• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ರಂಗದ ಮೇಲೆ ತುಘಲಕ್ ಮತ್ತು ಗೆಳೆಯರ ಸಂಗ

By ಡಾ. 'ಜೀವಿ' ಕುಲಕರ್ಣಿ, ಮುಂಬಯಿ
|

ತತಃ ಪ್ರವಿಶತಿ ಕಾರಂತಃ! ಗಿರೀಶರ ಜೀವನ ನಾಟಕದಲ್ಲಿ ಕಾರಂತರ ಪ್ರವೇಶ ಆಕಸ್ಮಿಕವಾಗಿರಲಿಲ್ಲ. ಇದೊಂದು ದೈವೀ ಸಂಕಲ್ಪವಾಗಿತ್ತು. ಕಾರಂತರಿಂದ ಕಾರ್ನಾಡರಿಗೆ, ಕಾರ್ನಾಡರಿಂದ ಕಾರಂತರಿಗೆ ಲಾಭವಾಗಬೇಕಿತ್ತು. 1965ರಲ್ಲಿ ಇವರ ಮದ್ರಾಸ್ ಆಫೀಸಿಗೆ ಕಾರಂತರು ಅನಪೇಕ್ಷಿತ ಅತಿಥಿಯಾಗಿ ಆಗಮಿಸಿದರು. ಕಾರಂತರ ಬಗ್ಗೆ ವೈ.ಎನ್.ಕೆ.ಅವರಿಂದ ಗಿರೀಶ ತಿಳಿದುಕೊಂಡಿದ್ದರು.

ಅವರು ಚಿಕ್ಕವರಿದ್ದಾಗ ಗುಬ್ಬಿ ನಾಟಕ ಕಂಪನಿಯಲ್ಲಿ ಕೆಲಸಮಾಡಿದ್ದರು. ಮುಂದೆ ದೆಹಲಿಯಲ್ಲಿ ಹಿಂದಿ ವಿಷಯದಲ್ಲಿ ಪದವೀಧರರಾಗಿ ಕನ್ನಡ ಶಾಲೆಯಲ್ಲಿ ಹಿಂದಿ ಶಿಕ್ಷಕರಾಗಿದ್ದರು. ರಾಷ್ಟ್ರೀಯ ನಾಟ್ಯ ವಿದ್ಯಾಲಯದ(ಎನ್.ಎಸ್.ಡಿ) ವಿದ್ಯಾರ್ಥಿಯೂ ಆಗಿದ್ದರು. ಕಾರಂತರು ನೇಮಿಚಂದ್ರ ಜೈನರೊಡಗೂಡಿ ಶ್ರೀರಂಗರ ಕೇಳು ಜನಮೇಜಯ ನಾಟಕವನ್ನು ಹಿಂದಿಗೆ ಅನುವಾದಿಸಿದ್ದರು. ಅದನ್ನು ನಿರ್ದೇಶಿಸಲು ಎನ್.ಎಸ್.ಡಿ. ನಿರ್ದೇಶಕರಾದ ಅಲ್‌ಕಾಝಿ ಮುಂದೆಬಂದರು. ಅದರಲ್ಲಿ ಹುರುಳಿಲ್ಲವೆಂದು ಬಗೆದು ಮೋಹನ ಮಹರ್ಷಿ ಎಂಬ ವಿದ್ಯಾರ್ಥಿಗೆ ಆ ಕೆಲಸ ಒಪ್ಪಿಸಿದರು.

