Bengaluru Real Estate: ಬೆಂಗಳೂರಿನಲ್ಲಿ ಸೈಟು ಖರೀದಿಸುವ ಮುನ್ನ ಎಚ್ಚರ! 279 ಅಕ್ರಮ ಲೇಔಟ್ ಗುರುತಿಸಿದ ಬಿಡಿಎ
ದೇಶದ ವಿವಿಧ ಮೂಲೆಗಳಿಂದ ಬೆಂಗಳೂರಿಗೆ ಬಂದು ಬದುಕು ಕಟ್ಟಿಕೊಳ್ಳುವ ಲಕ್ಷಾಂತರ ಮಂದಿಗೆ ಇಲ್ಲಿ ಸೈಟು ತೆಗೆದುಕೊಂಡು ಮನೆ ಕಟ್ಟುವ ಬಯಕೆ ಇರುತ್ತದೆ. ಬೆಂಗಳೂರಿನಲ್ಲಿ ಭೂಮಿಗೆ ಚಿನ್ನದ ಬೆಲೆ ಬರಲು ಇದು ಒಂದು ಕಾರಣ.
ನಗರದಲ್ಲಿ ಗಗನಕ್ಕೇರಿರುವ ಭೂಮಿಯ ಬೆಲೆ ಹಲವು ಅಕ್ರಮಗಳಿಗೂ ಕಾರಣವಾಗಿದೆ. ಕಾನೂನು ಗಾಳಿಗೆ ತೂರಿ ಎಲ್ಲೆಂದರಲ್ಲಿ ಲೇಔಟ್ ನಿರ್ಮಾಣ ಮಾಡಿ, ಜನರನ್ನು ವಂಚಿಸಲಾಗುತ್ತಿದೆ. ಇಂತಹ ಪ್ರಕರಣಗಳು ಆಗಾಗ್ಗೆ ವರದಿಯಾಗುತ್ತವೆ.

ಸದ್ಯ ಬೆಂಗಳೂರು ನಗರದಲ್ಲಿ 279 ಅನಧಿಕೃತ ಲೇಔಟ್‌ಗಳನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಗುರುತಿಸಿದೆ. ಕಾನೂನು ತೊಂದರೆ ಮತ್ತು ಹಣ ಕಳೆದುಕೊಳ್ಳುವುದನ್ನು ತಪ್ಪಿಸಲು ಈ ಲೇಔಟ್‌ಗಳಲ್ಲಿ ಸೈಟು ಖರೀದಿ ಮಾಡದಂತೆ ಎಚ್ಚರಿಕೆ ನೀಡಿದೆ.
ಬಿಡಿಎ ಹೇಳುವುದೇನು?
ಬಿಡಿಎ ಪ್ರಕಾರ ಈ 279 ಅಕ್ರಮ ಬಡಾವಣೆಗಳಲ್ಲಿ ಸುಮಾರು 27,000 ಸೈಟ್‌ಗಳಿವೆ. ಈ ಬಡಾವಣೆಗಳಲ್ಲಿ ಯಾವುದೇ ಹೊಸ ಆಸ್ತಿ ನೋಂದಣಿ ಮಾಡದಂತೆ ಸಬ್ ರಿಜಿಸ್ಟ್ರಾರ್ ಅವರಿಗೆ ಬಿಡಿಎ ಅಧಿಕಾರಿಗಳು ಪತ್ರ ಬರೆದಿದ್ದಾರೆ.
ಬಿಡಿಎ ಅನಧಿಕೃತ ಬಡಾವಣೆಗಳ ಅಭಿವೃದ್ಧಿ ಆಗುತ್ತಿರುವ ತಾಲ್ಲೂಕು, ಹೋಬಳಿ, ಗ್ರಾಮ, ಸರ್ವೆ ನಂಬರ್ ಗಳನ್ನು ದಾಖಲಿಸಿ ವರದಿ ಸಿದ್ಧಪಡಿಸಿ ಎರಡು ವಾರಗಳ ಹಿಂದಷ್ಟೇ ವೆಬ್ ಸೈಟ್ ನಲ್ಲಿ ಪ್ರಕಟಿಸಿದೆ.
ಬೆಂಗಳೂರಿನಲ್ಲಿ ಸುಸ್ಥಿರ ಅಭಿವೃದ್ಧಿಯನ್ನು ಖಾತ್ರಿಪಡಿಸುವ ಭಾಗವಾಗಿ ಈ ಕ್ರಮ ವಹಿಸಲಾಗಿದೆ ಎಂದು ಬಿಡಿಎ ಅಧಿಕಾರಿಗಳು ತಿಳಿಸಿದ್ದಾರೆ.
