• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಅವಳಿಗೆ ಮುಖ ಇಲ್ಲದವನೂ ಮುದ್ದಾಗಿ ಕಂಡ!

By * ಎಆರ್ ಮಣಿಕಾಂತ್
|

ಇದು, ಅಮರ ಪ್ರೇಮದ ಕಥೆ. ಮಧುರ ಪ್ರೇಮದ ಕಥೆ. ಮರೆಯಲಾಗದ ಕಥೆ ಮತ್ತು ಮರೆಯಬಾರದಂಥ ಕಥೆ. ಪ್ರೀತಿ' ಎಂಬ ಎರಡಕ್ಷರಕ್ಕೆ ಇರುವ ತಾಕತ್ತು ಎಂಥದೆಂಬುದಕ್ಕೆ ಸಾಕ್ಷಿಯಾಗುವಂಥ ಕಥೆ. ನಮ್ಮ ಕಥಾನಾಯಕಿ, ಒಂದಿಡೀ ತಲೆಮಾರಿಗೇ ಆದರ್ಶವಾಗುವಂಥವಳು. ಅವಳ ಹೆಸರು ರೀನೀ ಕ್ಲೈನ್. ಥೇಟ್ ಅಪ್ಸರೆಯಂತಿರುವ ಆಕೆ, ತನ್ನ ಬಹುಕಾಲದ ಗೆಳೆಯ ಟೈ ಜೀಗೆಲ್‌ನನ್ನು ಮದುವೆಯಾಗಿದ್ದಾಳೆ. ಅರೆ, ಪ್ರಿಯತಮನನ್ನು ಮದುವೆಯಾದರೆ, ಅದರಲ್ಲಿ ವಿಶೇಷವೇನು ಬಂತು ಎಂದಿರಾ? ಕೇಳಿ, ವಿಶೇಷ ಇರುವುದೇ ಅಲ್ಲಿ. ಏನೆಂದರೆ, ಟೈ ಜೀಗೆಲ್‌ಗೆ ಒಂದು ಕಣ್ಣಿಲ್ಲ. ಒಂದು ಕೈ ಇಲ್ಲ. ಎರಡೂ ಕಿವಿಗಳಿಲ್ಲ. ಮೂಗು, ಇರಬೇಕಾದ ಸ್ಥಿತಿಯಲ್ಲಿಲ್ಲ. ಹಲ್ಲುಗಳಿಗೆ ಒಂದು ಆಕಾರವಿಲ್ಲ. ತಲೆಯಲ್ಲಿ ಕೂದಲೂ ಇಲ್ಲ. ಹತ್ತು ವರ್ಷಗಳ ನಂತರ ಜೇಗೆಲ್ ಬದುಕಿರುತ್ತಾನಾ ಎಂಬ ವಿಷಯವಾಗಿ ಯಾವ ಡಾಕ್ಟರೂ ಗ್ಯಾರಂಟಿ ಕೊಡುತ್ತಿಲ್ಲ. ಇದೆಲ್ಲ ಗೊತ್ತಿದ್ದರೂ, ನಂಗೇ ಅವನೇ ಬೇಕು ಎಂದು ರೀನೀ ಕ್ಲೈನ್ ಪಟ್ಟು ಹಿಡಿದಿದ್ದಾಳೆ. ಅವನನ್ನು ದಕ್ಕಿಸಿಕೊಂಡಿದ್ದಾಳೆ ಮತ್ತು ನೂರಾರು ಜನರ ಸಮ್ಮುಖದಲ್ಲಿ ಅವನನ್ನು ಮದುವೆಯಾಗಿದ್ದಾಳೆ.

