• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮಾತಾಪಿತೃವಿಯೋಗ

By Staff
|

ನಾವು ಎಷ್ಟೇ ದೊಡ್ಡವರಾಗಿದ್ದರೂ ತಬ್ಬಲಿತನ ಬಂದು ಅಪ್ಪಳಿಸಿದಾಗ, ನಮ್ಮನ್ನು ಈ ಲೋಕಕ್ಕೆ ತಂದುಬಿಟ್ಟ ಎರಡು ಶಕ್ತಿಗಳು ನಮ್ಮಿಂದ ಕಳಚಿಕೊಂಡಂತೆ ಅನ್ನಿಸಿ, ಆಯತಪ್ಪುತ್ತದೆ. ಶೈಶವದಲ್ಲಿ ಲಾಲಿಸಿ, ಬಾಲ್ಯದಲ್ಲಿ ಪಾಲಿಸಿ, ತಾರುಣ್ಯದಲ್ಲಿ ಮಾರ್ಗದರ್ಶನ ಮಾಡಿ ಮಕ್ಕಳನ್ನು ತಮ್ಮ ಕಾಲಮೇಲೆ ತಾವು ನಿಲ್ಲುವಂತೆ ಮಾಡುವ ಕ್ರಿಯೆಯಲ್ಲಿ ಅವರು ಪಡುವ ಪಾಡು ಎಷ್ಟೋ, ಮಾಡುವ ತ್ಯಾಗಗಳು ಎಷ್ಟೋ, ಯಾರು ಲೆಕ್ಕ ಇಡುವವರು?

ಅಂಕಣಕಾರ : ಡಾ|| ಮೈ.ಶ್ರೀ. ನಟರಾಜ, ಪೊಟೊಮೆಕ್, ಮೇರೀಲ್ಯಾಂಡ್

ಅದುವೆಕನ್ನಡದ ಸಂಪಾದಕರಾದ ಶಾಮಸುಂದರ್ ಅವರಿಗೆ ಮಾತೃವಿಯೋಗವಾದ ಸಂದರ್ಭದಲ್ಲಿ ಅವರ ಅನೇಕ ಮಿತ್ರರು ತಮ್ಮ ಸಂತಾಪವನ್ನು ಸೂಚಿಸಿ ವಿ-ಅಂಚೆಗಳನ್ನು ಕಳಿಸಿದರು. ಮನುಷ್ಯನ ಜೀವನದಲ್ಲಿ ತಾಯಿ ಮತ್ತು ತಂದೆಯರನ್ನು ಕಳೆದುಕೊಳ್ಳುವುದು ಒಂದು ಕಷ್ಟಕರವಾದ ಘಟ್ಟಗಳು. ನಾವು ಎಷ್ಟೇ ದೊಡ್ಡವರಾಗಿದ್ದರೂ ತಬ್ಬಲಿತನ ಬಂದು ಅಪ್ಪಳಿಸಿದಾಗ, ನಮ್ಮನ್ನು ಈ ಲೋಕಕ್ಕೆ ತಂದುಬಿಟ್ಟ ಎರಡು ಶಕ್ತಿಗಳು ನಮ್ಮಿಂದ ಕಳಚಿಕೊಂಡಂತೆ ಅನ್ನಿಸಿ, ಆಯತಪ್ಪುತ್ತದೆ. ಶೈಶವದಲ್ಲಿ ಲಾಲಿಸಿ, ಬಾಲ್ಯದಲ್ಲಿ ಪಾಲಿಸಿ, ತಾರುಣ್ಯದಲ್ಲಿ ಮಾರ್ಗದರ್ಶನ ಮಾಡಿ ಮಕ್ಕಳನ್ನು ತಮ್ಮ ಕಾಲಮೇಲೆ ತಾವು ನಿಲ್ಲುವಂತೆ ಮಾಡುವ ಕ್ರಿಯೆಯಲ್ಲಿ ಅವರು ಪಡುವ ಪಾಡು ಎಷ್ಟೋ, ಮಾಡುವ ತ್ಯಾಗಗಳು ಎಷ್ಟೋ, ಯಾರು ಲೆಕ್ಕ ಇಡುವವರು? ಯಾವ ಪ್ರತಿಫಲಾಪೇಕ್ಷೆಯೂ ಇಲ್ಲದೇ ಮಕ್ಕಳನ್ನು ಬೆಳೆಸಿ ದೊಡ್ದವರನ್ನಾಗಿ ಮಾಡಿ ಅವರ ಸುಖದಲ್ಲೇ ತಮ್ಮ ಸುಖವನ್ನು ಕಂಡು ಕೊನೆಗೆ ಸದ್ದಿಲ್ಲದೇ ಕಣ್ಮುಚ್ಚಿಬಿಡುವ ಆ ಎರಡು ಜೀವಗಳನ್ನು ಕಳಿಸಿಕೊಡುವ ಜೀವನದ ಘಟ್ಟವನ್ನು ಎದುರಿಸುವುದು ಸುಲಭದ ಮಾತಲ್ಲ.

