Kodagu: ಕೊಡಗಿನಲ್ಲಿರುವ ಅನಧಿಕೃತ ಹೋಂಸ್ಟೇಗಳಿಗೆ ಕಾದಿದೆ ಸಂಕಷ್ಟ

ಮಡಿಕೇರಿ, ಆಗಸ್ಟ್‌ 09: ನಿಯಮಗಳನ್ನು ಉಲ್ಲಂಘಿಸಿ ನಾಯಿಕೊಡೆಗಳಂತೆ ಹುಟ್ಟಿಕೊಳ್ಳುತ್ತಿರುವ ಅನಧಿಕೃತ ಹೋಂಸ್ಟೇಗಳು ಕೊಡಗಿಗೆ ಮಾರಕವಾಗಿ ಪರಿಣಮಿಸುತ್ತಿದ್ದು ಇವುಗಳಿಗೆ ಕಡಿವಾಣ ಹಾಕುವ ಕೆಲಸಕ್ಕೆ ಪ್ರವಾಸೋದ್ಯಮ ಇಲಾಖೆ ಮುಂದಾಗಿದ್ದು, ಕಠಿಣ ಕ್ರಮ ಕೈಗೊಳ್ಳುವ ನಿರ್ಧಾರಕ್ಕೆ ಬಂದಿದ್ದು, ಪ್ರವಾಸೋದ್ಯಮ ಇಲಾಖೆಯಡಿಯಲ್ಲಿ ನೋಂದಣಿಗೊಳ್ಳದೆ ನಿಯಮ ಬಾಹಿರವಾಗಿ ಕಾರ್ಯ ನಿರ್ವಹಿಸುತ್ತಿರುವ ಹೋಂ-ಸ್ಟೇಗಳ ವಿರುದ್ದ ಕಾನೂನು ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಲಾಗಿದೆ.

ಈಗಾಗಲೇ ಕೆಲವು ಹೋಂಸ್ಟೇಗಳಲ್ಲಿ ಪ್ರವಾಸಿಗರ ಸುಲಿಗೆ, ಅನೈತಿಕ ಚಟುವಟಿಕೆ, ನಿರ್ವಹಣೆ ಕೊರತೆ ಹೀಗೆ ಹಲವು ಆರೋಪಗಳು ಕೇಳಿ ಬರುತ್ತಿದ್ದು, ಬಹುತೇಕ ಹೋಂಸ್ಟೇಗಳು ನೋಂದಣಿ ಮಾಡಿಸದೆ ಅನಧಿಕೃತವಾಗಿ ನಡೆಯುತ್ತಿದ್ದು ಇಂತಹ ಹೋಂಸ್ಟೇಗಳು ಕೊಡಗಿಗೆ ಕಪ್ಪುಚುಕ್ಕೆಯಾಗಿ ಪರಿಣಮಿಸುವುದಲ್ಲದೆ, ಪ್ರಾಮಾಣಿಕವಾಗಿ ಹೋಂಸ್ಟೇ ನಡೆಸುವವರಿಗೆ ಸಮಸ್ಯೆಯನ್ನು ತಂದೊಡ್ಡಿದೆ.

Travel News Trouble Awaits Unauthorized Homestays In Kodagu District

ಹಾಗೆನೋಡಿದರೆ ಆರಂಭದಿಂದಲೂ ಈ ಹೋಂಸ್ಟೇ ಪರಿಕಲ್ಪನೆಯನ್ನು ಕೊಡಗಿನಲ್ಲಿ ಕೆಲವರು ವಿರೋಧಿಸುತ್ತಲೇ ಬಂದಿದ್ದಾರೆ. ಅವರು ಹೇಳುವ ಪ್ರಕಾರ ಇದು ಕೊಡಗಿನ ಸಂಸ್ಕೃತಿ ಜನ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಕೆಲವು ಬಂಡವಾಳ ಶಾಹಿಗಳು ಇದನ್ನು ಅನೈತಿಕ ಚಟುವಟಿಕೆಗಳಿಗೆ ರಹದಾರಿ ಮಾಡಿಕೊಳ್ಳುತ್ತಾರೆ ಎಂಬ ಆರೋಪಗಳನ್ನು ಮಾಡುತ್ತಿದ್ದಾರೆ. ಆದರೆ ಸ್ಥಳೀಯ ಹೆಚ್ಚಿನ ಮಂದಿ ತಮ್ಮ ಜೀವನೋಪಾಯಕ್ಕೆ ಹೋಂಸ್ಟೇಗಳು ಆಸರೆಯಾಗುತ್ತವೆ ಎಂಬ ಉದ್ದೇಶದಿಂದ ತಮ್ಮ ತೋಟದಲ್ಲಿ ಲಕ್ಷಾಂತರ ರೂಪಾಯಿ ಬಂಡವಾಳ ಹೂಡಿ ಹೋಂಸ್ಟೇ ನಿರ್ಮಿಸುತ್ತಿದ್ದಾರೆ.

