ಟಿಕೆಟ್ ಇಲ್ಲದೆ ರೈಲಿನಲ್ಲಿ ಪ್ರಯಾಣ, ದಂಡ ವಸೂಲಾತಿಯಲ್ಲಿ ದಾಖಲೆ ಬರೆದ ಭಾರತೀಯ ರೈಲ್ವೆ, ವಿವರ ಇಲ್ಲಿದೆ
ಹಬ್ಬಹರಿದಿನಗಳ ಸಂದರ್ಭದಲ್ಲಿ ಟಿಕೆಟ್ ಇಲ್ಲದೆ ಪ್ರಯಾಣ ಮಾಡಿದವರ ಸಂಖ್ಯೆ ಹೆಚ್ಚಾಗಿದೆ. ಹಾಗಾದರೆ ಇದುವರೆಗೂ ಭಾರತೀಯ ರೈಲ್ವೆ ಟಿಕೆಟ್ ರಹಿತ ಪ್ರಯಾಣಿಕರಿಂದ ಸಂಗ್ರಹಿಸಿದ ದಂಡ ಎಷ್ಟು ಅನ್ನುವ ವಿವರ ಇಲ್ಲಿದೆ ನೋಡಿ.
ನವದೆಹಲಿ, ಮಾರ್ಚ್, 07: ಹಬ್ಬ ಹರಿದಿನಗಳಲ್ಲಿ ರೈಲುಗಳಲ್ಲಿ ಟಿಕೆಟ್ ಇಲ್ಲದೆ ಪ್ರಯಾಣಿಸುವವರ ಸಂಖ್ಯೆ ಹೆಚ್ಚಾಗಿರುತ್ತದೆ. ಆದ್ದರಿಂದ ರೈಲ್ವೆ ಅಧಿಕಾರಿಗಳು ನಿಯಮ ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮಕೈಗೊಳ್ಳಲು ಮುಂದಾಗಿದ್ದಾರೆ. ಉತ್ತರ ರೈಲ್ವೇಯು ಇತ್ತೀಚೆಗೆ ಹೋಳಿ ಹಬ್ಬಕ್ಕೂ ಮುನ್ನವೇ ಟಿಕೆಟ್ ಇಲ್ಲದೆ ರೈಲಿನಲ್ಲಿ ಪ್ರಯಾಣ ಮಾಡಿದರ ಬಳಿ ದಾಖಲೆ ಪ್ರಮಾಣದಲ್ಲಿ ದಂಡವನ್ನು ಸಂಗ್ರಹಿಸಿದೆ. ಹಾಗಾದರೆ ಭಾರತೀಯ ರೈಲ್ವೆ ಸಂಗ್ರಹಿಸಿದ ದಂಡದ ಮೊತ್ತದ ವಿವರವನ್ನು ಇಲ್ಲಿ ಗಮನಿಸಿ.
ಇತ್ತೀಚೆಗಷ್ಟೇ ಪೂರ್ವ ಕೇಂದ್ರ ರೈಲ್ವೆಯ ಸೋನ್‌ಪುರ್ ರೈಲ್ವೆ ವಿಭಾಗವು ಪ್ರಸಕ್ತ ಹಣಕಾಸು ವರ್ಷದಲ್ಲಿ ಟಿಕೆಟ್ ಇಲ್ಲದೆ ಪ್ರಯಾಣಿಸಿದ ಪ್ರಯಾಣಿಕರಿಂದ 51 ಕೋಟಿ 83 ಲಕ್ಷ ರೂಪಾಯಿ ದಂಡವನ್ನು ಸಂಗ್ರಹಿಸಿದೆ. ಟಿಕೆಟ್ ಇಲ್ಲದೆ ಪ್ರಯಾಣಿಸುತ್ತಿದ್ದ 8,69,268 ಪ್ರಯಾಣಿಕರನ್ನು ಹಿಡಿದು ದಂಡವನ್ನು ವಿಧಿಸಿದೆ. ಹಾಗೆಯೇ ಇದನ್ನು ತಡೆಯಲು ಮೆಗಾ ಟಿಕೆಟ್-ಚೆಕಿಂಗ್ ಅಭಿಯಾನವನ್ನು ಸಹ ಪ್ರಾರಂಭಿಸಿದೆ.

