ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಮ್ಮನ್ಯಾಕೆ ಹಿಂಗೆ ದೂರ ಮಾಡ್ತೀರ?

By * ಮವಾಸು, ಅಮೆರಿಕೆಯಲ್ಲಿರುವ ಅನಿವಾಸಿ
|
Google Oneindia Kannada News

Vallisha Shastry
ಮೃತ್ಯುಂಜಯ ಕಲ್ಮಠರ 'ಅನಿವಾಸಿಗಳಿಗ್ಯಾಕೆ ಮಣೆ ಮುಖ್ಯಮಂತ್ರಿಗಳೇ?' ಅನ್ನುವ ಲೇಖನ ಓದಿ ಬಹಳಷ್ಟು ಅನಿವಾಸಿ ಕನ್ನಡಿಗರ ಮನಸ್ಸಿಗೆ ಖೇದವಾಗಿದೆ. ಅನಿವಾಸಿಗಳ ಬಗ್ಗೆ ಮೂಲ ಅರಿವೆಯೇ ಇಲ್ಲದ ಕಲ್ಮಠರಿಗೆ ಅರಿವು ಮೂಡಲಿ ಎಂದು ಈ ಲೇಖನ.

ಯಾಕರಪ್ಪಾ ನಮಗೆಲ್ಲಾ ಹಿಂಗೆ ಗೋಳ್ಹುಯ್ಕೋತೀರಾ? ಮೊದಲೇ ಹೊಟ್ಟೆಪಾಡಿಗೆ ಊರ ಬಿಟ್ಟು, ಮನೆ ಬಿಟ್ಟು ಬಂದಿದೀವಿ. ನಮ್ಮ ಅಪ್ಪ ಅಮ್ಮ ಹಣವಂತರಾಗಿದ್ದಿದ್ರೆ ನಾವ್ಯಾಕೆ ಇಲ್ಲಿಗೆ ಬರ್ತಾ ಇದ್ವು ಹೇಳಿ. ಹೊಟ್ಟೆಗೆ ಹಿಟ್ಟಿಲ್ಲದೆ, ಹ್ಯಾಂಗಾರು ಮಾಡಿ ಅಪ್ಪ ಅಮ್ಮ ಮಾಡಿರೋ ಸಾಲ ತೀರ್ಸೋಣಾ ಅಂತ ಬಂದ್ರೆ, ನಮ್ಗೇನ್ ಗೊತ್ತಿತ್ತು ಇದು ತಿರ್ಗ್ ವಾಪಸ್ ಬರಾಕೆ ಎಷ್ಟು ಕಷ್ಟ ಅಯ್ತೆ ಅಂತ. ಯಾರ್ಗೆ ಹೆಳ್ಕೊಳ್ಲಿ, ಯಾರ್ಗೆ ಬಿಡ್ಲಿ ಹೇಳಿ.

ಒಂದು ನಡೆದ ಸಂಗತಿ ಹೇಳ್ತೀನಿ ಕೇಳಿ, ನಮ್ಮೊಬ್ಬರು ಸ್ನೇಹಿತರು ಒಬ್ಬ ಅಲ್ಲಿನ ಡಾಕ್ಟರ್. ಸಾಲ ಸೋಲ ಮಾಡಿ ಅಮೆರಿಕೆಗೆ ಓದೋಕೇ ಅಂತ ಬಂದ್ರು. ಪಸ್ಟ್ ಕ್ಲಾಸ್‌ನಲ್ಲಿ ಪಾಸಾದರು. ಓದೋಕ್ಕೆ ಸಾಲ ಮಾಡಿದ್ದರಲ್ಲ ಅದನ್ನ ತೀರ್ಸೋಕ್ಕೋಸ್ಕರ ಇಲ್ಲೇ ಕೆಲ್ಸಕ್ಕೆ ಸೇರ್ಕೊಂಡ್ರು. ಅಮೆರಿಕದ ಟೆಕ್ಸಾಸ್‌ನಲ್ಲಿ ಒಳ್ಳೆ ಎಸರು ಮಾಡ್ಕೊಂಡ್ರು. ಅಮೆರಿಕದೋರೆಲ್ಲಾ ಅವ್ರತ್ತರ ಹೋಗ್ತಾ ಇದ್ರು. ಅವ್ರಗೆ ಕನ್ನಡ ಅಂದ್ರೆ ಪ್ರಾಣ. ಎಷ್ಟೋ ಅಮೆರಿಕದ ಹುಡುಗೀರು ಮದುವೆ ಆಗ್ಬೇಕು ಅಂದ್ರು. ಆದ್ರೆ ನಾನು ಕನ್ನಡ ಹುಡುಗೀನೇ ಮದುವೆ ಆಗೋದು ಅಂತ ಅಪ್ಪಟ ಕನ್ನಡ ಹುಡ್ಗೀನ ಮದ್ವೆ ಆದ್ರು. ಸಾಲ ಎಲ್ಲಾ ತೀರೋ ಹೊತ್ತಿಗೆ 4-5 ವರ್ಸ್ವೇ ಆಯ್ತು. ಸಾಲಾ ಎಲ್ಲಾ ತೀರ್ದ ಮೇಲೇ ಮಕ್ಕಳು ಇನ್ನು ಚಿಕ್ಕವರಾಗಿರೋವಾಗ್ಲೇ ಬೆಂಗಳೂರ್ಗೆ ಹೋಗಿ ಒಂದು ಅಲ್ಲಿನ ಕ್ಲಿನಿಕ್ ಆಕದ್ರು. ಅಮೆರಿಕೆಯಿಂದ ಡಾಕ್ಟರ್ ಬಂದವ್ರೆ ಅಂತ ಜನ ಬಂದೇ ಬತ್ತಾರೆ ಅಂತ ತಿಳ್ಕೊಂಡ್ರೆ ಏನಾಯ್ತು ಗೊತ್ತಾ? ಅಮೆರಿಕದಲ್ಲಿ ಕೆಲ್ಸ ಸಿಗ್ನಿಲ್ಲಾ ಅಂತ ಇಲ್ಲಿ ಬಂದವ್ನಂತೆ. ಇಷ್ಟು ಓದವ್ನೆ, ಅಮೆರಿಕ ಯಾಕ ಬಿಟ್ಟ ಬಂದ? ಒಳ್ಳೆ ಡಾಕ್ಟರ್ ಆಗಿದ್ರೆ ಅಮೆರಿಕೆಯಲ್ಲೇ ಇರ್ತಿದ್ದ. ಯಾಕೋ ಅನುಮಾನ ಹಿಂಗೆಲ್ಲಾ ಮಾತಾಡಿ ಅವರ್ಗೆ ಜನಾನೇ ಬರ್ನಿಲ್ಲ. ಒಂದು ವರ್ಸ ನೋಡಿ ವಾಪಸ್ ಬಂದ್ರು. ಇಲ್ಲಿ ಮತ್ತೆ ತಮ್ಮ ಎಸ್ರು ಮಾಡವ್ರೆ. ನಮಗೇನು ಕನ್ನಡ ಅಂದ್ರೆ ಪ್ರೀತಿ ಇಲ್ವಾ? ಮನ್ಯಾಗೆ ನಮ್ಮ ಸಂಸ್ಕೃತಿ ಇಟ್ಕೊಂಡಿಲ್ಲಾ ಅಂದ್ಕೊಡೀರಾ? ಮನೇಗೆ ಬನ್ನಿ ಮಕ್ಕಳು ಪೂಜೆ ಮಾಡೋದು ನೋಡಿ. ನಮ್ಮ ಮಕ್ಕಳು ಅದ್ಹೆಂಗೆ ಪಟ ಪಟ ಅಂತ ಕನ್ನಡದಾಗೆ ಮಾತಾಡ್ತಾರೆ, ಬೆಂಗ್ಳೂರ್ ಮಕ್ಕಳೇ ಕನ್ನಡ ಮಾತಾಡೋದು ಕಡಿಮೆ. ನಮ್ಮ ಮಕ್ಕಳು ಬೆಂಗಳೂರ್ಗೆ ಹೋದಾಗ ಅಲ್ಲಿನ ಮಕ್ಕಳು ಇಂಗ್ಲೀಸ್ನಾಗೇ ಮಾತಾಡ್ತಾರೆ. ನಮ್ಮ ಮಕ್ಕಳು ನೋಡೋ ಅಷ್ಟು ಕನ್ನಡ ಚಿತ್ರಗಳನ್ನ ಬೆಂಗಳೂರಲ್ಲೇ ಮಕ್ಕಳು ನೋಡ್ತಾರೋ ಇಲ್ಲವೋ ನನಗೆ ಅನುಮಾನ.

