ಗಿರೀಶ್ ಕಾರ್ನಾಡ್ 'ತುಘಲಕ್' ನಾಟಕಕ್ಕೆ ನೂರರ ಸಂಭ್ರಮ: ಎರಡು ದಿನದ ರಂಗೋತ್ಸವದ ಸಂಪೂರ್ಣ ಮಾಹಿತಿ
ಬೆಂಗಳೂರು, ಅಕ್ಟೋಬರ್ 26: ಸಮುದಾಯ, ಬೆಂಗಳೂರು ಪ್ರಸ್ತುತ ಪಡಿಸಿರುವ, ಗಿರೀಶ್ ಕಾರ್ನಾಡ್ ರಚಿತ 'ತುಘಲಕ್' ನಾಟಕ ನೂರನೇ ಪ್ರದರ್ಶನ ಕಾಣುತ್ತಿದೆ. ಈ ಸಂದರ್ಭದಲ್ಲಿ ಸಮುದಾಯ ಬೆಂಗಳೂರು ಎರಡು ದಿನಗಳ ವಿಶೇಷ ಕಾರ್ಯಕ್ರಮವನ್ನು ಅಕ್ಟೋಬರ್ 28 ಮತ್ತು ಅಕ್ಟೋಬರ್ 29ರಂದು ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಿದೆ.
ಕಾರ್ಯಕ್ರಮದಲ್ಲಿ ಗಿರೀಶ್ ಕಾರ್ನಾಡರ ನೆನಪು ವಿಚಾರ ಸಂಕಿರಣ, ಸ್ಮರಣ ಸಂಚಿಕೆ ಬಿಡುಗಡೆ, ಕೆ.ಎಂ.ಚೈತನ್ಯ ನಿರ್ದೇಶನದ ಕಾರ್ನಾಡ್ ಸಾಕ್ಷ್ಯ ಚಿತ್ರ ಪ್ರದರ್ಶನ, 'ಹೂವು' ಏಕವ್ಯಕ್ತಿ ನಾಟಕ ಪ್ರದರ್ಶನ, 'ಕಾರ್ನಾಡರ ಕೃತಿಗಳು-ಒಳನೋಟ' ವಿಚಾರ ಸಂಕಿರಣ, 'ರಂಗ ಚಿಂತನ' ಪುಸ್ತಕ ಬಿಡುಗಡೆ ಕಾರ್ಯಕ್ರಮ ನಡೆಯಲಿದೆ.

ಜೊತೆಗೆ ತುಘಲಕ್ ನಾಟಕ ಪ್ರದರ್ಶನ ಕೂಡ ಏರ್ಪಡಿಸಲಾಗಿದೆ. ನಾಡಿನ ಹೆಸರಾಂತ ರಂಗಕರ್ಮಿಗಳು, ಸಾಹಿತಿಗಳು ಈ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಹೀಗಾಗಿ ರಂಗಭೂಮಿ ಹಾಗೂ ಸಾಹಿತ್ಯ ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮಕ್ಕೆ ಆಗಮಿಸುವಂತೆ ಸಮುದಾಯ, ಬೆಂಗಳೂರು ಮನವಿ ಮಾಡಿಕೊಂಡಿದ್ದಾರೆ.
ಗಿರೀಶ್ ಕಾರ್ನಾಡರ ತುಘಲಕ್ ನಾಟಕ ಬಗ್ಗೆ ಒಂದಿಷ್ಟು ಮಾಹಿತಿ..!
ಗಿರೀಶ್ ಕಾರ್ನಾಡರ ತುಘಲಕ್ ಭಾರತದ ಶ್ರೇಷ್ಠ ನಾಟಕಗಳಲ್ಲೊಂದು. ಐತಿಹಾಸಿಕ ಭಿತ್ತಿಯಲ್ಲಿ ಸಮಕಾಲೀನ ಧ್ವನಿಗಳನ್ನು ಹೊರಡಿಸುವ ಈ ನಾಟಕ ಹಲವು ವ್ಯಾಖ್ಯಾನಗಳ ಸಾಧ್ಯತೆಯನ್ನು ತನ್ನ ಒಡಲೊಳಗಿರಿಸಿಕೊಂಡಿದೆ. ಈ ನಾಟಕದ ಮಹತ್ವಾಕಾಂಕ್ಷೆಯ ಪ್ರಯೋಗಗಳನ್ನು ಕನ್ನಡವೂ ಸೇರಿದಂತೆ ನಾಡಿನ ಅನೇಕ ಭಾಷೆಗಳು ಕಂಡಿದೆ.

ತನ್ನ ರಾಜ್ಯದ ಉಜ್ವಲ ಭವಿಷ್ಯದ ಕನಸು ಕಂಡ ತುಘಲಕ್‌ನ ಸಾಮ್ರಾಜ್ಯದ ಅವನತಿಯ ರಾಜಕಾರಣ ಮತ್ತು ಧರ್ಮಕಾರಣಗಳನ್ನು ಎತ್ತಿ ಹಿಡಿವ ಈ ನಾಟಕ ಒಂದು ಅಪ್ಪಟ ರಾಜಕೀಯ ನಾಟಕವಾಗಿ ರೂಪುಗೊಡಿದೆ. ಮೇಲ್ನೋಟಕ್ಕೆ ತುಘಲಕ್ ಐತಿಹಾಸಿಕ ನಾಟಕವೆನಿಸಿದರೂ ಇಂದಿಗೂ ನಾವು ಕಾಣುವ ರಾಜಕಾರಣದ ಮೇಲಿನ ಧರ್ಮದ ಹಿಡಿತವನ್ನು ಎತ್ತಿ ಹಿಡಿಯುತ್ತದೆ ಎಂದು ಸಮುದಾಯ, ಬೆಂಗಳೂರು ತಿಳಿಸಿದೆ.












Click it and Unblock the Notifications