ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗುಂಡನ ಮದುವೆ ನಾಟಕದ ಕ್ರೆಡಿಟ್ ಕೈಲಾಸಂಗೆ

By * ಡಾ. 'ಜೀವಿ' ಕುಲಕರ್ಣಿ, ಮುಂಬಯಿ
|
Google Oneindia Kannada News

Gundana Maduve Kannada Drama
ಖಾಲ್ಸಾ ಕಾಲೇಜಿನ ನೆನಪುಗಳು-2 (ಮುಂದುವರಿದದ್ದು)

ನಾನು ಗುಂಡನ ಮದುವೆಯಂಥ ನಾಟಕ ಬರೆದ ಎಲ್ಲ ಕ್ರೆಡಿಟ್ ಪ್ರಹಸನ ಪಿತಾಮಹ ಕೈಲಾಸಂ ಅವರಿಗೆ ಸಲ್ಲಬೇಕು. ಅವರ ಬಂಡ್ವಾಳ್ವಿಲ್ಲದ್ ಬಡಾಯಿ ನಾಟಕದಲ್ಲಿ ಮುದ್ಮಣಿಯ ಪಾತ್ರವಹಿಸುವ ಅವಕಾಶವನ್ನು ಮಿತ್ರ ಕೆ.ಎಸ್.ಶರ್ಮಾ ಅವರು ನನಗೆ ಒದಗಿಸಿ ಕೊಡದಿದ್ದರೆ ಇಂಥ ತಿಳಿಹಾಸ್ಯದ ನಾಟಕವನ್ನು ಕಲ್ಪಿಸುವುದೂ ನನಗೆ ಅಸಾಧ್ಯವಾಗಿತ್ತು.

ನಾನು ಮುಂಬೈಗೆ ಕೆಲಸಕ್ಕಾಗಿ ಬಂದೆನೇನೋ ನಿಜ, ಆದರೆ ನನ್ನ ಮನಸ್ಸು ಯಾವಗಲೂ ಧಾರವಾಡವನ್ನು ನೆನೆಯುತ್ತಿತ್ತು. ಪಂಪ ಕವಿ ಹೇಳಿದ್ದ : ಆರಂಕುಸವಿಟ್ಟೊಡಂ ನೆನೆವುದೆನ್ನ ಮನಂ ಬನವಾಸಿದೇಶಮಂ ಎಂದು. ನನಗೂ ಹಾಗೆಯೆ ಹೇಳಬೇಕು ಎನಿಸುತ್ತಿತ್ತು. (ನೆನೆವುದೆನ್ನ ಮನಂ ಧಾರವಾಡದೇಶಮಂ ಎಂದು). ನನ್ನ ಧಾರವಾಡ ಮಿತ್ರರನೇಕರು ಒಡನುಡಿದಿದ್ದರು: ಮುಂಬೈ ಯಂತ್ರನಗರಿ. ಅಲ್ಲಿ ನಿನ್ನ ಕಾವ್ಯದ ಸೆಲೆ ಬತ್ತಿಹೋಗುವುದು ಎಂದು.