ಇನ್ನು ನಾವು ನಡೆಸೋ ಜೀವನ. ಈಗ ಬೆಂಗಳೂರ್ಗೆ ಬಂದಿರೋರಲ್ಲಿ ಬಹಳಷ್ಟು ಜನ ಅಳ್ಳಿ ಇಂದ್ಲೇ ಬಂದಿರೋದು. ನಿಮಗೆ ಅಳ್ಳಿಯೋರು ಏನ್ ಏಳ್ತಾ ಅವ್ರೆ? ನೀವು ನಮ್ಮಂತ ಅನಿವಾಸಿಗಳಿಗೆ ಏಳೋ ಆಂಗೆ ನಿಮ್ಮ ಅಳ್ಳಿಯೋರು ನಿಮಗೆ ಏಳ್ತಾ ಅವ್ರೆ. ನೀವು ಇಂಗೆ ಓದಾಕ್ಕೆ ಅಂತ ಇಲ್ಲಾ ಕೆಲ್ಸಕ್ಕೆ ಅಂತ ಪಟ್ನಕ್ಕೆ ಬಂದೋರು, ಈಗ ಅಳ್ಳಿಗೆ ವಾಪಸ್ ಯಾಕ್ ಓಗಾಕ್ಕಿಲ್ಲ. ನೀವು ಅಳ್ಳಿಗೆ ಏನ್ ಮಾಡ್ತಿದೀರಾ? ಅಂಗೆ ನಮಗೂ ಅಷ್ಟೆ. ಅಳ್ಳಿ ಇಂದ ಬೆಂಗಳೂರ್ಗೆ ಓದಾಕ್ಕೆ ಅಂತ ಬಂದ್ವು. ಇನ್ನೂ ಎಚ್ಚು ಓದಾನಾ ಅಂತ ವಿದೇಸಕ್ಕೆ ಬಂದ್ವು. ಅಮೇಲೆ ಸ್ವಲ್ಪ ಜನ ಕೆಲಸಕ್ಕೆ ಅಂತ ಬೆಂಗಳೂರ್ಗೆ ಬಂದ್ರು, ಅವ್ರ ಕೆಲ್ಸ ಮೆಚ್ಕೊಂಡು ವಿದೇಸದೋರು ಬಂದು ಕರ್ಕೊಂಡು ಬಂದ್ರು. ಅಂದ್ರೆ ಇನ್ನೊಬ್ಬನಿಗೆ ಕೆಲ್ಸ ಸಿಕ್ಕದಂಗಾಲಿಲ್ವೇ? ಅಂದ್ರೆ ಎಂತಾ ಒಳ್ಳೆ ಕೆಲ್ಸ ಮಾಡ್ದಾ? ತಾನು ಮನೆ ಊರು ಎಲ್ಲಾ ಬಿಟ್ಟು ಇನ್ನೊಬ್ಬ ಕನ್ನಡಿಗನಿಗೆ ಕೆಲ್ಸ ಸಿಗೋ ಅಂಗೆ ಮಾಡದ್ನೋ ಇಲ್ವೋ?

