• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಆರೆಸ್ಸೆಸ್ ಕಾರ್ಯಕರ್ತರಿಗೆ ಕಾರ್ಯಕರ್ತನ ಪತ್ರ

By * ಚಂದ್ರಕೀರ್ತಿ, ಪುಣೆ
|

ನಾನೊಬ್ಬ ಆರೆಸ್ಸೆಸ್ ಸ್ವಯಂಸೇವಕ, ಇದನ್ನು ತೀರ ಇತ್ತೀಚಿನ ತನಕ ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದೆ. ಇನ್ನು ಮುಂದೆಯೂ ಹಾಗೆ ಹೇಳಿಕೊಳ್ಳುವ ಅವಕಾಶ ನನ್ನ ಪಾಲಿಗೆ ಬರದಿರಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ. ನನ್ನಂತ ಅನೇಕ ಸ್ವಯಂಸೇವಕರ ಅಭಿಪ್ರಾಯವೂ ಇದಾಗಿರಬಹುದು. ಬಿಜೆಪಿಯಲ್ಲಿ ಮೆರೆದಾಡುತ್ತಿರುವ ಭ್ರಷ್ಟಾಚಾರವನ್ನು ಕಿತ್ತೊಗೆಯಲು ಆರ್ಎಸ್ಎಸ್ ಮನಸ್ಸು ಮಾಡಲಿ.

ಅದು 1982ರ ಸಮಯವೆಂದು ಕಾಣುತ್ತದೆ, ಆರೆಸ್ಸೆಸ್ಸಿನ ನಿಷ್ಠಾವಂತ ಸ್ವಯಂಸೇವಕರಾಗಿದ್ದ, ಮನೆಯಲ್ಲೂ, ವೃತ್ತಿಯಲ್ಲೂ, ಧ್ಯೇಯ-ಆದರ್ಶಗಳಿಗೆ ತಲೆಬಾಗಿ ನಡೆಯುತ್ತಿದ್ದ, ನಮ್ಮ ತಂದೆ, ತಮ್ಮ ಮೆಚ್ಚಿನ ನಾಯಕರಾಗಿದ್ದ ಎಕೆ ಸುಬ್ಬಯ್ಯನವರು ಬಿಜೆಪಿಯನ್ನು ತೊರೆದು "ಕನ್ನಡನಾಡು" ಎಂಬ ಪಕ್ಷವನ್ನು ಕಟ್ಟಿದಾಗ ಬಹಳ ನಿರಾಶೆಗೊಂಡಿದ್ದರು. ಆದರೂ ಆರೆಸ್ಸೆಸ್ಸಿನ "ವ್ಯಕ್ತಿಗಿಂತ ಸಂಘಟನೆಗೆ ಆದ್ಯತೆ" ಎಂಬ ಕಠೋರ ನಿಯಮವನ್ನು ಪಾಲಿಸಬೇಕೆಂದು ಇನ್ನೂ ಪ್ರಾಪಂಚಿಕ ಜ್ಞಾನವಿಲ್ಲದ, ಎಕೆ ಸುಬ್ಬಯ್ಯನವರ ಆಕರ್ಷಕ ವ್ಯಕ್ತಿತ್ವಕ್ಕೆ ಮಾರು ಹೋಗಿದ್ದ ನಮಗೆ ಮೇಲ್ಪಂಕ್ತಿ ಹಾಕಿಕೊಟ್ಟಿದ್ದರು. ಸರ್ಕಾರಿ ನೌಕರಿಯಲ್ಲಿದ್ದ ಅವರು ನೇರ ರಾಜಕಾರಣದಲ್ಲಿ ಭಾಗವಹಿಸದಿದ್ದರೂ, "ಸಂಘ" ಹಾಕಿಕೊಟ್ಟ ಗೆರೆಯನ್ನು ಮೀರಬಾರದು ಎನ್ನುವ ಕಿವಿಮಾತನ್ನು, ಬಿಜೆಪಿಯ ಕೆಲಸಗಳಿಗೆ ನಾವು ಹೊರಟಾಗ ಎಂದಿಗೂ ಹೇಳುತ್ತಿದ್ದರು.