ನಾನು ವಿದೇಶಕ್ಕೆ ಬಂದು ನೆಲೆಸಿದಮೇಲೆ ತಂದೆ-ತಾಯಿಗಳನ್ನು ಕಳೆದುಕೊಂಡಾಗಿನ ಪರಿಸ್ಥಿತಿಯನ್ನು ನೆನೆಸಿಕೊಂಡಾಗಲೆಲ್ಲ ಮನಸ್ಸು ಕಲಕಿಬಿಡುತ್ತದೆ. ಅತೀವ ಅಸಹಾಯಕತೆಯ ಅನುಭವವಾಗುತ್ತದೆ. ಅಯ್ಯೋ ಹೀಗೇಕಾಯಿತು ಎನ್ನಿಸುತ್ತದೆ. ಜೀವನದುದ್ದಕ್ಕೂ ಆರೋಗ್ಯವಾಗಿದ್ದ ನಮ್ಮ ತಂದೆಯವರು ತಮ್ಮ ಆಯುಷ್ಯದ ಕೊನೆಯ ವರ್ಷವನ್ನು ಹಾಸಿಗೆಯಲ್ಲಿ ಕಳೆಯಬೇಕಾಯಿತು. ಅವರ ಪರಿಸ್ಥಿತಿಯ ಸಂಪೂರ್ಣ ಚಿತ್ರ ನನಗೆ ಅವರ ಕೊನೆಯ ದಿನದ ವರೆಗೂ ದೊರಕಲೇ ಇಲ್ಲ. ನಾನು ಓದಿನ ಕೊನೆಯ ಘಟ್ಟವನ್ನು ಮುಟ್ಟುತ್ತಿದ್ದಾಗ ಅಮೇರಿಕದಿಂದ ಹಿಂದಿರುಗಿ ಮದುವೆಯಾದಾಗ ಅವರು ಸಂಪೂರ್ಣ ಆರೋಗ್ಯದಿಂದಿದ್ದರು, ಅಷ್ಟೇ ಅಲ್ಲ, ಅತ್ಯಂತ ಉತ್ಸಾಹದಲ್ಲಿದ್ದರು. ಮತ್ತೆ ಮೂರು ವರ್ಷಗಳ ನಂತರ ಭಾರತಕ್ಕೆ ಭೇಟಿಕೊಟ್ಟಾಗಲೂ ಒಳ್ಳೆಯ ಆರೋಗ್ಯದಿಂದಲೇ ಇದ್ದರು. ನಮ್ಮ ಮೊದಲ ಮಗಳು ಹುಟ್ಟಿದ ಮೇಲೆ ಮೊಮ್ಮಗುವನ್ನು ತೋರಿಸಿಕೊಂಡು ಬರೋಣವೆಂದು ಯೋಜಿಸುತ್ತಿರುವಾಗ ಎರಡನೆಯ ಮಗುವಿನ ಆಗಮನದ ನಿರೀಕ್ಷೆಯುಂಟಾಗಿತ್ತು. ಅವರ ಎಂಬತ್ತನೇ ಹುಟ್ಟುಹಬ್ಬವನ್ನು ವಿಜೃಂಭಣೆಯಿಂದ ಆಚರಿಸಬೇಕೆಂದು ಯೋಜಿಸುತ್ತಿರುವಾಗಲೇ ಅವರಿಗೆ ಇದ್ದಕ್ಕಿದ್ದಂತೆ ಪಾರ್ಶ್ವವಾಯು ಉಂಟಾಗಿ ಸೊಂಟದಿಂದ ಕೆಳಭಾಗದ ಸ್ವಾಧೀನ ತಪ್ಪಿತು. ಆದರೆ, ಅವರ ಪ್ರಾಣಕ್ಕೆ ಅಪಾಯವಿಲ್ಲವೆನ್ನುವ ಊಹೆ ಎಲ್ಲರದಾಗಿತ್ತು. ಇದಕ್ಕೆ ಕಾರಣವೂ ಇತ್ತು. ಅವರ ಆ ಪರಿಸ್ಥಿತಿಯಲ್ಲೇ ನನ್ನ ತಮ್ಮನ ಮದುವೆಯೂ ಗೊತ್ತಾಗಿ ಅವರೂ ಅದರಲ್ಲಿ (ಇತರರ ಸಹಾಯದಿಂದ) ಭಾಗವಹಿಸಿದ್ದರು. ನಮ್ಮ ಅಂದಿನ ಪರಿಸ್ಥಿತಿಯಲ್ಲಿ ಮದುವೆಗೆ ಹೋಗುವುದು ಸಾಧ್ಯವಾಗದೇ ಹೋಯಿತು.