ಪುಣ್ಯಾತ್ಮ. ಈಗ ಬೆಂಗಳೂರ್ನಾಗೆ ಕೆಲ್ಸ ಸಿಗ್ತಾ ಇರ್ಬೋದು, ಆದ್ರೆ ಅತ್ತು ವರ್ಸದ ಕೆಳ್ಗೆ, ಒಬ್ಬ ವಿದೇಸಕ್ಕೆ ಓದ್ರೆ, ಇನ್ನೊಬ್ಬನಿಗೆ ಕೆಲ್ಸ ಸಿಗ್ತಾ ಇತ್ತಲ್ಲಾ ಅನ್ನೋದೆ ಒಂದು ದೊಡ್ಡ ಸೇವೆ. ಇನ್ನು ವಿದೇಸಕ್ಕೆ ಓಗೋದು ಎರಡು ಉದ್ದೇಸ. ಒಂದು ದುಡ್ಡು ಮಾಡಿ ಅಪ್ಪ ಅಮ್ಮ ನಮ್ಮನ್ನ ಓದ್ಸೋಕೆ ಮಾಡಿದ ಸಾಲ ಎಲ್ಲಾ ತೀರ್ಸಿ ಅಲ್ಪ ಸ್ವಲ್ಪ ದುಡ್ಡು ಮಾಡ್ಕೊಂಡು ಒಂದು ಸೂರು ಕಟ್ಕಳ್ಳೋಣ ಅಂತ. ಸಾಲ ಗೀಲ ತೀರ್ಸೋ ಹೂತ್ಗೆ ಐದಾರ್ ವರ್ಸ್ ಅಯ್ತದೆ. ಮತ್ತೆ ಮದ್ವೆ ಮಾಡ್ಕೊಂಡ್ ಅದಕ್ ಬೇರೆ ಸಾಲ. ಅದನ್ನ ತೀರ್ಸೋಕೆ ಇನ್ನೊಂದ್ ಎರ್ಡ್ ವರ್ಸ ಆಯ್ತದೆ. ಅಷ್ಟ್ ಒತ್ಗೆ ಮಕ್ಕಳಾಯ್ತವೆ. ಸರಿ ಸಂಸಾರ ತಾಪತ್ರಯಗಳು ಶುರು. ಮಕ್ಕಳು ಚಿಕ್ಕೋರಾಗಿದ್ದಾಗಲೇ ಕರ್ನಾಟಕಕ್ಕೆ ಬಂದು ನೆಲಸಬೇಕೂ ಅಂತ ಒಂಟೋರು ತುಂಬಾ ಜನಾ ಅವ್ರೆ. ಅದರಲ್ಲಿ ಅಲ್ಲಿನ ಡಾಕ್ಟರ ತರ ಪೆಟ್ಟ ತಿಂದೋರು ಅವ್ರೆ, ಓಗಿ ಒಳ್ಳೆ ಸಂಸಾರ ನಡಸ್ಕೊಂಡು ಓಯ್ತಾ ಇರೋರು ಅವ್ರೆ. ಅವರವರ ಅದೃಷ್ಟ.

ಕರ್ನಾಟಕ ಅಂದ್ರೆ ತೌರೂರು ಇದ್ದಂಗೆ. ಅಲ್ಲಿಗೆ ಬರಾಕೇ ಯಾರ್ಗಿಷ್ಟವಿಲ್ಲ ಏಳಿ. ನಮ್ಮ ಕಷ್ಟಾನೂ ಅರ್ಥ ಮಾಡ್ಕೊಳ್ಳಿ. ಅಮೆರಿಕೆಗೆ ಬಂದಿರೋ ಕನ್ನಡಿಗರು ತಮ್ಮ ಮಕ್ಕಳ ವಿದ್ಯಾಭ್ಯಾಸ ಎಲ್ಲಾ ಮುಗದಿದ್ರೆ ಕರ್ನಾಟಕಕ್ಕೆ ವಾಪಸ್ ಬರೋಕೆ ತುದಿ ಗಾಲಲ್ಲಿ ನಿಂತಿರ್ತಾರೆ. ಒಂದು ಸ್ವಲ್ಪ ಯೋಚ್ಸಿ. ಸುಮಾರು ಇಪ್ಪತ್ತು ವರ್ಸದ ಕೆಳ್ಗೆ ಊರು ಬಿಟ್ಟು, ವರ್ಸಕ್ಕೊಂದು ಸಾರಿ ಊರ್ಗೆ ಬಂದು, ಒಂದು ತಿಂಗಳಲ್ಲಿ ಎಷ್ಟು ಸಾಧ್ಯವೋ ಅಷ್ಟು ಸ್ನೇಯಿತರನ್ನ ಭೇಟಿ ಮಾಡಿ, ಎಷ್ಟೇ ಟಚ್ನಾಗಿ ಇರ್ಬೇಕು ಅಂತಿದ್ರೂ ಇಪ್ಪತ್ತು ವರ್ಸಕ್ಕೆ ಕೆಲವರು ಸ್ವರ್ಗ ಕಂಡಿರ್ತಾರೆ, ಕೆಲವರು ನರಳ್ತಾ ಇರ್ತಾರೆ. ಇನ್ನು ಬಂದು ಈ ವಯಸ್ನಾಗೆ ಹೊಸ ಸ್ನೇಯಿತರನ್ನ ಮತ್ತೆ ಮಾಡ್ಕೋಬೇಕು. ಯಾರ್ ಸಿಗ್ತಾರೆ ಏಳಿ. ಇನ್ನು ಸಾಲ ಗೀಲ ಎಲ್ಲ ತೀರ್ಸಿ ಅಲ್ಪ ಸ್ವಲ್ಪ ಅಣ ಮಾಡ್ಕೊಂಡು ಇನ್ನೇನು ಒರಡ್ಬೇಕು ಅಂದ್ರೆ, ಮಕ್ಕಳು ಹೈಸ್ಕೂಲ್‌ಗೆ ಓಯ್ತಾ ಇರ್ತಾರೆ. ಅವಾಗ ಮಕ್ಕಳನ್ನ ವಾಪಸ್ ಕರ್ಕೊಂಡ್ ಬಂದ್ರೆ ಎಂಗಾಯ್ತದೆ? ಇಲ್ಲಿ ಓದೋ ವಿಷಯಗಳೇ ಬೇರೆ, ಇಲ್ಲಿ ಓದೋ ವಿಷಯಗಳೇ ಬೇರೆ. ಕರ್ಕ್ಪೊಂಡು ಬರೋಕ್ ಆಯ್ತದಾ? ಅಂಗೇನಾರ ಕರ್ಕೊಂಡ್ ಬಂದ್ರೆ, ಎಂಥ ಘೋರ ಅನ್ಯಾಯ ಆಯ್ತದಲ್ವಾ? ಮಕ್ಕಳ ಜೀನನಾನೇ ಆಳ್ ಮಾಡ್ದಂಗಾಯ್ತದಲ್ವಾ? ಅದಕ್ಕೆ ಅಪ್ಪ ಅಮ್ಮ ಎಷ್ಟೇ ಕಷ್ಟ ಆದ್ರೂ ಮಕ್ಕಳ ವಿದ್ಯಾಭ್ಯಾಸ ಮುಗ್ಯೋವರ್ಗೆ ಇಲ್ಲೆ ಇರ್ತಾರೆ, ಮುಗ್ದ್ ಮೇಲೇ ಬರೋಣ ಅಂದ್ರೆ ವಯಸ್ಸಾಗಿರ್ತದೆ, ಬರೋದು ಕಷ್ಟ.