ಕಾಲೇಜು ಸೇರಿ ಒಂದು ವಾರವಾಗಿತ್ತು. ಮಳೆ ವಿಪರೀತ ಬೀಳುತ್ತಿತ್ತು. ಅಂಥ ಮಳೆಯನ್ನು ನಾನು ನನ್ನ ಜೀವನದಲ್ಲಿ ಮೊದಲ ಸಲ ನೋಡಿದ್ದೆ. ನನ್ನ ಮುಂಬೈ ವಾಸ್ತವ್ಯದ ಮೊದಲ ಕವನ ಹೊರ ಬಂತು. ಇಪ್ಪತ್ತು ನುಡಿಗಳ ಕವನ (80 ಸಾಲುಗಳು) ಮಳೆ ಸುರಿದಂತೆ ಧಾರಾಕಾರವಾಗಿ ಹರಿದುಬಂತು. ಅದಕ್ಕೆ ಮುಂಬೈಯಲ್ಲಿ ಕೋಗಿಲೆ ಎಂಬ ಶೀರ್ಷಿಕೆ ಕೊಟ್ಟೆ. ಅದನ್ನು ಒಯ್ದು ಮೊದಲು ಹ.ವೆಂ. ಇಮಾರತಿಯವರಿಗೆ ತೋರಿಸಿದೆ. ಅವರು ಸಂತಸದಿಂದ ಪುಲಕಿತರಾದರು. ಧಾರವಾಡ ಒಂದು ಕೋಗಿಲೆಯನ್ನು ಕಳೆದುಕೊಂಡಿತು, ಅದರೆ ಅದರಿಂದ ಮುಂಬೈಗೆ ಲಾಭವಾಯಿತು! ಎಂಬ ಉದ್ಗಾರ ಅವರ ಬಾಯಿಯಿಂದ ಬಂತು. ಕಾಲೇಜಿನಲ್ಲಿ ನನ್ನ ವಿದ್ಯಾರ್ಥಿಗಳ ಮುಂದೆ ಹೊಸ ಕವಿತೆಯನ್ನು ಓದಿ ತೋರಿಸಿದೆ. ವಿದ್ಯಾರ್ಥಿಗಳ ಪ್ರತಿಸ್ಪಂದನೆ ಭಾವಪೂರ್ಣವಾಗಿತ್ತು. ಅವರಿಗೆ ನನ್ನ ಬಗ್ಗೆ ಹೆಚ್ಚಿನ ಗೌರವ ಉಂಟಾಗಿತ್ತು. ಆ ಕವಿತೆ ಜಯಂತಿ ಮಾಸ ಪತ್ರಿಕೆಗೆ ಕಳಿಸಿದೆ. ನನ್ನ ಯಾವ ಕವನ ಸಂಗ್ರಹದಲ್ಲೂ ಅದು ಸೇರ್ಪಡೆಯಾಗದೆ ಉಳಿಯಿತು. ಹೀಗೆ ಅನೇಕ ಪದ್ಯಗಳು ಸಂಗ್ರಹ ಸೇರದೆ ಉಳಿದಿವೆ. ಇವುಗಳಿಗಾಗಿಯೇ ಒಂದು ಹೊಸ ಸಂಗ್ರಹ ಪ್ರಕಟಿಸಬೇಕಾಗಿದೆ. 50 ವರ್ಷಗಳ ಹಿಂದೆ ಬರೆದಿದ್ದ ಅಪ್ರಕಟಿತ ಪದ್ಯ ಇಲ್ಲಿದೆ.

ಮುಂಬೈಯಲ್ಲಿ ಕೋಗಿಲೆ

(1)
ವಸಂತ ಕಳೆಯಿತು ವರ್ಷಾ ಬಂದಿತು
ಮೌನವ ಧರಿಸಿತು ಕೋಗಿಲೆಯು,
ಮೈಮನ ಮರೆಯುತ ಹಾಡುತಲಿದ್ದಿತು
ಬಂಧಿಸಿಹುದು ಧೋಧೋ ಮಳೆಯು.

(2)
ಮಾವಿನ ಚಿಗುರೋ ತಿನ್ನಲು ಇಲ್ಲ
ಹಾಡಲು ಗಂಟಲು ಸರಿಯಿಲ್ಲ,
ಹಾಡೇನೆಂದರೆ ಕೇಳುವರಿಲ್ಲ
ಇದ್ದರು, ಹಾಡಲು ಮನಸಿಲ್ಲ.

