ಚಾಮರಾಜನಗರ ಜಿಲ್ಲೆಯಲ್ಲಿವೆ ಚುಮು..ಚುಮು ಚಳಿ, ಮಂಜು, ಅಚ್ಚಹಸಿರಿನ ನಡುವೆ ಸ್ವರ್ಗದ ಅನುಭವ ನೀಡುವ ಅದ್ಭುತ ತಾಣಗಳು
Chamarajanagar travel Guide: ಚಳಿಗಾಲ ಬಂತೆಂದರೆ ಸಾಕು ಬೆಂಗಳೂರಿನ ಸಮೀಪವಿರುವ ಚಾಮರಾಜನಗರ ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣಗಳು ಮಂಜಿನ ಜೊತೆ, ಅಚ್ಚಹಸಿರಿನ ಹೊದಿಕೆಯನ್ನು ಹೊದ್ದಿರುತ್ತವೆ. ಈ ವೇಳೆ ಇಲ್ಲಿನ ತಾಣಗಳು ಸ್ವರ್ಗದಂತಹ ಅನುಭವವನ್ನು ನೀಡುತ್ತವೆ. ಹಾಗಾದರೆ ಇಲ್ಲಿ ಯಾವೆಲ್ಲ ಪ್ರವಾಸಿ ತಾಣಗಳನ್ನು ನೋಡಬಹುದು ಹಾಗೂ ಮಾರ್ಗಗಗಳ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
ಚಳಿ ಅಂದರೆ ಸಾಕು ಸಾಮಾನ್ಯವಾಗಿ ಜನರು ಮನೆಗಳಲ್ಲಿಯೇ ಸಮಯ ಕಳೆಯುವುದನ್ನು ನಾವು ನೋಡಿದ್ದೇವೆ. ಆದರೆ, ಇನ್ನು ಕೆಲವರು ಈ ಸಮಯವೇ ಸೂಕ್ತ ಎಂದು ಹೆಚ್ಚು ಮಂಜು ಬೀಳುವ ಪ್ರದೇಶಗಳಿಗೆ ಪ್ರವಾಸ ಕೈಗೊಳ್ಳುತ್ತಾರೆ. ಪ್ರಮುಖವಾಗಿ ಮಂಜು ಕವಿದ ವಾತಾವರಣವಿರುವ ಪ್ರವಾಸಿ ತಾಣಗಳಲ್ಲಿ ಪ್ರವಾಸ ಮಾಡಿದರೆ ಮನಸ್ಸಿಗೆ ಏನೋ ಒಂಥರಾ ನೆಮ್ಮದಿ.

ನವೆಂಬರ್‌ನಿಂದ ಫೆಬ್ರವರಿವರೆಗೂ ಚಾಮರಾಜನಗರದಲ್ಲಿನ ಈ ಪ್ರವಾಸಿ ತಾಣಗಳು ಪ್ರವಾಸಿಗರಿಗೆ ಹಾಟ್‌ಸ್ಪಾಟ್ ಆಗಿವೆ. ಜಿಲ್ಲೆಯಲ್ಲಿ ಪ್ರಮುಖ ಪ್ರವಾಸಿ ತಾಣಗಳ ಸೊಬಗನ್ನು ಸವಿಯಲು ಪ್ರತಿನಿತ್ಯ ಸಾವಿರಾರು ಜನ ಆಗಮಿಸುತ್ತಲೇ ಇರುತ್ತಾರೆ. ಮಂಜು ಮುಚ್ಚಿದ ವಾತಾವರಣದ ಜೊತೆ ಅಚ್ಚಹಸಿರನಿಂದ ಕೂಡಿರುವ ಇಲ್ಲಿನ ಸ್ವರ್ಗದಂತಿರುವ ಪ್ರಕೃತಿ ಸೌಂದರ್ಯವನ್ನು ಆನಂದಿಸಲು ಹೆಚ್ಚಿನ ಸಂಖ್ಯೆಯಲ್ಲಿ ಪವಾಸಿಗರು ಆಗಮಿಸುತ್ತಲೇ ಇರುತ್ತಾರೆ.
