ಜೂನ್ 12ಕ್ಕೆ ಎಚ್.ಡಿ.ಕುಮಾರಸ್ವಾಮಿ ಸಂಪುಟ ವಿಸ್ತರಣೆ ಇಲ್ಲ
ಬೆಂಗಳೂರು, ಜೂನ್ 10 : ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದ ಸಚಿವ ಸಂಪುಟ ವಿಸ್ತರಣೆ ಮುಂದೂಡಿಕೆಯಾಗಿದೆ. ಜೂನ್ 12ರ ಬುಧವಾರ ಸಂಪುಟ ವಿಸ್ತರಣೆ ಮಾಡಲು ದಿನಾಂಕ ನಿಗದಿಯಾಗಿತ್ತು.
ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಗಿರೀಶ್ ಕಾರ್ನಾಡ್ ಅವರು ಸೋಮವಾರ ವಿಧಿವಶರಾದರು. ಸರ್ಕಾರ ರಾಜ್ಯದಲ್ಲಿ ಮೂರು ದಿನಗಳ ಶೋಕಾಚರಣೆ ಘೋಷಣೆ ಮಾಡಿದೆ. ಆದ್ದರಿಂದ, ಸಂಪುಟ ವಿಸ್ತರಣೆ ಮುಂದಕ್ಕೆ ಹೋಗಿದೆ.
ಶೋಕಾಚರಣೆ ಇರುವಾಗ ಯಾವುದೇ ಸರ್ಕಾರಿ ಕಾರ್ಯಕ್ರಮಗಳನ್ನು ಮಾಡುವಂತಿಲ್ಲ. ಜೂನ್ 10, 11 ಮತ್ತು 12ರಂದು ಮೂರು ದಿನಗಳ ಕಾಲ ಯಾವುದೇ ಕಾರ್ಯಕ್ರಮಗಳ ನಡೆಯುವುದಿಲ್ಲ. ಆದ್ದರಿಂದ, ನಿಗದಿಯಾಗಿದ್ದ ಸಂಪುಟ ವಿಸ್ತರಣೆ ಮುಂದೂಡಲಾಗಿದೆ.

ಜೂನ್ 17 ಅಥವ 18ರಂದು ಸಂಪುಟ ವಿಸ್ತರಣೆ ನಡೆಯುವ ಸಾಧ್ಯತೆ ಇದೆ. ರಾಜಭವನದಿಂದ ಅಧಿಕೃತವಾದ ದಿನಾಂಕ, ಸಮಯ ನಿಗದಿಯಾದ ಬಳಿಕ ಮುಂದಿನ ದಿನಾಂಕವನ್ನು ಘೋಷಣೆ ಮಾಡಲಾಗುತ್ತದೆ.
ಇಂದು ನಿಧನರಾದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಶ್ರೀ #GirishKarnad ಗೌರವಾರ್ಥ ಸರ್ಕಾರಿ ಕಚೇರಿಗಳು,ಶಾಲೆ,ಕಾಲೇಜುಗಳಿಗೆ ಇಂದು ಒಂದು ದಿನ ರಜೆ ಘೋಷಿಸಲಾಗುವುದು.ಮೂರು ದಿನಗಳ ಕಾಲ ರಾಜ್ಯಾದ್ಯಂತ ಶೋಕಾಚರಣೆ ಘೋಷಿಸಲಾಗುವುದು ಹಾಗೂ ಸಕಲ ಸರ್ಕಾರಿ ಗೌರವಗಳೊಂದಿಗೆ ಮೃತರ ಅಂತ್ಯಕ್ರಿಯೆ ನೆರವೇರಿಸಲಾಗುವುದು ಎಂದು ಮುಖ್ಯಮಂತ್ರಿಗಳು ತಿಳಿಸಿದ್ದಾರೆ
— CM of Karnataka (@CMofKarnataka) June 10, 2019
ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಸಂಪುಟದಲ್ಲಿ ಜೆಡಿಎಸ್ ಕೋಟಾದ 2, ಕಾಂಗ್ರೆಸ್ ಕೋಟಾದ 1 ಸೇರಿ ಒಟ್ಟು ಮೂರು ಸಚಿವ ಸ್ಥಾನಗಳು ಖಾಲಿ ಇವೆ. ಜೂನ್ 12ರಂದು ಸಂಪುಟ ವಿಸ್ತರಣೆ ಮಾಡಿ ಖಾಲಿ ಇರುವ ಸ್ಥಾನಗಳನ್ನು ಭರ್ತಿ ಮಾಡಲು ತೀರ್ಮಾನಿಸಲಾಗಿತ್ತು.
ಶನಿವಾರ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ರಾಜಭವನಕ್ಕೆ ಭೇಟಿ ನೀಡಿ ರಾಜ್ಯಪಾಲರ ಜೊತೆ ಚರ್ಚೆ ನಡೆಸಿದ್ದರು. ಜೂನ್ 12ರ ಬೆಳಗ್ಗೆ 11.30ಕ್ಕೆ ನೂತನ ಸಚಿವರ ಪ್ರಮಾಣ ವಚನ ಸಮಾರಂಭಕ್ಕೆ ಸಮಯ ನಿಗದಿ ಮಾಡಲಾಗಿತ್ತು.












Click it and Unblock the Notifications