ಹರಿತ ನಾಲಗೆಯ, ಪ್ರಖರ ಬುದ್ಧಿಮತ್ತೆಯ ಎಕೆ ಸುಬ್ಬಯ್ಯನವರಿಗೂ, ಇಂದು ಬಿಜೆಪಿಯ ಬಲದಿಂದ ಚುನಾಯಿತರಾಗಿ ಮುಖ್ಯಮಂತ್ರಿಯ ಗದ್ದುಗೆಯ ಮೇಲೆ ಕುಳಿತಿರುವ ಡಾ. ಯಡಿಯೂರಪ್ಪನವರಿಗೂ ಇರುವ ವ್ಯತ್ಯಾಸ ಆನೆಗೆ ಆಡನ್ನು ಹೋಲಿಸಿದಂತಾಗುತ್ತದೆ. ನನಗೆ ಒಂದು ಪ್ರಸಂಗ ನೆನಪಿಗೆ ಬರುತ್ತದೆ. ಹಿರಿಯ ವಕೀಲ ರಾಮ್ ಜೇಠ್ಮಲಾನಿ, ಬೆಂಗಳೂರಿನ ಹೈಕೋರ್ಟಿಗೆ ಪ್ರಕರಣವೊಂದರಲ್ಲಿ ವಾದವನ್ನು ಮಂಡಿಸಲು ಬಂದಿದ್ದರು. ಇಂಗ್ಲಿಷಿನಲ್ಲಿ ಬರೆದದ್ದನ್ನು ಓದುವ ಅಭ್ಯಾಸವೋ ಅಥವಾ ಕೆಣಕುವ ಉದ್ದೇಶವೋ ತಿಳಿಯದು, ಮಾತು ಮಾತಿಗೆ, ಪ್ರತಿವಾದಿ ವಕೀಲರನ್ನು "ಮಿಸ್ಟರ್ ಸಬ್ಬಯ್ಯ" ಎಂದೇ ಸಂಬೋಧಿಸುತ್ತಿದ್ದರು. ಒಂದೆರಡು ಬಾರಿ ಸೌಜನ್ಯದಿಂದಲೇ ತಿದ್ದಿದರೂ ಅದೇ ಸಂಬೋಧನೆ ಮುಂದುವರಿದಾಗ ಎಕೆ ಸುಬ್ಬಯ್ಯನವರು, "ನೀವು ಹೀಗೆ ಪದೇ ಪದೇ ನನ್ನ ಹೆಸರನ್ನು ತಪ್ಪಾಗಿ ಉಚ್ಚರಿಸಿದರೆ ನಾನೂ ನಿಮ್ಮನ್ನು ಝೂಠ್ ಮಲಾನಿ ಎಂದು ಕರೆಯಬೇಕಾಗುತ್ತದೆ" ಎಂದರು. ಬಾಣ ನೇರ ಮರ್ಮಕ್ಕೆ ತಗುಲಿ, ತಕ್ಷಣ ರಾಮ್ "ಜೇಠ್"ಮಲಾನಿ ತಮ್ಮ ತಪ್ಪನ್ನು ತಿದ್ದಿಕೊಂಡರು.