ಅಚ್ಚಹಸಿರಿನಿಂದ ಕಂಗೊಳಿಸುವ ಗಡಿ ಜಿಲ್ಲೆ ಚಾಮರಾಜನಗರದಲ್ಲಿ ಇದೀಗ ಎಲ್ಲಿ ನೋಡಿದರೂ ಮಂಜಿನ ಮಯವಾಗಿದೆ. ವಾಹನ ಸವಾರರಿಗೆ ಸ್ವಲ್ಪ ಮಟ್ಟಿಗೆ ತೊಂದರೆ ಆದರೂ ಕೂಡ ಈ ಮಂಜಿನ ದೃಶ್ಯವನ್ನು ನೋಡಲೆಂದೇ ಕಷ್ಟಪಟ್ಟಾದರೂ ಆಗಮಿಸಿ ಇಷ್ಟಪಟ್ಟು ಸಮಿಯುತ್ತಾರೆ. ಇದೀಗ ಜಿಲ್ಲಾದ್ಯಂತ ಚುಮುಚುಮು ಚಳಿ ಹೆಚ್ಚಾಗಿದ್ದು, ಬೆಳಗ್ಗೆ 8ರಿಂದ 9 ಆದರೂ ಮಂಜು ಕವಿದೇ ಇರುತ್ತದೆ.
ಹಿಮವದ್ ಗೋಪಾಲಸ್ವಾಮಿ ಬೆಟ್ಟ: ಜಿಲ್ಲೆಯ ಪುರಾಣ ಪ್ರಸಿದ್ಧ ಕ್ಷೇತ್ರವಾದ ಯಳಂದೂರು ತಾಲೂಕಿನ ಬಿಳಿಗಿರಿರಂಗನ ಬೆಟ್ಟ ಹಾಗೂ ಗುಂಡ್ಲುಪೇಟೆ ತಾಲೂಕಿನ ಹಿಮವದ್ ಗೋಪಾಲಸ್ವಾಮಿ ಸ್ವಾಮಿ ಬೆಟ್ಟವಂತೂ ಹಸಿರಿನ ಜೊತೆ ಮಂಜಿನ ಹೊದಿಕೆ ಹೊದ್ದಿರುತ್ತದೆ. ಬೆಳಗ್ಗೆ 9 ಗಂಟೆ ಆದರೂ ಮಂಜು ಮುಸುಕಿದ ವಾತಾವರಣ ಇರುತ್ತದೆ. ಇಲ್ಲಿನ ಈ ಅದ್ಭುತ ವಾತಾವರಣ ಮನಸಿಗೆ ಇಂಪು ನೀಡುತ್ತಲೇ ಇರುತ್ತದೆ. ಇದು ಬೆಂಗಳೂರಿನಿಂದ ಸುಮಾರು 220 ಕಿ.ಮೀ. ಆದರೆ ಮೈಸೂರಿನಿಂದ 80 ಕಿಲೋ ಮೀಟರ್ ದೂರದಲ್ಲಿದೆ.
ಗೋಪಾಲಸ್ವಾಮಿ ಬೆಟ್ಟದ ವಿಶೇಷತೆ ಏನು?: ಹಿಮವದ್ ಗೋಪಾಲಸ್ವಾಮಿ ಬೆಟ್ಟವು ಬಂಡೀಪುರ ರಾಷ್ಟ್ರೀಯ ಉದ್ಯಾನದ ಅತೀ ಎತ್ತರದ ಶಿಖರವಾಗಿದೆ. ಗುಂಡ್ಲುಪೇಟೆ ಬಳಿಯಿರುವ ಹಿಮವದ್ ಗೋಪಾಲಸ್ವಾಮಿ ಬೆಟ್ಟವು ವೇಣುಗೋಪಾಲಸ್ವಾಮಿ ದೇವಾಲಯ ಮತ್ತು ಹಚ್ಚ ಹಸಿರಿನಿಂದ ಕೂಡಿದ ನೈಸರ್ಗಿಕ ಪರಿಸರದಿಂದಾಗಿ ಪ್ರವಾಸಿಗರನ್ನು ತನ್ನತ್ತ ಆಕರ್ಷಿಸುತ್ತಲೇ ಇದೆ.
