ಮೈಸೂರಿನ ಅರ್ಬನ್ ಹಾತ್‌ನಲ್ಲಿ ಗರ್ವಿ ಗುರ್ಜರಿ ಕರಕುಶಲ ಮೇಳ: ಏನಿದರ ವಿಶೇಷ ತಿಳಿಯಿರಿ?
ಮೈಸೂರು, ಸೆಪ್ಟೆಂಬರ್ 18: ಮೈಸೂರು ನಗರದಲ್ಲಿ ಕರಕುಶಲಗಳ ಮೇಳ ನಡೆಯುವ ಸ್ಥಳಯಾವುದಾದರು ಇದ್ದರೆ ಇದ್ದರೆ ಅದು ಮೇಟಗಳ್ಳಿಯಲ್ಲಿರುವ ಜೆಎಎಸ್‌ಎಸ್ ಅರ್ಬನ್ ಹಾತ್ ಮಾತ್ರ. ಇಲ್ಲಿ ವರ್ಷದ ಹೆಚ್ಚಿನ ದಿನಗಳು ವಿವಿಧ ಮೇಳಗಳು ಅದರಲ್ಲೂ ಕರಕುಶಲ ವಸ್ತುಗಳ ಪ್ರದರ್ಶನ ನಡೆಯುವ ಮೂಲಕ ಗಮನಸೆಳೆಯುತ್ತದೆ.
ಇದೀಗ ಅರ್ಬನ್ ಹಾತ್ ನಲ್ಲಿ ಸೆಪ್ಟೆಂಬರ್ 20 ರಿಂದ 26 ರವರೆಗೆ ಭಾರತ ಸರಕಾರದ ಜವಳಿ ಮಂತ್ರಾಲಯ ಇಲಾಖೆಯ ವತಿಯಿಂದ ಗಾಂಧಿ ಶಿಲ್ಪ ಬಜಾರ್ ಹಾಗೂ ಸೆಪ್ಟೆಂಬರ್ 20ರಿಂದ ಸಪ್ಟೆಂಬರ್ 29 ರವರೆಗೆ ಗುಜರಾತ್ ರಾಜ್ಯ ಕೈಮಗ್ಗ ಮತ್ತು ಕರಕುಶಲ ಅಭಿವೃದ್ಧಿ ನಿಗಮ.ಲಿ ಇವರ ಪ್ರಾಯೋಜಕತ್ವದಲ್ಲಿ ಗರ್ವಿ ಗುರ್ಜರಿ ಕರಕುಶಲ ವಸ್ತು ಪ್ರದರ್ಶನ ನಡೆಯಲಿದೆ.

ಈ ವಸ್ತು ಪ್ರದರ್ಶನದ ವಿಶೇಷತೆ ಏನೆಂದರೆ ಇಲ್ಲಿ ದೇಶದ ಹಲವು ರಾಜ್ಯಗಳಿಂದ ರಾಷ್ಟ್ರ ಮತ್ತು ರಾಜ್ಯ ಪ್ರಶಸ್ತಿ ಪುರಸ್ಕೃತ ಕುಶಲಕರ್ಮಿಗಳು ಸೇರಿದಂತೆ ಸುಮಾರು 50 ರಿಂದ 60 ಕುಶಲಕರ್ಮಿಗಳು, ಕೈಮಗ್ಗ ನೇಕಾರರು ತಮ್ಮ ಉತ್ಕೃಷ್ಟ ಕಲಾವಸ್ತುಗಳನ್ನು ಇಲ್ಲಿ ಅನಾವರಣಗೊಳಿಸುವ ಮೂಲಕ ಕರಕುಶಲ ವಸ್ತುಗಳನ್ನು ಇಷ್ಟಪಡುವವರಿಗೆ ರಸದೌತಣ ನೀಡಲು ತಯಾರಿ ನಡೆಸುತ್ತಿದ್ದಾರೆ.
ಇನ್ನು ಅರ್ಬನ್ ಹಾತ್ ಒಳಗೆ ಮರದ ಕೆತ್ತನೆ, ಶಿಲಾ ಶಿಲ್ಪ, ಕಂಚಿನ ವಿಗ್ರಹಗಳು, ಮರದ ಕುಂದಣ ಕಲೆ, ಮಣ್ಣಿನ ಮಡಿಕೆಗಳು, ಪೇಪರ್, ರತ್ನಗಂಬಳಿ, ಹತ್ತಿ ಜಮಕಾನ, ಇಮಿಟೇಶನ್ ಆಭರಣಗಳು, ಮರದ ಅರಗಿನ ಕಲಾವಸ್ತುಗಳು, ಬಾಟಿಕ್, ಕಲಾಂಕಾರಿ ಚಿತ್ರಕಲೆ, ಚರ್ಮದ ಅಕರ್ಷಕ ವಸ್ತುಗಳು,ಕಲಾತ್ಮಕ ಚರ್ಮದ ಚಪ್ಪಲಿಗಳು, ಚನ್ನಪಟ್ಟಣದ ಗೊಂಬೆಗಳು, ಕಸೂತಿ ಕಲೆ, ಮಹೇಶ್ವರಿ, ಚಂದೇರಿ ಸೀರೆಗಳು, ಪಟ್ಟ ಚಿತ್ರ, ಬೆಳ್ಳಿಯ ಸೂಕ್ಷ್ಮ ವಿನ್ಯಾಸ ವಸ್ತುಗಳು, ಬಿದಿರು-ಬೆತ್ತದ ವಸ್ತುಗಳು, ಚಿಕನ್ ಎಂಬ್ರಾಯ್ಡರಿ, ಡ್ರೈ ಪ್ಲವರ್ಗಳು, ಕಲಾತ್ಮಕ ಕಲ್ಲಿನ ವಸ್ತುಗಳು, ಫುಲ್ಕಾರಿ ಬಟ್ಟೆ ಗಳು ಈ ಮೇಳ ದಲ್ಲಿ ಆಕರ್ಷಿಸುತ್ತಿವೆ.

