ಅನಿವಾಸಿ ಕನ್ನಡಿಗರ ಪ್ರೀತಿಯ ನಾಗತಿ
ಹಾಂಗ್ ಕಾಂಗಿನಿಂದ ಹಾರಿಬರುತ್ತಿರುವ ವಾಯುಮಾರ್ಗದಲ್ಲೇ ತಮ್ಮ ವಿರುದ್ಧದ ಗುರುತರ ಆರೋಪಗಳ ಗಾರ್ಬೇಜುಗಳನ್ನು ಕ್ಯಾರಿಬ್ಯಾಗಿನಲ್ಲಿ ತುರುಕಿಕೊಂಡೇ ಅವರು ಬೆಂಗಳೂರು ಅಂತರರಾಷ್ಟೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದಿದ್ದರು. ಬಂದ ಕೂಡಲೇ ಅವರ ಪ್ರೀತಿಯ ಆಯ್ದ ಕೆಲವು ಟಿವಿ ಚಾನಲ್ಲುಗಳಿಗೆ ಗಡಿಬಿಡಿ ಸಂದರ್ಶನ ನೀಡಿ ಐಂದ್ರಿತಾ ಅವರ ಆರೋಪಗಳನ್ನು ಅಲ್ಲಗೆಳೆದದ್ದು ಬಿಟ್ಟರೆ ಬೇರಿನ್ನಾವ ಪತ್ರಕರ್ತರನ್ನು ಅವರು ಹತ್ತಿರ ಬಿಟ್ಟುಕೊಂಡಿರಲಿಲ್ಲ.
ನಾಗತಿಯವರನ್ನು ಖುದ್ದಾಗಿ ಕಂಡು, ಅಥವಾ ಫೋನು ಮಾಡಿ ಮುದ್ದಾಂ ವಿವರಗಳನ್ನು ಪಡೆದು ಬರೆಯಬೇಕೆಂದು ಪ್ರಯತ್ನಿಸಿದ ಅನೇಕ ವರದಿಗಾರರ ಬ್ರದರ್ ಗಳಿಗೆ ಅವರು ಗಪ್ ಚುಪ್ ಆಗಿದ್ದರು. ಆದರೆ, ಸುವರ್ಣ ಟಿವಿ ಚಾನಲ್ ಮತ್ತು ಟಿವಿ 9 ಚಾನಲ್ಲಿಗೆ ಮಾತ್ರ ಅವರು ಅದು ಹೇಗೋ ಹೋಗಿ ಐಟಂ ಕೊಟ್ಟಿದ್ದು ಕನ್ನಡದ ಇತರ ಐದಾರು ಚಾನಲ್ಲುಗಳ ಕ್ಯಾಮರಾ ಕಣ್ಣುಗಳನ್ನು ಸೆಪಿಯಾ ಟೋನ್ ಆಗಿಸಿದ್ದವು.
ಟಿವಿ ಮಾಧ್ಯಮದ ಗತಿಯೇ ಹೀಗಿರುವಾಗ ಇನ್ನು ಮುದ್ರಣ ಮಾಧ್ಯಮಗಳ ಪಾಡು ವರ್ಣಿಸಬೇಕಿಲ್ಲ. ನನ್ನ ಅನೇಕ ಸ್ನೇಹಿತರು ಅಂದು ದೂರವಾಣಿ ಕರೆಮಾಡಿ 'ನಾಗತಿ ಫೋನು ಎತ್ತುತ್ತಿಲ್ಲ ಯಾಕೆ ಶಾಮ್ ' ಎಂದು ವಿಚಾರಿಸಿದ್ದುಂಟು. 'ನನಗೆ ಗೊತ್ತಿಲ್ಲಪ್ಪ, ಆಗಸ್ಟ್ 15ರಂದು ಅವರು ಜೆಎಸ್ ಎಸ್ ಸಭಾಂಗಣದಲ್ಲಿ ಏರ್ಪಡಿಸುವ ಪುಸ್ತಕ ಬಿಡುಗಡೆ ಮತ್ತು ನಾಗತಿಹಳ್ಳಿಯಲ್ಲಿ ಏರ್ಪಡಿಸಿದ್ದ nagatihalli village cultural festival ಆಹ್ವಾನ ಪತ್ರಿಕೆ ಬಿಟ್ಟರೆ ದಟ್ಸ್ ಕನ್ನಡ ಡಾಟ್ ಕಾಂ ತಾಣವನ್ನು ಅವರು ಮೂಸಿಯೂ ನೋಡುವುದಿಲ್ಲ' ಎಂದು ಹೇಳಿ ಸುಮ್ಮನಾಗಿಸಿದ್ದೆ.
