ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸರ್ಫುದ್ದಿನ್ ಕಥೆ ಸಿಗರೇಟ್ ಪ್ರೇಮಿಗಳಿಗಾಗಿ ಮಾತ್ರ

|
Google Oneindia Kannada News

Sarfuddin
ಇದಿಷ್ಟನ್ನೂ ವಿವರವಾಗಿ ಹೇಳಲು ಕಾರಣವಾದದ್ದು ಸರ್ಫುದ್ದೀನ್ ಎಂಬಾತನ ಹೋರಾಟದ ಬದುಕು. 60 ವರ್ಷ ದಾಟಿರುವ ಈತ ಚೆನ್ನೈನವನು. ಸಿಗರೇಟಿನ ದಾಸಾನುದಾಸ ಎಂಬಂತೆ ಬದುಕಿದ ಸರ್ಫುದ್ದೀನ್‌ಗೆ ಈಗ ಮಾತು ಬಿದ್ದುಹೋಗಿದೆ. ಕ್ಯಾನ್ಸರ್ ಅಮರಿಕೊಂಡಿದೆ. ನಾನು ಹೆಚ್ಚು ದಿನ ಬದುಕುವುದಿಲ್ಲ ಎಂಬುದು, ಉಳಿದೆಲ್ಲರಿಗಿಂತ ಮೊದಲು ಸರ್ಫುದ್ದೀನ್‌ಗೇ ಗೊತ್ತಾಗಿ ಹೋಗಿದೆ. ಸ್ವಾರಸ್ಯವೆಂದರೆ, ಸಾವೆಂಬುದು ತನ್ನ ಹಿಂದೆಯೇ ಇದೆ ಎಂದು ಗೊತ್ತಾದ ನಂತರವೂ ಈತ ಎದೆಗುಂದಿಲ್ಲ. ಬದುಕಿನಲ್ಲಿ ಆಸಕ್ತಿ ಕಳೆದುಕೊಂಡಿಲ್ಲ. ಕನಸು ಕಾಣುವುದನ್ನೂ ನಿಲ್ಲಿಸಿಲ್ಲ. ಈತ ಕ್ಯಾನ್ಸರ್ ವಿರುದ್ಧವೇ ಸಮರ ಸಾರಿದ್ದಾನೆ. ದೇಶದ ಅದೆಷ್ಟೋ ನಗರಗಳಲ್ಲಿ ತನ್ನ ಬದುಕಿನ ಕಥೆಯನ್ನು ಹೇಳಿಕೊಂಡಿದ್ದಾನೆ. ಅದನ್ನು ಸರ್ಫುದ್ದೀನ್‌ನ ಮಾತುಗಳಲ್ಲೇ ಕೇಳೋಣ:

ಚೆನ್ನೈನಲ್ಲಿ ಒಂದು ಸಹಕಾರಿ ಬ್ಯಾಂಕ್ ಇತ್ತು. ಅದರಲ್ಲಿ ಸೆಕ್ರೆಟರಿಯಾಗಿ ನಾನು ವೃತ್ತಿ ಆರಂಭಿಸಿದೆ. ಸಹಕಾರಿ ಬ್ಯಾಂಕ್ ಅಂದಮೇಲೆ ಕೇಳಬೇಕೇ? ಅಲ್ಲಿಗೆ ದಿನವೂ ನೂರಾರು ಜನ ಬರುತ್ತಿದ್ದರು. ಸಾಲಕ್ಕೆ, ಸೈಟ್‌ಗೆ ಅರ್ಜಿ ಹಾಕುತ್ತಿದ್ದರು. ಸಲಹೆ ಕೇಳುತ್ತಿದ್ದರು. ವಿಶೇಷ ಮರ್‍ಯಾದೆ ನೀಡಿ ಕಾಫಿಗೆ ಕರೆಯುತ್ತಿದ್ದರು. ಹಾಗೆ ಕಾಫಿಗೆ ಹೋದಾಗಲೆಲ್ಲ ಸಿಗರೇಟು ಸೇದುವುದು ಅಭ್ಯಾಸವಾಯಿತು. ಮುಂದಿನ ಕೆಲವೇ ವರ್ಷಗಳಲ್ಲಿ ಸಿಗರೇಟ್ ಇಲ್ಲದೆ ಬದುಕಲು ಸಾಧ್ಯವೇ ಇಲ್ಲ ಅನ್ನಿಸಿತು. ಮೊದಲು ದಿನಕ್ಕೆ ಎರಡು ಅಥವಾ ಮೂರು ಸಿಗರೇಟು ಸೇದುತ್ತಿದ್ದವನು ಬರಬರುತ್ತಾ ದಿನಕ್ಕೆ ಒಂದು ಪ್ಯಾಕ್ ಖಾಲಿ ಮಾಡಲು ಆರಂಭಿಸಿದೆ. ಯಾವುದೇ ಸಂಕಟವಾದರೂ, ಸಂತೋಷವಾದರೂ ಸಿಗರೇಟಿನತ್ತ ಕೈ ಚಾಚಲು ಕಲಿತೆ. ಥತ್, ಇದೇನಯ್ಯ ಇದೂ? ಎಂದು ರೇಗಿದವರ ಮುಂದೆ- ಹೌದಲ್ವಾ, ಇದು ಬಹಳ ಕೆಟ್ಟಿದ್ದು, ಅದಕ್ಕೇ ಇದನ್ನು ಸುಟ್ಟು ಹಾಕ್ತಾ ಇದೀನಿ' ಎಂದು ಜೋಕ್ ಹೊಡೆದೆ.