ನಮ್ಮ ಎರಡನೇ ಮಗು ಇನ್ನೂ ತಾಯಿಯ ಗರ್ಭದಲ್ಲಿರುವಾಗಲೇ ನಮ್ಮ ತಂದೆಯ ಆರೋಗ್ಯ ತೀರ ಕೆಟ್ಟಿದೆ ಎಂದು ಸುದ್ದಿಬಂತು. ಎಂಟು ತಿಂಗಳ ತುಂಬು ಗರ್ಭಿಣಿ ಮತ್ತು ಇನ್ನೂ ಎರಡು ವರ್ಷವೂ ತುಂಬಿರದ ಮಗು, ಅದೇತಾನೆ ಕೊಂಡಿದ್ದ ಹೊಸಮನೆಯಲ್ಲಿ ಅವರನ್ನು ಪರದೇಶದಲ್ಲಿ ಬಿಟ್ಟು ದಿಢೀರ್ ಎಂದು ಹೊರಡುವುದು ಅಷ್ಟೇನೂ ಸುಲಭದ ಮಾತಾಗಿರಲಿಲ್ಲ. ಆದರೂ, ಸ್ನೇಹಿತರ ಸಹಾಯಪಡೆದು ಹೊರಡುವ ಸಿದ್ಧತೆ ಮಾಡಿಕೊಳ್ಳುತ್ತಿರುವಾಗಲೇ ತಂದೆ ತೀರಿಕೊಂಡ ಸುದ್ದಿ ಬಂತು. ಕೊನೆಗಾಲದಲ್ಲಿ ನೋಡಲಾಗಲಿಲ್ಲವೆಂಬ ಕೊರಗು ಮನಸ್ಸಿನಲ್ಲೇ ಉಳಿದುಬಿಟ್ಟಿತು. ಅಂತ್ಯಸಂಸ್ಕಾರದ ಸಮಯಕ್ಕೆ ಹೋಗಿ ತಲುಪುವುದು ಅಸಾಧ್ಯವಾಗಿತ್ತು. ನಮಗೆ ಮನೆಯನ್ನು ಮಾರಿದ್ದ ಚೀನೀ ದಂಪತಿಗಳು ಅತ್ಯಂತ ಸಜ್ಜನರಾಗಿದ್ದರು. ಅವರು ಕಟ್ಟುತ್ತಿದ್ದ ಮನೆ ಇನ್ನೂ ಮುಗಿದಿರಲಿಲ್ಲ, ಅವರ ಸಾಮಾನು ಸರಾಂಜಾಮುಗಳನ್ನು ಸಾಗಿಸಲು ಅವರಿಗೆ ಕಷ್ಟವಾಗಿತ್ತು. ಆಗ ನಾನು ಅವರನ್ನು ಕೇಳಿಕೊಂಡೆ, ನನ್ನ ಹೆಂಡತಿಯನ್ನು ಈ ಸ್ಥಿತಿಯಲ್ಲಿ ಒಬ್ಬಳನ್ನೇ ಬಿಟ್ಟುಹೋಗುವುದು ಸರಿಯೆನಿಸುತ್ತಿಲ್ಲ, ನೀವು ಇಲ್ಲೇ ಇದ್ದು ನಾನು ಹಿಂದಿರುಗುವವರೆಗು ನನ್ನ ಹೆಂಡತಿಗೆ ಜೊತೆಯಾಗಿರಿ. ಏನಾದರೋ ತುರ್ತು ಪರಿಸ್ಥಿತಿ ಉಂಟಾದರೆ ಆಸ್ಪತ್ರೆಗೆ ಕೊಂಡೊಯ್ಯಲು ಜೊತೆಗೊಬ್ಬರು ಇದ್ದರೆ ನಾನೂ ಧೈರ್ಯವಾಗಿ ಹೋಗಿ ನನ್ನ ಅಣ್ಣತಮ್ಮಂದಿರ ಜೊತೆ ಸೇರಿಕೊಂಡು ಕರ್ಮಗಳನ್ನು ಮಾಡಬಹುದು ಎಂದೆ. ಅವರು ತಕ್ಷಣ ಒಪ್ಪಿ ತಾಯಿಯಂತೆ ನನ್ನ ಹೆಂಡತಿಯೊಂದಿಗೆ ಇದ್ದುಬಿಟ್ಟದ್ದು ನಮ್ಮ ಸುಯೋಗ. ಆ ಪುಣ್ಯಾತ್ಕಿತ್ತಿಯ ಔದಾರ್ಯದಿಂದ ತಂದೆಯವರ ಕರ್ಮಗಳಲ್ಲಿ ಭಾಗಿಯಾಗುವುದು ಸಾಧ್ಯವಾಯಿತು, ಅಷ್ಟು ಸಮಾಧಾನ ಮಾತ್ರ ನನ್ನ ಪಾಲಿನದಾಯಿತು.

