ಅಯ್ಯಯ್ಯೋ.. 93 ರೂಪಾಯಿಗೆ ಕುಸಿತ ಕಂಡ ಭಾರತದ ಕರೆನ್ಸಿ, ಡಾಲರ್ ಎದುರು ಮಹಾ ಪತನ.. Rupee And Dollar
ಭಾರತೀಯ ರೂಪಾಯಿ ದೊಡ್ಡ ಮಟ್ಟದಲ್ಲಿ ಕುಸಿತ ಕಂಡಿದೆ, ಯುದ್ಧದ ಆಘಾತದ ನಡುವೆ ಒಂದು ಕಡೆ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಹೆಚ್ಚಾಗುತ್ತಾ ಇದೆ. ಹೀಗಿದ್ದಾಗ ಗ್ಯಾಸ್ ಸಿಲಿಂಡರ್ ಸಮಸ್ಯೆ ಕಾರಣಕ್ಕೆ ಜನರು ಕೂಡ ರೊಚ್ಚಿಗೆದ್ದು, ನಿತ್ಯದ ಬದುಕು ಕೂಡ ಕಷ್ಟವಾಗುತ್ತಿದೆ ಎಂದು ಆಕ್ರೋಶದ ಬೆಂಕಿ ಹೊರ ಹಾಕುತ್ತಿದ್ದಾರೆ. ಆದರೆ ಬೇರೆ ದೇಶಗಳಿಗೆ ಹೋಲಿಕೆ ಮಾಡಿದರೆ ಭಾರತದಲ್ಲಿ ಪೆಟ್ರೋಲ್ & ಡೀಸೆಲ್ ಬೆಲೆ ಭಾರಿ ಪ್ರಮಾಣದಲ್ಲಿ ಕಡಿಮೆಗೆ ಸಿಗುತ್ತಿದೆ. ಹೀಗೆ ಒಂದು ಸಮಾಧಾನದ ನಡುವೆ ದಿಢೀರ್ ಮತ್ತೊಂದು ಆಘಾತ ಎದುರಾಗಿದ್ದು, ಇತಿಹಾಸದಲ್ಲೇ ಮೊದಲ ಬಾರಿಗೆ ಡಾಲರ್ ಎದುರು ಭಾರತೀಯ ರೂಪಾಯಿ ಮೌಲ್ಯ 93 ರೂಪಾಯಿಗೆ ಮಹಾ ಕುಸಿತವನ್ನ ಕಂಡಿದೆ.
ಹೌದು ಶುಕ್ರವಾರ ಎಂದರೆ ಮಾರ್ಚ್ 20, 2026ರ ಈ ದಿನ ಬೆಳಗಿನ ವಹಿವಾಟಿನಲ್ಲಿ ಅಮೆರಿಕನ್ ಡಾಲರ್ ಎದುರು ಭಾರತದ ರೂಪಾಯಿ ಭಾರಿ ದೊಡ್ಡ ಮಟ್ಟದಲ್ಲಿ ಕುಸಿತ ಕಂಡಿದೆ. ಯುದ್ಧದ ಕಾರಣದಿಂದ ಅಮೆರಿಕನ್ ಡಾಲರ್ ಬಲವಾಗುತ್ತಿದ್ದು, ಜೊತೆಗೆ ವಿದೇಶಿ ಹೂಡಿಕೆದಾರರು ನಿರಂತರವಾಗಿ ಹಣವನ್ನು ಭಾರತೀಯ ಮಾರುಕಟ್ಟೆ ಮೂಲಕ ಹೊರಗಡೆ ತೆಗೆದುಕೊಂಡು ಹೋಗುತ್ತಿರುವ ಕಾರಣಕ್ಕೆ ಈಗ ಭಾರಿ ದೊಡ್ಡ ಹಂತದಲ್ಲಿ ಕುಸಿತ ಕಂಡಿದೆ ರೂಪಾಯಿ ಮೌಲ್ಯ.