ಆ ನಾಟಕ ಸುನೋ ಜನಮೇಜಯ ಪ್ರಯೋಗಗೊಂಡಾಗ ದೆಹಲಿಯಲ್ಲಿ ವಿದ್ಯುತ್ ಸಂಚಾರವಾದಂತಾಗಿತ್ತು. ಅಲ್ಲಿಯವರೆಗೆ ಕನ್ನಡ ಎಂಬ ಭಾಷೆಯಿದೆ ಎಂದು ಗೊತ್ತಿಲ್ಲದವರೂ ಕನ್ನಡದ ಕಡೆಗೆ ಹೊರಳಿದರು. ಮೋಹನ ಮಹರ್ಷಿಯ ಸಹಪಾಠಿ ಓಂಶಿವಪುರಿ ಎಂಬವರು ಇನ್ನೊಂದು ಕನ್ನಡ ನಾಟಕ ಹುಡುಕಿಕೊಡಲು ಕಾರಂತರ ಬೆನ್ನು ಹತ್ತಿದ್ದ. ಕಾರಂತರು ತುಘಲಕ್ ನಾಟಕದ ಬಗ್ಗೆ ಹೇಳಿದ್ದರು. ಆ ನಾಟಕವನ್ನು ದೆಹಲಿಯ ಕನ್ನಡ ಭಾರತಿ ಸಂಸ್ಥೆಗಾಗಿ ಅದನ್ನು ನಿರ್ದೇಶಿಸಲು ಅನುಮತಿ ಪಡೆಯಲಿಕ್ಕೆ ಅವರು ದೆಹಲಿಯಿಂದ ಮದ್ರಾಸಿಗೆ ಗಿರೀಶರನ್ನು ಕಾಣಲು ಬಂದಿದ್ದರು.

1966ರಲ್ಲಿ ಓಂ ಶಿವಪುರಿ ತುಘಲಕ್ ನಾಟಕವನ್ನು ರಂಗಕ್ಕೆ ತಂದರು. ಅಲ್‌ಕಾಝಿಯವರು ಗಿರೀಶರನ್ನು ಆಮಂತ್ರಿಸಿದರು. ನಾಟಕದ ಮೊದಲ ಪ್ರಯೋಗವನ್ನು ದಿಲ್ಲಿಯಲ್ಲಿ ಕಂಡಾಗ ದಿಲ್ಲಿಯ ರಂಗಜಗತ್ತಿನಲ್ಲಿ ವಿದ್ಯುತ್‌ಸಂಚಾರವಾದುದನ್ನು ಕಂಡು ಗಿರೀಶರಿಗೆ ರೋಮಾಂಚನವಾಗಿತ್ತು. ಪತ್ರಿಕೆಗಳಲ್ಲೆಲ್ಲ ತುಘಲಕ್ದೇ ಮಾತು. ತಾವು ಚಿಕ್ಕಂದಿನಿಂದ ಹುಚ್ಚು ಹುಚ್ಚಾಗಿ ಬಯಸಿದ ಖ್ಯಾತಿಯ ಮೊದಲ ಅನುಭವವಾಗಿತ್ತಂತೆ. ಮುಂದೆ 1971ರಲ್ಲಿ ಅಲ್‌ಕಾಝಿ ಸ್ವತಃ ತುಘಲಕ್ ನಾಟಕವನ್ನು ನಿರ್ದೇಶಿಸಿದರು. ದೆಹಲಿಯ ಪುರಾನಾ ಕೋಟೆಯ ಪ್ರಚಂಡ ಆವಾರದಲ್ಲಿ ಮನೋಹರ ಸಿಂಗ್ ತುಘಲಕ್ ಪಾತ್ರವಹಿಸಿದ್ದರು. ಆ ನಾಟಕದ ಕೀರ್ತಿಯನ್ನು ನೋಡಿದಾಗ ಅದು ತಮ್ಮ ನಾಟಕವೇ ಹೌದೋ ಅಲ್ಲವೋ ಎನ್ನುವಷ್ಟು ಪ್ರಸಿದ್ಧಿ ಪಡೆದಿತ್ತು ಎಂದು ಬರೆಯುತ್ತಾರೆ. ಕನ್ನಡದಲ್ಲಿ ಸಿ.ಆರ್.ಸಿಂಹ ತಾವೇ ಮುಖ್ಯ ಪಾತ್ರ ವಹಿಸಿ, ತಾವೇ ನಿರ್ದೇಶನ ಮಾಡಿ, ನೂರಾರು ಪ್ರಯೋಗ ಮಾಡಿದರು.

