ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗಿರೀಶ್ ಕಾರ್ನಾಡ್ ಅವರಲ್ಲಿ ಚಿಂತಕನೂ ಇದ್ದ, ರಾಜಕಾರಣಿಯೂ ಇದ್ದ

|
Google Oneindia Kannada News

ಗಿರೀಶ್ ಕಾರ್ನಾಡ್! ಈ ಹೆಸರನ್ನು, ವ್ಯಕ್ತಿತ್ವವನ್ನು, ಅವರ ವಿಚಾರಧಾರೆಯನ್ನು ಒಂದೇ ಚೌಕಟ್ಟಿನಲ್ಲಿ ಹಿಡಿದಿಡಲು ಸಾಧ್ಯವೇ ಇಲ್ಲ. ಅವರನ್ನು ಯಾವ ಕಾರಣಕ್ಕೆ ಅತಿಯಾಗಿ ಪ್ರೀತಿಸಬಹುದಿತ್ತೋ, ಅದೇ ಕಾರಣಕ್ಕೆ ಅವರನ್ನು ದ್ವೇಷಿಸಲೂ ಸಾಧ್ಯವಿತ್ತು. ತಮ್ಮನ್ನು ಯಾರಾದರೂ ದ್ವೇಷಿಸುತ್ತಾರೆಂದು ಅವರು ಅನಿಸಿದ್ದನ್ನು ಘಂಟಾಘೋಷವಾಗಿ ಸಾರಲು ಎಂದೂ ಹಿಂದೆಮುಂದೆ ನೋಡುತ್ತಿರಲಿಲ್ಲ. ಅವರ ಈ ವ್ಯಕ್ತಿತ್ವದಿಂದಾಗಿಯೇ ಮತ್ತೆ ಪ್ರೀತಿಸಲ್ಪಡುತ್ತಿದ್ದರು.

ಅವರು ನಾಟಕಕಾರ, ಲೇಖಕ, ನಟ, ನಿರ್ದೇಶಕ, ನಿರೂಪಕ, ಚಳವಳಿಗಾರ, ಪ್ರಗತಿಪರ ಚಿಂತಕ ಮಾತ್ರವಾಗಿರಲಿಲ್ಲ, ಅವರು ಹರಿಯುವ ನದಿಯಂತಿದ್ದರು, ತಮ್ಮ ಅಪಾರ ಜ್ಞಾನವನ್ನು ಧಾರೆಯೆರೆಯುತ್ತಿದ್ದರು. ಅವರಲ್ಲೊಬ್ಬ ಚಿಂತಕನೂ ಇದ್ದ, ಹೋರಾಟಗಾರನೂ ಇದ್ದ, ಛಲಗಾರನೂ ಇದ್ದ, ರಾಜಕಾರಣಿಯೂ ಇದ್ದ. ಜ್ಞಾನಪೀಠ ಪ್ರಶಸ್ತಿಗೆ ಪಾತ್ರರಾಗಿದ್ದು ಅವರ ಜೀವನದ ಹೆಗ್ಗುರುತುಗಳಲ್ಲೊಂದು.

ಗಿರೀಶ್ ಕಾರ್ನಾಡ್ ಅವರ 'ತಲೆದಂಡ' ನಾಟಕ ಕೈಗೆತ್ತಿಕೊಂಡಾಗ... ಗಿರೀಶ್ ಕಾರ್ನಾಡ್ ಅವರ 'ತಲೆದಂಡ' ನಾಟಕ ಕೈಗೆತ್ತಿಕೊಂಡಾಗ...