ನಿಜ ಹೇಳಬೇಕೆಂದರೆ, ಒಂದು ಕಾಲದಲ್ಲಿ ರೀನೀ ಕ್ಲೈನ್‌ಗಿಂತ ನಾಲ್ಕು ಪಟ್ಟು ಚೆಂದಕ್ಕಿದ್ದವನು ಟೈ ಜೀಗೆಲ್. ಅವನ ಕಟ್ಟುಮಸ್ತಾಗಿದ್ದ ಬಾಡಿ' ನೋಡಿಯೇ ನಾನು ಮೊದಲ ನೋಟದಲ್ಲೇ ಕ್ಲೀನ್‌ಬೋಲ್ಡ್ ಆಗಿಬಿಟ್ಟೆ ಎಂದವಳು ರೀನಿ. ಹಾಗೆ, ಸುರಸುಂದರಾಂಗನಂತಿದ್ದ ಟೈ ಜೀಗೆಲ್, ಕೈ ಇಲ್ಲದ, ಕಿವಿಯಿಲ್ಲದ, ಕೆನ್ನೆಯ ನೈಸ್‌ನೈಸ್ ಎಂಬಂಥ ಭಾಗವೂ ಇಲ್ಲದ, ಮೂಗೇ ಇಲ್ಲದ ಕುರೂಪಿಯಾದದ್ದು ಏಕೆ ಮತ್ತು ಹೇಗೆ? ಇಂಥ ಕುರೂಪಿಯನ್ನೂ ಮದುವೆಯಾಗಲು ರೀನೀ ಕ್ಲೈನ್‌ಗಿದ್ದ ಕಾರಣವಾದರೂ ಏನು? ಇಂಥ ಕುತೂಹಲದ ಪ್ರಶ್ನೆಗೆ ಉತ್ತರವಾಗಿ ಬಿಚ್ಚಿ ಕೊಳ್ಳುವುದೇ ಜೀಗೆಲ್-ರೀನೀಯ ಅಮರ ಪ್ರೇಮದ ಕಥೆ.

***

ಅಮೆರಿಕದ ನೌಕಾಪಡೆಯಲ್ಲಿ ಸಾರ್ಜೆಂಟ್ ಆಗಿದ್ದವನು ಟೈ ಜೀಗೆಲ್. ಹೇಳಿ ಕೇಳಿ ಮಿಲಿಟರಿ ಅಸಾಮಿಯಲ್ಲವೆ? ಹುಡುಗ ಕಟ್ಟುಮಸ್ತಾಗಿದ್ದ. 21ನೇ ವಯಸ್ಸಿಗೇ ಸಾರ್ಜೆಂಟ್ ಪದವಿಗೇರಿದ್ದರೂ ಅಹಮಿಕೆಯಿಂದ ದೂರವೇ ಉಳಿದಿದ್ದ. ಟೂ ಸಿಂಪಲ್ ಎಂಬಂತೆ ಬದುಕುತ್ತಿದ್ದ. ಈ ಸರಳತೆಯೇ ರೇನೀ ಕ್ಲೈನ್‌ಳನ್ನು ಅವನ ಹತ್ತಿರ ತಂದಿತು. ಅವಳಾದರೂ ದೂರದವಳಲ್ಲ. ಅವನದೇ ಸ್ಕೂಲಿನಲ್ಲಿ ಓದಿದವಳು. ಅವನಿಗಿಂತ ಮೂರು ವರ್ಷ ಚಿಕ್ಕವಳು. ಒಂದು ಸಂತೋಷವೆಂದರೆ, ಈ ಜೋಡಿಯ ಪ್ರೀತಿಗೆ ಮನೆಯವರಿಂದ ವಿರೋಧ ವ್ಯಕ್ತವಾಗಲಿಲ್ಲ. ಅಂತಸ್ತುಗಳ ಅಂತರ ಅಡ್ಡಬರಲಿಲ್ಲ. ಖಳನಾಯಕರ ಕಾಟವೂ ಇರಲಿಲ್ಲ.