ಇನ್ನು ನಮ್ಮ ಈ ತ್ರಿಶಂಕು ವಾಸಿಗಳ್ಗೆ ಕನ್ನಡದೋರು ಯಾರಾದರೂ ಊರಿಂದ ಬತ್ತಾರೆ ಅಂದ್ರೆ, ಮಗಳ ಮನೇಗೆ ಅವಳ ಅಪ್ಪ ಅಮ್ಮ ಬಂದಾಗ ಅಯ್ತದಲ್ಲಾ ಅದೇ ಖುಷಿ ಆಯ್ತದೆ. ನಮಗೆ ಉಮ್ಮಸ್ಸೋ ಉಮ್ಮಸ್ಸು. ಒಸ ಒಸ ತರ ಅಡಿಗೆ ಮಾಡ್ತೀವಿ. ಚೆನ್ನಾಗಿ ಉಪಚಾರ ಮಾಡಿ ಕಳಸ್ತೀವಿ. ಅವ್ರು ವಾಪಸ್ ಊರ್ಗೆ ಒಂಟಾಗ ಅಳ ಬತ್ತದೆ. ಏನ್ ಮಾಡೋದು. ನಮ್ಮ ಕರ್ಮ. ಕೆಲಸಕ್ಕೋಸ್ಕರ ಬಂದ್ವಿ, ವಾಪಸ್ ಓಗೋಣ ಅಂದ್ರೆ ಕೆಸರ ಗದ್ದೇಲಿ ಕಾಲಿಟ್ಟಂಗಾಗದೆ. ಒಂದ್ ಕಾಲೆತ್ತದ್ರೆ, ಇನ್ನೊಂದು ಕಾಲು ಸಿಕ್ಕಾಕತದೆ. ನಮ್ಮ ಸಂಸ್ಕೃತಿ ಅಂದ್ರೆ ನಮಗೆ ಪ್ರಾಣ. ನಮ್ಮ ಮಕ್ಕಳಗೆ ಹ್ಯಂಗಾರ ಮಾಡಿ ಕಲಿಸ್ಬೇಕು ಅಂತ ಆತೊರಿತಿರ್ತೀವಿ. ಅದಕ್ಕೇ ಕನ್ನಡ ಕಲಿ ಸಾಲೆ ಮಾಡ್ಕೊಂಡೀದೀವಿ. ನಮ್ಮ ಸಂಸ್ಕೃತಿ ಬೆಳಸೋಕೆ ಬಾಲ ವಿಹಾರದ ತರ ಸಣ್ಣ ಸಣ್ಣ ಸಾಲೆ ಮಾಡ್ಕೊಂಡಿದೀವಿ. ಅಲ್ಲಿ ನಮ್ಮ ಹಬ್ಬ ಅರಿದಿನ ಎಲ್ಲಾ ಏಳ್ಕೊಡ್ತೀವಿ. ದೇವರು ದಿಂಡರು ಅಂತ ಎಲ್ಲಾ ಕಲಿಸ್ತೀವಿ. ಕನ್ನಡ ಸಂಘಗಳನ್ನ ಮಾಡ್ಕೊಂಡು ಎಲ್ಲಾ ಹಬ್ಬಾನೂ ಆಚರಸ್ತೀವಿ. ಬೆಂಗಳೂರ್ನೋರೆ ಅಷ್ಟು ಮಾಡಾಕ್ಕಿಲ್ಲ. ಕನ್ನಡ ನಾಟಕಗಳನ್ನ ಆಡ್ತೇವೆ. ನಮ್ಮಲ್ಲಿ ಕನ್ನಡ ಕಥೆ, ಕಾವ್ಯ, ನಾಟಕ ಬರೆಯೋ ಬರಹಗಾರರು ತುಂಬಾ ಇದಾರೆ. ಆಗಾಗ್ಗೆ ಪುಸ್ತಕಗಳನ್ನ ಪ್ರಕಟಿಸ್ತೇವೆ. ಕನ್ನಡದ ಬಗ್ಗೆ ಸಮ್ಮೇಳನ ಮಾಡ್ತೇವೆ. ನಮ್ಮ ನರ ನರಗಳಲ್ಲಿ ಕನ್ನಡ ಮಾತೆ ನುಸಳಾಡ್ತಾಳೆ. ನಮಗೊಂದು ಖುಷಿ ಏನಂದರೆ, ಇದೆಲ್ಲಾ ಮಾಡೋವಾಗ ನಮಗೆ ಯಾವುದೇ ರಾಜಕೀಯ ಪುಡಾರಿಗಳು ಬಂದು ತಲೆ ಹಾಕೋಲ್ಲಾ. ಪೋಲೀಸ್ನೋರು ಬಂದು ಲಂಚ ಕೇಳೋಲ್ಲ. ಮುನ್ಸಿಪಾಲಿಟಿ ಆಪೀಸ್ನೋರು ಬಂದು ಕಿರಕುಳ ಕೊಡೋಲ್ಲ. ಯಾವುದೇ ರೌಡಿಗಳು ಬಂದು ಹಫ್ತಾ ಕೇಳೋಲ್ಲ. ನಮ್ಮಷ್ಟಿಗೆ ನಾವು ನೆಮ್ಮದಿಯಾಗಿ ಕನ್ನಡಮ್ಮನ ಸೇವೆ ಮಾಡ್ಕೋಡು ಓಗ್ಬೋದು.