ಎಲ್ಲೆಂದರಲ್ಲಿ ಹೋಂಸ್ಟೇಗಳು ನಿರ್ಮಾಣ

ಕಳೆದ ಒಂದೆಡರಡು ದಶಕದಿಂದೀಚೆಗೆ ಜಿಲ್ಲೆಯಲ್ಲಿ ಎಲ್ಲೆಂದರಲ್ಲಿ ಹೋಂಸ್ಟೇಗಳು ಹುಟ್ಟಿಕೊಂಡಿವೆ. ಈ ಪೈಕಿ ಕೆಲವು ಮಾತ್ರ ಸರ್ಕಾರದ ಕಾನೂನು ಕ್ರಮಗಳನ್ನು ಪಾಲಿಸಿ, ಪ್ರವಾಸೋದ್ಯಮ ಇಲಾಖೆಯಲ್ಲಿ ಹೆಸರು ನೋಂದಾಯಿಸಿಕೊಂಡು ಕಾರ್ಯ ನಿರ್ವಹಿಸಿದರೆ, ಉಳಿದಂತೆ ಹೆಚ್ಚಿನ ಹೋಂಸ್ಟೇಗಳು ನೋಂದಣಿ ಮಾಡಿಸದೆ ಪ್ರವಾಸಿಗರ ಸುಲಿಗೆಗೆ ಮತ್ತು ಅನೈತಿಕ ಚಟುವಟಿಕೆಗೆ ಬಾಗಿಲು ತೆರೆದು ನಿಂತಿವೆ. ಈಗಾಗಲೇ ಕೆಲವೊಂದು ಹೋಂಸ್ಟೇಗಳಲ್ಲಿ ಅನೈತಿಕ ಚಟುವಟಿಕೆಯ ಪ್ರಕರಣಗಳು ದಾಖಲಾಗಿವೆ.

ಹೋಂಸ್ಟೇಗಳಲ್ಲಿ ನಡೆಯುತ್ತಿರುವ ಸುಲಿಗೆ, ಅನೈತಿಕ ಚಟುವಟಿಕೆಗಳನ್ನು ಹತ್ತಿಕ್ಕಿ, ನೋಂದಾಯಿತ ಹೋಂಸ್ಟೇಗಳಿಗೆ ಮಾತ್ರ ಅವಕಾಶ ನೀಡಬೇಕು. ಅನಧಿಕೃತ ಹೋಂಸ್ಟೇಗಳನ್ನು ಮುಚ್ಚಬೇಕೆಂಬ ಒತ್ತಾಯವನ್ನು ಜಿಲ್ಲಾ ಹೋಂಸ್ಟೇ ಅಸೋಸಿಯೇಷನ್ ಜಿಲ್ಲಾಡಳಿತಕ್ಕೆ ಮನವಿ ಮಾಡುತ್ತಲೇ ಬರುತ್ತಿದೆ. ಆದರೆ ಇದು ಇಲ್ಲಿತನಕವೂ ಆಗದಿರುವುದರಿಂದಾಗಿ ಅನಧಿಕೃತ ಹೋಂಸ್ಟೇಗಳು ನಾಯಿಕೊಡೆಗಳಂತೆ ತಲೆ ಎತ್ತುತ್ತಿವೆ. ಇದೀಗ ಪ್ರವಾಸೋದ್ಯಮ ಇಲಾಖೆ ಕಠಿಣ ಕ್ರಮಕ್ಕೆ ಮುಂದಾಗಿದೆ.

Travel News Trouble Awaits Unauthorized Homestays In Kodagu District

ಹೋಂಸ್ಟೇಗಳ ನೋಂದಣಿ ಕಡ್ಡಾಯ

ಪ್ರವಾಸೋದ್ಯಮ ಇಲಾಖೆ ಪ್ರಕಾರ ಸರ್ಕಾರದ ಆದೇಶದನ್ವಯ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಹೋಂ-ಸ್ಟೇಗಳು ಪ್ರವಾಸೋದ್ಯಮ ಇಲಾಖೆಯಲ್ಲಿ ನೋಂದಣಿ ಮಾಡಿಸುವುದು ಕಡ್ಡಾಯವಾಗಿದೆ. ಆದರೆ ಜಿಲ್ಲೆಯಲ್ಲಿರುವ ಬಹುತೇಕ ಹೋಂ-ಸ್ಟೇ ಮಾಲೀಕರು ನೋಂದಣಿಯನ್ನೇ ಮಾಡಿಲ್ಲ. ಅವರಿಗೆ ಸಾಕಷ್ಟು ಕಾಲಾವಕಾಶ ನೀಡಿದರೂ ನೋಂದಣಿ ಮಾಡಿಲ್ಲ ಎನ್ನುವುದು ಬೇಸರದ ಸಂಗತಿಯಾಗಿದೆ. ಇದರ ಜತೆಗೆ ಈಗಾಗಲೇ ಪರವಾನಿಗೆ ಪಡೆದು ಕಾರ್ಯ ನಿರ್ವಹಿಸುತ್ತಿರುವ ಮತ್ತು ಪರವಾನಿಗೆ ಅವಧಿಯು 5 ವರ್ಷಗಳಿಗೆ ಮುಕ್ತಾಯಗೊಳ್ಳುತ್ತಿರುವ ಹೋಂ-ಸ್ಟೇಗಳು ಪರವಾನಿಗೆಯನ್ನು ನವೀಕರಿಸುವಂತೆಯೂ ಸೂಚಿಸಲಾಗಿದೆ.