ಬೆಂಗಳೂರಿನ ಯಲಹಂಕ, ಆನೇಕಲ್, ಬೆಂಗಳೂರು ದಕ್ಷಿಣ ಮತ್ತು ಬೆಂಗಳೂರು ಪೂರ್ವ ತಾಲ್ಲೂಕುಗಳಲ್ಲಿ ನೂರಾರು ಜಮೀನುಗಳಲ್ಲಿ ಬಿಡಿಎ ಅನುಮತಿಯಿಲ್ಲದೆ ಅಕ್ರಮವಾಗಿ ಲೇಔಟ್‌ಗಳನ್ನು ಅಭಿವೃದ್ಧಿಪಡಿಸಲಾಗಿದೆ ಎಂದು ಬಿಡಿಎ ಹಿರಿಯ ಎಂಜಿನಿಯರ್ ಹೇಳಿದ್ದಾರೆ.
ಕೆಲವು ಅಕ್ರಮ ಲೇಔಟ್‌ಗಳಲ್ಲಿ ಈಗಾಗಲೇ ಕೆಲವರು ಸೈಟ್ ಖರೀದಿ ಮಾಡಿ ಕಟ್ಟಡಗಳನ್ನು ಕೂಡ ಕಟ್ಟಿದ್ದಾರೆ ಎಂದು ಎಂಜಿನಿಯರ್ ಖಚಿತಪಡಿಸಿದ್ದಾರೆ.
2015ರ ಪರಿಷ್ಕೃತ ಮಹಾಯೋಜನೆಯಡಿ ಭೂ ಬಳಕೆ ಪರಿವರ್ತನೆ ಮಂಜೂರಾತಿ ಪಡೆಯದೇ ಬೃಹತ್ ಬಡಾವಣೆಗಳನ್ನು ಅಭಿವೃದ್ಧಿಪಡಿಸಲಾಗಿದೆ. ಕಾಂಕ್ರೀಟ್ ರಸ್ತೆಗಳು, ಚರಂಡಿಗಳು, ವಿದ್ಯುತ್ ಕಂಬಗಳು ಮತ್ತು ಚರಂಡಿಗಳನ್ನು ಒದಗಿಸಲಾಗಿದೆ. ಕೃಷಿ, ಕೈಗಾರಿಕೆ, ವಾಣಿಜ್ಯ ಉದ್ದೇಶಗಳು ಮತ್ತು ಅರಣ್ಯ ವಲಯಗಳಿಗೆ ಗೊತ್ತುಪಡಿಸಿದ ಜಮೀನುಗಳಲ್ಲಿ ಮಣ್ಣು, ಡಾಂಬರು ಮತ್ತು ಜಲ್ಲಿ ರಸ್ತೆಗಳನ್ನು ಸಹ ಹಾಕಲಾಗಿದ್ದು ಇದು ಕಾನೂನು ಬಾಹಿರವಾಗಿದೆ.
ಗುತ್ತಿಗೆದಾರರು, ಬಿಲ್ಡರ್ ಗಳು ಬಿಡಿಎ ಮಾರ್ಗಸೂಚಿಗಳನ್ನು ಅನುಸರಿಸುವುದಿಲ್ಲ. ರಸ್ತೆಗಳು ಅಗತ್ಯವಿರುವ ಅಗಲ ಅಥವಾ ಫುಟ್‌ಪಾತ್‌ಗಳ ಕೊರತೆಯಿಲ್ಲ. ಉದ್ಯಾನವನಗಳು ಅಥವಾ ಸಿಎ ಸೈಟ್‌ಗಳಿಗೆ ಯಾವುದೇ ಜಾಗವನ್ನು ನಿಗದಿಪಡಿಸಲಾಗಿಲ್ಲ, ಅವರು ನಿಯಮಗಳನ್ನು ಉಲ್ಲಂಘಿಸುತ್ತಿದ್ದಾರೆ. ಬೋರ್‌ವೆಲ್‌ಗಳನ್ನು ಕೊರೆದು ವಿದ್ಯುತ್ ಕಂಬವನ್ನು ಮೇಲಕ್ಕೆತ್ತಿ ವಿದ್ಯುತ್ ನೀಡುತ್ತಾರೆ, ಆದರೆ ಭವಿಷ್ಯದಲ್ಲಿ, ಪ್ಲಾಟ್ ಖರೀದಿಸುವವರು ತೊಂದರೆ ಅನುಭವಿಸುತ್ತಾರೆ, ಎಂದು ಬಿಡಿಎ ಅಧಿಕಾರಿಗಳು ಹೇಳಿದ್ದಾರೆ.
ನೀವೇನಾದರೂ ಬೆಂಗಳೂರಿನಲ್ಲಿ ಸೈಟು ಖರೀದಿ ಮಾಡುವ ಯೋಚನೆ ಇದ್ದರೆ, ಎಲ್ಲವನ್ನೂ ಪರಿಶೀಲನೆ ಮಾಡಿ, ಬಿಡಿಎ ವೆಬ್‌ಸೈಟ್‌ಗೆ ತೆರಳಿ, ಅಕ್ರಮ ಎಂದು ಗುರುತಿಸುವ ಲೇಔಟ್‌ಗಳ ಪಟ್ಟಿಯನ್ನು ನೋಡಬಹುದಾಗಿದೆ.












Click it and Unblock the Notifications