ಮಾಲಿಕೆ : ನನ್ನ ತಂದೆಗೆ ನಾನು ಬರೆದ ಪತ್ರ

ಅಮ್ಮನ ದಿನಾಚರಣೆಗೆ ಹೋಲಿಸಿದರೆ ತಂದೆಯ ದಿನಾಚರಣೆ ಸಪ್ಪೆ ಸಪ್ಪೆ. ತಂದೆನೋ, ಅಪ್ಪನೋ, ಅಣ್ಣನೋ, ಡ್ಯಾಡಿಯೋ ಹೇಗೇ ಕರೆಯಿಸಿಕೊಂಡರೂ ಜನ್ಮದಾತನಿಗೆ ನಾವು ಸೆಲಿಬ್ರಿಟಿ ಸ್ಥಾನ ಕೊಟ್ಟಿಲ್ಲ. ಇದೊಂದು ಲೋಪ. ಈ ಆರೋಪ ಎಲ್ಲ ಮಕ್ಕಳ ಮೇಲಿದೆ. ನಮ್ಮ ತಂದೆಯ ಮೇಲೂ ಆರೋಪವಿದೆ. ಏಕೆಂದರೆ ಅಪರಪ್ಪನ್ನೇನೂ ನಮ್ಮಪ್ಪ ಯಾವತ್ತೂ ಕೊಂಡಾಡಿಲ್ಲ.
ತಂದೆಯ ದಿನಾಚರಣೆಯನ್ನು ನಮ್ಮ ವೆಬ್ ಸೈಟಿನಲ್ಲಿ ಹೇಗೆ ಆಚರಿಸಬೇಕು ಎಂಬ ಬಗ್ಗೆ ಸಂಪಾದಕೀಯ ಮಂಡಳಿಯ ಶನಿವಾರದ ಸಭೆಯಲ್ಲಿ, ಕೊನೆ ಗಳಿಗೆಯಲ್ಲಿ ಚರ್ಚಿಸಲಾಯಿತು. ಗೂಗಲ್ ಇಂಜಿನಿನಲ್ಲಿ ಫಾದರ್ಸ್ ಡೇ ಬಗ್ಗೆ ಮಾಹಿತಿ ಹುಡುಕಿ ತೆಗೆದು 'ಈ ದಿನವನ್ನು ಕಂಡು ಹಿಡಿದವನು ಇಂಥವ' ಎಂದು ಬರೆಯುವುದಕ್ಕಿಂತ ನಮ್ಮನ್ನು ಕಂಡು ಹಿಡಿದ ನಮ್ಮ ತಂದೆಯರ ಬಗೆಗೇ ಬರೆದುಕೊಂಡರೆ ಹೇಗೆ ಎಂಬ ಸಲಹೆ ಬಂತು.
ಸಂಪಾದಕೀಯ ವಿಭಾಗದಲ್ಲಿ ಬರವಣಿಗೆ ಕೆಲಸ ಮಾಡುವ ಪ್ರತಿಯೊಬ್ಬರೂ ಅವರ ತಂದೆಯ ಬಗ್ಗೆ ಒಂದು ಲೇಖನ ಬರೆಯಬೇಕೆಂಬ ನಿರ್ಣಯಕ್ಕೆ ಬರಲಾಯಿತು. ಅದರಂತೆ, ಭಾನುವಾರದಿಂದ 'ನನ್ನ ತಂದೆ' ಲೇಖನ ಮಾಲೆಯನ್ನು ಪ್ರಕಟಿಸಲಾಗುವುದು. 'ನನ್ನ ತಂದೆ'ಯ ಬಗ್ಗೆ ಲೇಖನ ಬರೆಯುವುದು ಏಕಕಾಲಕ್ಕೆ ಸುಲಭವೂ ಹೌದು ಕಷ್ಟವೂ ಹೌದು. ಸುಲಭ ಯಾಕೆಂದರೆ, ನಮ್ಮ ಅಪ್ಪನ ಬಗ್ಗೆ ಬರೆಯುವಾಗ ಸಂಶೋಧನೆ ಮಾಡುವ ಅಗತ್ಯವಿಲ್ಲ. ಕಷ್ಟ ಯಾಕೆಂದರೆ ಬುರುಡೆ ಹೊಡೆಯುವುದಕ್ಕೆ ಮನಸ್ಸು ಒಪ್ಪುವುದಿಲ್ಲ.
ನಿಮಗೂ, ನಿಮ್ಮ ತಂದೆಗೂ ಅಪ್ಪನ ದಿನಾಚರಣೆಯ ಅಡ್ವಾನ್ಸ್ ಶುಭಾಶಯಗಳು.











Click it and Unblock the Notifications