ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅನಿವಾಸಿ ಕನ್ನಡಿಗ ಪರದೇಸಿಯಾಗಿದ್ದೇ ಕನ್ನಡಕ್ಕಾಗಿ

By * ಕುಮಾರ್ ಕುಂಟಿಕಾನಮಠ, ಯುಕೆ
|
Google Oneindia Kannada News

Kumar Kuntikanamata, UK
ಅನಿವಾಸಿ ಕನ್ನಡಿಗರ ಕುರಿತಾಗಿ ದಟ್ಸ್ ಕನ್ನಡದಲ್ಲಿ ಪ್ರಕಟವಾದ ಲೇಖನ, ಅದಕ್ಕೆ ಬಂದಂತಹ ಪ್ರತಿಕ್ರಿಯೆ ನೋಡಿ ನಾನು ಎಲ್ಲ ಅನಿವಾಸಿ ಕನ್ನಡಿಗನ ನೋವು ನಲಿವಿನ ಕಥೆಯನ್ನು ಬರೆಯಬೇಕೆಂದು ಆಲೋಚಿಸಿದೆ. ಆ ಪ್ರಯುಕ್ತ ಎಲ್ಲ ಅನಿವಾಸಿ ಕನ್ನಡಿಗರು ಇದನ್ನು ಸಮರ್ಥಿಸಿಕೊಳ್ಳುತ್ತಾನೆಂದು ನಂಬಿಕೆ. ಎಲ್ಲ ಕನ್ನಡಿಗರು ನಮ್ಮ ಬಂಧು ಮಿತ್ರರು, ಅಣ್ಣ ತಮ್ಮಂದಿರು, ಅಕ್ಕ ತಂಗಿಯಂದಿರು.

ಪ್ರಪಂಚದ ಮೂಲೆ ಮೂಲೆಯಲ್ಲಿ ವಿಜ್ಞಾನಿಯಾಗಿ, ವೈದ್ಯನಾಗಿ, ತಂತ್ರಜ್ಞನಾಗಿ, ಡ್ರೈವರ್ ನಾಗಿ, ದಾದಿಯಾಗಿ, ವ್ಯಾಪಾರಿಯಾಗಿ, ಮಾಸ್ತರನಾಗಿ ಮತ್ತು ಇನ್ನು ಹಲವಾರು ಕ್ಷೇತ್ರಗಳಲ್ಲಿ ಅನಿವಾಸಿ ಕನ್ನಡಿಗ ದುಡಿಯುತ್ತಿದ್ದಾನೆ, ಸಾಧನೆ ಮಾಡುತ್ತಿದ್ದಾನೆ. ಅಂಕಿ ಅಂಶಗಳ ಪ್ರಕಾರ ನೋಡಿದರೆ ಸುಮಾರು ಒಂದು ಲಕ್ಷ ಅನಿವಾಸಿ ಕನ್ನಡಿಗರಿದ್ದಾರೆ. ಸುಮಾರು ಇಪ್ಪತ್ತು ವರ್ಷಗಳಲ್ಲಿ ಒಂದು ಲಕ್ಷ ಕನ್ನಡಿಗರು, ರೂಪಾಯಿ ಒಂದು ಲಕ್ಷದಂತೆ ತಮ್ಮ ಕುಟುಂಬಕ್ಕಾಗಿ ಕಳುಹಿಸಿದ ಹಣವನ್ನೇ ಲೆಕ್ಕ ಹಾಕಿ ಅದುವೆ ಹಲವಾರು ಸಹಸ್ರ ಕೋಟಿ. ಇನ್ನು ವ್ಯಾಪಾರಕ್ಕಾಗಿ, ಜಮೀನಿಗಾಗಿ, ಬ್ಯಾಂಕ್ ಠೇವಣಿಯಾಗಿ ಬಂಡವಾಳ ಹೂಡಿದ್ದಾನೆ, ಹೂಡುತ್ತಲಿದ್ದಾನೆ.