ತಂದೆಯವರ ಕಥೆ ಹೀಗಾದರೆ, ತಾಯಿಯವರದ್ದೇ ಮತ್ತೊಂದು ರೀತಿ ಆಯಿತು. ಅವರು ಕೊನೆಗಾಲದಲ್ಲಿ ದೈಹಿಕವಾಗಿ ಆರೋಗ್ಯವಾಗೇ ಇದ್ದರೂ ಮಿದುಳು ಶಿಥಿಲವಾಗಿ ಕೊನೆಗಾಲದಲ್ಲಿ ಅವರು ಯಾರನ್ನೂ ಗುರುತಿಸದಷ್ಟು ಮರೆವಿನ ಖಾಯಿಲೆಯಲ್ಲಿದ್ದರು. ಜೀವಂತವಾಗಿರುವಾಗ ನೋಡಿಕೊಂಡುಬರಲು ನನಗೆ ಒಂದು ಅವಕಾಶ ದೊರೆಯಿತು, ಆದರೆ ನಾನು ಹೋದಾಗ, ಅವರಿಗೆ ಮಾತು ಹೋಗಿತ್ತು. ನನ್ನನ್ನು ನೋಡಿ ಗುರುತು ಹಿಡಿದರು ಎಂದು ಎಲ್ಲರೂ ತಿಳಿದರು. ಆದರೆ, ಅದು ಎಷ್ಟರ ಮಟ್ಟಿಗೆ ನಿಜವೋ ಹೇಳುವುದು ಕಷ್ಟ. ಅವರಾಡುವ ಮಾತುಗಳು ಯಾರಿಗೂ ಅರ್ಥವಾಗದಷ್ಟು ಅಸ್ಪಷ್ಟವಾಗಿದ್ದವು. ಅವರು ಏನು ಹೇಳಿದರೂ ಒಂದೇ ರೀತಿಯ ಯಾರಿಗೂ ಅರ್ಥವಾಗದ 'ಬಣಬಣಿಕೆಗಳ'ಅಂತೆ ಕೇಳುತ್ತಿದ್ದವು. ಜೀವಂತ ವ್ಯಕ್ತಿಯನ್ನು ನೋಡಿದೆನೆಂಬ ಒಂದು ಸಮಾಧಾನವನ್ನು ಬಿಟ್ಟರೆ, ಅಷ್ಟೊಂದು ಬುದ್ಧಿವಂತರೂ ವಿದ್ಯಾವಂತರೂ ಆಗಿದ್ದ, ತ್ಯಾಗರಾಜರ ಮತ್ತು ದಾಸರ ನೂರಾರು ಕೃತಿಗಳನ್ನು ದಿನವಿಡೀ ಹೇಳಿಕೊಳ್ಳುತ್ತಿದ್ದ ಆ ನಮ್ಮ ತಾಯಿ ಎಲ್ಲಿ, ಈ ಅಸ್ಪಷ್ಟ ಮಾತುಗಳ, ಯಾರನ್ನೂ ಗುರುತಿಸದ ವ್ಯಕ್ತಿ ಎಲ್ಲಿ? ನಮ್ಮ ತಂದೆಯನ್ನು ಕೊನೆಗಾಲದಲ್ಲಿ ಪರಾಧೀನರಾದಾಗ ನಾನು ನೋಡದೇ ಇದ್ದದ್ದರಿಂದ ನನಗೆ ಅವರು ಯಾವಾಗಲೂ ಒಡಾಡಿಕೊಂಡಿರುವ ಚಿತ್ರಗಳೇ ನೆನಪಾಗುತ್ತವೆ. ಆದರೆ, ನಮ್ಮ ತಾಯಿಯ ಈ ಅಸಹಾಯಕ ಚಿತ್ರವನ್ನು ಇಂದಿಗೂ ಮರೆಯುವುದು ಸಾಧ್ಯವಾಗಿಲ್ಲ.

