ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಿಮ್ಮ ನೆನಪೇ ಹಿಂಡುವುದು ಹಗಲಿನಲಿ, ಇರುಳಿನಲಿ ಕಾಡುವುದು ನಿಮ್ಮ ಕನಸು

By ಸ ರಘುನಾಥ, ಕೋಲಾರ
|
Google Oneindia Kannada News

ನನ್ನೆದೆಯ ವಸಂತ,

ನಿನ್ನ ಕ್ಷೇಮಾಕಾಂಕ್ಷಿಯಾಗಿ, ನಾನು ಕ್ಷೇಮ.

ಮುದ್ದಾದ ಕನ್ನಡದಲ್ಲಿ 'ನನ್ನ ಚಂದನಗಂಧಿ ಶಕುಂತಲೆಗೆ' ಎಂದು ಬರೆದು ಕಳುಹಿಸಿದ 'ಮಲ್ಲಿಗೆಯ ಮಾಲೆ' ಕವನ ಸಂಕಲವನ್ನು ಅಂಚೆಯವ ತಂದುಕೊಟ್ಟಾಗ ನಾನು ನಡುಮನೆಯಲ್ಲಿ ಅಕ್ಕಿ ಆರಿಸುತ್ತಿದ್ದೆ. ಪುಸ್ತಕದ ಕಟ್ಟು ಬಿಚ್ಚಿ ಪುಟ ತೆರೆದಾಗ ಕಂಡಿದ್ದು 'ಅಕ್ಕಿಯಾರಿಸುವಾಗ' ಎಂಬ ಪದ್ಯ! ಓದಿದಾಗ ಕಲ್ಪನೆಗೆ ಜಾರಿ ಹೋದೆ. ನಿನ್ನ ಮನೆ ಸೇರಿದ ಮೊದಲ ದಿನಗಳು ಹೀಗೆಯೇ ಇದ್ದಾವೆ ಅನ್ನಿಸಿತು. ಅಂಥ ದಿನಗಳೂ ಅದ್ಭುತವಾದವು ಎಂಬ ಭಾವಗಾಳಿ ಬೀಸಿತು.

ಎಂಥ ಉಡುಗೊರೆ ಕಳಿಸಿರುವೆ! ಅದು ನಿತ್ಯ ನೂತನವಾಗಿ ಉಳಿಯುವ ಉಡುಗೊರೆ. ಅದನ್ನು ಎದೆಗವುಚಿಕೊಂಡಾಗ ಅದು ನೀನೇ ಅನ್ನಿಸಿತು.

ಮೊದಲ ನೋಟದಲ್ಲೇ ನನ್ನ ಮನಸು ಹಿಡಿದಿಟ್ಟ ಚಂದನಗಂಧಿ ಶಕುಂತಲೆಗೆಮೊದಲ ನೋಟದಲ್ಲೇ ನನ್ನ ಮನಸು ಹಿಡಿದಿಟ್ಟ ಚಂದನಗಂಧಿ ಶಕುಂತಲೆಗೆ

ಆ ರಾತ್ರಿ ಟಿವಿಯಲ್ಲಿ 'ಮೈಸೂರು ಮಲ್ಲಿಗೆ' ಸಿನೆಮಾ ಪ್ರದರ್ಶನವಾಗುತ್ತಿತ್ತು. ಸಂಕಲನವನ್ನು ತೊಡೆಯ ಮೇಲಿರಿಸಿಕೊಂಡೇ ನೋಡಿದೆ. ನೋಡುತ್ತಿರುವಾಗ ಕೈ ನನಗರಿವಿಲ್ಲದೆಯೇ ಪುಸ್ತಕವನ್ನು ನೇವರಿಸುತ್ತಿತ್ತು. ನಿನ್ನ ಮೈ ನೇವರಿಸುತ್ತಿರುವೆನೇನೋ ಅಂದುಕೊಳ್ಳುತ್ತಿದ್ದೆ. ಮಾರನೇ ದಿನ ರೂಮು ಸೇರಿದವಳು ಹೊರಗೆ ಬರದೆ 'ಮೈಸೂರು ಮಲ್ಲಿಗೆ' ಪದ್ಯಗಳನ್ನು ಓದಿದೆ.

Marriage

ಓದಿದೆ ಅನ್ನುವುದಕ್ಕಿಂತ ಅವುಗಳಲ್ಲಿನ ಭಾವಗಳನ್ನು ಎದೆಗೆ ತಂದುಕೊಳ್ಳುತ್ತ ನಮ್ಮ ದಾಂಪತ್ಯ ಪ್ರೇಮ ಲೋಕದಲ್ಲಿ ವಿಹರಿಸುತ್ತಿದ್ದೆ ಅನ್ನುವುದು ಸರಿ.