ಈ ಕಾರಣದಿಂದಲೇ ನಾವುಂಟು, ಮೂರು ಲೋಕವುಂಟು ಎಂದು ಮೆರೆದಾಡಿದರು ಜೀಗೆಲ್-ರೀನೀ. ಹೀಗಿದ್ದಾಗಲೇ ರೀನೀಯ ತಂದೆ ಅಪಘಾತವೊಂದರಲ್ಲಿ ಸತ್ತುಹೋದ. ಆ ನಂತರದಲ್ಲಿ ಗೆಳತಿಯ ಬಗ್ಗೆ ಜೀಗೆಲ್ ಅದೆಷ್ಟು ಕಾಳಜಿ ತಗೊಂಡನೆಂದರೆ -ಏಕಕಾಲಕ್ಕೆ ಅವಳಿಗೆ ಫ್ರೆಂಡ್, ಲವರ್, ಫಿಲಾಸಫರ್, ಫಾದರ್, ಗೈಡ್.... ಹೀಗೆ ಎಲ್ಲವೂ ಆಗಿಬಿಟ್ಟ. ತಂದೆಯ ನೆನಪಲ್ಲಿ ಅವಳು ಡಿಪ್ರೆಷನ್‌ಗೆ ಈಡಾಗಲಿಕ್ಕೆ, ಅಪ್ಪನನ್ನು ನೆನಪು ಮಾಡಿಕೊಂಡು ಕಂಬನಿ ಸುರಿಸುವುದಕ್ಕೆ ಈತ ಅವಕಾಶವನ್ನೇ ಕೊಡಲಿಲ್ಲ. ಅಷ್ಟೊಂದು ಮುತುವರ್ಜಿಯಿಂದ ನೋಡಿಕೊಂಡ. ಹೀಗಿದ್ದಾಗಲೇ ಅಮೆರಿಕಾ-ಇರಾಕ್ ಮಧ್ಯೆ ಯುದ್ಧ ಶುರುವಾಯಿತು. ಈತ ನಿಂತ ನಿಲುವಲ್ಲಿಯೆ ಯುದ್ಧಕ್ಕೆ ಹೊರಟು ನಿಂತ. ಹೋಗೋನು ಹೋಗ್ತಾ ಇದೀಯ. ಅದಕ್ಕಿಂತ ಮುಂಚೆ ನನ್ನನ್ನು ಮದುವೆಯಾಗಿಬಿಡು. ನಾಲ್ಕು ಜನ ಆ ಸಂಭ್ರಮಕ್ಕೆ ಸಾಕ್ಷಿಯಾಗಲಿ. ಅವರೆಲ್ಲರ ಮುಂದೆ ಇವಳೇ ನನ್ನ ಹೆಂಡ್ತಿ ಎಂದು ಹೇಳಿ ಹೋಗಿಬಿಡು ಎಂದು ರೀನೀ ದುಂಬಾಲು ಬಿದ್ದಳು. ಹೀಗೆಂದಾಗ ಅವಳಿಗೆ 19 ವರ್ಷವಾಗಿತ್ತು. ಜೀಗೆಲ್‌ಗೆ 21.

ಆದರೆ, ರೀನಿಯ ಆಹ್ವಾನವನ್ನು ನಯವಾಗಿ ತಳ್ಳಿಹಾಕಿದ ಜೀಗೆಲ್ ಹೇಳಿದನಂತೆ; ಅಂಥ ಅವಸರ ಏನಿದೆ? ಯುದ್ಧ ಬೇಗ ಮುಗಿಯುತ್ತೆ, ರಜೆಗೆ ಬರ್‍ತೀನಲ್ಲ? ಆಗ ಮದುವೆಯಾಗೋಣ. ಸಾವಿರಾರು ಮಂದಿಯ ಸಮ್ಮುಖದಲ್ಲಿ ದಂಪತಿಯರಾಗೋಣ. ಆಮೇಲೆ ನಮ್ಮಿಷ್ಟದ ತಾಣಕ್ಕೆ ಹನಿಮೂನ್‌ಗೆ ಹೋಗೋಣ...' ಇಷ್ಟು ಹೇಳಿದವನೇ ಕಡಗದಂತಿದ್ದ ಒಂದು ದೊಡ್ಡ ರಿಂಗ್ ತಂದು ರೀನಿಯ ಮೊಣಕಾಲಿಗೆ ಹಾಕಿ ಹೇಳಿದನಂತೆ: ನಿಂಗೇ ಗೊತ್ತಲ್ಲ? ನಮ್ದು ಸ್ಪೆಷಲ್ ಲವ್, ಅದೇ ಕಾರಣಕ್ಕೆ ನಿನ್ನ ಕಾಲಿಗೆ ರಿಂಗ್ ಹಾಕಿದೀನಿ. ಇವತ್ತು ನಮ್ಮ ಎಂಗೇಜ್‌ಮೆಂಟ್ ಆಗಿಹೋಯ್ತು ಅಂತ ತಿಳ್ಕೊ. ಮುಂದಿನ ವರ್ಷ ಮದುವೆಯಾಗೋಣ. ಈಗ ನಾನು ಹೋಗಿಬರ್‍ತೀನಿ. ಒಂದು ಬೆಸ್ಟ್ ಆಫ್ ಲಕ್ ಹೇಳಿ ಕಳಿಸು...' ಇಷ್ಟು ಹೇಳಿ, ಜೀಗೆಲ್ ಯುದ್ಧಭೂಮಿಗೆ ಹೊರಟೇಹೋದ. ಅವತ್ತು ಆಗಸ್ಟ್ 13, 2003. ಅದು, ರೀನೀಯ ಹುಟ್ಟುಹಬ್ಬದ ದಿನ.