1968ರಲ್ಲಿ ಕಲಕತ್ತೆಯ ಅನಾಮಿಕಾ ಸಂಗಮ್ ಎಂಬ ಸಂಸ್ಥೆಯವರು ಭಾರತೀಯ ರಂಗಭೂಮಿಯನ್ನು ಕುರಿತು ಸೆಮಿನಾರ್ ಏರ್ಪಡಿಸಿದ್ದರು. ದೆಹಲಿ ಕೇಂದ್ರ ಸಂಗೀತ ನಾಟಕ ಅಕಾಡೆಮಿಯ ಕಾರ್ಯದರ್ಶಿ ಗಿರೀಶರನ್ನು ಆಮಂತ್ರಿಸಿದ್ದರು. ಅಲ್ಲಿ ಬಾದಲ್ ಸರಕಾರರ ನಾಟಕ ನೋಡಿದರು. ಕಲಕತ್ತೆಯಲ್ಲಿ ಲೋಕಪ್ರಿಯ ಬಂಗಾಲಿ ನಾಟಕವನ್ನು ಹಿಂದಿಯ ಪ್ರಸಿದ್ಧ ನಾಟಕಕಾರ ಮೊಹನ್ ರಾಕೇಶರೊಂದಿಗೆ ನೋಡಿದರು. ಅದರಲ್ಲಿಯ ಅಸಂಬದ್ಧತೆಯನ್ನು ಕಂಡು ಇಬ್ಬರೂ ನಕ್ಕರು. ರಾಕೇಶ ಗಿರೀಶರಿಗೆ ಹೇಳಿದರು, ನಾವು ನಕ್ಕ ಕಾರಣ ಭಾರತೀಯ ರಂಗಭೂಮಿಯ ಭವಿತವ್ಯ ನಮ್ಮ ಕೈಯಲ್ಲಿದೆ ಎಂಬ ಕಾರಣಕ್ಕಾಗಿ ಎಂದು. ಬಾದಲ್ ಸರಕಾರ ಅವರ ಏವಂ ಇಂದ್ರಜಿತ್ ನಾಟಕ ಬಹಳ ಪ್ರಸಿದ್ಧವಾಗಿತ್ತು. ಪ್ರತಿಭಾ ಅಗ್ರವಾಲ್ ಎಂಬವರು ಹಿಂದಿಗೆ ಅನುವಾದಿಸಿದ್ದರು. ಅದರ ಸಹಾಯದಿಂದ ಬಾದಲ್ ಸರಕಾರರ ಏವಂ ಇಂದ್ರಜಿತ್ ನಾಟಕವನ್ನು ಗಿರೀಶ ಇಂಗ್ಲಿಷಿಗೆ ಅನುವಾದಿಸಿ, ಮದ್ರಾಸ್ ಪ್ಲೇಯರ್ಸ್ ಮುಖಾಂತರ ಪ್ರಯೋಗಿಸಬೇಕು, ತಾನೇ ನಿರ್ದೇಶಿಸಬೇಕು ಎಂದು ನಿರ್ಧರಿಸಿದರು.

ಆಕ್ಸಫರ್ಡ್ ಯುನಿವರ್ಸಿಟಿ ಪ್ರೆಸ್‌ನಲ್ಲಿ ಏಳು ವರ್ಷ ಕೆಲಸದ ಕಾಂಟ್ರ್ಯಾಕ್ಟ್ ಇತ್ತು. ಕೆಲಸ ಬಿಡುವ ತಯಾರಿಯಲ್ಲಿದ್ದರು. ಮುಂದೆ ಮ್ಯಾನೇಜರ್ ಹುದ್ದೆ ದೊರೆಯಲಿದೆ ಎಂಬ ಆಮಿಷಕ್ಕೆ ಒಳಗಾಗದಿರಲು ನಿರ್ಧರಿಸಿದರು. ಅವರಿಗೆ ಬದಲಾವಣೆ ಬೇಕಾಗಿತ್ತು. ಇವರನ್ನು ಲಂಡನ್ನಿಗೆ ಕರೆಸಿಕೊಂಡರು. ಅಲ್ಲಿ ಉತ್ತಮ ಇಂಗ್ಲಿಷ್ ಪ್ರಾಧ್ಯಾಪಕರೆಂದು ಹೆಸರು ಗಳಿಸಿದ ನೆವಿಲ್ ಕಾಗ್‌ಹಿಲ್ (Nevil Coghill) ನಿರ್ದೇಶಿಸಿದ ಚಾಸರನ ಕ್ಯಾಂಟರ್‌ಬರಿ ಟೇಲ್ಸ್ (Chaucer's Canterbury Tales) ಆಧಾರಿತ ರಂಗ ಪ್ರಯೋಗ ನೋಡಿ ಮೆಚ್ಚಿದರು. ಅಲ್ಲಿಯ ರಂಗ ಸಜ್ಜಿಕೆಯ ಪ್ರಭಾವ ಇವರ ಮೇಲಾಯಿತು.