ಪ್ರಪಂಚದಾದ್ಯಂತ ಕರ್ನಾಟಕವನ್ನು ಪರಿಚಯಿಸಿದ್ದಾನೆ. ಯಕ್ಷಗಾನದ ವೇಷ ಹಾಕಿ ಕುಣಿದಿದ್ದಾನೆ, ಕನ್ನಡದ ರಂಗ ಕಲಾವಿದರನ್ನು ಕರೆಸಿ ನಾಟಕವನ್ನು ಮಾಡಿಸಿದ್ದಾನೆ, ಕರ್ನಾಟಕದ ಕವಿಗಳನ್ನು ಕರೆಸಿ ಸನ್ಮಾನಿಸಿದ್ದಾನೆ, ಸಂಗೀತ ಕಲಾವಿದರನ್ನು ಕರೆಸಿ ಕಾರ್ಯಕ್ರಮವನ್ನು ಮಾಡಿಸಿದ್ದಾನೆ, ಆಯುರ್ವೇದ ಯೋಗವನ್ನು ಪ್ರಪಂಚಕ್ಕೆ ಪರಿಚಯಿಸಿದ್ದಾನೆ, ಕನ್ನಡ ಸಿನೆಮಾವನ್ನು ಸಾಗರೋತ್ತರಕ್ಕೆ ತಂದು ಬಿಡುಗಡೆ ಮಾಡಿದ್ದಾನೆ, ಹಲವಾರು ಕನ್ನಡಪರ ಸಂಘ ಸಂಸ್ಥೆಗಳನ್ನು ಕಟ್ಟಿದ್ದಾನೆ, ಕರ್ನಾಟಕದ ಹಲವಾರು ಗ್ರಾಮಗಳಲ್ಲಿ ದೇವಸ್ಥಾನಗಳಿಗೆ, ಶಾಲೆಗಳಿಗೆ ದಾನ ಮಾಡಿದ್ದಾನೆ, ಪೀಠೋಪಕರಣಗಳನ್ನು ಖರೀದಿಸಿ ಶಾಲೆಗಳಿಗೆ ವಿತರಿಸಿದ್ದಾನೆ, ವಿದ್ಯಾರ್ಥಿಗಳಿಗೆ ದತ್ತಿಯಾಗಿ ಹಣವನ್ನು ಕೊಟ್ಟಿದ್ದಾನೆ, ಕರ್ನಾಟಕದ ರೈತನಿಗೆ ಸಹಾಯಕನಾಗಿ ನಿಂತಿದ್ದಾನೆ. ರೈತ ಕುಟುಂಬದವರಿಗೆ ವಿದ್ಯಾಭ್ಯಾಸಕ್ಕಾಗಿ ಸಹಾಯ ಮಾಡಿದ್ದಾನೆ.

ನೀವು ಬೇಕಾದರೆ ಕನ್ನಡದ ವರನಟ ರಾಜ್ ಕುಮಾರ್ ಕುಟುಂಬವನ್ನೇ ಕೇಳಿ, ಕನ್ನಡದ ಹೆಮ್ಮೆಯ ವಿಷ್ಣು ಅವರನ್ನೇ ವಿಚಾರಿಸಿ, ಜ್ಞಾನಪೀಠ ಪ್ರಶಸ್ತಿ ವಿಜೇತರಾದ ಗಿರೀಶ್ ಕಾರ್ನಾಡ್, ಯುಆರ್ ಅನಂತಮೂರ್ತಿಯವರನ್ನು ಕೇಳಿ, ಖ್ಯಾತ ಸಾಹಿತಿಗಳಾದ ದೊಡ್ಡರಂಗೇ ಗೌಡ, ಅರಾ ಮಿತ್ರ , ಚಂದ್ರ ಶೇಖರ ಕಂಬಾರ, ಮತ್ತೂರು ಕೃಷ್ಣ ಮೂರ್ತಿ, ಕರ್ನಾಟಕ ಸಂಗೀತ ಕ್ಷೇತ್ರದ ದಿಗ್ಗಜರಾದ ವಿದ್ಯಾ ಭೂಷಣ, ಸಂಗೀತ ಕಟ್ಟಿ, ವೇಣು ವಾದಕರಾದ ಬಿಕೆ ಅನಂತರಾಮ್, ಪ್ರವೀಣ್ ಗೋಡ್ಕಿಂಡಿ, ಸಂಗೀತ ನಿರ್ದೇಶಕ ರಘು ದೀಕ್ಷಿತ, ಅಶ್ವಥ್, ಗುರುಕಿರಣ್, ಮದನ್ ಪಟೇಲ್, ಸಿನಿಮಾ ನಿರ್ದೇಶಕರಾದ ನಾಗಾಭರಣ, ನಾಗತಿಹಳ್ಳಿ ಚಂದ್ರಶೇಖರ್, ಧರ್ಮದರ್ಶಿಗಳಾದ ಶ್ರೀ ವೀರೇಂದ್ರ ಹೆಗ್ಡೆ, ಶ್ರೀ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಶ್ರೀ ಶ್ರೀ ರವಿಶಂಕರ್ ಗುರೂಜಿ, ಶ್ರೀ ಶ್ರೀ ಕೇಶವಾನಂದ ಭಾರತಿ, ಶ್ರೀ ಶ್ರೀ ನಾರಾಯಣ ಸ್ವಾಮೀಜಿ, ಶ್ರೀ ಶ್ರೀ ಪುತ್ತಿಗೆ ಸ್ವಾಮೀಜಿ, ಪತ್ರಕರ್ತರಾದ ವಿಶ್ವೇಶ್ವರ ಭಟ್ ಮೊದಲಾದ ಗಣ್ಯರನ್ನು ಕೇಳಿ ಅನಿವಾಸಿ ಕನ್ನಡಿಗ ಏನು ಮಾಡಿದ್ದಾನೆ, ಏನು ಮಾಡುತ್ತಿದ್ದಾನೆ ಎಂದು. ಇಷ್ಟೇ ಅಲ್ಲದೆ ಸಾವಿರಾರು ಕಲಾವಿದರು, ಸಾಹಿತಿಗಳು, ಕನ್ನಡಿಗರನ್ನು ಕೇಳಿ.