ಸಿಗರೇಟಿನೊಂದಿಗಿನ ನಂಟು ಹೀಗೇ ಅಮೋಘ ಇಪ್ಪತ್ತನೇ ವರ್ಷಕ್ಕೆ ಬಂದಾಗ ಅದೊಂದು ದಿನ ಯಾಕೋ ಗಂಟಲು ಕಟ್ಟಿದ ಹಾಗಾಯಿತು. ಓಹ್, ಥಂಡಿಗೆ ಹೀಗಾಗಿರಬೇಕು ಅಂದುಕೊಂಡೆ. ಮೆಡಿಕಲ್ ಶಾಪ್‌ಗೆ ಹೋಗಿ ಒಂದಿಷ್ಟು ಮಾತ್ರೆ ಖರೀದಿಸಿದೆ. ಆಗಲೂ ಕಟ್ಟಿದ ಗಂಟಲು ಸರಿಯಾಗಲಿಲ್ಲ. ತಕ್ಷಣವೇ ಸಿರಪ್ ಕುಡಿದೆ. ಒಂದೆರಡು ದಿನದ ಮಟ್ಟಿಗೆ ಎಲ್ಲವೂ ಸರಿಯಾದಂತೆ' ಕಾಣಿಸಿತು. ಮತ್ತೆ ಸಿಗರೇಟಿಗೆ ಕಡ್ಡಿ ಗೀರಿದೆ. ಆದರೆ, ನಂತರದ ಕೆಲವೇ ದಿನಗಳಲ್ಲಿ ನೀರು ಗುಟುಕರಿಸುವುದೂ ಕಷ್ಟವಾಯಿತು. ತಡೆಯಲಾಗದಂಥ ಗಂಟಲು ನೋವು ಬಂತು. ನನ್ನ ಧ್ವನಿ ನನಗೇ ಅರ್ಥವಾಗದಷ್ಟು ಗೊಗ್ಗರು ಗೊಗ್ಗರಾಯಿತು!'. ಏನೋ ತೊಂದರೆಯಾಗಿರಬೇಕು ಎಂದು ಆಸ್ಪತ್ರೆಗೆ ಹೋಗಲು ತಯಾರಾದೆ. ಮುಂಜಾನೆಗೇ ಎದ್ದು- ಆಸ್ಪತ್ರೆಗೆ ಹೋಗಿ ಬರೋಣ. ಜತೆಗೆ ಬಾ' ಎಂದು ಗೆಳೆಯನನ್ನು ಕರೆಯಲು, ನಂಬರ್ ಒತ್ತಿ ಮಾತಾಡಲು ಹೋದರೆ-ಧ್ವನಿಯೇ ಹೊರಡಲಿಲ್ಲ. ಗಾಬರಿಯಾಯಿತು. ದಡಬಡಿಸಿ ಒಬ್ಬನೇ ಆಸ್ಪತ್ರೆಗೆ ಹೋದೆ. ಅಲ್ಲಿ, ಹತ್ತಾರು ರೀತಿಯ ಚಿಕಿತ್ಸೆ ನಡೆಸಿದ ವೈದ್ಯರು- ನಿಮಗೆ ಧ್ವನಿ ಪೆಟ್ಟಿಗೆ ಒಡೆದು ಹೋಗಿದೆ. ಗಂಟಲು ಕ್ಯಾನ್ಸರ್ ಅಮರಿಕೊಂಡಿದೆ. ಒಡೆದು ಹೋಗಿರುವ ಧ್ವನಿ ಪೆಟ್ಟಿಗೆಯನ್ನು ಶಸ್ತ್ರಚಿಕಿತ್ಸೆಯ ಮೂಲಕ ತಕ್ಷಣವೇ ತೆಗೆದುಹಾಕಬೇಕು. ಇಲ್ಲವಾದಲ್ಲಿ ಜೀವಕ್ಕೇ ಅಪಾಯವಿದೆ. ನಿಮ್ಮ ಒರಿಜಿನಲ್ ಸ್ವರ' ಮುಂದೆಂದೂ ಮರಳುವುದಿಲ್ಲ. ಶಸ್ತ್ರಚಿಕಿತ್ಸೆಯ ನಂತರ ಎಲೆಕ್ಟ್ರೋನಾರ್‍ಲೆಕ್ಸ್ ಎಂಬ ಕೃತಕ ಧ್ವನಿಪೆಟ್ಟಿಗೆಯನ್ನು ಅಳವಡಿಸ್ತೀವಿ. ಅದು ನಿಮ್ಮಿಂದ ಮಾತು ಹೊರಡಲಿಕ್ಕೆ ಸಹಾಯ ಮಾಡುತ್ತೆ. ಹೀಗೆ, ಕೃತಕ ಧ್ವನಿಪೆಟ್ಟಿಯ ನೆರವಿಂದ ಬರುವ ಮಾತಿನಲ್ಲಿ ಮಾಧುರ್ಯ ಇರುವುದಿಲ್ಲ' ಎಂದರು.