ನಾನು ಮೇಲೆ ಹೇಳಿರುವ ವಿಷಯಗಳಲ್ಲಿ ಅಂಥಾ ವಿಶೇಷಗಳೇನೂ ಇಲ್ಲ. ಎಲ್ಲರಿಗೂ ಅವರವರ ತಂದೆತಾಯಿಗಳು ಹೆಚ್ಚು, ಅವರ ಕಷ್ಟ ನಮಗೆ ದುಃಖವನ್ನು ತರುತ್ತದೆ. ಮುಕ್ಕಾಲುಮೂರುಪಾಲು ಜನರು ಕೊನೆಗಾಲದಲ್ಲಿ ಖಾಯಿಲೆ-ಕಸಾಲೆ ಅನುಭವಿಸುತ್ತಾರೆ. ಆದರೆ, ನನ್ನ ತಾಯಿ ಸತ್ತ ವಿಷಯ ನನಗೆ ಸಕಾಲದಲ್ಲಿ ತಿಳಿಯದೇ ಹೋದದ್ದು ಮಾತ್ರ ಲಕ್ಷದಲ್ಲೋ ಕೋಟಿಯಲ್ಲೋ ಒಬ್ಬರಿಗೆ ಆಗಬಹುದಾದದ್ದು! ನಡೆದದ್ದು ಹೀಗೆ. ಆಲ್ಜ್‌ಹೈಮರ್ಸ್ ಖಾಯಿಲೆಯಿಂದ ನರಳುತ್ತಿದ್ದ ತಾಯಿಯನ್ನು ಜೀವಂತವಾಗಿರುವಾಗ ನಾನು ನೋಡಿಕೊಂಡು ಬಂದಿದ್ದೆ ಎಂದು ಹೇಳಿದೆನಲ್ಲ, ಅದಾದ ಒಂದು ವರ್ಷದೊಳಗೇ ಅಮ್ಮ ತೀರಿಕೋಂಡರು. ನಮ್ಮ ತಂದೆ ಹೋದಾಗ, ಅವರು ಅಷ್ಟು ಬೇಗ ಇಹಲೋಕವನ್ನು ಬಿಡುವರೆಂಬ ನಿರೀಕ್ಷೆ ನನಗಂತೂ ಇರಲಿಲ್ಲ. ಅದರಿಂದಲೇ ನಾನು ಅವರನ್ನು ಕೊನೆಗಾಲದಲ್ಲಿ ನೋಡುವುದು ಸಾಧ್ಯವಾಗದೇಹೋಯಿತು. ಆದರೆ, ತಾಯಿಯ ವಿಷಯ ಗೊತ್ತಿತ್ತು. ಹೀಗಾಗಿ, ಕೆಲಸದಲ್ಲಿ ನನ್ನ ಮೇಲಿನವರಿಗೆ ಮೊದಲೇ ತಿಳಿಸಿದ್ದೆ, ತಕ್ಷಣ ಹೋಗಬೇಕಾಗಿ ಬರಬಹುದು, ರಜೆ ಕೊಡಲೇಬೇಕು, ಇತ್ಯಾದಿ. ಅಷ್ಟೇ ಅಲ್ಲ, ಏರ್ ಇಂಡಿಯಾದಲ್ಲಿ ನಮ್ಮ ಪರಿಚಯದವರೊಬ್ಬರಿದ್ದರು, ಅವರಿಗೂ ಹೇಳಿದ್ದೆ, ನನಗೆ ತಕ್ಷಣದಲ್ಲಿ ರಿಸರ್ವೇಶನ್ ಬೇಕಾಗಬಹುದು ಎಂದು. ಅದಕ್ಕವರು 'ಆಗಲಿ' ಬೇಕಾದಾಗ ಫೋನ್ ಮಾಡಿ ಎಂದಿದ್ದರು. ನಿರೀಕ್ಷಿಸಿದ್ದಂತೆ ಸುದ್ದಿಯೂ ಬಂತು. ಆಗಿನ್ನೂ ಹಾಸನದಂಥಾ ಊರುಗಳಲ್ಲಿ ಎಲ್ಲರ ಮನೆಯಲ್ಲೂ ಫೋನ್ ಇರಲಿಲ್ಲ. ಆದರೂ ಇಂಥಾ ಸುದ್ದಿಯನ್ನು ಪೋನ್ ಮಾಡದೇ ಟೆಲಿಗ್ರಾಂ ಕಳಿಸಲು ಏಕೆ ತೀರ್ಮಾನಿಸಿದರೋ ಕಾಣೆ. ಅದು ತುಂಬಾ ತೊಂದರೆಗೆ ಕಾರಣವಾಯಿತು. ಮುಂಗಡವಾಗಿ ಬುಕ್ ಮಾಡಿ ಲೈನ್ ಸಿಕ್ಕುವ ಹೊತ್ತಿಗೆ ತಂತಿ ಸಮಾಚಾರವೇ ಲೇಸು ಎನ್ನುವ ಮನೋಭಾವವಿದ್ದ ದಿನಗಳವು.