ಕೆಂಜಿಗುರ ಕಾಂತಿಯ ನನ್ನ ವಸಂತನೇ, ಅದರಲ್ಲಿನ ಒಂದೊಂದು ಕವಿತೆಯೂ ಭವಿಷ್ಯದ ನನ್ನ ಜೀವನದಲ್ಲಿ ಆಗುವಂತಹ ಘಟನೆಗಳನ್ನೇ ಚಿತ್ರಿಸಿಕೊಂಡಿವೆಯೇನೋ ಅನ್ನಿಸಿತು. ನಮ್ಮಂತೆಯೇ ಇರುವವರನ್ನು ಮೈಸೂರು ಮಲ್ಲಿಗೆಯ ದಾಂಪತ್ಯ ಪ್ರಣಯ ಪರಿಮಳದ ಲೋಕಕ್ಕೆ ನಮ್ಮಿಬ್ಬರ ಪರವಾಗಿ ಆಹ್ವಾನಿಸುತ್ತಿರುವೆ.

ನನ್ನ ಚೆಲುವ ವಸಂತನೇ, 'ಮಾವನ ಮನೆಯಲ್ಲಿ' ಕವಿತೆ ಓದಿದಾಗಂತೂ ರಾಯರನ್ನು ನೀನಾಗಿ ಊಹಿಸಿಕೊಂಡು ಇನ್ನೊಮ್ಮೆ ಓದಿದೆ. ನಾದಿನಿ, 'ಪದುಮಳು ಒಳಗಿಲ್ಲ- ನಕ್ಕಳು, ರಾಯರು ನಗಲಿಲ್ಲ'. ಇಲ್ಲಿ ನಿನ್ನ ನಗದ ಮುಖ ತೋರಿ ಬಂದು ನಗು ತಡೆಯಲಾಗಲಿಲ್ಲ. ನಾನು ನಗುವುದನ್ನು ನೋಡಿ ಅಪ್ಪ ಬೆರಗಾಗಿ ನಿಂತಿದ್ದರೆ, ಅಮ್ಮ ಏನೇ ಅದು ಹುಚ್ಚುನಗೆ ಎಂದು ಗದರಿಸಿದಾಗಲೇ ನಗೆ ನಿಂತಿದ್ದು. ಹೀಗೆಂದು ಅವರಿಗೆ ಹೇಳಲಾದೀತೆ, ನನ್ನ ಪ್ರಿಯ ವಸಂತ?

'ಬಳೆಗಾರನ ಹಾಡು' ಓದುತ್ತ ಕಣ್ಣೀರು ತುಂಬಿ ಬಂತು. ಮಾವನ ಮೇಲೆ ಕೋಪಗೊಂಡು ಹೆಂಡತಿಯ ಸೀಮಂತಕ್ಕೆ ಬರದೆ ಉಳಿದ ರಾಯರ ಮೇಲೆ ಸಿಟ್ಟು ಬಂತು. 'ಹಿಂಡಬಾರದು ದುಂಡುಮಲ್ಲಿಗೆಯ ದಂಡೆಯನು' ಎಂದು ಹೇಳುವ ಬಳೆಗಾರ ಎಷ್ಟು ವಿವೇಕಿ ಅಲ್ಲವೆ? ಹಾಗೆಯೆ 'ಮುನಿಸು ಮಾವನ ಮೇಲೆ, ಮಗಳೇನ ಮಾಡಿದಳು?' ಎಂದು ಕೇಳಿದ್ದು ನ್ಯಾಯವಲ್ಲವೆ?

ಮುಂದೆ ನಮ್ಮಲ್ಲಿಯೂ ಹೀಗಾದರೆ ನೀನು ಮಾತ್ರ ಮುನಿದು ದೂರ ಉಳಿಯಬಾರದು ದೊರೆಯೆ. ನಾನು ರಾಯರಂಥಲ್ಲ ಎಂದು ನೀನು ಪ್ರಾಮಿಸ್ ಮಾಡಬೇಕು.

ಹೂ ಮನದ ನನ್ನ ವಸಂತನೇ, ಈ ಕಾಗದ ನನ್ನ ಪ್ರೀತಿ ಮತ್ತು ನಿರೀಕ್ಷೆ ಹಾಗು ನೀನೇ ಉಡುಗೊರೆ ಇತ್ತ 'ಮಲ್ಲಿಗೆಯ ಮಾಲೆ' ನನ್ನ ಎದೆಯಲ್ಲಿ ಕಟ್ಟಿದ ಕನಸುಗಳ ಹಾರ. ಇದು ನಿನ್ನೆದೆಯಲ್ಲಿಯೂ ಬಾಡದಿರಲಿ ದೊರೆಯೆ.

English summary
Love letter series continued by Oneindia columnist Sa Raghunatha in Hittu Gojju column.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X