ಹೀಗೆ- ಮಾತೇ ಬಿದ್ದು ಹೋಯ್ತು' ಅನ್ನಿಸಿಕೊಂಡಾಗ ನನಗೆ ಭರ್ತಿ 57 ವರ್ಷ. ಮಾತಿಲ್ಲ' ಎಂದು ಗೊತ್ತಾದ ತಕ್ಷಣವೇ ನನ್ನನ್ನು ನೌಕರಿಯಿಂದ ಕಿತ್ತುಹಾಕಲಾಯಿತು. ಕೆಲಸವಿಲ್ಲ ಅಂದ ಕ್ಷಣದಿಂದಲೇ ಕಾಸೂ ಇಲ್ಲ ಎಂಬಂತಾಯಿತು ನನ್ನ ಸ್ಥಿತಿ. ತಕ್ಷಣವೇ ಗೆಳೆಯರು ಮಾಯವಾದರು. ಬಂಧುಗಳು ದೂರವಾದರು. ಮನೆಮಂದಿ ಕೂಡ ಅಯ್ಯೋ ಪಾಪ' ಎಂಬಂತೆ ನೋಡಲು ಆರಂಭಿಸಿದರು. ಇದಕ್ಕೆಲ್ಲ ಕಾರಣವಾದದ್ದು- ಸಿಗರೇಟು! ಒಂದು ರೀತಿಯಲ್ಲಿ ಹುಚ್ಚು' ಎಂಬಂತೆ ಜತೆಯಾಗಿದ್ದ ಈ ಚಟದಿಂದ ನನಗೆ ಮುಂದೊಂದು ದಿನ ತೊಂದರೆಯಾಗಬಹುದು ಎಂದು ಗೊತ್ತಿತ್ತು. ಆದರೆ, ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ತೊಂದರೆ ಆಗಬಹುದು ಎಂಬ ಅಂದಾಜು ಖಂಡಿತ ಇರಲಿಲ್ಲ...