ವಿದ್ಯಾರ್ಥಿ ಜೀವನದಲ್ಲಿದ್ದಾಗಲೇ ಧಾರವಾಡದಲ್ಲಿ ದರಾ ಬೇಂದ್ರೆ, ಕುರ್ತಕೋಟಿ, ಜಿಬಿ ಜೋಶಿ ಮುಂತಾದ ಖ್ಯಾತಾನುಖ್ಯಾತ ಸಾಹಿತಿಗಳ ಸಾಂಗತ್ಯವನ್ನು ಗಳಿಸಿದ ಅವರು, ವಿದ್ಯಾರ್ಥಿಯಾಗಿದ್ದಾಗಲೇ ಭವಿಷ್ಯದ ಕನಸಿಗೂ ನೀರೆರೆದಿದ್ದರು. ಏನೇ ಆಗಲಿ ವಿದೇಶಕ್ಕೆ ವ್ಯಾಸಂಗ ಮಾಡಬೇಕು ಎಂಬುದು ಅವರ ಕನಸುಗಳಲ್ಲಿ ಒಂದಾಗಿತ್ತು. ರ್ಹೋಡ್ಸ್ ಸ್ಕಾಲರ್ ಶಿಪ್ ಪಡೆದು ಇಂಗ್ಲೆಂಡಿನ ಆಕ್ಸ್ ಫರ್ಡ್ ವಿಶ್ವವಿದ್ಯಾಲಯದಲ್ಲಿ ಉನ್ನತ ವ್ಯಾಸಂಗ ಮಾಡಿದ್ದು ಅವರ ಜೀವನದ ದಿಕ್ಕನ್ನೇ ಬದಲಾಯಿಸಿತ್ತು.

Legendary actor, playwrite and politician Girish Karnad

ಮುಂದೆ ಆನೆ ನಡೆದಿದ್ದೇ ಹಾದಿ ಎಂಬಂತೆ ಸಾಧನೆಯ ಹಾದಿಯಲ್ಲಿ ಗಿರೀಶ್ ಕಾರ್ನಾಡ್ ಸಾಗಿದರು. ಯುವಕರಿದ್ದಾಗಲೇ ಚರ್ಚೆ, ವಾಗ್ವಾದ, ಪಂಡಿತ ಸಾಂಗತ್ಯದಿಂದಾಗಿ 'ಬುದ್ಧಿಜೀವಿ'ಗಳ ಸಾಲಿನಲ್ಲಿ ಗಿರೀಶ್ ಕಾರ್ನಾಡ್ ಗುರುತಿಸಿಕೊಳ್ಳುವಂತಾದರು. ಕನ್ನಡ, ಇಂಗ್ಲಿಷ್, ಹಿಂದಿ, ಮರಾಠಿ, ಉರ್ದು, ಫ್ರೆಂಚ್ ಮುಂತಾದ ಭಾಷೆಗಳಲ್ಲಿ ನಿರರ್ಗಳವಾಗಿ ಸಂವಹನ ನಡೆಸುವ ತಾಕತ್ತು ಅವರಲ್ಲಿತ್ತು. ಆದರೆ, ಕನ್ನಡದಲ್ಲಿ ಬರೆದ ಅವರ ನಾಟಕಗಳು ಅವರ ವ್ಯಕ್ತಿತ್ವವನ್ನು ಮತ್ತಷ್ಟು ಎತ್ತರಕ್ಕೆ ತೆಗೆದುಕೊಂಡು ಹೋದವು.

ಅವರು ಉನ್ನತ ವ್ಯಾಸಂಗಕ್ಕಾಗಿ ಇಂಗ್ಲೆಂಡಿಗೆ ತೆರಳುವ ಮೊದಲೇ 'ಯಾಯಾತಿ' ನಾಟಕವನ್ನು ಬರೆದಿದ್ದರು. ಅದನ್ನು ಪ್ರಥಮ ಬಾರಿಗೆ ಪ್ರಕಟಿಸಿದ್ದು ಧಾರವಾಡದ ಮನೋಹರ ಗ್ರಂಥ ಮಾಲಾ. ಬೇಂದ್ರೆ, ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಅವರ ಪ್ರಥಮ ಕೃತಿಗಳನ್ನು ಪ್ರಕಟಿಸಿ ಬೆಳೆಸಿದ್ದು ಕೂಡ ಇದೇ ಧಾರವಾಡದ ಮನೋಹರ ಗ್ರಂಥ ಮಾಲಾ. ಇದನ್ನು ಗಿರೀಶ್ ಕಾರ್ನಾಡ್ ಅವರು ಯಾವಾಗಲೂ ನೆನೆಯುತ್ತಿದ್ದರು. ಅವರಲ್ಲಿನ ಲೇಖಕನನ್ನು ಬಡಿದೆಬ್ಬಿಸಿದ್ದು, ನೀರೆರೆದು ಪೋಷಿಸಿದ್ದು ಕೂಡ ಮನೋಹರ ಗ್ರಂಥಮಾಲಾ.