ನಮ್ಮ ಅನಿವಾಸಿ ಕನ್ನಡಿಗರು ಎಲೆ ಮರೆಯಾಗಿ ಮಾಡುವ ಕನ್ನಡ ಸೇವೆ ನೋಡ್ಬಿಟ್ಟರೆ ಬೆರ್ಗಾಗ್ಬಿಡ್ತೀರ. ಎಷ್ಟೂ ಜನ ತಮ್ಮ ತಮ್ಮ ಅಳ್ಳೀನ ದತ್ತು ತಗೊಂಡವ್ರೆ. ಅಲ್ಲಿ ಸ್ಕೂಲ್ ನಡಸ್ತ ಅವ್ರೆ. ನಮ್ಮಲ್ಲಿ ಅರಿಜೋನಾದಾಗೆ ಒಬ್ರು ಮೂಳೆ ಡಾಕ್ಟರ್ ಅವ್ರೆ, ಅವ್ರು ಪ್ರತಿ ವರ್ಷ ಒಂದು ತಿಂಗಳು ಕರ್ನಾಟಕಕ್ಕೆ ಹೋಗಿ ಜೊತೇಲಿ ಅಮೆರಿಕ ಆಸ್ಪತ್ರೆ ನರ್ಸ್‌ಗಳನ್ನ ಕರ್ಕೊಂಡು ಮೂಳೆ ಮುರ್ಕೊಂಡು ಒದ್ದಾಡ್ತೀರೋ ಬಡ ರೋಗಿಗಳಿಗೆ ತಮ್ಮ ಖರ್ಚಲ್ಲಿ ಚಿಕಿತ್ಸೆ ಮಾಡಿ ಬರ್ತಾರೆ. ಲಾಸ್ ಏಂಜಲಿಸ್‌ನಲ್ಲಿ ಒಬ್ಬ ಹೃದಯದ ಡಾಕ್ಟರ್ ಅವ್ರೆ. ಅವ್ರು ಪ್ರತಿ ವರ್ಷ ಓದಾಗೆಲ್ಲಾ ಬಡವರಿಗೆ ಬಿಟ್ಟಿ ಹೃದಯ ಚಿಕಿತ್ಸೆ ಮಾಡಿ ಬರ್ತಾರೆ. ಇನ್ನೊಬ್ಬ ಅಲ್ಲಿನ ಡಾಕ್ಟ್ರು ಊರ್ಗೆ ಓದಾಗೆಲ್ಲಾ, ಊರಿನ ಜನಕ್ಕೆಲ್ಲಾ ಬಿಟ್ಟೀ ಅಲ್ಲಿನ ಚಿಕಿತ್ಸೆ ಮಾಡಿ ಬರ್ತಾರೆ. ಇಂಗೆ ಎಷ್ಟೋ ಜನ ಅವ್ರೆ. ಅದ್ನೆಲ್ಲಾ ಎಲ್ಲರ ಅತ್ರ ಏಳ್ಕೋಳ್ಳಾಕಿಲ್ಲ. ದಾನ ಕೊಟ್ಟರೆ ಬಲಗೈಯಲ್ಲಿ ಕೊಟ್ರೆ, ಎಡ ಗೈಗೆ ಗೊತ್ತಾಗ್ಬಾರ್ದಂತೆ. ಅಂಗೆ ನಮ್ಮ ಅನಿವಾಸಿ ಕನ್ನಡಿಗರು.