ದಂಡ ಸಂಗ್ರಹದಲ್ಲಿ ದಾಖಲೆ
ಸೆಂಟ್ರಲ್ ರೈಲ್ವೆಯ ಮುಂಬೈ ವಿಭಾಗವು ಏಪ್ರಿಲ್ 2022 ಮತ್ತು ಫೆಬ್ರವರಿ 2023ರ ನಡುವೆ ಟಿಕೆಟ್ ಇಲ್ಲದೆ ಪ್ರಯಾಣಿಸಿದ ಪ್ರಯಾಣಿಕರಿಂದ 100 ಕೋಟಿ ರೂಪಾಯಿ ದಂಡ ಸಂಗ್ರಹಿಸಿದೆ. ಇನ್ನು ಹವಾನಿಯಂತ್ರಿತ ಲೋಕಲ್ ರೈಲುಗಳಲ್ಲಿ ಟಿಕೆಟ್ ಇಲ್ಲದೆ ಪ್ರಯಾಣಿಸುತ್ತಿದ್ದ 25,781 ಪ್ರಯಾಣಿಕರಿಂದ 87.43 ಲಕ್ಷ ರೂಪಾಯಿ ದಂಡವನ್ನು ಸಂಗ್ರಹಿಸಿದೆ.
ಇದುವರೆಗೂ ಸಂಗ್ರಹವಾದ ದಂಡದ ವಿವರ
ಉತ್ತರ ಮಧ್ಯ ರೈಲ್ವೆಯು ತಾಜ್ನಾಗ್ರಿ ಆಗ್ರಾದಲ್ಲಿ ಟಿಕೆಟ್ ಇಲ್ಲದೆ ಪ್ರಯಾಣಿಸುತ್ತಿದ್ದ 2266 ಪ್ರಯಾಣಿಕರಿಂದ 13,74,290 ರೂಪಾಯಿ ದಂಡವನ್ನು ಸಂಗ್ರಹಿಸಲಾಗಿದೆ. ಟಿಕೆಟ್ ಇಲ್ಲದೆ ಪ್ರಯಾಣಿಸಬೇಡಿ ಎಂದು ಅಧಿಕಾರಿಗಳು ಪದೇ ಪದೇ ಮನವಿ ಮಾಡಿದರೂ ಕೂಡ ಕಳೆದ ವರ್ಷ ಇಂತಹ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಲೇ ಇದೆ.

ಟಿಕೆಟ್ ಇಲ್ಲದೆ ಪ್ರಯಾಣ ಮಾಡಿದವರ ವಿವರ
ಹೀಗೆ ಟಿಕೆಟ್ ರಹಿತ ಪ್ರಯಾಣ ಮಾಡುವವರಿಂದ ರೈಲ್ವೆ ಅಧಿಕಾರಿಗಳು ದಂಡವನ್ನು ಸಂಗ್ರಹಿಸುತ್ತಾ ಬಂದಿದ್ದಾರೆ. ರೈಲ್ವೆ ನಿಯಮಗಳ ಪ್ರಕಾರ, ಟಿಕೆಟ್ ಇಲ್ಲದೆ ಪ್ರಯಾಣಿಸುವಾಗ ಸಿಕ್ಕಿಬಿದ್ದ ಪ್ರಯಾಣಿಕರ ಮೇಲೆ ರೈಲ್ವೆ ಕಾಯ್ದೆಯ ಸೆಕ್ಷನ್ 138ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗುತ್ತದೆ.
ಟಿಕೆಟ್ ಇಲ್ಲದೆ ಪ್ರಯಾಣ ಮಾಡುವವರಿಗೆ ಎರಡು ರೀತಿಯಲ್ಲಿ ದಂಡವನ್ನು ವಿಧಿಸಲಾಗುತ್ತದೆ. ಮೊದಲನೆಯದು ರೈಲಿನ ಆರಂಭಿಕ ನಿಲ್ದಾಣದಿಂದ ಸಿಕ್ಕಿಬಿದ್ದ ನಿಲ್ದಾಣದವರೆಗೆ ಪ್ರಯಾಣಿಕರಿಗೆ ಹೆಚ್ಚುವರಿ ರೂ. 250 ದಂಡವನ್ನು ವಿಧಿಸಲಾಗುತ್ತದೆ. ಎರಡನೆಯದು ರೈಲಿನ ಸಾಮಾನ್ಯ ದರವನ್ನು ವಿಧಿಸಲಾಗುತ್ತದೆ. ವಿಶೇಷವಾಗಿ ಹಬ್ಬ ಹರಿದಿನಗಳಲ್ಲಿ ಟಿಕೆಟ್ ರಹಿತ ಪ್ರಯಾಣ ಮಾಡುವವರ ಮೇಲೆ ರೈಲ್ವೆ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳುತ್ತಲೇ ಇದ್ದಾರೆ.











Click it and Unblock the Notifications