14ನೇ ಶತಮಾನದಲ್ಲಿ ಅಗಸ್ತ್ಯ ಋಷಿ ನಿರ್ಮಿಸಿದ ವೇಣುಗೋಪಾಲಸ್ವಾಮಿ ದೇವಸ್ಥಾನದಲ್ಲಿ ಭಗವಾನ್ ಕೃಷ್ಣ ನೃತ್ಯದ ಭಂಗಿಯಲ್ಲಿ ನಿಂತು ತನ್ನ ಕೈಯಲ್ಲಿ ಕೊಳಲು ನುಡಿಸುವ ವಿಗ್ರಹವಿದೆ. ವಿಗ್ರಹದ ಹಿಂದಿನ ಫಲಕವು ಕೃಷ್ಣನ ಪತ್ನಿಯರಾದ ಸತ್ಯಭಾಮ, ರುಕ್ಮಿಣಿ ಮತ್ತು ನೆಚ್ಚಿನ ಪ್ರಾಣಿಯಾದ ಹಸು ಮತ್ತು ಗೋಪಾಲಕರ ಕೆತ್ತನೆಗಳನ್ನು ಒಳಗೊಂಡಿದೆ.
ಗೋಪಾಲಸ್ವಾಮಿ ಬೆಟ್ಟಕ್ಕೆ ಹೋಗುವ ಮಾರ್ಗ: ಹಿಮವದ್ ಗೋಪಾಲಸ್ವಾಮಿ ಬೆಟ್ಟ ಬೆಂಗಳೂರಿನಿಂದ 220 ಕಿಲೋ ಮೀಟರ್ ಮತ್ತು ಮೈಸೂರಿನಿಂದ 80 ಕಿಲೋ ಮೀಟರ್ ದೂರದಲ್ಲಿದೆ. ಬೆಟ್ಟದಿಂದ 20 ಕಿಲೋ ಮೀಟರ್ ದೂರದಲ್ಲಿರುವ ಗುಂಡ್ಲುಪೆಟೆ ಪಟ್ಟಣದಲ್ಲಿ ಉಳಿಯಲು ವಸತಿ ಗೃಹಗಳಿವೆ. ಜಂಗಲ್ ಲಾಡ್ಜ್ ಮತ್ತು ರೆಸಾರ್ಟ್ ನಡೆಸುವ ಬಂಡೀಪುರ ಸಫಾರಿ ಲಾಡ್ಜ್ ಗೋಪಾಲಸ್ವಾಮಿ ಬೆಟ್ಟದಿಂದ 16 ಕಿಲೋ ಮೀಟರ್ ದೂರದಲ್ಲಿದೆ. ಈ ಪ್ರದೇಶದಲ್ಲಿ ಹಲವು ಹೋಂ ಸ್ಟೇಗಳು ಮತ್ತು ರೆಸಾರ್ಟ್‌ಗಳು ಲಭ್ಯ ಇವೆ. ಮೈಸೂರು ನಗರದಲ್ಲಿ ಹೆಚ್ಚಿನ ವಾಸ್ತವ್ಯದ ಆಯ್ಕೆಗಳು ಲಭ್ಯವಿದೆ.
ಬಂಡೀಪುರ ರಾಷ್ಟ್ರೀಯ ಉದ್ಯಾನ: ಬಂಡೀಪುರ ರಾಷ್ಟ್ರೀಯ ಉದ್ಯಾನ ಭಾರತದಲ್ಲಿ ಎರಡನೇ ಅತೀ ದೊಡ್ಡ ಹುಲಿ ಸಂರಕ್ಷಣಾ ಪ್ರದೇಶವಾಗಿದೆ. ಬಂಡೀಪುರದಲ್ಲಿ ಸಾಮಾನ್ಯವಾಗಿ ಹುಲಿಗಳು, ಕಾಡು ನಾಯಿ, ಕಾಡುಹಂದಿ, ಆನೆಗಳು, ಕರಡಿಗಳು, ಚಿರತೆ, ಜಿಂಕೆಗಳು, ಕಾಡೆಮ್ಮೆಗಳು ಸೇರಿದಂತೆ ವಿವಿಧ ರೀತಿಯ ಪ್ರಾಣಿಗಳ ದೃಶ್ಯವನ್ನು ಸವಿಯಬಹುದಾಗಿದೆ. ಅರಣ್ಯ ಇಲಾಖೆಯು ಪ್ರತಿದಿನ ಎರಡು ಬಾರಿ ಸಫಾರಿಯನ್ನು ನಡೆಸುತ್ತದೆ. ಗುಂಪುಗಳಲ್ಲಿ ಆಗಮಿಸುವ ಪ್ರವಾಸಿಗರು ಬಸ್ ಸಫಾರಿಯನ್ನು ಆಯ್ದುಕೊಳ್ಳಬಹುದಾಗಿದೆ.
ಮಲೆ ಮಹದೇಶ್ವರ ಬೆಟ್ಟದ ಹಿನ್ನೆಲೆ ಏನು?