ಇದೀಗ ಜಿಲ್ಲಾಡಳಿತ ಕೂಡ ಪ್ರಕರಣನ್ನು ಗಂಭೀರವಾಗಿ ಪರಿಗಣಿಸಿರುವುದರಿಂದ ನೋಂದಣಿಯಾಗದ ಹೋಂ-ಸ್ಟೇಗಳು ಕಡ್ಡಾಯವಾಗಿ ನೋಂದಾಯಿಸಿಕೊಳ್ಳಲು ಸೂಚಿಸಿದ್ದು, ಹಾಗೆಯೇ ಪ್ರವಾಸೋದ್ಯಮ ಇಲಾಖೆಯಡಿಯಲ್ಲಿ ನೋಂದಣಿಗೊಳ್ಳದೆ ನಿಯಮ ಬಾಹಿರವಾಗಿ ಕಾರ್ಯ ನಿರ್ವಹಿಸುತ್ತಿರುವ ಹೋಂ-ಸ್ಟೇಗಳ ವಿರುದ್ದ ಕಾನೂನು ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಲಾಗಿದೆ. ಆದ್ದರಿಂದ ಪ್ರವಾಸೋದ್ಯಮ ಇಲಾಖೆಯಿಂದ ಹೋಂ-ಸ್ಟೇಗಳ ನೋಂದಣಿಗಾಗಿ ಪ್ರವಾಸೋದ್ಯಮ ಇಲಾಖೆಯು ಮಾರ್ಗಸೂಚಿಗಳನ್ನು ಪ್ರಕಟಿಸಿದ್ದು, ಅದರಂತೆ ಆನ್ಲೈನ್ನಲ್ಲಿ ನೋಂದಣಿ ಮಾಡಿಕೊಳ್ಳಲು ಅವಕಾಶ ಮಾಡಿಕೊಡಲಾಗಿದೆ.

ದೂರು ನೀಡಲು ಸಾರ್ವಜನಿಕರಿಗೆ ಅವಕಾಶ

ಮುಂದಿನ ದಿನಗಳಲ್ಲಿ ಹೋಂ-ಸ್ಟೇ ಪರಿವೀಕ್ಷಣೆಗಾಗಿ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದು, ಈ ವೇಳೆ ಮಾಲೀಕರು ಹೋಂ-ಸ್ಟೇ ಪ್ರಮಾಣಪತ್ರ ಅಥವಾ ಹೋಂ-ಸ್ಟೇ ನೋಂದಣಿಗಾಗಿ ಅರ್ಜಿ ಸಲ್ಲಿಸಿರುವ ದಾಖಲಾತಿಯನ್ನು ಹಾಜರುಪಡಿಸಬೇಕಾಗುತ್ತದೆ. ಇಲ್ಲವಾದರೆ ಹೋಂ-ಸ್ಟೇ ಜಾಗದ ಮಾಲೀಕರ ಮೇಲೆ ಕ್ರಮ ಜರುಗಿಸುವ ಎಚ್ಚರಿಕೆಯನ್ನು ನೀಡಲಾಗಿದೆ.

ಒಂದು ವೇಳೆ ಮಾಹಿತಿ ಇಲ್ಲದೆ ಅನಧೀಕೃತವಾಗಿ ನಡೆಸುತ್ತಿರುವಂತಹ ಹೋಂ-ಸ್ಟೇಗಳ ಬಗ್ಗೆ ಸಾರ್ವಜನಿಕರು ಕೂಡ ದೂರು ನೀಡಬಹುದಾಗಿದೆ. ಅನಧಿಕೃತ ಹೋಂಸ್ಟೇಗಳ ಮಾಹಿತಿಯನ್ನು ಪತ್ರ ಮುಖೇನ ಉಪ ನಿರ್ದೇಶಕರ ಕಚೇರಿ, ಪ್ರವಾಸೋದ್ಯಮ ಇಲಾಖೆ, ಸ್ಟುವರ್ಟ್ ಹಿಲ್ ರಸ್ತೆ, ಮಡಿಕೇರಿ, ಕೊಡಗು ಜಿಲ್ಲೆ 571201 ದೂರವಾಣಿ ಸಂಖ್ಯೆ:08272-200519 ಅಥವಾ ಈ-ಮೇಲ್ : [email protected] ಗೆ ತಿಳಿಸಲು ಅವಕಾಶ ಮಾಡಿಕೊಡಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+