ಆನಂತರದಲ್ಲಿ ಇರಾಕ್‌ನ ಯುದ್ಧಭೂಮಿಯಿಂದ ಅಮೆರಿಕದಲ್ಲಿದ್ದ ಅಮ್ಮನ ಮನೆಗೆ ವಾರಕ್ಕೊಮ್ಮೆ ಫೋನ್ ಮಾಡುತ್ತಿದ್ದ ಜೀಗೆಲ್. ಆಗೆಲ್ಲ ಈ ಬೆಡಗಿ ರೀನೀ ತಾನೂ ಅವನ ಮನೆಗೆ ಹೋಗಿಬಿಡುತ್ತಿದ್ದಳು. ತಾನೂ ಒಂದಷ್ಟು ಮಾತಾಡುತ್ತಿದ್ದಳು. ಜೋಕು ಹೊಡೆದು ಗೆಳೆಯನನ್ನು ನಗಿಸುತ್ತಿದ್ದಳು. ಏನೋ ಸುಳ್ಳು ಹೇಳಿ ಹೆದರಿಸುತ್ತಿದ್ದಳು. ಅಲ್ಲಿಂದ ಯಾವಾಗ ಬರ್‍ತೀಯ? ನಂಗೆ ಏನು ತರ್‍ತೀಯ ಎಂದೆಲ್ಲ ವಿಚಾರಿಸಿಕೊಂಡು, ಭಾವಿ ಅತ್ತೆಯೊಂದಿಗೆ ಒಂದಿಷ್ಟು ಹರಟಿ ಎದ್ದು ಬರುತ್ತಿದ್ದಳು. ಈ ವೇಳೆಗೆ, ಜೀಗೆಲ್ ಅಮೆರಿಕಕ್ಕೆ ಬರುವ ದಿನ ಯಾವುದೆಂದು ಅವಳಿಗೆ ತಿಳಿದುಹೋಗಿತ್ತು. ಆತ ತಾಯ್ನಾಡಿಗೆ ಬಂದ ಹದಿನೈದನೇ ದಿನವೇ ಮದುವೆಯಾಗುವುದೆಂದು ಆಕೆ ನಿಶ್ಚಯಿಸಿದ್ದಳು. ಇದಕ್ಕಾಗಿ ಸಕಲ ಸಿದ್ಧತೆಯಲ್ಲಿ ತೊಡಗಿದ್ದಳು. ಹೀಗಿದ್ದಾಗಲೇ,ಜೀಗೆಲ್‌ನ ಆಗಮನಕ್ಕೆ ಇನ್ನೂ ಎರಡು ತಿಂಗಳು ಬಾಕಿಯಿದ್ದಾಗಲೇ, ಅದೊಂದು ಬೆಳಗ್ಗೆ ಜೀಗೆಲ್‌ನ ಮನೆಯಿಂದ ಫೋನ್ ಬಂತು: ತಕ್ಷಣವೇ ಮನೆಗೆ ಬಂದು ಹೋಗು' ಎಂಬುದು ಫೋನ್ ಕರೆಯ ಸಾರಾಂಶ.

