ಮುಖ್ಯಮಂತ್ರಿ ಆಗುವುದಕ್ಕೂ ಮೊದಲೇ ಹೂವು ಬೆಳೆಗಾರರ ಕೆಂಗಣ್ಣಿಗೆ ಗುರಿಯಾದ ಡಿಕೆ ಶಿವಕುಮಾರ್
ಕನಕಪುರದ ಬಂಡೆ, ಒಕ್ಕಲಿಗ ನಾಯಕ ಹಾಗೂ ಕರ್ನಾಟಕದ ಪ್ರಭಾವಿ ರಾಜಕಾರಣಿ ಎಂದೇ ಖ್ಯಾತಿ ಗಳಿಸಿರುವ ಡಿಕೆ ಶಿವಕುಮಾರ್ ಅವರು ಜೂನ್ 3ರ ಬುಧವಾರ ಸಂಜೆ ಕರ್ನಾಟಕದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಆದರೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವುದಕ್ಕಿಂತಲೂ ಮುಂಚೆಯೇ ಅವರು ಒಂದು ವರ್ಗದ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಇದೇ ತಪ್ಪನ್ನು ಕೆಲವು ತಿಂಗಳುಗಳ ಮುಂಚೆ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರು ಸಹ ಮಾಡಿದ್ದರು. ಇದೀಗ ಸಂಭ್ರಮದ ಸಮಯದಲ್ಲಿ ಹೂವಿನ ವಿಚಾರಕ್ಕೆ ಡಿ.ಕೆ ಶಿವಕುಮಾರ್ ಅವರು ಕೊಟ್ಟಿರುವ ಹೇಳಿಕೆಯು ಪರ - ವಿರೋಧ ಜನಾಭಿಪ್ರಾಯಕ್ಕೆ ಕಾರಣವಾಗಿದೆ. ಭಾವಿ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಹೂವಿನ ವಿಚಾರಕ್ಕೆ ಹೇಳಿದ್ದೇನು, ವಿಡಿಯೋ ವೈರಲ್ ಆಗುತ್ತಿರುವುದು ಯಾಕೆ ಎನ್ನುವ ಸಂಪೂರ್ಣ ವಿವರ ಇಲ್ಲಿದೆ.
ಕರ್ನಾಟಕದ ಭಾವಿ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಕಾಂಗ್ರೆಸ್ ಕಾರ್ಯಕರ್ತರಲ್ಲಿ ವಿಶೇಷವಾದ ಮನವಿಯನ್ನು ಮಾಡಿದ್ದಾರೆ. ಆದರೆ ಇದು ಹೂವು ವ್ಯಾಪಾರಿಗಳ ಕೆಂಗಣ್ಣಿಗೆ ಕಾರಣವಾಗಿದೆ. ನಿಮ್ಮ ಉತ್ಸಾಹ ಹಾಗೂ ಸಂತೋಷ ನನಗೆ ಅರ್ಥವಾಗುತ್ತದೆ. ಕೆಲವೊಂದು ಸಮಸ್ಯೆಗಳು ಇರುವ ಕಾರಣಕ್ಕೆ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮವನ್ನು ಸಿಂಪಲ್ ಆಗಿ ಮಾಡಿಕೊಳ್ಳಬೇಕಾಗಿದೆ. ಕೆಲವೊಂದು ನಿರ್ದಿಷ್ಟ ಸಮಸ್ಯೆಗಳು ಇರುವ ಕಾರಣಕ್ಕೆ ನಾನು ಹೆಚ್ಚು ಜನರು ಬರದಂತೆ ಮನವಿ ಮಾಡಿದ್ದೇನೆ. ಆದರೆ ಬರುವವರನ್ನು ನಾನು ಬಹಳ ಮಿತಿಗೊಳಿಸಬೇಕಾಗುತ್ತದೆ. ಲೋಕಭವನದ ಹೊರಗೆ ಬಂದು ನೋಡುವವರಿಗೆ ಯಾವುದೇ ನಿರ್ಬಂಧವಿಲ್ಲ. ಯಾರೂ ಹೂವಿನ ಹಾರವನ್ನು ಮಾತ್ರ ನನಗೆ ಹಾಕಬೇಡಿ ಎಂದು ಡಿ.ಕೆ ಶಿವಕುಮಾರ್ ಅವರು ಮನವಿ ಮಾಡಿದ್ದಾರೆ.

