'ಬಸವಣ್ಣ' ಶೀರ್ಷಿಕೆಗೆ ಶಾಂತಾರಾಧ್ಯ ಅವರ ಆಕ್ರೋಶ
ಬಸವಣ್ಣ ಎಂಬ ದಾರ್ಶನಿಕನ ಹಾಗು ಸಚ್ಚಾರಿತ್ರ್ಯ ಇರುವ ವ್ಯಕ್ತಿಯ ಹೆಸರನ್ನು ಒಂದು ಅರ್ಥಹೀನ ಕಮರ್ಷಿಯಲ್ ಸಿನೆಮಾಗೆ ಶೀರ್ಷಿಕೆಯಾಗಿ ಬಳಸಿ ಅದನ್ನ ತೀರಾ ಅಸಹ್ಯಕರ ರೀತಿಯಲ್ಲಿ ಬಳಸಲು ಪ್ರಯತ್ನ ಮಾಡ್ತಾ ಇರುವುದು ಖಂಡನಾರ್ಹ. ಸಮಾಜಕ್ಕೆ ಉತ್ತಮ ನೈತಿಕ ಸಂದೇಶ ಕೊಡುವ ಸದುದ್ದೇಶ ಇದ್ದ ಪಕ್ಷದಲ್ಲಿ, ಬಸವಣ್ಣನ ಶೀರ್ಷಿಕೆಯಲ್ಲೇ ಅವರ ಕುರಿತಾದ ಒಂದು ಒಳ್ಳೇ ಕಲಾತ್ಮಕ ಚಿತ್ರವನ್ನು ಮಾಡಿ, ಅವರ ಆಶೋತ್ತರಗಳನ್ನು ಕನ್ನಡ ನಾಡಿನ ಜನರಿಗೆ ಮಾತ್ರವಲ್ಲ, ಇಡೀ ವಿಶ್ವದ ಜನತೆಗೆ ಸಾರಿ ಹೇಳಿ.
ಅದು ಬಿಟ್ಟು ಬಸವಣ್ಣನವರ ಹೆಸರನ್ನ ಬಳಸಿ ಚಿತ್ರದ ಪ್ರಮೋಶನ್ ಗಾಗಿ ವಿವಾದ ಸೃಷ್ಟಿಸಿ ಹಣ ಮಾಡಿಕೊಂಡರೆ ಏನು ಪ್ರಯೋಜನ? ನೀವು ಜನತೆಗೆ ಹಾಗೆ ಬಸವಣ್ಣನ ಅನುಯಾಯಿಗಳಾದ ನಮಗೆ ಒಂದು ತೆರೆನಾದ ನೋವನ್ನು, ದ್ರೊಹವನ್ನು ಮಾಡಿದ ಹಾಗೆ. ಇದು ಒಪ್ಪತಕ್ಕದ್ದಲ್ಲ. ಇದು 12ನೇ ಶತಮಾನದ ಶರಣರಿಗೆ ಹಾಗೂ ಪ್ರಸ್ತುತ ಅವರ ಭಕ್ತರಿಗೆ ಮಾಡಿದ ಮಹಾ ದ್ರೋಹ ಕೂಡ.

ಮತ್ತೊಂದು ವಿಚಾರವನ್ನು ನಾನು ಇಲ್ಲಿ ಪ್ರಸ್ತುತ ಪಡಿಸಲೇಬೇಕಾಗಿದೆ. ಈ ಶೀರ್ಷಿಕೆಯನ್ನು ಬೆಂಬಲಿಸುವವರು ಹೇಳುವ ಹಾಗೆ, 'ಬಸವಣ್ಣಗೂ ಈ ನಮ್ಮ ಸಿನಿಮಾ ಬಸವಣ್ಣಗೂ ಯಾವುದೇ ಸಂಬಂಧ ಇಲ್ಲ... ಇದೆಲ್ಲಾ ಆ ಜನಾಂಗದವರು ಆ ಹೆಸರನ್ನು ಗುತ್ತಿಗೆ ತೆಗೆದು ಕೊಂಡವರಂತೆ ವರ್ತಿಸುತ್ತಾ ಇದ್ದಾರೆ, ಬುದ್ದಿ ಇಲ್ಲದವರು, ಮಾಡಲಿಕ್ಕೆ ಕೆಲಸ ಇಲ್ಲದವ್ರು' ಅಂತಾ ನೀವು ಛೇಡಿಸಬಹುದು. ರೀ ಬುದ್ದಿವಂತರೇ ಅದು ಕೇವಲ ಹೆಸರಾಗಿದ್ರೆ ನಾವು ಖಂಡಿತ ನಿಮ್ಮ ಬಗ್ಗೆ ನಿಮ್ಮ ಸಿನಿಮಾ ಬಗ್ಗೆ ಮಾತಾಡುತ್ತಾ ಇರ್ಲಿಲ್ಲ ರೀ.... ಬುದ್ದಿವಂತರೇ ಅದು ಕೇವಲ ಹೆಸರಲ್ಲ, ಕನ್ನಡ ನಾಡಿನ ಒಂದು ಶಕ್ತಿ. ಅದೆಷ್ಟೇ ಶತಮಾನಗಳು ಬರಲಿ ಮಾಸದ ಒಂದು ಅದಮ್ಯ ಚೇತನ. ನಮ್ಮೆಲ್ಲಾರ ಬಾಳಿನ ಮಾರ್ಗ ಸಿರಿ.