ಮಲೆ ಮಹದೇಶ್ವರ ಬೆಟ್ಟ: ಮಲೆ ಮಹದೇಶ್ವರ ಬೆಟ್ಟ ಸಂತ ಮಹದೇಶ್ವರನ ವಾಸಸ್ಥಾನ ಮತ್ತು ಪ್ರಮುಖ ಪೂಜಾ ಕೇಂದ್ರವಾಗಿದೆ. ಇದು ಶಿವನಿಗೆ ಅರ್ಪಿತವಾಗಿದೆ ಎನ್ನುವ ಉಲ್ಲೇಖವಿದೆ. ಮಲೆ ಮಹದೇಶ್ವರ ಬೆಟ್ಟವನ್ನು "ಏಳು ಮಲೆ" ಅಂತಲೂ ಕರೆಯುತ್ತಾರೆ. ಮಲೆ ಮಹದೇಶ್ವರ ಬೆಟ್ಟದ ಶ್ರೇಣಿಯು ಕೊಂಗುಮಲೆ, ಜೇನುಮಲೆ, ಪ್ಯಾಚೆಮಲೆ, ಅನುಮಲೆ, ಕಾನುಮಲೆ, ಪೊನ್ನಾಚಿಮಲೆ ಮತ್ತು ಪಾವಲ ಮಲೆಗಳನ್ನು ಒಳಗೊಂಡಿದೆ.
ಇನ್ನು ಬೆಟ್ಟದ ಮೇಲಿರುವ ಮಹದೇಶ್ವರ ದೇವಸ್ಥಾನವನ್ನು ಸ್ಥಳೀಯ ಕುರುಬ ಜಮೀನ್ದಾರ ಜುಂಜೆಗೌಡ ಎನ್ನುವವರು ನಿರ್ಮಿಸಿದ್ದಾರೆ ಎನ್ನುವ ಉಲ್ಲೇಖಗಳಿವೆ. ಬೆಟ್ಟದಲ್ಲಿರುವ ಶಿವಲಿಂಗವು ಸ್ವಯಂ ಉದ್ಭವವಾಗಿದೆ ಎಂಬುದು ಭಕ್ತರ ನಂಬಿಕೆ ಆಗಿದೆ.
ಬಿಳಿಗಿರಿ ರಂಗನ ಬೆಟ್ಟಕ್ಕೆ ಹೋಗುವ ಮಾರ್ಗ: ಬಿಳಿಗಿರಿ ರಂಗನ ಬೆಟ್ಟ ಕರ್ನಾಟಕದ ಪ್ರಮುಖ ಗಿರಿಧಾಮಗಳಲ್ಲಿ ಒಂದಾಗಿದ್ದು, ಬೆಂಗಳೂರಿನಿಂದ ಇಲ್ಲಿಗೆ 175 ಕಿಲೋ ಮೀಟರ್ ಆಗುತ್ತದೆ. ಬಿಳಿಗಿರಿ ರಂಗನ ಬೆಟ್ಟ ಹುಲಿ ಸಂರಕ್ಷಣಾ ಮೀಸಲು ಪ್ರದೇಶ ಮತ್ತು ವನ್ಯಜೀವಿ ಅಭಯಾರಣ್ಯವಾಗಿದೆ.
ಹೊಗೆನಕಲ್ ಜಲಪಾತ: ಜಿಲ್ಲೆಯಲ್ಲಿ ಹೊಗೆಲಕಲ್ ಜಲಪಾತವಿದ್ದು, ಇದು ಬೆಂಗಳೂರಿನಿಂದ ಸುಮಾರು 180 ಕಿಲೋ ಮಿಟರ್ ದೊರದಲ್ಲಿದೆ. ಇದು ಭಾರತದ "ನಯಾಗರ ಜಲಪಾತ"ವೆಂದೇ ಸುಪ್ರಸಿದ್ಧವಾಗಿದೆ. ಬಂಡೆಗಳ ಮೇಲೆ ಅಪ್ಪಳಿಸುವ ನೀರು ಹೊಗೆಯಂತೆ ಹೊರಹೊಮ್ಮುತ್ತದೆ, ಆದ್ದರಿಂದ ಇದಕ್ಕೆ "ಹೊಗೆನಕಲ್" ಎಂದು ಕರೆಯಲಾಗಿದೆ ಎಂದು ಹಿರಿಕರು ಹೇಳುವ ಮಾತಾಗಿದೆ.












Click it and Unblock the Notifications