ಹೂವಿನ ಹಾರ ಬೇಡ ಎಂದಿದ್ಯಾಕೆ ಡಿಕೆ ಶಿವಕುಮಾರ್
ಇನ್ನು ಡಿ.ಕೆ ಶಿವಕುಮಾರ್ ಅವರು ಹೂವಿನ ಹಾರ ಬೇಡ ಎಂದು ಹೇಳಿರುವುದರ ಹಿಂದೆ ಅವರ ಆರೋಗ್ಯ ಕಾಳಜಿ ಇದೆ ಎಂದು ಹೇಳಿಕೊಂಡಿದ್ದಾರೆ. ನನಗೆ ಅಲರ್ಜಿ ಸಮಸ್ಯೆ ಇದೆ. ಬೇರೆ ಹೂವಿನೊಂದಿಗೆ ಸುಗಂಧರಾಜ ಟಚ್ ಆಗಿರುತ್ತದೆ. ಇದರಿಂದ ಮೈ ಕಡಿತ ಶುರುವಾಗುತ್ತದೆ. ಹೀಗಾಗಿ, ದಯವಿಟ್ಟು ಹೂವಿನ ಹಾರವನ್ನು ತರಬೇಡಿ ನಾನು ಹಾಕಿಸಿಕೊಳ್ಳುವುದಿಲ್ಲ. ಹೂವಿನ ಹಾರವನ್ನು ನಾನು ನಿಷೇಧ ಮಾಡಿದ್ದೇನೆ ಎಂದು ಡಿ.ಕೆ ಶಿವಕುಮಾರ್ ಅವರು ಹೇಳಿದ್ದಾರೆ. ಕರ್ನಾಟಕದ ಹಲವರು ಖುಷಿಯಾಗಿದ್ದಾರೆ ಎಂದು ಅವರು ಹೇಳಿದ್ದಾರೆ.
ನೆಟ್ಟಿಗರಿಂದ ತರಾಟೆ
ಇನ್ನು ಡಿಕೆ ಶಿವಕುಮಾರ್ ಅವರ ಹೇಳಿಕೆಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಡಿಕೆ ಶಿವಕುಮಾರ್ ಅವರು ಅಲರ್ಜಿ ಇರುವ ಕಾರಣಕ್ಕೆ ಹೂವು ಬೇಡ ಅಂತ ಹೇಳಿದ್ದಾರೆ. ಇದರಲ್ಲಿ ತಪ್ಪೇನು ಇಲ್ಲ. ಇದರಲ್ಲಿ ವಿರೋಧವೇನಿದೆ ಎಂದಿದ್ದಾರೆ. ಇನ್ನೂ ಕೆಲವರು ಇದರಿಂದ ರೈತರಿಗೆ ಹಾಗೂ ಹೂವು ಬೆಳಗಾರರಿಗೆ ಸಂಕಷ್ಟವಾಗುತ್ತದೆ. ಹೂವು ಬೆಳೆಯುವವರ ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳಿದ್ದಾರೆ.
ಸಂಸದ ತೇಜಸ್ವಿ ಸೂರ್ಯ ಹೇಳಿದ್ದೇನು
ಬೆಂಗಳೂರು ದಕ್ಷಿಣಲೋಕಸಭಾ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಅವರು ತಮ್ಮ ವಿವಾಹದ ಆರತಕ್ಷತೆಯ ಸಂದರ್ಭದಲ್ಲಿ ಹೂಗುಚ್ಛ ನೀಡುವುದು ರಾಷ್ಟ್ರೀಯ ನಷ್ಟ ಎಂದು ಹೇಳಿಕೆ ನೀಡಿದ್ದರು. ಈ ಹೇಳಿಕೆಗೆ ಹೂವು ಬೆಳೆಗಾರರು ಮತ್ತು ಮಾರಾಟಗಾರರ ಸಂಘದವರಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ತೇಜಸ್ವಿ ಸೂರ್ಯ ಅವರು ತಮ್ಮ ಹೇಳಿಕೆಯನ್ನು ವಾಪಸ್ ಪಡೆಯಬೇಕು ಎಂದು ಆಗ್ರಹಿಸಲಾಗಿತ್ತು.












Click it and Unblock the Notifications