ನನ್ನ ದುರದೃಷ್ಟವನ್ನು ಕೇಳಿ. ವೆಸ್ಟ್ರನ್ ಯೂನಿಯನ್‌ನವರು ತಂತಿ ಸಮಾಚಾರವನ್ನು ಟೆಲಿಫೋನ್ ಮಾಡಿ ತಿಳಿಸುವ ಕ್ರಮವೊಂದಿತ್ತು. ಆದರೆ, ಸಾವಿನ ಸುದ್ದಿಯನ್ನು ಫೋನಿನಲ್ಲಿ ತಿಳಿಸುವುದು ತಪ್ಪು, ಏಕೆಂದರೆ ಸುದ್ದಿ ಪಡೆಯುವವರ ಎದೆ ಗಟ್ಟಿಯಿಲ್ಲದಿದ್ದರೆ? ಯಾವನೋ ಹುಡುಗ ಆಗತಾನೇ ಕೆಲಸಕ್ಕೆ ಸೇರಿದ್ದನಂತೆ, ಎಲ್ಲಾ ಸುದ್ದಿಗಳನ್ನೂ ಫೋನಿನಲ್ಲಿ ಓದಿ ವರದಿಮಾಡುತ್ತಿದ್ದ ಹಾಗೇ ಈ ಸುದ್ದಿಯನ್ನೂ ಮಾಡಿದ. ಆದರೆ, ಆ ಸುದ್ದಿ ಹೋದದ್ದು ನಮ್ಮ ನಂಬರಿಗಲ್ಲ! ನಾವು ಅದೇತಾನೆ ಮನೆಯನ್ನು ಬದಲಿಸಿದ್ದೆವು, ನಮ್ಮ ದೂರವಾಣಿ ಸಂಖ್ಯೆ ಬದಲಾಗಿತ್ತು. "ಸಂಖ್ಯೆ ಬದಲಾಗಿದೆ, ಹೊಸ ಸಂಖ್ಯೆ ಹೀಗಿದೆ" ಎಂದು ಧ್ವನಿಮುದ್ರಣ ಬರುತ್ತದಲ್ಲಾ, ಅದು ಬರುವುದು ನಿಂತಾಗಿತ್ತು. ಕಾರಣ ಅಂಥಾ ಸೇವೆ ಮೂರೋ-ನಾಕೋ ತಿಂಗಳಿಗೆ ಸೀಮಿತವಾಗಿರುತ್ತದೆ. ಹೀಗಾಗಿ, ಆ ಹುಡುಗ ಟೆಲಿಫೋನ್ ಡೈರೆಕ್ಟರಿಯಲ್ಲಿ ನನ್ನ ಹೆಸರನ್ನು ನೋಡಿಕೊಂಡು ಆ ನಂಬರಿಗೆ ಫೋನ್ ಮಾಡಿದ. ಡೈರೆಕ್ಟರಿಯಲ್ಲಿ ಇನ್ನೂ ನನ್ನ ಹಳೆಯ ನಂಬರ್ರೇ ಇತ್ತು. ಅವನು ಕರೆದಾಗ ಯಾರೂ ಜವಾಬು ಕೊಡಲಿಲ್ಲ. ಕೊಟ್ಟಿದ್ದರೂ ಅವರಿಗೆ ಸುದ್ದಿಯ ತಲೆಬುಡ ಗೊತ್ತಾಗುತ್ತಿರಲಿಲ್ಲ. ಈ ಮೂರ್ಖ ಸ್ವಲ್ಪ ಬುದ್ಧಿ ಉಪಯೋಗಿಸಿದ್ದರೆ ವಿಳಾಸವನ್ನು ತಾಳೆ ಮಾಡಬಹುದಿತ್ತು. ತನ್ನ ಮೇಲಿನವರಲ್ಲಿ ತಿಳಿಸಿದ್ದರೆ, ಇದು ಸಾವಿನ ಸುದ್ದಿ, ಸರಿಯಾದ ವಿಳಾಸಕ್ಕೆ ಆದಷ್ಟು ಜಾಗ್ರತೆ ತಿಳಿಸಬೇಕಾದ್ದು ಎಂಬ ಅರಿವು ಉಂಟಾಗುತ್ತಿತ್ತೋ ಏನೋ. ಅಂತೂ ಟೆಲೆಗ್ರಾಂ ಇಲ್ಲಿಗೆ ಬಂದು 24 ಗಂಟೆ ಕಳೆದಮೇಲೂ ವೆಸ್ಟ್ರನ್ ಯೂನಿಯನ್‌ನವರು ತಪ್ಪು ದೂರವಾಣಿಗೆ ಫೋನ್ ಮಾಡುತ್ತಲೇ ಇದ್ದರು. ಪ್ರಾಯಶಃ, ಆ ನನ್ನ ನಂಬರ್ ಯಾರಿಗೆ ಕೊಡಲ್ಪಟ್ಟಿತ್ತೋ, ಆತ/ಆಕೆ ಊರಿನಲ್ಲಿದ್ದರೋ ಇಲ್ಲವೋ, ಅಂತು ಆ ಹುಡುಗ ತಪ್ಪು ವಿಳಾಸಕ್ಕೆ ಕರೆ ಮಾಡುತ್ತಿದ್ದಾನೆ ಎಂಬ ಅರಿವು ಅವನಿಗಾಗಲೇ ಇಲ್ಲವಂತೆ. ಫೋನಿನಲ್ಲಿ ತಲುಪಿಸಲಾಗದ ಸುದ್ದಿಯನ್ನು ಸಾಧಾರಣ ಟಪ್ಪಾಲಿನಲ್ಲಿ ಕಳಿಸುತ್ತಾರಂತೆ, ನಂಬುವಿರಾ? ನಮ್ಮೂರಿನಲ್ಲಾದರೆ, ಅಂಚೆ-ತಂತಿ ಇಲಾಖೆಯ ನೌಕರರು, ಅಪರಾತ್ರಿಯಲ್ಲಿ, ಸುರಿಯುವ ಮಳೆಯನ್ನೂ ಲೆಕ್ಕಿಸದೇ ಕೆಂಪುಬಣ್ಣದ ಸೈಕಲ್ಲಿನಲ್ಲಿ ಯಾವ ಹಳ್ಳಿಯ ಮೂಲೆಯಾದರೂ ಸರಿ, ಅದೂ ಸಾವಿನ ಸುದ್ದಿಯಾದರಂತೂ, ಸ್ವಂತ ಕೆಲಸವನ್ನು ಬದಿಗಿಟ್ಟು ಒಂದೇ ನೆಗೆತದಲ್ಲಿ ಗುರಿಮುಟ್ಟಿ, ತಂತಿ ಸಮಾಚಾರ ಮುಟ್ಟಿಸಿ, ನಡುಗುವ ಕೈಯಲ್ಲಿ ಸಹಿಹಾಕಿಸಿಕೊಳ್ಳುತ್ತಾರೆ. ಒಳ್ಳೆಯ ಮತ್ತು ಕೆಟ್ಟ ಸುದ್ದಿಗಳು ಈ ರೀತಿಯಾಗಿ ವಿತರಣೆ ಆಗುವುದನ್ನು ನಾನು ಅನೇಕಬಾರಿ ಸ್ವತಃ ಅನುಭವಿಸಿದ್ದೇನೆ.

ಅಂತೂ, ಒಂದು ದಿನ ನಾನು ಕೆಲಸದಿಂದ ಮನೆಗೆ ಬಂದಾಗ ಅಂಚೆಪೆಟ್ಟಿಗೆಯಲ್ಲಿ ಹಳದಿ ಬಣ್ಣದ ವೆಸ್ಟ್ರನ್ ಯೂನಿಯನ್ ಲಕೋಟೆಯಲ್ಲಿ ತಂತಿಯ ಒಕ್ಕಣೆ ಇತ್ತು. ಓದಿದ ಕೂಡಲೇ ಅಳುಬಂತು. ಮನೆಯಲ್ಲಿ ಯಾರೂ ಇರಲಿಲ್ಲ, ಮತ್ತೊಮ್ಮೆ ಓದಿ ಸುದ್ದಿ ನಿಜವೇ ಎಂದು ಖಾತ್ರಿ ಮಾಡಿಕೊಂಡು ನಮ್ಮ ಬಾಸನ್ನು ಕರೆದು ಊರಿಗೆ ಹೋಗುವ ವಿಷಯ ತಿಳಿಸಿದೆ, ಏರ್ ಇಂಡಿಯಾದವರಿಗೆ ಕರೆದು ಸೀಟಿನಬಗ್ಗೆ ಮಾತಾಡುತ್ತಿರುವಾಗ ಮತ್ತೊಮ್ಮೆ ತಂತಿಯನ್ನು ಓದಿಕೊಂಡರೆ, ದಿಗ್‌ಭ್ರಮೆಯಾಯ್ತು. ಅಮ್ಮ ಸತ್ತು ಹದಿಮೂರು ದಿನಗಳಿಗಿಂತ ಹೆಚ್ಚಾಗಿದೆ. ತಕ್ಷಣ ಹಾಸನದಲ್ಲಿ ನಮ್ಮ ಮನೆಯ ಹತ್ತಿರದಲ್ಲಿರುವ ಒಬ್ಬರು ಗೆಳೆಯರ ಮನೆಯಲ್ಲಿ ಫೋನಿತ್ತು, ಅವರನ್ನು ಸಂಪರ್ಕಿಸಲು ಯತ್ನಿಸಿದೆ. ಲೈನ್ ಸಿಕ್ಕಿದ ಮೇಲೆ, ನನ್ನ ತಮ್ಮ ಮಾತಾಡಿ "ಮನೆಗೆ ಬಂದಿದ್ದವರೆಲ್ಲ ವೈಕುಂಠ ಮುಗಿಸಿ ಹಿಂದಿರುಗಿಯೂ ಆಯಿತು ಎಂದ. ಅವರೆಲ್ಲರ ದೃಷ್ಟಿಯಲ್ಲಿ ಸುದ್ದಿ ತಿಳಿದರೂ ಕರ್ಮಗಳಲ್ಲಿ ಭಾಗಿಯಾಗಲು ನಾನು ಬರಲಿಲ್ಲವೆಂಬ ಭಾವನೆ ಉಂಟಾಗಿದ್ದಿರಬಹುದು. ಹಾಗೆನ್ನಿಸುವುದು ಸಹಜವೇ. ಇಂಥಾ ಮುಂದುವರೆದ ದೇಶದಲ್ಲಿ ಸಾವಿನ ಸುದ್ದಿಯನ್ನು ಮುಟ್ಟಿಸದ ಮೂರ್ಖರು ಇರುತ್ತಾರೆ ಎಂಬುದನ್ನು ಹಿಂದುಳಿದ ದೇಶದ ಜನರೂ ಊಹಿಸಿಕೊಳ್ಳಲೂ ಆರರು.

ಮಾರನೆಯದಿನ ವೆಸ್ಟ್ರನ್ ಯೂನಿಯನ್ನಿಗೂ ನನಗೂ ಒಂದು ಸಣ್ಣ ಸಮರವೇ ನಡೆಯಿತು. ಸೂಪರ್‌ವೈಸರ್ ಆಗತಾನೇ ಕೆಲಸಕ್ಕೆ ಸೇರಿದ್ದವನಮೇಲೆ ಎಲ್ಲಾ ತಪ್ಪನ್ನೂ ಹಾಕಿ ಅವನನ್ನು ಫೈರ್ ಮಾಡುವುದಾಗಿ ಆಶ್ವಾಸನೆಯಿತ್ತ. ಅದರಿಂದ ನನಗೆ ಬಂದ ಲಾಭವೇನು? ನನ್ನ ಹೆಂಡತಿ ಮತ್ತು ಮಕ್ಕಳೊಂದಿಗೆ ನಮ್ಮ ಅಮ್ಮನ ಮೊದಲ ವಾರ್ಷಿಕದಲ್ಲಿ ಹೋಗಿ ಭಾಗವಹಿಸುವ ತನಕ ನನಗೆ ಮನಶ್ಶಾಂತಿಯಿರಲಿಲ್ಲ. ಈಗಲೂ ಆ ವಿಷಯವನ್ನು ನೆನೆಸಿಕೊಂಡಾಗ ದುಃಖವಾಗುತ್ತದೆ. ತಂದೆ ತಾಯಿ ಇಬ್ಬರ ಅಂತ್ಯಕಾಲದಲ್ಲೂ ನಾನು ಜೊತೆಗಿರಬಾರದೆಂಬ ಕರ್ಮ ನನ್ನದಾಗಿತ್ತು. ನಡೆದ ಮಿಕ್ಕೆಲ್ಲ ಘಟನೆಗಳೂ ನಿಮಿತ್ತಮಾತ್ರ. ನಮ್ಮ ಶಾಮಸುಂದರ್ ಅವರಿಗಾದ ಮಾತೃವಿಯೋಗದ ಸುದ್ದಿ ನನ್ನ ನೆನಪುಗಳು ಮರುಕಳಿಸುವಂತೆ ಮಾಡಿತು. ಇವೆಲ್ಲದರ ಒಂದೇ ಒಂದು ಒಳ್ಳೆಯ ಫಲಿತಾಂಶವೆಂದರೆ, ನನಗೆ ನಮ್ಮ ಮಾತಾಪಿತೃಗಳ ಸಜೀವ ಶರೀರವಲ್ಲದೇ ಮೃತ್ಯು ಅವರನ್ನೆಳೆದುಕೊಂಡ ಚಿತ್ರ ನನಗೆ ಗೋಚರವಾಗುವುದೇ ಇಲ್ಲ. ಅವರು ನನ್ನೊಂದಿಗೇ ಇದ್ದಾರೇನೋ ಅನ್ನುವ ಒಂದು ಕಲ್ಪನೆ ಇದೆ. ಅದು ನಿಜವಲ್ಲವೆಂದು ಗೊತ್ತಿದ್ದರೂ ಒಂದುರೀತಿಯ ಸುಖಕೊಡುತ್ತದೆ!

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more