ನಿಜ ಹೇಳಬೇಕೆಂದರೆ ಅನಿವಾಸಿ ಕನ್ನಡಿಗ ತಾಯ್ನಾಡನ್ನು ಬಿಡುವಾಗ ಏನು ಇಲ್ಲದೆ ಸತ್ತ ದೇಹದಂತೆ. ಹೊರದೇಶದಲ್ಲಿ ಹೋಗಿ ಉದ್ಯೋಗ ಹುಡುಕಿ, ಸಂಪಾದನೆ ಮಾಡಿ ಪುನಃ ಬಾಲ್ಯದಿಂದ ಜೀವನ ಶುರು ಮಾಡಿದಂತೆ. ಯಾರಿಗೂ ಸುಖದ ಸುಪ್ಪತಿಗೆ ಇರುವುದಿಲ್ಲ. ಮಳೆ ಚಳಿಗೆ ಸಿಕ್ಕಿ ಅಪಮಾನಕ್ಕೆ ತುತ್ತಾಗಿ ಬೆಂದು ನೊಂದು ತನ್ನ ಕುಟುಂಬದ ಎಲ್ಲರನ್ನು ಬಿಟ್ಟು ಬಂದು ಯಾತನೆಯಲ್ಲಿರುತ್ತಾನೆ. ಒಂದಂತು ಸತ್ಯ ಅನಿವಾಸಿ ಕನ್ನಡಿಗ ಎಲ್ಲೇ ಹೋದರೂ ಸ್ವಾಭಿಮಾನಿಯಾಗಿ ತನ್ನೆಲ್ಲ ನೋವುಗಳನ್ನು ಕುಟುಂಬಕ್ಕೂ ಹೇಳದೇ ತಾನೇ ಅನುಭವಿಸಿ ಸಂಪಾದಿಸಿದ ಹಣವನ್ನು ಎಷ್ಟೇ ಸಮಸ್ಯೆ ಇದ್ದರೂ, ಸಾಲಸೋಲ ಮಾಡಿಯಾದರೂ ಕುಟುಂಬಕ್ಕೆ ಕಳುಹಿಸುತ್ತಾನೆ. ಯಾರೋ ಹೇಳಿದಂತೆ ಹೊರದೇಶದಲ್ಲಿ ಯಾವುದೇ ಚಿನ್ನದ, ವಜ್ರದ ಮರವಿಲ್ಲ.

ಇಂದು ಅನಿವಾಸಿ ಕನ್ನಡಿಗ ಹಲವಾರು ಸಮಸ್ಯೆಗಳನ್ನು ಅನುಭವಿಸುತ್ತಿದ್ದಾನೆ. ಕೆಲಸ ಕಳೆದುಕೊಂಡು ಪರಿತಪಿಸುತ್ತಿದ್ದಾನೆ. ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಹೆಣಗುತ್ತಿದ್ದಾನೆ. ವಿಪರ್ಯಾಸ ನೋಡಿ, ದೇಶಕ್ಕೆ ವಾಪಸ್ ಬಂದರೆ ಅನಿವಾಸಿ ಕನ್ನಡಿಗ ಬಹುದೊಡ್ಡ ಶ್ರಿಮಂತನೆಂದು ಆತನನ್ನು ಸುಲಿಯಲು ಪ್ರಯತ್ನಿಸುತ್ತಾರೆ.