(3)
ಹಿಂದಕೆ ಕೋಗಿಲೆ ಹಳ್ಳಿಯೊಳಿತ್ತು
ಎಲ್ಲೆಡೆ ಸ್ಫೂರ್ತಿಯು ತುಳುಕಿತ್ತು
ಹಳ್ಳಿಯ ಹುಡುಗಿ-ದನಗಾಹಿಗಳೋ
ಎಲ್ಲರ ಪರಿಚಯ ಇದಕಿತ್ತು.

(4)
ಹಾರುತ ಬಂದಿತು ಮುಂಬೈ ನಗರಕೆ
ಇಲ್ಲಿ ಗುರುತಿನವರಾರಿಹರು?
ಗಿರಣಿಯ ಭೋಂಗಾ ನಾದದ ಸರಿಗಮ
ತುಂಬಿದೆ, ಯಾರದು ಕೇಳುವರು?

(5)
ಎಂಥ ಗಾಯಕನ ಗಂಟಲು ಕೆಟ್ಟರು
ಹಾಡಲಾರನೇ ಒಂದು ಪದ?
ಯಾವ ಕೋಗಿಲೆಯು ಎಲ್ಲಿಯೆ ಇದ್ದರು
ತುಳುಕಲಾರದೇ ಅದರ ಮುದ?

(6)
ಎಲ್ಲಿಗೆ ಹೋದರು ಸ್ಫೂರ್ತಿಯೇ ಇಲ್ಲ
ಒದ್ದಾಡುತ್ತಿದೆ ದಿನವೆಲ್ಲ
ಏಳಂತಸ್ತಿನ ಮೇಲೇರಿದರೂ
ಆನಂದದ ಸುಳಿವೇ ಇಲ್ಲ.

(7)
ಒಂದೇ ಸವನೇ ಮಳೆ ಹೋಡೆಯುತಲಿದೆ
ದೇಹಕೆ ಬೆವರೇ ತಪ್ಪಿಲ್ಲ-
ಮುದುಕರು ಓಡುತ ಗಾಡಿಯ ಹಿಡಿವರು
ಜೀವಕೆ ನೆಮ್ಮದಿ ದೊರೆತಿಲ್ಲ.

(8)
ಎಲ್ಲೆಡೆ 'ಕ್ಯು' 'ಕ್ಯು' ನಾದವು ಕೇಳಿದೆ
ಕೋಗಿಲೆ 'ಕುಹು' ಕೇಳುವರಾರು?
ಸಾಯುದಕೋಂದಕೆ ಬಿಟ್ಟರೆ ಎಲ್ಲಕೆ
ಸಾಲು ಸಾಲಾಗಿ ನಿಲ್ಲುವರು-

(9)
ಎಲ್ಲ ದೇಶ ಭಾಷಾ ಕುಲಗೋತ್ರದ
ಕುಸುಮ ಕೋಮಲೆಯರು ಇಲ್ಲಿಹರು.
ಮುಗ್ಧ ಹೂಗಳಿಗೆ ಬಣ್ಣವ ಬಳಿಯುತ
ವಾಸನೆ ಹೋಂಡದೋಳೆದ್ದಿಹರು.

(10)
ಇವರ ತೊಂಡೆ-ತುಟಿ ಕಂಡ ಒಡನೆಯೇ
ಕಮ್ಯೂನಿಝಂ ನೆನಪಾಗುವದು
ಕೇಶರಾಶಿಗಳ 'ಬಾಬ್ ಕಟ್' ಕಂಡೊಡೆ
ಏಕೋ ಮನ ತತ್ತರಿಸುವುದು.

(11)
ಅಂಗಾಗದ ಸೌಂದರ್ಯವ ತುಳುಕಿಸೆ
'ಸ್ಕರ್ಟು' ಬಂದಿತೋ ಎನಿಸುತಿದೆ
ಅಪ್ಪಿತಪ್ಪಿ ಮಾತಾಡಿಸಿನೋಡಲು,
ಭೂ ಪ್ರದಕ್ಷಿಣೆಯೆ ಆಗುತಿದೆ.