ಇಂತಹ ಚತುರ ನಾಯಕರು ಪಕ್ಷದಿಂದ ಹೊರಗೆ ಹೋದರೂ ಚಿಂತಿಸದ ಬಿಜೆಪಿ, ಅಡಿಪಾಯದಿಂದ ಪಕ್ಷವನ್ನು ಕಟ್ಟುವ ಛಲವನ್ನು ಹಿಂದೆ ತೋರಿದೆ. ಆದರೆ, ಇಂದು ಕರ್ನಾಟಕದ ಬಿಜೆಪಿಗೆ ಏನಾಗಿದೆ? ಹಿಂದೆ ಯಾವುದೇ ಸರ್ಕಾರಕ್ಕಿಂತ ದಾಖಲೆ ಸಂಖ್ಯೆಯ ಸಚಿವರು ರಾಜೀನಾಮೆ ಕೊಟ್ಟು ಮಂತ್ರಿ ಮಂಡಲದಿಂದ ಹೊರ ನಡೆಯುವ ಅನಿವಾರ್ಯತೆ ಸೃಷ್ಟಿಯಾಗಿದೆ, ಸ್ವತಃ ಮುಖ್ಯಮಂತ್ರಿಗಳೇ ಸ್ವಜನಪಕ್ಷಪಾತದ, ಭ್ರಷ್ಟಾಚಾರದ ಆರೋಪಗಳ ಹೊಲಸನ್ನು ಹೊತ್ತು, ನಾಚಿಕೆಗೆಟ್ಟವರಂತೆ ಮುಖ್ಯಮಂತ್ರಿ ಪದವಿಯಲ್ಲಿ ಮುಂದುವರಿಯುತ್ತಿದ್ದಾರೆ. ಆಡಳಿತ ಪಕ್ಷದ ಶಾಸಕರು, ಬೆಂಬಲಿಗರು, ಭ್ರಷ್ಟಾಚಾರದ ವಿರುದ್ಧ ಹೋರಾಡುತ್ತಿರುವ ಲೋಕಾಯುಕ್ತರ ವಿರುದ್ಧ ಧರಣಿ, ಚಳವಳಿ ನಡೆಸುತ್ತಾರೆ. ಸಾರ್ವಜನಿಕರಿಗೆ ಓಕರಿಕೆ ಬರುವಷ್ಟು ಬಾರಿ ಮುಖ್ಯಮಂತ್ರಿಗಳು, ಪಕ್ಷದ ರಾಜ್ಯಾಧ್ಯಕ್ಷರು "ಅಭಿವೃದ್ಧಿಯನ್ನು ಸಹಿಸದ ವಿರೋಧ ಪಕ್ಷಗಳ ಪಿತೂರಿ.." ಅಂತ ಚೀರಾಡುತ್ತಾರೆ. ಇವೆಲ್ಲಕ್ಕೂ ಕಲಶವಿಟ್ಟಂತೆ, ನಾಡಿನ "ಮಠೋದ್ಯಮಿ"ಗಳು ತಮಗೆ ಕೊಡಮಾಡಿದ ಅನುದಾನಗಳ ಋಣಕ್ಕೆ ಬಿದ್ದವರಂತೆ ಭ್ರಷ್ಟ ಮುಖ್ಯಮಂತ್ರಿಯ ಪರ ಲಾಬಿ ನಡೆಸುತ್ತಾರೆ. ಬಿಜೆಪಿ ಮತ್ತಿತರ ಸಂಘಟನೆಗಳು "ತಮ್ಮ ವಿಶ್ವವಿದ್ಯಾಲಯ"ದಂತೆ.. ಎಂದು ಕೊಂಡಾಡುವ ಆರೆಸ್ಸೆಸ್ಸಿನ ನಾಯಕರು, ನಡೆಯುವ ವಿದ್ಯಮಾನಗಳಿಗೆ ಕಣ್ಣು ಮುಚ್ಚಿ ಕೂರುತ್ತಾರೆ.

20 ತಿಂಗಳ ಆಡಳಿತ ನಡೆಸಿ ಒಪ್ಪಂದದಂತೆ ತಮಗೆ ಮುಖ್ಯಮಂತ್ರಿ ಪದ ಸಿಗಲಿಲ್ಲವೆಂದು, ಜೆಡಿಎಸ್ ನ "ವಚನಭ್ರಷ್ಟತೆ"ಯನ್ನು ಆಡಿ ರಾಜ್ಯದಲ್ಲೆಲ್ಲ ಡಂಗುರ ಸಾರಿದವರು, ಅನುಕಂಪದಿಂದ ರಾಜ್ಯದ ಜನತೆ ಕೊಟ್ಟ ಒಂದು ಅವಕಾಶವನ್ನೂ ಸರಿಯಾಗಿ ಬಳಸದೆ, ಅಧಿಕಾರಕ್ಕೆ ಬಂದ ತಕ್ಷಣ ಬರಗೆಟ್ಟವರಂತೆ ಎರಡೂ ಕೈ ಬಾಚಿ ತಿನ್ನುವುದನ್ನು ನೋಡಿದರೆ ಜನರಿಗೆ ಅಸಹ್ಯವಾಗುತ್ತದೆ. ಇವರೇನೋ ಜನತೆ ಮುಂದಿನ ಚುನಾವಣೆಯಲ್ಲಿ ಒದ್ದು ಓಡಿಸಿದಾಗ ಅಧಿಕಾರದಿಂದ ಉರುಳಿ ಬೀಳುತ್ತಾರೆ, ಆದರೆ ಇವರ ಹೆಸರನ್ನು ಹೇಳಿಕೊಂಡು, ತಮ್ಮದು ಇತರರಿಗಿಂತ ಭಿನ್ನ ಪಕ್ಷವೆಂದು ಹೆಮ್ಮೆ ಪಡುತ್ತಿದ್ದ ಸಾಮಾನ್ಯ ಬಿಜೆಪಿ ಕಾರ್ಯಕರ್ತರು ಜನರ ಬಳಿ ಯಾವ ಮುಖ ಹೊತ್ತು ಹೋಗಬೇಕೆಂದು ಎಂದಾದರೂ ಚಿಂತಿಸಿದ್ದಾರೆಯೆ? ಇದ್ಯಾವುದಕ್ಕೂ ಸಂಬಂಧ ಪಡದೆ ತಮ್ಮ ಪಾಡಿಗೆ ತಾವು "ಶಾಖೆ" ನಡೆಸಿಕೊಂಡು ಹೋಗುತ್ತಿದ್ದ ಆರೆಸ್ಸೆಸ್ಸಿನ ಸಾಮಾನ್ಯ ಕಾರ್ಯಕರ್ತರನ್ನೂ ಜನತೆ ಸಂಶಯದ ಕಣ್ಣಿಂದ ನೋಡುವಾಗ ಆರೆಸ್ಸೆಸ್ಸಿನ ನಾಯಕರಿಗೆ ಏನೆನ್ನಿಸುತ್ತದೆ?