ಓಹ್, ಯುದ್ಧ ಬೇಗ ಮುಗಿದಿರಬೇಕು. ಗೆದ್ದ ಖುಷಿ ದೊಡ್ಡದಿದೆ. ಹಾಗಾಗಿ ಜೀಗೆಲ್ ಬೇಗ ಬಂದಿದಾನೆ ಅನ್ಸುತ್ತೆ. ನನಗೆ ಸರ್‌ಫ್ರೈಜ್ ಕೊಡಲಿಕ್ಕೆಂದೇ ಬೇರೆಯವರಿಂದ ಫೋನ್ ಮಾಡಿಸಿದ್ದಾನೆ ಕಳ್ಳ... ಎಂದುಕೊಂಡು ದೊಡ್ಡ ಸಂಭ್ರಮದಿಂದಲೇ ಭಾವೀ ಗಂಡನ ಮನೆಗೆ ಹೋದಳು ರೀನಿ. ಅಲ್ಲಿ ಸ್ಮಶಾನ ಮೌನವಿತ್ತು. ಏನಾಯ್ತೆಂದು ಈಕೆ ಕೇಳುವುದರೊಳಗೇ, ಇವಳನ್ನು ಕಂಡದ್ದೇ ಜೀಗೆಲ್‌ನ ಮನೆಮಂದಿ ಜೋರಾಗಿ ಅತ್ತರು. ಈ ಮಧ್ಯೆಯೇ ಒಬ್ಬರು ಸುದ್ದಿ ಹೇಳಿದರು. ಇರಾಕ್‌ನ ಆತ್ಮಹತ್ಯಾ ದಳದ ಉಗ್ರರು ಜೀಗೆಲ್‌ನ ತಂಡದವರ ಮೇಲೆ ಬಾಂಬ್ ಎಸೆದಿದ್ದಾರೆ. ಈ ದುರಂತದಲ್ಲಿ ಜೀಗೆಲ್‌ಗೆ ತುಂಬಾ ಪೆಟ್ಟು ಬಿದ್ದಿದೆಯಂತೆ. ಬದುಕೋದು ಕಷ್ಟ ಎಂದು ಡಾಕ್ಟರೇ ಹೇಳಿದ್ದಾರಂತೆ. ಅವನೀಗ ಸ್ಯಾನ್ ಆಂಟೋನಿಯೋದ ಮಿಲಿಟರಿ ಆಸ್ಪತ್ರೇಲಿ ಇದಾನಂತೆ... ಮುಂದಿನದೇನನ್ನೂ ಕೇಳಿಸಿಕೊಳ್ಳುವ ತಾಳ್ಮೆ ರೀನೀಗೆ ಇರಲಿಲ್ಲ. ಕಣ್ಣೀರು ಹಾಕಲಿಕ್ಕೆ ಇದು ಸಮಯವಲ್ಲ ಎಂದು ನಿರ್ಧರಿಸಿದವಳೇ ಚಿಕ್ಕದೊಂದು ಲಗೇಜು ಜತೆ ಮಾಡಿಕೊಂಡು ಸ್ಯಾನ್ ಆಂಟೋನಿಯಾದ ಮಿಲಿಟರಿ ಆಸ್ಪತ್ರೆಗೆ ಬಂದೇಬಿಟ್ಟಳು.

ಅವಳು ನೀಡಿದ ವಿವರ ಗಮನಿಸಿದ ವೈದ್ಯರು- ಈ ಪೇಷಂಟ್ ಐಸಿಯುನಲ್ಲಿ ಇದ್ದಾನೆ' ಎಂದರು. ಉಸಿರು ಬಿಗಿಹಿಡಿದು ವೈದ್ಯರೊಂದಿಗೆ ಹೆಜ್ಜೆಹಾಕಿದ ರೀನೀಗೆ ಎದುರಾದದ್ದು -ಮೈ ಪೂರಾ ಬ್ಯಾಂಡೇಜು ಮೆತ್ತಿಕೊಂಡಿದ್ದ ಒಂದು ದೇಹ. ಅದನ್ನು ಕಂಡು ರೀನೀ ಬೆರಗಿನಿಂದ ಹೇಳಿದಳಂತೆ; ಡಾಕ್ಟರ್, ನಾನು ಕೇಳಿದ್ದು ಸಾರ್ಜೆಂಟ್ ಟೈ ಜೀಗೆಲ್ ಅವರನ್ನು. ನೀವು ಇದ್ಯಾರೋ ಬೇರೆ ಆಸಾಮಿಯನ್ನು ತೋರಿಸ್ತಾ ಇದೀರ. ಅವನು ಹೀಗಿರಲಿಲ್ಲ. ಟಾಲ್, ಸ್ವೀಟ್ ಅಂಡ್ ಹ್ಯಾಂಡ್‌ಸಮ್. ಹಾಗಿದ್ದ ನನ್ನ ಹುಡುಗ. ಅವನನ್ನು ತೋರಿಸಿ ಪ್ಲೀಸ್...' ಡಾಕ್ಟರು ಮಾತಾಡದೆ ಸುಮ್ಮನೆ ನಿಂತರು.

ಅಷ್ಟೆ. ಪರಮ ವಿಕಾರವಾಗಿದ್ದ ಆ ದೇಹದ ಒಡೆಯನೇ ಜೀಗೆಲ್ ಎಂದು ರೀನೀಗೆ ಅರ್ಥವಾಗಿಹೋಯಿತು. ಆತನಿಗೆ ಆಗಿರುವ ಗಾಯದ ಪೆಟ್ಟಿನ ತೀವ್ರತೆ ಎಂಥದೆಂದು ವೈದ್ಯರು ನಿಧಾನವಾಗಿ ವಿವರಿಸಿದರು. ನಂತರ ನಿರ್ಧಾರದ ಧ್ವನಿಯಲ್ಲಿ ಹೇಳಿದರು. ಬಾಂಬ್ ಸೋಟದ ತೀವ್ರತೆಗೆ ಜೀಗೆಲ್‌ನ ಎಡಭುಜದ ನರ-ಮೂಳೆಗಳೆಲ್ಲ ನುಜ್ಜುಗುಜ್ಜಾಗಿವೆ. ಹೀಗಾಗಿ ಅವನ ಎಡಗೈನ ಭಾಗವನ್ನು ಪೂರ್ತಿಯಾಗಿ ತೆಗೆದು ಹಾಕಿದೀವಿ. ಬಲಗೈನಿಂದ ಮೂರು ಬೆರಳುಗಳೇ ಹಾರಿಹೋಗಿವೆ. ತಲೆಯ ಎಡಭಾಗಕ್ಕೂ ದೊಡ್ಡ ಪೆಟ್ಟು ಬಿದ್ದಿದೆ. ಎರಡೂ ಕಿವಿಗಳು ತುಂಡಾಗಿ ಬಿದ್ದೇ ಹೋಗಿವೆ. ಒಂದು ಕಣ್ಣೂ ಹೋಗಿದೆ. ದವಡೆಯ ಹಲ್ಲುಗಳು ಉದುರಿವೆ. ಕೆನ್ನೆಯ ಮಾಂಸಖಂಡಗಳೂ ನುಜ್ಜುಗುಜ್ಜಾಗಿವೆ. ಇಷ್ಟೆಲ್ಲ ಪೆಟ್ಟಾಗಿದ್ರೂ ಜೀಗೆಲ್ ಬದುಕಿದ್ದಾನೆ. ಈಗ ಅವನಿಗೆ ಮಿದುಳಿನ ಆಪರೇಷನ್ ಮಾಡ್ತೇವೆ. ಒಂದರ್ಥದಲ್ಲಿ ಅವನಿಗೆ ಮುಖವೇ ಇಲ್ಲ ನಿಜ. ಆದರೆ, ತೊಡೆಸಂದಿನ ಮಾಂಸವನ್ನು ಕತ್ತರಿಸಿ ಅವನ್ನು ತುಟಿಗಳ ಜಾಗಕ್ಕೆ ಸೇರಿಸಿ, ಒಂದು ಶೇಪ್ ಕೊಡ್ತೇವೆ. ಅಷ್ಟು ಮಾತ್ರ ನಮ್ಮಿಂದ ಸಾಧ್ಯ. ನಮ್ಮ ಪ್ರಯತ್ನವನ್ನು ನಾವು ಮಾಡ್ತೇವೆ. ಉಳಿದದ್ದು ಜೀಸಸ್‌ಗೆ ಬಿಟ್ಟದ್ದು...'