ಹೊರ ದೇಶದ ಕನ್ನಡಿಗರಿಂದ ನಿಮ್ಮ ಸರ್ಕಾರ್ಕೆ ಎಷ್ಟು ಉಪಯೋಗ ಆಯ್ತಾ ಇದೆ ಅಂತ ಗೊತ್ತಾ ನಿಮಗೆ. ನಾವು ಊರಿಗೆ ಕಳಸೋ ಒಂದೊಂದು ಡಾಲರ್‌ನಿಂದಲೇ ಸರ್ಕಾರ ನಿಮಗೆಲ್ಲಾ ಕಾರು ಓಡ್ಸೋಕೆ ಪೆಟ್ರೋಲ್ ಆಮದು ಮಾಡ್ಕೋಳ್ಳೋಕೆ ಸಾಧ್ಯ. ಈಗ ಸರ್ಕಾರದ ಅತ್ರ ವಿದೇಸಿ ಅಣ ಅಯ್ತೆ. ಒಂದ್ ಕಾಲ್ದಾಗೆ, ನಮಗೆಲ್ಲಾ ಸರ್ಕಾರ ಬೇಡ್ಕೋತಿತ್ತು, ದಯವಿಟ್ಟು ನಿಮ್ಮ ಡಾಲರ್‌ನ ನಮ್ಮ ಬ್ಯಾಂಕ್‌ನಾಗಿ ಇಡಿ. ಅದರಿಂದ ಸರ್ಕಾರಕ್ ಉಪಯೋಗ ಆಗ್ತದೆ ಅಂತ. ಆಗ ನಮ್ಮ ಅನಿವಾಸಿಗಳು ಇಟ್ಟು ದುಡ್ಡಿಂದಲೇ ನಿಮಗೆಲ್ಲಾ ಕಾರು ಸ್ಕೂಟ್ರು ಓಡ್ಸೋಕೆ ಪೆಟ್ರೋಲ್ ತರೋ ಹಂಗಾಯ್ತು.

ಇಷ್ಟೆಲ್ಲ ಕಷ್ಟ ಪಟ್ಟು, ಕನ್ನಡ ಸೇವೆ ಮಾಡ್ತಿರೋ ಅನಿವಾಸಿ ಕನ್ನಡಿಗರಿಗೆ ಒಂದ್ ಚೂರ್ ಎಲ್ಲೋ ಸರ್ಕಾರ್ದೋರು ಇಷ್ಟು ವರ್ಸ ಆದಮೇಲೆ ಕಣ್ ಬಿಡ್ತಾ ಅವ್ರೆ, ಅದಕ್ಕೂ ಕಲ್ಲ ಹಾಕಾಕ್ಕೊಂಟೀದಿರಲ್ಲಾ? ಏನ್ ಏಳ್ಬೇಕು ನಿಮ್ಗೆ. ನಮಗೆ ನಿಮ್ಮ ಸೈಟ್ ಏನು ಬಿಟ್ಟಿ ಬೇಡ. ಕಮ್ಮಿಗೂ ಕೊಡಬೇಡಿ. ಸ್ವಲ್ಪ ಜಾಸ್ತೀನೇ ಇಸ್ಕೊಳ್ಳಿ ಪರ್ವಾಗಿಲ್ಲ. ಸೈಟ್ ಕೊಡಿ. ನಾವು ಇಲ್ಲಿ ಕೂತ್ಕೊಂಡು ಸೈಟ್‌ಗೇ ಅಂತ ಎಷ್ಟು ಜನ ಬರೇ ಫೋಟೋದಲ್ಲಿ ನೋಡಿ ದುಡ್ಡು ಕೊಟ್ಟು ಕಳ್ಕೊಂಡವ್ರೆ. ಅಂಗಿರೋವಾಗ ಸರ್ಕಾರ ಮುಂದೆ ಬಂದು ಏನೋ ಸಹಾಯ ಮಾಡ್ತೀವಿ ಅಂದ್ರೆ ದಯವಿಟ್ಟು ಕಲ್ಲ ಆಕ್ಬೇಡಿ. ನಾವು ಎಲ್ಲರೂ ಸುಖದ ಸುಪ್ಪತ್ತಿಗೇಲಿ ಮೆರೀತಿಲ್ಲ. ನಾವು ಕಾರ್ಯನಿಮಿತ್ತ ಮಾತೃಭೂಮಿಯನ್ನೇ ಬಿಟ್ಟುಬಂದು ಮತ್ತೆ ಮಾತೃಭೂಮಿ ತಾಯಿಯ ಮಡಿಲಲ್ಲಿರಲು ಬಯಸುವ ಕನ್ನಡದ ಮಕ್ಕಳು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X