಾರಿನ ವಿಷಯವಲ್ಲ, ಬದಲಿಗೆ ಒಬ್ಬ ಕಲಾವಿದೆಯಾಗಿ ಸಮಾನವಾಗಿ ಗೌರವಿಸಲ್ಪಡುವ ವಿಷಯ ಎಂದಿದ್ದಾರೆ.
ಈ ಎಲ್ಲ ಅಸಮಾನತೆಗಳನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಕೃತಿ ಸನೊನ್ ಅವರು ಈಗ ನಿರ್ಮಾಣ ಕ್ಷೇತ್ರಕ್ಕೂ ಕಾಲಿಟ್ಟಿದ್ದಾರೆ. ತಮ್ಮ 'ಬ್ಲೂ ಬಟರ್‌ಫ್ಲೈ ಫಿಲ್ಮ್ಸ್' ಮೂಲಕ ಮಹಿಳಾ ಪ್ರಧಾನ ಕಥೆಗಳಿಗೆ ಮತ್ತು ಚಿತ್ರರಂಗದಲ್ಲಿ ಮಹಿಳೆಯರಿಗೆ ಸಮಾನ ಅವಕಾಶ ನೀಡಲು ಶ್ರಮಿಸುತ್ತಿರುವುದಾಗಿ ತಿಳಿಸಿದ್ದಾರೆ. ಇನ್ನು ವೃತ್ತಿ ಬದುಕಿನ ವಿಚಾರಕ್ಕೆ ಬಂದರೆ, ಕೃತಿ ನಟನೆಯ ಬಹುನಿರೀಕ್ಷಿತ 'ಕಾಕ್ಟೇಲ್ 2' ಚಿತ್ರವು ಜೂನ್ 19ರಂದು ಬಿಡುಗಡೆಯಾಗಲಿದೆ. ಈ ಚಿತ್ರದಲ್ಲಿ ಶಾಹಿದ್ ಕಪೂರ್ ಮತ್ತು ರಶ್ಮಿಕಾ ಮಂದಣ್ಣ ಕೂಡ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಸ್ಟಾರ್ ಕಿಡ್ಸ್ ಪಾಲಾಗುತ್ತಿದ್ದ ಅವಕಾಶಗಳು
ವೃತ್ತಿಜೀವನದ ಮೊದಲ ವರ್ಷಗಳಲ್ಲಿ ತಾವು ತೀವ್ರ ಹತಾಶೆಯನ್ನು ಅನುಭವಿಸಿದ್ದಾಗಿ ಕೃತಿ ಹೇಳಿಕೊಂಡಿದ್ದಾರೆ. ಕೆಲವು ಚಿತ್ರಗಳ ಪಾತ್ರಗಳಿಗೆ ತಮಗೆ ಸಿಗುವ ಎಲ್ಲಾ ಸಾಧ್ಯತೆಗಳಿದ್ದರೂ, ಅಂತಿಮವಾಗಿ ಅವು ಸ್ಟಾರ್ ಕಿಡ್ಸ್‌ಗಳ (ಸಿನಿಮಾ ಹಿನ್ನೆಲೆಯುಳ್ಳವರು) ಪಾಲಾಗುತ್ತಿದ್ದವು ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ. ತಮಗೂ ಚಿತ್ರರಂಗಕ್ಕೂ ಯಾವುದೇ ಪೂರ್ವ ಸಂಬಂಧವಿಲ್ಲದೆ ಪ್ರವೇಶಿಸಿದ್ದರಿಂದ ಮತ್ತು ಯಾವುದೇ ಪ್ರಭಾವಿ ಸಂಪರ್ಕಗಳು ಇಲ್ಲದ ಕಾರಣ ಈ ಹಾದಿ ಮತ್ತಷ್ಟು ಕಠಿಣವಾಗಿತ್ತು ಎಂದು ಅವರು ವಿವರಿಸಿದ್ದಾರೆ. 'ಮಿಮಿ' (Mimi-2021) ಚಿತ್ರಕ್ಕೂ ಮುನ್ನ ತಾವು ಗೊಂದಲ ಮತ್ತು ತಪ್ಪು ನಿರ್ಧಾರಗಳ ಹಂತದಲ್ಲಿದ್ದೆವು ಎಂದಿರುವ ಅವರು, ತಮಗೆ ಹೆಚ್ಚಿನ ಸಾಮರ್ಥ್ಯವಿದ್ದರೂ ಸರಿಯಾದ ಅವಕಾಶಗಳು ಸಿಗುತ್ತಿರಲಿಲ್ಲ ಎಂದು ಕೃತಿ ತಿಳಿಸಿದ್ದಾರೆ.













Click it and Unblock the Notifications