ಇಷ್ಟು ಹೇಳಿ ವೈದ್ಯರು ಚಿಕಿತ್ಸೆ ಆರಂಭಿಸಿದಾಗ, ಹೊಸದೊಂದು ಪ್ರಶ್ನೆ ರೀನೀಗೆ ಎದುರಾಯಿತು. ಮಿದುಳು ಆಪರೇಷನ್ ಮಾಡಿದ ನಂತರ ಬೈಛಾನ್ಸ್ ಜೀಗೆಲ್‌ಗೆ ನೆನಪಿನ ಶಕ್ತಿಯೂ ಕಳೆದುಹೋದರೆ ಗತಿ ಏನು? ಅಥವಾ ತನ್ನ ಈಗಿನ ಸ್ಥಿತಿ ಕಂಡು ಆತನಿಗೆ ಹುಚ್ಚು ಹಿಡಿದರೆ ಮಾಡುವುದೇನು? ಆಸ್ಪತ್ರೆಯ ವಾರ್ಡ್‌ನಲ್ಲಿ ಕೂತು, ಹೀಗೆ ಯೋಚಿಸಿ ಯೋಚಿಸಿ ಹಣ್ಣಾದಳು ರೀನೀ. ಪುಣ್ಯಕ್ಕೆ ಹಾಗೇನೂ ಆಗಲಿಲ್ಲ. ಜೀಗೆಲ್ ಎಲ್ಲ ಚಿಕಿತ್ಸೆಗೆ ಸಕಾರಾತ್ಮಕವಾಗಿ ಸ್ಪಂದಿಸಿದ. ಒಂದೂವರೆ ವರ್ಷದ ಚಿಕಿತ್ಸೆಯ ನಂತರ ಆಸ್ಪತ್ರೆಯಿಂದ ಡಿಸ್‌ಛಾರ್ಜ್ ಕೂಡ ಆದ. ಆದರೆ, ಮನೆಗೆ ಹೊರಟವನಿಗೆ ಒಂದು ಕೈ ಇರಲಿಲ್ಲ. ಕಿವಿಗಳೂ ಇರಲಿಲ್ಲ. ಬಲಗೈನ ಮೂರು ಬೆರಳಿರಲಿಲ್ಲ. ಒಂದು ಕಣ್ಣಿರಲಿಲ್ಲ. ತಲೆಯಲ್ಲಿ ಕೂದಲಿರಲಿಲ್ಲ. ನಿಲ್ಲಲು ತ್ರಾಣವೂ ಇರಲಿಲ್ಲ. ಇಂಥ ಸಂದರ್ಭದಲ್ಲಿ ಅವನನ್ನು ಪುಟ್ಟ ಮಗುವಿನಂತೆ ನೋಡಿಕೊಂಡಳು ರೀನೀ. ಆದರೂ, ತನ್ನ ಗಾಯದ ಕಲೆ ನೋಡಿಕೊಂಡಾಗ ಜೇಗೆಲ್ ಬಿಕ್ಕಳಿಸಿ ಅಳುತ್ತಿದ್ದ. ಅಂತರ್ಮುಖಿಯಂತೆ ಕೂತುಬಿಡುತ್ತಿದ್ದ. ಅಂಥ ಸಂದರ್ಭದಲ್ಲೆಲ್ಲ ರೀನೀ ಅವನಿಗೆ ಅಮ್ಮನಾಗುತ್ತಿದ್ದಳು. ತಂದೆಯಂತೆ ಸಮಾಧಾನ ಹೇಳುತ್ತಿದ್ದಳು. ದಿನದ ಹೆಚ್ಚು ಸಮಯವನ್ನು ಮನೆಯೊಳಗೇ ಕಳೆದರೆ ಅವನಿಗೂ ಡಿಪ್ರೆಶನ್ ಕಾಡಬಹುದು ಅನ್ನಿಸಿದಾಗ ವಾಕಿಂಗ್ ಕರೆದೊಯ್ಯಲು ನಿರ್ಧರಿಸಿದಳು ರೀನೀ. ಆಗ ಜೀಗೆಲ್ ಹೊಸದೊಂದು ಬೇಡಿಕೆ ಇಟ್ಟ. ನಾನು ಸನ್‌ಗ್ಲಾಸ್ ಹಾಕ್ಕೊಂಡು ಹೊರಗೆ ಬರ್‍ತೇನೆ..'

ನಿಜವಾದ ಸಂಕಟ ಎದುರಾದದ್ದೇ ಆಗ. ಏಕೆಂದರೆ ಸನ್‌ಗ್ಲಾಸ್ ಹಾಕಿಕೊಳ್ಳಲು ಅಗತ್ಯವಿದ್ದ ಕಿವಿಗಳೇ ಜೀಗೆಲ್‌ಗೆ ಇರಲಿಲ್ಲ. ಹಾಗೆಂದು ಹೇಳಿದರೆ ಅವನಿಗೆ ನೋವಾಗುತ್ತದೆ ಎಂದು ಕಾರಣಕ್ಕೆ, ಅವನಿಗೆ ಏನೂ ಹೇಳಲಿಲ್ಲ ರೀನೀ. ಬದಲಿಗೆ, ಅವನ ತಲೆಯ ಸುತ್ತ ಎಲಾಸ್ಟಿಕ್ ಹಾಕಿ ಸನ್‌ಗ್ಲಾಸ್ ತೊಡಿಸಿಯೇ ಬಿಟ್ಟಳು. ಮುಂದೆ ನಿಧಾನವಾಗಿ ತನ್ನ ಪರಿಸ್ಥಿತಿ ಹೇಗಿದೆ ದೇಹದ ಯಾವ್ಯಾವ ಭಾಗ ಅಸ್ತಿತ್ವ ಕಳೆದುಕೊಂಡಿದೆ ಎಂದು ಜೀಗೆಲ್‌ಗೆ ಅರ್ಥವಾಯಿತು. ಆತ ಅದೊಂದು ದಿನ ರೀನೀ ಹಾಗೂ ತನ್ನ ಬಂಧುಗಳನ್ನು ಜತೆಯಲ್ಲಿ ಕೂರಿಸಿಕೊಂಡು ಹೇಳಿಬಿಟ್ಟ ಮುಂದೆ, ನನ್ನ ಹಣೇಲಿ ಬರೆದಂತಾಗಲಿ. ನಾನು ಇರುವಷ್ಟು ದಿನ ಒಂಟಿಯಾಗಿ ಬದುಕ್ತೇನೆ. ರೀನೀ ಬೇರೆ ಯಾರನ್ನಾದ್ರೂ ಮದುವೆಯಾಗಲಿ. ನಾವೇ ಮುಂದೆ ನಿಂತು ಅವಳ ಮದುವೆ ಮಾಡೋಣ... ಅವಳ ಭವಿಷ್ಯ ಹಾಳಾಗೋದು ಬೇಡ. ನನ್ನಂಥ ಕುರೂಪಿ ಅವಳ ಜತೆಯಾಗೋದು ಬೇಡ...'