ಈ ಘನ ಚೇತನದ ಹೆಸರಿಗೆ ಮಸಿ ಬಳೆದು ಕೆವಲ ನಿಮ್ಮ ವಿಕೃತತೆ ಹಾಗೂ ಹಣ ಮಾಡುವ ಬಹು ದೊಡ್ಡದಾದ 'ಸುದುದ್ದೇಶ'ಕ್ಕೆ ಬಸವಣ್ಣನ ಹೆಸರನ್ನು ಬಳಸುವುದು ಯಾವ ನ್ಯಾಯ ಸ್ವಾಮಿ ಮಹಾ ಬುದ್ದಿವಂತರೇ? ಈ ಹಿಂದೆ ಕೂಡ 'ಮಾಸ್ತಿ' ಶೀರ್ಷಿಕೆ ಮೂಲಕ ವಿವಾದ ಮಾಡಿದ್ರಿ. ಅದ್ರೆ ತತ್ ಕ್ಷಣವೇ ಬದಲಿ ಮಾಡಿ ಸುಖಾಂತ್ಯವನ್ನು ಹಾಡಿದ್ದಿರಿ, ಸಂತೋಷ... ಅದ್ರೆ ಮಹಾ ಬುದ್ದಿವಂತರೇ ಯಾಕ್ರೀ ಈ ವಿಷಯದಲ್ಲಿ ಹೀಗೆ ಮಾಡ್ತಾ ಇದ್ದಿರಾ? ಜನಾಂಗೀಯ ದ್ವೇಷ ಕಾರುವ ಅಥಾವ ಅವಮಾನಿಸುವ ಬಯಕೆ ಏನಾದ್ರು ಇದೆಯಾ ಏನು? ಹೋಗ್ಲಿ ನಿಮ್ಮ ಉದ್ದೇಶವಾದ್ರು ಏನು?
ಇದು ಮೇಲ್ಕಂಡ ವಿಚಾರಗಳು ಅಲ್ಲಿ ವ್ಯಕ್ತ ಆಗಿರುವ ವಿಚಾರಧಾರೆಗಳು ಕೇವಲ ಒಣ ಆದರ್ಶ, ಜನಾಂಗೀಯ ಅಭಿಮಾನ ಅಥವಾ ನಿಮ್ಮ ಹಾಗೆ ವಿವಾದ ಮಾಡಿ ಹೆಸರನ್ನು ಮಾಡುವುದಕ್ಕಾಗಿ ಅಲ್ಲ. ನಮ್ಮದೊಂದೆ ವಿನಂತಿ, ಈ ಶೀರ್ಷಿಕೆಯನ್ನ ಬದಲಿ ಮಾಡಿ. ಮತ್ತೊಮ್ಮೆ ನಿಮ್ಮಲ್ಲಿ ಕಳಕಳಿಯ ಮನವಿ. ಕನ್ನಡ ಚಿತ್ರರಂಗದ ದಂಡಿನ ನಿರ್ದೇಶಕ ಮತ್ತು ಮಾನ್ಯ ಬುದ್ದಿವಂತರೇ ನಿಮ್ಮಲ್ಲಿ ನಾವು ವಿನಮ್ರವಾಗಿ ವಿನಂತಿಸಿಕೊಳ್ಳತ್ತಾ ಇದ್ದೇವಿ. ದಯವಿಟ್ಟು ಈ ನಿಮ್ಮ ದುರ್ವರ್ತನೆಯ ಕೆಟ್ಟ ನಿರ್ಧಾರವನ್ನ ಬದಲಿ ಮಾಡಿ. ಶರಣು ಶರಣಾರ್ಥಿಗಳು.












Click it and Unblock the Notifications