ಗಿರೀಶ್ ಕಾರ್ನಾಡರ ನಿಧನಕ್ಕೆ ಟ್ವಿಟ್ಟರ್‌ನಲ್ಲಿ ಗಣ್ಯರ ಸಂತಾಪ ಗಿರೀಶ್ ಕಾರ್ನಾಡರ ನಿಧನಕ್ಕೆ ಟ್ವಿಟ್ಟರ್‌ನಲ್ಲಿ ಗಣ್ಯರ ಸಂತಾಪ

ಅವರು ಬರೆದಿರುವ ನಾಟಕಗಳ ಪಟ್ಟಿಯೂ ದೊಡ್ಡದಿದೆ. ಮಾ ನಿಷಾಧ - ಏಕಾಂಕ ನಾಟಕ, ಯಯಾತಿ - 1961, ತುಘಲಕ್ - 1964, ಹಯವದನ - 1972, ಅಂಜುಮಲ್ಲಿಗೆ - 1977, ಹಿಟ್ಟಿನ ಹುಂಜ ಅಥವಾ ಬಲಿ - 1980, ನಾಗಮಂಡಲ - 1990, ತಲೆದಂಡ - 1990, ಅಗ್ನಿ ಮತ್ತು ಮಳೆ - 1995, ಟಿಪ್ಪುವಿನ ಕನಸುಗಳು - 1997, ಒಡಕಲು ಬಿಂಬ - 2005, ಮದುವೆ ಅಲ್ಬಮ್, ಫ್ಲಾವರ್ಸ - 2012, ಬೆಂದ ಕಾಳು ಆನ್ ಟೋಸ್ಟ- 2012. ಅವರು ತಮ್ಮ ಆತ್ಮಕಥೆ 'ಆಡಾಡತ ಆಯುಷ್ಯ' ಬರೆದಿದ್ದು 2011ರಲ್ಲಿ.

ಗಿರೀಶ್ ಕರ್ನಾಡ್ ಅವರು ಬರೆದ ನಾಟಕಗಳದ್ದು ಒಂದು ತೂಕವಾದರೆ, ಭಾರತೀಯ ಸಿನೆಮಾಗಳಲ್ಲಿ ಅವರು ತೊಡಗಿಸಿಕೊಂಡಿದ್ದರ ತೂಕ ಮತ್ತೊಂದು. ಅವರ ಸಿನಿಪಯಣ ಆರಂಭವಾದದ್ದೇ ಒಂದು ರೋಚಕ ಕಥೆ. ಹಲವಾರು ಸಿನೆಮಾ ಕಲಾವಿದರ, ವೈಎನ್ಕೆ ಸೇರಿದಂತೆ ಹಲವಾರು ಪತ್ರಕರ್ತರ ಸಾಂಗತ್ಯ ಹೊಂದಿದ್ದ ಗಿರೀಶ್ ಕಾರ್ನಾಡ್ ಅವರು, ಯುಆರ್ ಅನಂತಮೂರ್ತಿ ಅವರ ಕಾದಂಬರಿ ಆಧಾರಿತ 'ಸಂಸ್ಕಾರ' ಚಿತ್ರದ ಪ್ರಾಣೇಶಾಚಾರ್ಯ ಪಾತ್ರಕ್ಕೆ ಆಗಿದ್ದೇ ಒಂದು ಅಚ್ಚರಿ. ಈ ಚಿತ್ರ ಸ್ವರ್ಣಕಮಲ ಪ್ರಶಸ್ತಿಯನ್ನು ತಂದುಕೊಟ್ಟಿತು.

ಕಾರ್ನಾಡ್ ನಿಧನಕ್ಕೆ ಸಂತಾಪ ಸೂಚಿಸಿದ ಪ್ರಧಾನಿ ನರೇಂದ್ರ ಮೋದಿ ಕಾರ್ನಾಡ್ ನಿಧನಕ್ಕೆ ಸಂತಾಪ ಸೂಚಿಸಿದ ಪ್ರಧಾನಿ ನರೇಂದ್ರ ಮೋದಿ