ನನ್ನ ಒಬ್ಬ ವೈದ್ಯ ಮಿತ್ರರು ಒಮ್ಮೆ ನನ್ನಲ್ಲಿ ಹೇಳಿದ ವಿಚಾರ ನೋಡಿ. "ನಾನು ಇಷ್ಟು ದೊಡ್ಡ ವೈದ್ಯನಾದರೂ ನನ್ನ ತಾಯಿಯ ಸೇವೆಗಾಗಿ ಊರಿಗೆ ಹೋಗಲಿಕ್ಕಾಗಲಿಲ್ಲ. ಆಕೆ ಕೊನೆಯುಸಿರು ಎಳೆಯುವಾಗ ನಾನು ಇಲ್ಲೇ ಇರಬೇಕಾಗಿ ಬಂತು. ಕಾರಣ ವೀಸಾ ಸ್ಟಾಂಪ್ ಗೆ ಬ್ರಿಟಿಷ್ ಹೋಂ ಆಫೀಸ್ಗೆ ಪಾಸ್ಪೋರ್ಟ್ ಕಳುಹಿಸಿದ್ದು, ವೀಕೆಂಡಿನಲ್ಲಿಯಾದ ಕಾರಣ ಅದನ್ನು ಹೇಗಾದರೂ ಮಾಡಿ ಪಡೆಯಲಾಗಲಿಲ್ಲ ಎಂದು ಕಣ್ಣಿನ ಅಂಚಿನಲ್ಲಿದ್ದ ನೀರನ್ನು ಒರೆಸಿಕೊಂಡಿರು." ಬಡತನದಲ್ಲಿದ್ದಾಗ ತಾಯಿ ಕೂಲಿ ಮಾಡಿ ಓದಿಸಿದ್ದು, ಸಣ್ಣವನಿದ್ದಾಗಲೇ ತಂದೆಯನ್ನು ಕಳೆದುಕೊಂಡಿದ್ದು ಎಲ್ಲ ನೆನಪಿಸಿಕೊಂಡರು.

ಇದು ಪ್ರತಿಯೊಬ್ಬ ಅನಿವಾಸಿ ಕನ್ನಡಿಗನಿಗೂ ಇರುವಂತಹ ನೋವು. ಕೆಲವೊಮ್ಮೆ ಹಲವಾರು ಜನ ಹೇಳುವುದಿದೆ. ಕೊನೆಗಳಿಗೆಯಲ್ಲಿ ಅಪ್ಪ ಅಮ್ಮನನ್ನು ನೋಡದ ಅನಿವಾಸಿಗ ಎಂದು. ಆದರೆ ಅಲ್ಲಿ ನಡೆದಿರುವ ವಿಚಾರವೇ ಬೇರೆ. ಕೆಲಸವಿಲ್ಲದೆ, ಊರಿನಲ್ಲಿರುವ ಕುಟುಂಬಕ್ಕೆ ಹಣ ಕಳುಹಿಸಲಾಗದೆ, ಸಾಲದಲ್ಲಿ ಸಿಲುಕಿ, ಅನಾರೋಗ್ಯಕ್ಕೆ ತುತ್ತಾಗಿ.. ಹೀಗೆಲ್ಲ ನೂರೆಂಟು ಬವಣೆಗಳು. ಪ್ರತಿಯೊಬ್ಬ ಅನಿವಾಸಿ ಕನ್ನಡಿಗ ಮೊದಲು ತಾನು ಕನ್ನಡಿಗ ಎಂದು ತಿಳಿದಿರುತ್ತಾನೆ. ಕನ್ನಡಮ್ಮನ ಏಳಿಗೆಗಾಗಿ ತನ್ನ ತಾನು ಮನ ಧನವನ್ನು ವಿನಿಯೋಗಿಸಲು ಇಚ್ಛಿಸುತ್ತಾನೆ. ಇಂದು ಪ್ರಪಂಚದಲ್ಲಿ ನಮ್ಮ ದೇಶದ ಅರ್ಥಿಕ ಪ್ರಗತಿಗಾಗಿ ಅನಿವಾಸಿ ಕನ್ನಡಿಗನನ್ನು ಬಳಸಿಕೊಳ್ಳುವುದು ಪ್ರಸ್ತುತ. ಗುಜರಾತ್, ಕೇರಳ, ಪಂಜಾಬ್ ಮುಂದುವರಿದಿರುವುದು ಅನಿವಾಸಿಗಳಿಂದ. ನಾವು ಕೂಡ ಇದೆ ಮಾದರಿಯನ್ನು ಏಕೆ ಬಳಸಬಾರದು?