ಆಗಲೇ ಅರವತ್ತು ಹತ್ತಿರಾಗುತ್ತಿದೆ. ಕ್ಯಾನ್ಸರ್ ಕೂಡ ಜತೆಯಾಗಿದೆ. ಅಂದ ಮೇಲೆ ಈತ ಜಾಸ್ತಿ ದಿನ ಬದುಕುವುದಿಲ್ಲ ಎಂಬ ಮಾತುಗಳನ್ನು ನಂತರದ ದಿನಗಳಲ್ಲಿ ಜತೆಗಿದ್ದವರೇ ಹೇಳತೊಡಗಿದರು. ಹೆಜ್ಜೆ ಹೆಜ್ಜೆಗೂ ತಿರಸ್ಕಾರ, ವ್ಯಂಗ್ಯ, ಅನುಕಂಪ, ಸಮಾಧಾನದ ಮಾತುಗಳಿಂದ ತಿವಿಯತೊಡಗಿದರು. ಈ ಜಗತ್ತೇ ಕ್ರೂರಿ ಅನಿಸಿದ್ದೇ ಆಗ- ಅವರಿವರ ಮಾತಿಂದ ಕಣ್ಣೀರಾಗುವ ಬದಲು, ಇದ್ದಷ್ಟು ದಿನ ನಗುನಗುತ್ತಾ ಬಾಳಬೇಕು ಎಂಬ ಛಲ ಜತೆಯಾದದ್ದೇ ಆಗ. ತಕ್ಷಣವೇ ನನ್ನ ಆಸೆಯನ್ನು ಡಾಕ್ಟರ್‌ಗಳಿಗೆ ಹೇಳಿಕೊಂಡೆ.

ನನ್ನ ಈಗಿನ ದುಃಸ್ಥಿತಿಗೆ ಸಿಗರೇಟೇ ಕಾರಣ ಡಾಕ್ಟ್ರೇ. ಸಿಗರೇಟು ಸೇವನೆಯಿಂದ ಆಗುವ ಅನಾಹುತಗಳ ಬಗ್ಗೆ ಅರಿವು ಮೂಡಿಸುತ್ತಲೇ ಸಾಯಬೇಕು ಅನ್ನೋದು ನನ್ನ ಆಸೆ. ಕ್ಯಾನ್ಸರ್ ಇದ್ದರೆ ಏನಂತೆ? ನನಗೂ ನೂರು ವರ್ಷ ಆಯಸ್ಸಿದೆ ಅನ್ಕೋತೇನೆ. ಈಗಾಗಲೇ 57 ವರ್ಷ ಕಳೆದುಹೋಗಿದೆ. ಉಳಿದಿರುವ ಅಷ್ಟೂ ದಿನ ಕ್ಯಾನ್ಸರ್ ವಿರುದ್ಧ ಕತ್ತಿ ಝಳಪಿಸುತ್ತಲೇ ಇರ್‍ತೇನೆ. ನನ್ನ ಈ ಕ್ಷಣದ ಪರಿಸ್ಥಿತಿಯನ್ನು ಕಂಡಾದರೂ ಜನ ಸಿಗರೇಟು ಸೇವನೆಯಿಂದ ಹಿಂದೆ ಸರೀತಾರೆ ಅನ್ಕೋತೇನೆ ಎಂದೆ. ವೈದ್ಯರು ಖುಷಿಯಾದರು. ಕ್ಯಾನ್ಸರ್ ವಿರೋ ಆಂದೋಲನದ ಕಾರ್ಯಕ್ರಮಗಳಿಗೆ ದೇಶದ ಹತ್ತಾರು ಕಡೆಗೆ ಹೋಗಿಬರಲು ವ್ಯವಸ್ಥೆ ಮಾಡಿಕೊಟ್ಟರು....