ಜೀಗೆಲ್‌ನ ಮಾತಿಗೆ ಎಲ್ಲರೂ ಒಪ್ಪಿದರು. ಆದರೆ ರೀನೀ ಒಪ್ಪಲಿಲ್ಲ. ಆಕೆ ಜೀಗೆಲ್‌ನ ಎದುರು ನಿಂತು ಹೀಗೆಂದಳು: ಹುಚ್ಚಾ, ನಾನು ಪ್ರೀತಿಸಿದ್ದು ನಿನ್ನ ದೇಹವನ್ನಲ್ಲ ಕಣೋ. ನಿನ್ನ ಮನಸ್ಸನ್ನು ಪ್ರೀತಿಸ್ದೆ ನಾನು. ಈಗ ಇದೀಯ ನೋಡು, ಅದಕ್ಕಿಂತಲೂ ಕುರೂಪಿಯಾಗಿದ್ದೆ ಆಸ್ಪತ್ರೇಲಿ. ಆಗ ನಿನ್ನ ದೇಹ ಕೊಳೆತು ವಾಸನೆ ಹೊಡೀತಿತ್ತು. ಅದನ್ನು ನಗುತ್ತಲೇ ಸಹಿಸಿಕೊಂಡೆ. ಅಂಥ ನನಗೆ ನಿನ್ನನ್ನು ಈಗ ನಿನ್ನನ್ನು ಒಪ್ಪಿಕೊಳ್ಳೋಕೆ ಕಷ್ಟವಾಗ್ತಿಲ್ಲ. ಬದುಕು ಅನ್ನೋದಿದ್ರೆ ಅದು ನಿನ್ನ ಜತೆ ಮಾತ್ರ. ಮೊದಲು ಪ್ರೀತಿಸ್ತಿದ್ದೆ ನೋಡು, ಅದಕ್ಕಿಂತ ಎರಡು ಪಟ್ಟು ಹೆಚ್ಚಾಗಿ ಈಗ ನಿನ್ನನ್ನು ಪ್ರೀತಿಸ್ತಿದೀನಿ ಕಣೋ...' ರೀನೀಯ ನಿಷ್ಕಪಟ ಮಾತು ಕೇಳಿ ಜೇಗೆಲ್ ಮಾತೇ ಹೊರಡದೆ ನಿಂತುಬಿಟ್ಟ. ಅವನ ತಾಯಿ ಧಾವಿಸಿ ಬಂದು ರೀನಿಯನ್ನು ತಬ್ಬಿಕೊಂಡು ಅಳತೊಡಗಿದಳು. ಜೀಗೆಲ್‌ನ ತಂದೆ ಈ ಹುಡುಗಿಗೆ ನಿಂತಲ್ಲೇ, ಕೈಮುಗಿದು ಕಣ್ಣೊರಸಿಕೊಂಡ.

***

ಮುಂದೆ 2005ರ ಅಕ್ಟೋಬರ್ 7ರಂದು ತುಂಬಾ ಅದ್ಧೂರಿಯಾಗಿ ಜೀಗೆಲ್- ರೀನೀಯ ಮದುವೆ ನಡೆಯಿತು. ಶುದ್ಧ ಪ್ರೀತಿಗೆ ಎಂದಿಗೂ ಸಾವಿಲ್ಲ, ಮಧುರ ಪ್ರೀತಿ ಎಂದಿಗೂ ಸೋಲಲ್ಲ ಎಂಬ ಮಾತಿಗೆ ಸಾಕ್ಷಿಯೂ ಆಯಿತು. ಅಂದಹಾಗೆ, ಇದು ಇಂಟರ್‌ನೆಟ್‌ನಲ್ಲಿ ಸಿಕ್ಕ ಮಾಹಿತಿ. ಮುಖವಿಲ್ಲದವನನ್ನೂ ಮುದ್ದಿನ ಗಂಡ ಎಂದು ಒಪ್ಪಿಕೊಂಡ ರೀನೀಗೆ ಜೈ ಹೋ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more