(12)
ಮಹಡಿಯ ಮೇಲ್ ಮಹಡಿಗಳೋ ಏರಿವೆ
ಆದರು ಎಲ್ಲಿಯು ಸ್ಥಳವಿಲ್ಲ,
ಮನೆಗೆ ಅತಿಥಿ ವಾಮನನೂ ಬಂದರೆ
ತಲೆಯನೊಡ್ಡದೇ ಗತಿಯಿಲ್ಲ.

(13)
ನೆರೆಮನೆಯವರ ಪರಿಚಯವಿಲ್ಲಾ-
ಯಾರೋ ಎಂತೋ ಗೊತ್ತಿಲ್ಲ
ನೆಂಟರು-ಇಷ್ಟರು ಮುಖವನು ನೋಡಲು
ಸಮಯವೆಂಬುದುಳಿಯುವುದಿಲ್ಲ.

(14)
ಹಣವೊಂದಿದ್ದರೆ ಸಾಕೀ ಊರಲಿ
ಏನು ಬೇಕು ಅದ ಕೊಳಬಹುದು
ಹೋದಜೀವವೊಂದನ್ನೇ ಬಿಟ್ಟು-
ಎಲ್ಲವು ಇಲ್ಲಿಯೇ ದೊರೆಯುವುದು.

(15)
ಕಾಲನ ಚಕ್ರವು ತಿರುಗುತ್ತಿರುವುದು
ಇಮ್ಮಡಿ ನೂರ್ಮಡಿ ವೇಗದಲಿ
ಬ್ರಹ್ಮಾಂಡದ ಈ ಹಿರಿಯ ಗಾಲಿಯಲಿ
ಮುಂಬೈ ಉಳಿಯಿತೆ ಕೀಲದಲಿ?

(16)
ಹೆದರಬೇಡ ಎಲೆ ಮರಿ ಕೋಗಿಲೆಯೇ
ನಿನ್ನ ಆಟವೂ ನಡೆಯುವದು,
ಮಂಗನ ಆಟಕು ಸಹಸ್ರ ಜನರಿರೆ
ನಿನ್ನ ಭಾಗ್ಯವೂ ತೆರೆಯುವದು.

(17)
ಕಸದ ಸೂಡಿಗು ಬಣ್ಣ ಬಳಿದಿಡಲು
ಆಣೆಗೆ ಒಂದೊ ಮಾರುವುದು
ಹೊಸ-ಮನ್ವಂತರ, ಹೊಸ ಜೀವನವಿದೆ
ಅರಿತರೆ, ಬಾಳುವೆ ನಡೆಯುವುದು.

(18)
ನೀನೂ ಕಾಲಿಗೆ ಗೆಜ್ಜೆಯ ಕಟ್ಟು-
ಹಿತವಾಗುವ ಬಣ್ಣವ ಬಳಿದು,
ಹೊಸ ಜೀವನ ನಾಟ್ಯಾರಂಭದಿ
ಕುಣಿಯಬೇಕು ನೀ ನಟನೆಂದು.

(19)
ಕಲ್ಲಿನಲ್ಲಿ ಗಂಗೆಯ ಸೆಲೆ ಹರಿದಿದೆ
ಕಬ್ಬಿಣದಲ್ಲಿಯು ಸಂಗೀತ
ಅಂಭೋನಿಧಿ ಆರ್ಭಟಿಸುತ್ತಿದೆ
ಸೌಂದರ್ಯವು ಇದೆ ಜೀವಂತ.

(20)
ಹಾಡುತಲಿರುವುದೆ ನಿನ್ನಯ ಧರ್ಮ
ಕೇಳುವವರು ಕೇಳಲಿ, ಬಿಡಲಿ,
ಹಳ್ಳಕೊಳ್ಳ ಸಾಗರದ ತೆರೆಗಳ
ಅರುಣಕಾಂತಿಯ ಕೃಪೆಯಿರಲಿ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X