****
ಇದೆಲ್ಲ ನಡೆದು ಈಗ ಮೂರು ವರ್ಷ ಕಳೆದಿದೆ. ಸರ್ಫುದ್ದೀನ್ ಕ್ಯಾನ್ಸರ್‌ನ ವಿರುದ್ಧ ತೊಡೆ ತಟ್ಟುತ್ತಾ 60ನೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾನೆ. ಅದೆಷ್ಟೋ ನಗರದ ಕಾಲೇಜುಗಳಿಗೆ ಹೋಗಿದ್ದಾನೆ. ಗಂಟಲಿನ ಪಕ್ಕಕ್ಕೆ ಧ್ವನಿತರಂಗ ಹೊರಡಿಸುವ ಕೃತಕ ಉಪಕರಣ ಇಟ್ಟುಕೊಂಡೇ, ಗೊಗ್ಗರು ದನಿಯಲ್ಲಿ ಮಾತಾಡುತ್ತಾನೆ. ತನ್ನ ಬದುಕಿನ ಕಥೆ ಹೇಳಿಕೊಳ್ಳುತ್ತಾನೆ. ಈಗಲೋ ಆಗಲೋ ಬರಲಿರುವ ಸಾವನ್ನು ನೆನೆದು ಕಂಗಾಲಾಗುತ್ತಾನೆ. ಕಣ್ಣೀರು ಸುರಿಸುತ್ತಾನೆ. ಪ್ರತಿಯೊಬ್ಬರಿಗೂ ಅವರದೇ ಆದ ಬಂಧು-ಬಳಗವಿರುತ್ತದೆ. ಗೆಳೆಯ-ಗೆಳತಿಯರ ಗುಂಪಿರುತ್ತದೆ. ಆ ಬಳಗದಿಂದ ಒಬ್ಬರು ದಿಢೀರ್ ಮಾಯವಾದರೆ, ಒಂದು ವೇದನೆ ಎಲ್ಲರನ್ನೂ ಕಾಡುತ್ತದೆ. ಅಂಥದೊಂದು ಸಂಕಟ ಜತೆಯಾಗಬಾರದು ಎಂಬುದೇ ನಿಮ್ಮ ಆಸೆಯಾಗಿದ್ದರೆ- ಈ ಕ್ಷಣದಿಂದಲೇ ಸಿಗರೇಟು ಸೇದೋದು ಬಿಡಿ' ಅನ್ನುತ್ತಾನೆ. ಈ ಮಾತುಗಳು ಯುವಕರ ಮೇಲೆ ಏನೂ ಪರಿಣಾಮ ಬೀರುತ್ತಿಲ್ಲ ಅನ್ನಿಸಿದರೆ-ಟಾಯ್ಲೆಟ್ ತೊಳೆಯೋಕೆ ಬಳಸುವ ಕೆಮಿಕಲ್ಸ್ ಸಿಗರೇಟಿನ ಪುಡಿಯಲ್ಲಿರ್‍ತವೆ. ಅಂದರೆ ಟಾಯ್ಲೆಟ್ ತೊಳೆಯೋಕೆ ಬಳಸುವ ವಸ್ತುವನ್ನೇ ನಾವು ತಿಂದ ಹಾಗಾಗುತ್ತೆ! ನೀವು ಮತ್ತೆ ಸಿಗರೇಟು ಹಚ್ಚಿದಾಗ ಈ ಮಾತು ನೆನಪು ಮಾಡ್ಕೊಳ್ಳಿ. ಆಗ ನಿಮಗೇ ಹೊಟ್ಟೆ ತೊಳಸಿಬರುತ್ತೆ. ಸಿಗರೇಟು ಸೇದಬೇಕು ಅನ್ನೋ ಆಸೆ ಖಂಡಿತ ಕೈಬಿಡುತ್ತೆ' ಎಂದು ಮಾತು ಮುಗಿಸುತ್ತಾನೆ.

ಸಿಗರೇಟು ಇಲ್ಲದಿದ್ದರೆ ಸಂಭ್ರಮವಿಲ್ಲ ಎಂದು ಹೇಳುವ ಅಣ್ಣ ತಮ್ಮಂದಿರೆಲ್ಲ ಸರ್ಫುದ್ದೀನ್‌ನ ಬದುಕಿನ ಕಥೆ ಮತ್ತು ವ್ಯಥೆಯನ್ನು ಅರ್ಥಮಾಡಿಕೊಳ್ಳಲಿ. ಸಿಗರೇಟಿಗೆ ಕಡೆಯ ಸಲಾಮು ಹೊಡೆಯಲು ಮುಂದಾಗಲಿ. ಹಾಗೆಯೇ ಮಾರಕ ರೋಗದ ವಿರುದ್ಧ ಧ್ವನಿ'ಯೆತ್ತಿರುವ ಮುದುಕನಿಗೆ ಜಯವಾಗಲಿ. ಇದು ಆಶಯ ಮತ್ತು ಹಾರೈಕೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X