ತಮ್ಮ ಅನೇಕಾನೇಕ ಮುದ್ರಣ ಪತ್ರಕರ್ತ ಮಿತ್ರರನ್ನು ಮಾತನಾಡಿಸಲಾಗಲಿಲ್ಲವಲ್ಲ ಮತ್ತು ಅವರ ಕರೆಗಳನ್ನು ಎತ್ತಲಾಗಿಲ್ಲವಲ್ಲ ಎಂಬ ವ್ಯಥೆ ನಾಗತಿಯವರನ್ನು ಕಾಡುತ್ತಿತ್ತು. ಇದರ ಜತೆಗೆ ಉದಯವಾಣಿ ಪತ್ರಿಕೆಯವರು ಡಿಸೆಂಬರ್ 16ರ ಸಂಚಿಕೆಯಲ್ಲಿ 'ನಾಗತಿಗೆ ಈ ಗತಿ ಬರಬಾರದಿತ್ತು' ಎಂಬ ಹೆಂಡ್ಡಿಗ್ ನಲ್ಲಿ 'ತಮ್ಮ ಚಪ್ಪಡಿ ತಾವೇ ಎಳೆದು ಕೊಂಡರು' ಎಂಬ ವಿಚಾರವನ್ನು ಸವಿಸ್ತಾರವಾಗಿ ವರ್ಣಿಸಿದ್ದರು. ಇನ್ನು ಲೇಟು ಮಾಡಿದರೆ ಹೆಚ್ಚು ಅಪರಾಧವಾದೀತು ಎಂದು ಎಚ್ಚೆತ್ತುಕೊಂಡ ನಾಗತಿ ಸುದ್ದಿಗೋಷ್ಠಿಗೆ ಮನಸೋತರು.
ನೂರು ಜನ್ಮಕು ಚಿತ್ರಕ್ಕಾಗಿ ಅಲ್ಲದಿದ್ದರೂ ಕೇವಲ ಪತ್ರಿಕಾ ಮಿತ್ರರೊಂದಿಗೆ ಸೌಹಾರ್ದ ಸಂಬಂಧಗಳನ್ನು ಉಳಿಸಿಬೆಳೆಸಬೇಕೆಂಬ ದೃಷ್ಟಿಕೋನದಿಂದ ಇವತ್ತಿನ ಸುದ್ದಿಗೋಷ್ಠಿಗೆ ಎಲ್ಲಾ ಪತ್ರಿಕೆಯ ವರದಿಗಾರರನ್ನು ನಾಗತಿ ಆಹ್ವಾನಿಸಿದ್ದರು. ಅವರ ಪಟ್ಟಿಯಲ್ಲಿ ಅಂತರ್ಜಾಲ ತಾಣಗಳು ಇರಲಿಲ್ಲ. ಆದರೆ, ನಾಗತಿ ಎಂದರೆ ಡೆಟ್ರಾಯಿಟ್, ವಾಷಿಂಗ್ಟನ್, ಸ್ಯಾನ್ ಫ್ರಾನ್ಸಿಸ್ಕೊ, ಲಂಡನ್, ಸಿಂಗಾಪುರ, ದುಬೈ, ಏಶಿಯಾ ಪೆಸಿಫಿಕ್ ಮುಂತಾದ ಅಂತಾರಾಷ್ಟ್ರೀಯಮಟ್ಟದ ನಗರಗಳಲ್ಲಿ ನೆಲೆಸಿರುವ ಕನ್ನಡಿಗರಿಗೆ ತುಂಬಾ ಪ್ರೀತಿ. ಹಾಗಾಗಿ, ಅನಿವಾಸಿ ಕನ್ನಡ ಬಾಂಧವರಿಗೆಲ್ಲ ಸುದ್ದಿ ಮುಟ್ಟಿಸುವ ಕಾಯಕವನ್ನೇ ಅರ್ಧ ಕೈಲಾಸ ಮಾಡಿಕೊಂಡಿರುವ ನಾನು, ಒಬ್ಬ ಆಸಾಮಿಯನ್ನು ತೋಂಟದಪ್ಪ ಛತ್ರಕ್ಕೆ ಛೂ ಬಿಟ್ಟಿದ್ದೆ....