ಪ್ರಪಂಚದಲ್ಲಿ ಆರ್ಥಿಕ ಸುನಾಮಿ ಸೃಷ್ಟಿ
ಹತ್ತಾರು ಪೈಸೆಗೂ ಹೆಚ್ಚು ಮೌಲ್ಯ ಒಂದೇ ದಿನ ಕುಸಿತ ಕಂಡ ಹಿನ್ನೆಲೆ, ಇದೀಗ ಪ್ರತಿ ಒಂದು ಡಾಲರ್‌ಗೆ ನಾವು 93.40 ರೂಪಾಯಿ ಕೊಡಬೇಕಾದ ಪರಿಸ್ಥಿತಿ ಬಂದಿದೆ. ಇದು ಭಾರತದ ಆರ್ಥಿಕ ಪರಿಸ್ಥಿತಿ ಹೊಸ ಸವಾಲು ತಂದೊಡ್ಡುವ ಮೂಲಕ, ಯುದ್ಧದ ಸಮಯದಲ್ಲಿ ಮತ್ತೊಂದು ತಲೆನೋವು ಸೃಷ್ಟಿ ಮಾಡಿದೆ. ಕೇಂದ್ರ ಸರ್ಕಾರ ಕೂಡ ಇದೀಗ ರೂಪಾಯಿ ಬಲವರ್ಧನೆಗೆ ಕಠಿಣ ಕ್ರಮ ಜರುಗಿಸಲು ಮುಂದಾಗಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇರಾನ್ ವಿರುದ್ಧ ಯುದ್ಧ ಮಾಡುವ ನಿರ್ಧಾರವನ್ನು ಕೈಗೊಂಡ ನಂತರ ಇಡೀ ಜಗತ್ತಿನಲ್ಲಿ ಆರ್ಥಿಕ ಬಿರುಗಾಳಿ ಎದ್ದು, ಸಂಚಲನ ಸೃಷ್ಟಿಯಾಗಿದೆ.
ಆರ್‌ಬಿಐ ಮಹತ್ವದ ಕ್ರಮ ಜಾರಿಗೆ
ಜಾಗತಿಕ ಮಟ್ಟದಲ್ಲಿ ಕಚ್ಚಾ ತೈಲದ ಬೆಲೆ ಏರಿಕೆಯಾಗಿರುವುದು ರೂಪಾಯಿಗೆ ಮತ್ತಷ್ಟು ಒತ್ತಡ ತಂದಿದೆ. ದೇಸಿ ಷೇರು ಮಾರುಕಟ್ಟೆ ಸ್ವಲ್ಪ ಮಟ್ಟಿಗೆ ಏರಿಕೆ ಕಂಡಿದ್ದರೂ, ರೂಪಾಯಿ ಮೌಲ್ಯ ಕುಸಿತ ತಳಮಳದ ವಾತಾವರಣ ಸೃಷ್ಟಿ ಮಾಡಿದೆ. ಇಂಟರ್‌ಬ್ಯಾಂಕ್ ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ, ರೂಪಾಯಿ 92.92 ರಿಂದ ಆರಂಭಗೊಂಡು ಮೊದಲ ಬಾರಿಗೆ 93 ರೂಪಾಯಿ ಗಡಿ ದಾಟಿ ಗರಿಷ್ಠ 93.40 ರೂಪಾಯಿಗೆ ತಲುಪಿಬಿಟ್ಟಿದೆ ಭಾರತೀಯ ಕರೆನ್ಸಿ ಮೌಲ್ಯ. ಮತ್ತೊಂದು ಕಡೆ ರೂಪಾಯಿ ಮೌಲ್ಯ ಇನ್ನಷ್ಟು ಕುಸಿತ ಕಾಣುವುದನ್ನು ತಡೆಯಲು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ, ಅಂದರೆ ಭಾರತದ ಕೇಂದ್ರ ಬ್ಯಾಂಕ್ ಮತಹ್ವದ ಕ್ರಮ ಕೈಗೊಂಡಿದೆ. ಆರ್‌ಬಿಐ ಈಗ ಅಮೆರಿಕನ್ ಡಾಲರ್ ಮಾರಾಟ ಮಾಡುವ ಮೂಲಕ ರೂಪಾಯಿ ಮೌಲ್ಯ ಕುಸಿತವನ್ನ ಈಗ ತಾತ್ಕಾಲಿಕವಾಗಿ ತಡೆಹಿಡಿಯಲು ಪ್ರಯತ್ನಿಸುತ್ತಿದೆ ಎನ್ನುತ್ತಿದ್ದಾರೆ ತಜ್ಞರು.












Click it and Unblock the Notifications