ಹುಬ್ಬಳ್ಳಿಯಲ್ಲಿರುವ ಮಿತ್ರರೊಬ್ಬರೊಡನೆ ಇತ್ತೀಚೆಗೆ ಮಾತನಾಡಿದಾಗ ನನ್ನಂತೆಯೇ ನಿಷ್ಠಾವಂತ ಸ್ವಯಂಸೇವಕರಾಗಿದ್ದ ಅವರು ಜಿಗುಪ್ಸೆಯಿಂದ ಹೇಳಿದ ಮಾತಿದು. ಹಿಂದೆ ಆರೆಸ್ಸೆಸ್ಸಿನ ಪ್ರಾಂತ ಪ್ರಚಾರಕರಾಗಿದ್ದರವರು ಕೆಲವು ದಿನಗಳ ಹಿಂದೆ ಸಿಕ್ಕಿದ್ದರು, ಪ್ರಚಲಿತ ವಿದ್ಯಮಾನಗಳ ಬಗ್ಗೆ ವ್ಯಥಿತರಾಗಿದ್ದರು, ಆದರೆ ಅವರು ಹೇಳಿದ್ದು, 'ದಕ್ಷಿಣದಲ್ಲಿ ಬಿಜೆಪಿ ಅಧಿಕಾರದಲ್ಲಿರುವ ಏಕೈಕ ರಾಜ್ಯವೆಂದರೆ ಕರ್ನಾಟಕ, ಅದಕ್ಕಾಗಿ ಈ ಮುಖ್ಯಮಂತ್ರಿಯನ್ನು ಮುಂದುವರಿಸುವ ಅನಿವಾರ್ಯತೆ ಇದೆ.." ಅಂತ. ಎಲ! ರಾಜಕೀಯ ಅಧಿಕಾರದಲ್ಲಿ ಇರಬೇಕಾದದ್ದು ಬಿಜೆಪಿ/ ಆರೆಸ್ಸೆಸ್ ಗೆ ಇಷ್ಟು ಅನಿವಾರ್ಯವೆನ್ನುವುದು ನನಗೂ ತಿಳಿದಿರಲಿಲ್ಲ. ತಿಳಿಸಿ ಹೇಳಿದ ಆ ಹಿರಿಯರಿಗೆ ನನ್ನ ಧನ್ಯವಾದಗಳು!

ನೆನಪಿರಲಿ, ಎಲ್ಲಿಯ ತನಕ ಆರೆಸ್ಸೆಸ್ ಭ್ರಷ್ಟಾಚಾರಕ್ಕೆ ತನ್ನ ಸಮ್ಮತಿಯಿಲ್ಲ ಎನ್ನುವುದನ್ನು ಆಗ್ರಹಪೂರ್ವಕವಾಗಿ ಹೇಳುವುದಿಲ್ಲವೋ ಅಲ್ಲಿಯ ತನಕ ಬಿಜೆಪಿ ಭ್ರಷ್ಟಾಚಾರ ಮಾಡುತ್ತಲೇ ಇರುತ್ತದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
In an open letter to Rashtriya Swayamsevek Sangh activists another activist has questioned the stand by RSS leaders on corruption in Karnataka BJP and on Karnataka Chief Minister BS Yeddyurappa.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more