ನಮ್ಮ ಸಂಸ್ಕೃತಿಯನ್ನು ಬೆಳೆಸೋಣ. ನಮ್ಮ ಭಾಷೆಗೆ ವಿಶ್ವ ಮಾನ್ಯತೆ ಕೊಡಿಸೋಣ. ನಮ್ಮ ರೈತರು ಬೆಳೆದ ಬೆಳೆಗೆ ನಾವೇ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸಿಗುವ ಹಾಗೆ ಮಾರೋಣ. ನಮ್ಮ ರಾಜ್ಯದ ವ್ಯಾಪಾರ, ವಹಿವಾಟನ್ನು ಅನಿವಾಸಿ ಕನ್ನಡಿಗನೊಂದಿಗೆ ವೃದ್ಧಿಸೋಣ. ಅನಿವಾಸಿ ಕನ್ನಡಿಗನನ್ನು ನೀವು ಬೈದರೂ ಆತ ನಿಮಗಾಗಿ ಕೆಲಸ ಮಾಡುತ್ತಾನೆ. ಆತ ಪರದೇಸಿಯಾದದ್ದು ಕನ್ನಡಕ್ಕಾಗಿ, ಕರ್ನಾಟಕಕ್ಕಾಗಿ, ಕನ್ನಡದ ಮಣ್ಣಿಗಾಗಿ, ಕನ್ನಡದ ಏಳ್ಗೆಗಾಗಿ, ಕನ್ನಡ ಬಾಂಧವರಿಗಾಗಿ, ಕರ್ನಾಟಕದ ಅರ್ಥಿಕತೆಗಾಗಿ. ಕನ್ನಡದ ರೈತನಿಗಾಗಿ. ಆತನನ್ನು ನೋಯಿಸದೆ ಆತನನ್ನು ನಿಮ್ಮವನೆಂದು ತಿಳಿದಲ್ಲಿ ಖಂಡಿತ ಇಬ್ಬರಿಗೂ ಶ್ರೇಯಸ್ಸು.

ಇಂತಹ ಒಂದು ವಾತಾವರಣದಲ್ಲಿ ಕರ್ನಾಟಕ ಸರ್ಕಾರ ಕೊನೆಗೂ ಅನಿವಾಸಿ ಕನ್ನಡಿಗರಿಗಾಗಿ ಒಂದು ವೇದಿಕೆ ನಿರ್ಮಾಣ ಮಾಡಿದ್ದು ಸ್ವಾಗತಾರ್ಹ. ಇದರಲ್ಲಿ ಸರ್ಕಾರಕ್ಕೂ, ಅನಿವಾಸಿ ಕನ್ನಡಿಗನಿಗೂ, ಮತ್ತು ಕನ್ನಡನಾಡಿನ ಅಭಿವೃದ್ದಿ ಖಂಡಿತ. ಆ ಕುರಿತಾಗಿ ಕೆಲಸ ಮಾಡುತ್ತಿರುವ ಗಣೇಶ್ ಕಾರ್ಣಿಕ್ ರವರಿಗೆ ಎಲ್ಲ ಅನಿವಾಸಿ ಕನ್ನಡಿಗನು ಮತ್ತು ಎಲ್ಲ ಕರ್ನಾಟಕದ ಬಾಂಧವರು ಸಹಕರಿಸಿದರೆ ಒಳ್ಳೆಯ ಅಭಿವೃದ್ದಿ ನಿರೀಕ್ಷಿಸಬಹುದು. ಸನ್ಮಾನ್ಯ ಮುಖ್ಯಮಂತ್ರಿಗಳಿಗೂ ಗಣೇಶ್ ಕಾರ್ಣಿಕ್ ರವರಿಗೂ ಮತ್ತು ಎಲ್ಲ ಸದಸ್ಯರಿಗೂ ಅನಿವಾಸಿ ಕನ್ನಡಿಗರ ಪರವಾಗಿ ಅಭಿನಂದನೆಗಳು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X