ಮುಂದೆ, ಎಸ್ಎಲ್ ಭೈರಪ್ಪನವರ 'ವಂಶವೃಕ್ಷ' ಕಾದಂಬರಿ ಆಧಾರಿತ ಸಿನೆಮಾದಲ್ಲಿ ನಟಿಸುವುದಲ್ಲದೆ, ಬಿವಿ ಕಾರಂತರ ಜೊತೆ ನಿರ್ದೇಶನವನ್ನೂ ಮಾಡಿದರು. ಒಂದಾನೊಂದು ಕಾಲದಲ್ಲಿ ಚಿತ್ರದ ಮುಖಾಂತರ ಶಂಕರ್ ನಾಗ್ ಅವರನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯಿಸಿದ ಶ್ರೇಯಸ್ಸು ಕೂಡ ಗಿರೀಶ್ ಕಾರ್ನಾಡ್ ಅವರಿಗೆ ಸಲ್ಲಬೇಕು. ಜೊತೆ, ಚೆಲುವಿ ಎಂಬ ಪರಿಸರ ಜಾಗೃತಿ ಮೂಡಿಸುವ ಕಿರಿಚಿತ್ರ ನಿರ್ದೇಶಿಸಿದ್ದಲ್ಲದೆ, ಕುವೆಂಪು ಅವರ ಕಾನೂರು ಹೆಗ್ಗಡತಿ ಕಾದಂಬರಿಯನ್ನು ಚಿತ್ರರೂಪಕ್ಕೆ ತಂದಿದ್ದು ಗಿರೀಶ್ ಅವರ ಪ್ರತಿಭೆಗೆ, ಸಾಮರ್ಥ್ಯಕ್ಕೆ, ಚಿತ್ರಪ್ರೇಮಕ್ಕೆ ಹಿಡಿದ ಕನ್ನಡಿ.

ಶಂಕರ್ ನಾಗ್ ಅವರ, ದೂರದರ್ಶನಕ್ಕಾಗಿ ಮಾಡಿದ ಮಾಲ್ಗುಡಿ ಡೇಸ್ ಧಾರಾವಾಹಿಯಲ್ಲಿ ಕೂಡ, ಸ್ವಾಮಿ ಅಂಡ್ ಹೀಸ್ ಫ್ರೆಂಡ್ಸ್ ಸರಣಿಯಲ್ಲಿ, ಸ್ವಾಮಿಯ ಅಪ್ಪನಾಗಿ ಗಿರೀಶ್ ನಟಿಸಿದ್ದರು. ನಟನೆ ಅವರಿಗೆ ನಿರರ್ಗಳವಾಗಿತ್ತು. ಪಾತ್ರ ಯಾವುದೇ ಇರಲಿ, ಭಾಷೆ ಯಾವುದೇ ಇರಲಿ ಅಲ್ಲಿ ಗಿರೀಶ್ ಕಾರ್ನಾಡ್ ಸ್ಟಾಂಪ್ ಇದ್ದೇ ಇರುತ್ತಿತ್ತು. ಹಿಂದಿಯಲ್ಲಿ ಕೂಡ ಹಲವಾರು ಚಿತ್ರಗಳಲ್ಲಿ ನಟಿಸಿದ್ದ ಅವರು, ಸ್ವಾಮಿ ಚಿತ್ರದಲ್ಲಿ ಮನೋಜ್ಞವಾಗಿ ನಟಿಸಿದ್ದರು. ಕೆಜೆ ಏಸುದಾಸ್ ಅವರ ದನಿಯಲ್ಲಿ ಮೂಡಿಬಂದಿದ್ದ 'ಕಾ ಕರೂ ಸಜನಿ, ಆಯೇನ ಬಾಲಮ್' ಹಾಡನ್ನು ಮತ್ತು ಗಿರೀಶ್ ಕಾರ್ನಾಡ್ ಅವರ ನಟನೆಯನ್ನು ಯಾರು ತಾನೆ ಮರೆಯಲು ಸಾಧ್ಯ?