ಮದ್ರಾಸಿಗೆ ಮರಳಿ ಬಂದಾಗ ಕಾರಂತರು ಕೆಲ ದಿನ ಇರಲು ಬಂದಿದ್ದರು. ಆ ಕಾಲದಲ್ಲಿ ಇವರು ಸಂಸ್ಕಾರ ಸಿನೆಮಾದಲ್ಲಿ ತೊಡಗಿದ್ದರು. ಕಾದಂಬರಿಕಾರ ಥಾಮಸ್ ಮ್ಯಾನ್‌ (Thomas Mann) ಬರೆದ ದಿ ಟ್ಯ್ರಾನ್ಸಪೋಸ್ಡ್ ಹೆಡ್ಸ್ (The Transposed Heads) ಎಂಬ ನೀಳ್ಗತೆಯ ಬಗ್ಗೆ ಕಾರಂತರಿಗೆ ಹೇಳುತ್ತಿದ್ದರು. ಅದರ ಮೂಲಕತೆ ಕಥಾಸರಿತ್ಸಾಗರದಲ್ಲಿದೆ. ಇದನ್ನು ಆಧರಿಸಿ ಒಳ್ಳೆಯ ಚಿತ್ರಪಟ ಮಾಡಬಹುದು ಎಂದಾಗ ಕಾರಂತರು, ಫಿಲ್ಮ್‌ಗಿಂತ ನಾಟಕ ಹೆಚ್ಚು ಒಳ್ಳೆಯದಾಗತದೆ ಎಂದಿದ್ದರು. ಮುಂದೆ ಹಯವದನ ನಾಟಕ ಗಿರೀಶ ಬರೆದರು. ಅದರ ಅನುವಾದ ಶಿಕ್ಯಾಗೋದ ಎನ್ಯಾಕ್ಟ್ (ENACT) ಪತ್ರಿಕೆಯಲ್ಲಿ ಪ್ರಕಟವಾಯ್ತು. ಅದಕ್ಕೆ ಕಮಲಾದೇವಿ ಚಟ್ಟೋಪಾಧ್ಯಾಯ ಪಾರಿತೋಷಕ ದೊರೆಯಿತು. ಶಿಕ್ಯಾಗೋದಲ್ಲಿ ಇದರ ಪ್ರಯೋಗವಾಯ್ತು. ನ್ಯೂಯಾರ್ಕ್‌ನಲ್ಲಿ ಸಾಕಷ್ಟು ಪ್ರಯೋಗಗಳಾದವು. ಇವರು ಥಾಮಾಸ್ ಮ್ಯಾನ್‌ನ ಹೆಂಡತಿಯಿಂದ ಅನುಮತಿ ಪಡೆದಿದ್ದರು. ವಾಸ್ತವದಲ್ಲಿ ಅವನ ಕತೆಗೂ ಇಲ್ಲಿಯ ಕತೆಗೂ ದೂರದ ಸಂಬಂಧವಿತ್ತು.