ಇದೆಲ್ಲದರ ನಡುವೆ ಈ ಬಾರಿ ಜೆಎಸ್ಎಸ್ ಮೈಸೂರು ಅರ್ಬನ್ ಹಾತ್ನಲ್ಲಿ ವಿಶೇಷವಾಗಿ ಪ್ರಪ್ರಥಮ ಬಾರಿಗೆ ಗರ್ವಿ ಗುರ್ಜರಿ ಹಸ್ತ ಕಲಾ ಮೇಳ ನಡೆಯುತ್ತಿದೆ. ಇದಕ್ಕೆ ಮೊದಲ ಬಾರಿಗೆ ಗುಜರಾತ್ ರಾಜ್ಯದ ಅಂಗ ಸಂಸ್ಥೆಯಾಗಿರುವ ಗುಜರಾತ್ ರಾಜ್ಯ ಕೈಮಗ್ಗ ಮತ್ತು ಕರಕುಶಲ ಅಭಿವೃದ್ಧಿ ನಿಗಮ ಲಿ ಇವರ ಪ್ರಾಯೋಜಕತ್ವ ವಹಿಸುತ್ತಿದ್ದು, ಈ ಮೇಳವು ಹಿಂದಿನ ಮೇಳಗಳಿಗಿಂತ ವಿಭಿನ್ನವಾಗಿ ಗಮನಸೆಳೆಯಲಿದೆ.
ಪ್ರಪ್ರಥಮ ಗರ್ವಿ ಗುರ್ಜರಿ ಹಸ್ತ ಕಲಾ ಮೇಳ
ಗರ್ವಿ ಗುರ್ಜರಿ ಹಸ್ತ ಕಲಾ ಮೇಳದಲ್ಲಿ ಗುಜರಾತ್ ರಾಜ್ಯದ ವಿವಿಧ ಭಾಗಗಳ ಪ್ರಸಿದ್ಧ ಹಾಗೂ ಕ್ರೀಯಾಶೀಲರಾಗಿರುವ ಸುಮಾರು 30 ಕ್ಕೂ ಹೆಚ್ಚು ಕುಶಲಕರ್ಮಿಗಳು ಮೇಳದಲ್ಲಿ ಭಾಗವಹಿಸುತ್ತಿದ್ದು, ಕುಶಲಕರ್ಮಿಗಳು ತಯಾರಿಸಿದ ಪಟೋಲ ಸೀರೆಗಳು, ಬಾಂದಿನಿ ಸೀರೆಗಳು, ಕಸೂತಿ ಮಾಡಿದ ಬೆಡ್ ಶೀಟ್‌ಗಳು, ಟವೆಲ್‌ಗಳು, ಕುಶನ್ ಕವರ್ಗಳು, ಪರಿಸರ ಸ್ನೇಹಿ ಆಭರಣಗಳು, ಡ್ರೆಸ್ ಮೆಟೀರಿಯಲ್ಗಳು, ಮಣ್ಣಿನಿಂದ ತಯಾರಿಸಿದ ವಸ್ತುಗಳು, ಬೀಡ್ ವರ್ಕ್, ಮೆಟಲ್ ವರ್ಕ್, ಕುರ್ತಿಗಳು, ಚನಿಯಾ ಚೋಲಿ, ಬಾಂದಿನಿ ಹಾಗೂ ಇನ್ನಿತರ ಆಕರ್ಷಣೀಯ ಕರಕುಶಲ ಹಾಗೂ ಕೈಮಗ್ಗ ಉತ್ಪನ್ನಗಳನ್ನು ಇಲ್ಲಿವೆ.

ಈ ಮೇಳದ ವಿಶೇಷ ಏನೆಂದರೆ ತಯಾರಕರಿಂದಲೇ ನೇರವಾಗಿ ಗ್ರಾಹಕರಿಗೆ ಕೈಗೆಟಕುವ ಬೆಲೆಯಲ್ಲಿ ಒದಗಿಸುವ ಪ್ರಯತ್ನವನ್ನು ಗುಜರಾತ್ ಸರ್ಕಾರ ಮಾಡುತ್ತಿದೆ. ಈ ಕಾರಣದಿಂದಾಗಿ ಮೈಸೂರು ಹಾಗೂ ಸುತ್ತಮುತ್ತಲಿನ ಗ್ರಾಹಕರಿಗೆ ಗುಜರಾತ್ ಸಂಸ್ಕೃತಿಯ ಉಡುಗೆ-ತೊಡುಗೆಗಳು ಮತ್ತು ಆಲಂಕಾರಿಕ ವಸ್ತುಗಳು ನೇರವಾಗಿ, ಉತ್ತಮ ಗುಣಮಟ್ಟದಲ್ಲಿ ನೀಡುವ ಉದ್ದೇಶ ಹೊಂದಲಾಗಿದೆ. ಈ ಮೇಳವು ಬೆಳಿಗ್ಗೆ ಗಂಟೆ 10.30 ರಿಂದ ರಾತ್ರಿ 9ರವರೆಗೆ ಇರಲಿದ್ದು, ನಗರದಿಂದ ಬಸ್ ನಲ್ಲಿ ಬರುವವರು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಮೈಸೂರು ನಗರ ಬಸ್ ನಿಲ್ದಾಣದಿಂದ ಬಸ್ (ಬಸ್ ನಂ.117/1 ರ) ವ್ಯವಸ್ಥೆಯೂ ಇದೆ.












Click it and Unblock the Notifications