ಅವರ ನಿರ್ಭಿಡೆಯ ವ್ಯಕ್ತಿತ್ವಕ್ಕೆ ಹಲವಾರು ಉದಾಹರಣೆಗಳನ್ನು ನೀಡಬಹುದು. ಮುಂಬೈನಲ್ಲಿ ನಡೆದ ಸಾಹಿತ್ಯ ಸಮ್ಮೇಳನವೊಂದರಲ್ಲಿ, ಅಂತಾರಾಷ್ಟ್ರೀಯ ಖ್ಯಾತಿ ಲೇಖಕ, ನೊಬೆಲ್ ಪ್ರಶಸ್ತಿ ವಿಜೇತ ನೈಪಾಲ್ ಅವರಿಗೆ ಜೀವಮಾನ ಪ್ರಶಸ್ತಿ ನೀಡಿದ್ದಕ್ಕಾಗಿ ನೈಪಾಲ್ ಅವರನ್ನು ಟೀಕಿಸಿದ್ದರಲ್ಲದೆ, ಆಯೋಜಕರನ್ನೂ ತರಾಟೆಗೆ ತೆಗೆದುಕೊಂಡಿದ್ದರು. ಯಾಕೆ ನೈಪಾಲ್ ಅವರನ್ನು ಗೌರವಿಸುತ್ತೀರಿ? ಎಂದು ವಾಚಾಮಗೋಚರವಾಗಿ ಟೀಕಿಸಿದ್ದರು.

ಇತ್ತೀಚಿನ ವರ್ಷಗಳಲ್ಲಿ ಬಲಪಂಥೀಯರನ್ನು ವಿಪರೀತವಾಗಿ ದ್ವೇಷಿಸಲು ಪ್ರಾರಂಭಿಸಿದ್ದರು. 2014ರಲ್ಲಿ ನಡೆದಿದ್ದ ಲೋಕಸಭಾ ಚುನಾವಣೆಯಲ್ಲಿ ನೇರವಾಗಿಯೇ ಕಾಂಗ್ರೆಸ್ ಅಭ್ಯರ್ಥಿಯನ್ನು ಬೆಂಬಲಿಸಿ ಟೀಕೆಗೆ ಗುರಿಯಾಗಿದ್ದರು. ಭಾರತೀಯ ಜನತಾ ಪಕ್ಷ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕಿ ಹಾಕುತ್ತಿದೆ ಎಂದು ತೀವ್ರ ವಾಗ್ದಾಳಿ ನಡೆಸಿದ್ದ ಗಿರೀಶ್ ಕಾರ್ನಾಡ್ ಅವರು, ನಾನು 'ನಗರ ನಕ್ಸಲೀಯ' (ಅರ್ಬನ್ ನಕ್ಸಲ್) ಎಂದು ಬೋರ್ಡ್ ಅನ್ನು ಕತ್ತಿಗೆ ತಗುಲಿ ಹಾಕಿಕೊಂಡು ಪ್ರತಿಭಟನೆ ನಡೆಸಿದ್ದರು. ತೀವ್ರ ಅಸ್ವಸ್ಥರಾಗಿದ್ದರೂ, ನಳಿಕೆಯ ಮೂಲಕ ಆಕ್ಸಿಜನ್ ಪಡೆಯುತ್ತಿದ್ದರೂ ಅವರಲ್ಲಿ ಹೋರಾಟದ ಕಿಚ್ಚು ಸತ್ತಿರಲಿಲ್ಲ.

ಇದೀಗ, ಅಂಕಪರದೆ ತೆರೆಬಿದ್ದಿದೆ. ಅವರ ನಾಟಕಗಳು ಅವರನ್ನು ಎಂದೆಂದಿಗೂ ಜೀವಂತವಾಗಿಟ್ಟಿರುತ್ತವೆ. ಧಾರವಾಡದ ಸಾರಸ್ವತ ಪುರದ ನಿವಾಸಿಯಾಗಿದ್ದ ಗಿರೀಶ್ ಕಾರ್ನಾಡ್ ಅವರನ್ನು ಕಳೆದುಕೊಂಡು ಕನ್ನಡ ನಾಡಿನ ಸಾರಸ್ವತ ಲೋಕವೇ ಬಡವಾಗಿದೆ. ಅವರಲ್ಲಿನ ಅದಮ್ಯ ಚೇತನ, ಜ್ಯೋತಿ ಎಂದೆಂದಿಗೂ ಬೆಳಗುತ್ತಿರಲಿ. ಅವರಿಗೆ ಶ್ರದ್ಧಾಂಜಲಿ.

English summary
Legendary actor, playwrite, director and part time politician Girish Karnad passed away on 10th June in Bengaluru. He is remembered for his complex personality.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X