ಮದ್ರಾಸಿನಲ್ಲಿದ್ದಾಗ ಇವರ ಅನುಭವದ ಕ್ಷೇತ್ರ ವಿಸ್ತಾರಗೊಂಡಿತ್ತು. ತಮಿಳು ಕಲಿಯಲು ಒಬ್ಬ ಶಿಕ್ಷಕನನ್ನು ನೇಮಿಸಿದ್ದರು. ಆದರೆ ಕಲಿಯಲು ಸಾಧ್ಯವಾಗಲಿಲ್ಲ. ಆಕ್ಸಫರ್ಡ್ ಪ್ರೆಸ್‌ನವರು ಇವರಿಗೊಂದು ಕಾರು ಕೊಟ್ಟಿದ್ದರು. (ಎರಡು ಬಾಗಿಲು ಇರುವ ಹೆರಾಲ್ಡ್ ಕಾರು.) ಪ್ರತಿ ವರ್ಷ ಮೂರುವಾರ ರಜೆ ಸಿಗುತ್ತಿತ್ತು. ಕಾರಿನಲ್ಲಿ ದಕ್ಷಿಣ ಭಾರತ ಸುತ್ತಾಡುತ್ತಿದ್ದರು. ಬೆಂಗಳೂರಿಗೂ ಧಾರವಾಡಕ್ಕೂ ಕಾರಿನಲ್ಲೇ ಪ್ರವಾಸ. ಇವರ ಕನ್ನಡ ಅಷ್ಟು ಚೆನ್ನಾಗಿರಲಿಲ್ಲ. ಇವರು ಒಮ್ಮೆ ಮಿತ್ರ ಅಶೋಕ ಕುಲಕರ್ಣಿಗೆ ಕನ್ನಡದಲ್ಲಿ ಒಂದು ಜೋಕು ಹೇಳಿದರು. ಅವರೆಂದರು, ಜೋಕು ಛಲೋ ಅದ. ಆದರ ನೀ ಬಹಳ ಕೆಟ್ಟ ಕನ್ನಡ ಮಾತಾಡತೀಯಪಾ ಎಂದು. ಇವರ ಮಿತ್ರರೇ ಹೀಗೆಂದಾಗ ಇವರ ನಾಟಕಗಳ ದಿಢೀರ್ ಯಶಸ್ಸು ನೋಡಿದ ಟೀಕಾಕಾರರು ಏನೆನ್ನಬಾರದು? ಎಂದು ನೆನಪಿಸುತ್ತಾರೆ. ವೈ.ಎನ್.ಕೆ. ಅವರ ಸ್ನೇಹದ ಬಗ್ಗೆ, ಜಿ.ಬಿ.ಜೋಶಿಯವರ ಆಕರ್ಷಕ ಆದರೆ ವಿಕ್ಷಿಪ್ತ ವ್ಯಕ್ತಿತ್ವದ ಬಗ್ಗೆ, ಕೀರ್ತಿಯವರ, ಪ್ರತಿಭೆ, ಸಂಯಮ, ಸಂವೇದನೆ ಹಾಗೂ ಪ್ರಚಂಡ ಬೌದ್ಧಿಕತೆಯ ಬಗ್ಗೆ ಬರೆಯುತ್ತಾರೆ.

ಇವರು ವೈಎನ್ಕೆ ಅವರಿಗೆ ತುಘಲಕ್ ನಾಟಕದ ಪ್ರತಿ ಕೊಟ್ಟಾಗ ಅವರು ಗ್ರೇಟ್ ಎಂದು ಹೊಗಳಿ ಪತ್ರ ಬರೆದಿದ್ದರು. ಇವರನ್ನು ಬೆಂಗಳೂರಿನ ರವಿ ಕಲಾವಿದರಿಗೆ ಪರಿಚಯಿಸಿ ನಾಟಕ ವಾಚನ ಏರ್ಪಡಿಸಿದ್ದರು. ರವಿ ಕಲಾವಿದರು ನಾಟಕ ಆಡುವುದಿಲ್ಲ ಎಂದಾಗ, ಗಾಂಧಿ ಬಜಾರದ ಒಂದು ಅಟ್ಟದ ಮೇಲೆ ಲಂಕೇಶ್, ನಿಸ್ಸಾರ್, ಸಿಂಹ ಇತ್ಯಾದಿ ಯುವಕರನ್ನು ಕಲೆಹಾಕಿ ನಾಟಕ ವಾಚನ ಮಾಡಿಸಿದರು. ಉರ್ದು ಲೇಖಕ ರಿಯಾಝ್‌ರ ಪರಿಚಯ ಮಾಡಿಕೊಟ್ಟರು. ಮುಂದೆ ಸಿಂಹ ತುಘಲಕ್ ನಾಟಕ ಪ್ರಯೋಗಿಸಲು ಪ್ರಾರಂಭಿಸಿದಾಗ, ಕಾರಂತರು ಹಯವದನವನ್ನು ಕನ್ನಡದಲ್ಲಿ ನಿರ್ದೇಶಿಸಿದಾಗ ವೈಎನ್ಕೆಯವರಿಗೆ ಎಲ್ಲಿಲ್ಲದ ಉತ್ಸಾಹ. (ಹಯವದನ ಕನ್ನಡಕ್ಕಿಂತ ಮೊದಲು ಇಂಗ್ಲಿಷಿನಲ್ಲೇ ಪ್ರಸಿದ್ಧಿ ಗಳಿಸಿತ್ತು.) ಗಿರೀಶ ಸಂಸ್ಕಾರದೊಂದಿಗೆ ಚಿತ್ರರಂಗಕ್ಕೆ ಧುಮುಕಿದಾಗ, ಪ್ರತಿ ತಿರುವಿಗೆ ವೈಎನ್ಕೆ ಸಲಹೆಗಾರರಾದರು, ಮಾರ್ಗದರ್ಶಕರಾದರು, ಟೀಕಾಕಾರರಾದರು ಎಂದೂ ಬರೆಯುತ್ತಾರೆ.

ಮದ್ರಾಸಿನಲ್ಲಿ ಎರಡು ಸಂಸ್ಥೆಗಳು ಗಿರೀಶರ ಜೀವನದಲ್ಲಿ ಅಕ್ಷರಶಃ ಬಣ್ಣ ತಂದವೆಂದು ಬರೆಯುತ್ತಾರೆ. ಮೊದಲನೆಯದು ಮದ್ರಾಸ್ ಸ್ಕೂಲ್ ಆಫ್ ಆರ್ಟ್ಸ್. ಎರಡನೆಯದು ಚೋಳಮಂಡಲ. ವೈಎನ್ಕೆಯವರ ಮುಖಾಂತರ ಎಸ್.ಜಿ.ವಾಸುದೇವ ಅವರ ಪರಿಚಯವಾಯ್ತು. ಇವರು ಬೆಂಗಳುರವರು. ಮದ್ರಾಸ್ ಸ್ಕೂಲ್ ಆಫ್ ಆರ್ಟ್ಸ್ ವಿದ್ಯಾರ್ಥಿಯಾಗಿದ್ದರು. ಅವರು ಗಿರೀಶರನ್ನು ಸ್ಕೂಲ್ ಆಫ್ ಆರ್ಟ್ಸಗೆ ಕರೆದುಕೊಂಡು ಹೋಗಿ ಕಲಾವಿದ ಮಿತ್ರರನ್ನು ಪರಿಚಯಿಸಿದರು. ಅಲ್ಲಿ ಹೊಸ ಪ್ರಯೋಗಗಳು ನಡೆದಿದ್ದವು. ಭಾರತೀಯ ಐಡೆಂಟಿಟಿ ಏನು ಎಂಬ ಬಗ್ಗೆ ಚರ್ಚೆ ನಡೆದಿದ್ದವು. ಅಲ್ಲಿಯ ಪ್ರಿನ್ಸಿಪಾಲರಾಗಿದ್ದ ಕೆ.ಎಂ. ಪಣಿಕ್ಕರ್ ಅವರು ಮುಖಂಡರಾಗಿದ್ದರು. ಪಾಚ್ಶಾತ್ಯ ದಾಸ್ಯದಿಂದ ಬಿಡಿಸಿಕೊಂಡು ಭಾರತೀಯ ಮೂಲಗಳಿಂದ ಸ್ಫೂರ್ತಿ ಪಡೆದು ಹೊಸ ಚಿತ್ರಪ್ರಣಾಳಿಕೆಯನ್ನು ಹೇಗೆ ನಿರ್ಮಿಸಬಹುದೆಂಬ ದಿಕ್ಕಿನಲ್ಲಿ ಚಿಂತನ ನಡೆಸಿದ್ದರು. ಕಲಿಯುವುದು ಮುಗಿದ ಮೇಲೆ ವಿದ್ಯಾರ್ಥಿಗಳನ್ನು ಒಂದೆಡೆ ತಂದು, ಮದ್ರಾಸಿನಿಂದ ಸ್ವಲ್ಪ ದೂರದಲ್ಲಿ ಸಮುದ್ರ ದಂದೆಯ ಮೇಲೆ ಚೋಳಮಂಡಲವೆಂಬ ಗ್ರಾಮವನ್ನು ನಿರ್ಮಿಸಿದ್ದರು. ಚೋಳಮಂಡಲದ ಕಲಾ ಪ್ರಯೋಗಗಳನ್ನು ಲೋಕಪ್ರಿಯಗೊಳಿಸಲು ಗಿರೀಶ ಕಾರ್ನಾಡ ಇಂಡಿಯನ್ ಎಕ್ಸ್‌ಪ್ರೆಸ್‌ನಲ್ಲಿ ಕಲಾವಿಮರ್ಶೆ ಬರೆದರು.

ಇವರಿಗೆ ತುಘಲಕ್ ಯಶಸ್ಸನ್ನು ಪುನರುಕ್ತಿಗೊಳಿಸುವುದು ಬೇಕಾಗಿರಲಿಲ್ಲ. ಸಂಪ್ರದಾಯಿಕ ಮಾಧ್ಯಮಗಳಿಂದ ತಮಗೇನು ದೊರೆಯಬಹುದೆಂಬ ಶೋಧದಲ್ಲಿದ್ದರು. ಸುದೈವದಿಂದ ವಾಸುದೇವ ಕೇವಲ ಚಿತ್ರಕಾರರಾಗಿ ಉಳಿಯುವುದರಲ್ಲೇ ತೃಪ್ತಿಪಡುತ್ತಿರಲಿಲ್ಲ. ಅವರಿಗೆ ನಾಟಕಗಳಲ್ಲಿ, ಸಾಹಿತ್ಯದಲ್ಲಿ ಆಸಕ್ತಿ ಇತ್ತು. ಇವರು ಮದ್ರಾಸ್ ಪ್ಲೇಯರ್ಸ್ ಎಂಬ ಹವ್ಯಾಸಿ ರಂಗ ಕಲಾವಿದರ ಪರಿಚಯ ಮಾಡಿಕೊಟ್ಟರು. ಎ.ಕೆ.ರಾಮಾನುಜನ್ ಬಂದಾಗ ಅವರ ಸಂಗಂ ಕಾವ್ಯದ ಇಂಗ್ಲಿಷ್ ಅನುವಾದಕ್ಕೆ ವಾಸುದೇವ ಸ್ಪಂದಿಸಿದರು. ಮನೋಹರ ಗ್ರಂಥ ಮಾಲೆಯ ಪುಸ್ತಕಗಳಿಗೆ ಮುಖಚಿತ್ರ ಬರೆದರು. ಆಕ್ಸಫರ್ಡ್ ಪ್ರೆಸ್‌ನವರು ತುಘಲಕ್ದ ಆಂಗ್ಲ ಅನುವಾದ ಪ್ರಕಟಿಸಿದಾಗ ವಾಸುದೇವ ಮುಖಚಿತ್ರ ಬಿಡಿಸಿದರು. ಅದಕ್ಕೆ ಬಹುಮಾನವೂ ಬಂತು. ವಾಸುದೇವರ ಮೈತ್ರಿ ಎಷ್ಟು ಘನಿಷ್ಠವಾಯಿತೆಂದರೆ ಅವರು ಅರ್ನವಾಝ್ ಎಂಬ ಪಾರ್ಸಿ ಹುಡುಗಿಯನ್ನು ಮದುವೆಯಾದಾಗ, ಬೆಂಗಳೂರಲ್ಲಿ ನಡೆದ ವಿವಾಹ ವಿಧಿಯಲ್ಲಿ, ಅರ್ನವಾಝರ ಅಣ್ಣನ ಸ್ಥಾನದಲ್ಲಿ ನಿಂತು ಗಿರೀಶ ಕನ್ಯಾದಾನ ಮಾಡಿದ್ದರು.

English summary
Kannada laureate Dr. G.V. Kulkarni writes about Jnanpith awardee, Kannada playwrite Dr. Girish Karnad's autobiography 'Adadata Aayushya' in his column Jeevana Mattu Sahitya. Here is part 15. In this episode Karnad writes about successful of Tughalaq.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X