ಶಿಕಾಗೋ ತಲುಪಿದ್ರಾ ಯಡಿಯೂರಪ್ಪನೋರೇ?
'ಆಪರೇಷನ್ ಕಮಲ'ದ ಹೆಸರಿನಲ್ಲಿ ಅನ್ಯ ಪಕ್ಷಗಳ ಮುಖಂಡರನ್ನು ಬೆನ್ನುಬಿದ್ದು ಇನ್ನಿಲ್ಲದಂತೆ ಕಾಡಿದ ಯಡಿಯೂರಪ್ಪ ಅವರಿಗೆ ದಟ್ಸ್ ಕನ್ನಡದ ಮಾನ್ಯ ಓದುಗರೊಬ್ಬರು ಮೌಲ್ಯಯುತ ಸಲಹೆಯನ್ನು ನೀಡಿದ್ದಾರೆ. ಇಂಥ ಉಪಯುಕ್ತ ಸಲಹೆಗಳನ್ನು ಪಾಲಿಸಿದಲ್ಲಿ ಸರ್ಕಾರ ಸುಭದ್ರವಾಗುತ್ತೆ, ಭಾಜಪ ಚಿರಾಯುವಾಗತ್ತೆ. ಸಿದ್ಧರಾಮಯ್ಯ ಇಲ್ಲವೇ ರೇವಣ್ಣ ಅವರನ್ನು ಉಪಮುಖ್ಯಮಂತ್ರಿ ಮಾಡಿದರೆ ಕರ್ನಾಟಕದಲ್ಲಿ ಯಾವ ರಾಜಕಾರಣಿ ಸರ್ಕಾರ ಕೆಡವಲು ಮುಂದೆ ಬಂದಾರು ಹೇಳಿ? ಇನ್ನು ಕೆಲವೇ ಗಂಟೆಗಳಲ್ಲಿ ಶಿಕಾಗೋದಲ್ಲಿ ಇಳಿಯಲಿರುವ ಯಡಿಯೂರಪ್ಪ ಅವರು ವಿಶ್ರಾಂತಿ ನಂತರ ಸಿಯರ್ ಟವರ್ಸ್ ಮೇಲೆ ಕುಳಿತು ಸಾವಧಾನದಿಂದ ಓದುವುದಕ್ಕೆ ಯೋಗ್ಯವಾಗ ಸಾಮಗ್ರಿ. ನೀವೂ ಓದಿ.
ಮಾನ್ಯ ಶ್ರೀ ಯಡಿಯೂರಪ್ಪನವರೇ,
ದಕ್ಷಿಣ ಭಾರತದಲ್ಲಿ ಪ್ರಥಮ ಬಿಜೆಪಿ ಮುಖ್ಯಮಂತ್ರಿಯಾದ ತಮಗೆ ಅಭಿನಂದನೆಗಳು. ಶುಭಾಶಯ ತಲುಪಿಸುವುದು ತಡವಾಯಿತು ಮನ್ನಿಸಿ. ಮುಖ್ಯಮಂತ್ರಿ ಗಾದಿಯ ಉಳಿವಿಗೆ ಅಲ್ಲ, ಕ್ಷಮಿಸಿ, ಕರ್ನಾಟಕ ರಾಜ್ಯದ ಜನತೆಯ ಹಿತಕ್ಕಾಗಿ ಅಧಿಕಾರ ಉಳಿಸಿಕೊಳ್ಳಲು ತಾವು ನಡೆಸುತ್ತಿರುವ ಪ್ರಯತ್ನಕ್ಕೆ ನನ್ನ ಒಂದೆರೆಡು ಸಲಹೆಗಳು. ತಾವು ದಯವಿಟ್ಟು ಸ್ವೀಕರಿಸಿದರೆ, ಬಿಜೆಪಿ ಕಾರ್ಯಕರ್ತರಿಗೂ ತ್ಯಾಗ ಮಾಡುವ ಅವಕಾಶ ಸಿಗುತ್ತದೆ. ಏಕೆಂದರೆ ಬಿಜೆಪಿ ಕಾರ್ಯಕರ್ತರಿಗೆ ತ್ಯಾಗ ಮಾಡುವುದನ್ನು ಆರ್ಎಸ್‌ಎಸ್‌ನವರು ಹೇಳಿಕೊಟ್ಟಿದ್ದಾರೆ.
ಮೊಟ್ಟ ಮೊದಲನೆಯದಾಗಿ ತಾವು ಸಿದ್ದರಾಮಯ್ಯನವರನ್ನು ಮತ್ತು ಎಚ್.ಡಿ.ರೇವಣ್ಣವರನ್ನು ಉಪಮುಖ್ಯಮಂತ್ರಿಗಳನ್ನಾಗಿ ಮಾಡಿಕೊಳ್ಳಿ, (ಅವರಿಗೆ ಜಾಗ ಬಿಟುಕೊಟ್ಟು ತ್ಯಾಗ ಮಾಡಲು ಹೇಗಿದ್ದರೂ ವಿ.ಎಸ್.ಆಚಾರ್ಯ ಹಾಗೂ ಈಶ್ವರಪ್ಪ ಸಿದ್ದರಾಗಿದ್ದಾರೆ). ಇವರಿಬ್ಬರನ್ನು ಉಪಮುಖ್ಯಮಂತ್ರ್ರಿ ಮಾಡಿಕೊಂಡರೆ ನಿಮ್ಮ ಸರಕಾರ ಮತ್ತಷ್ಟು ಸ್ಥಿರವಾಗುತ್ತದೆ.
ಇನ್ನು ಬಸವರಾಜ ಹೊರಟ್ಟಿಯವರನ್ನು ನಿಮ್ಮ ಸಂಪುಟಕ್ಕೆ ಸೇರಿಸಿಕೊಂಡು ಶಿಕ್ಷಣ ಸಚಿವರನ್ನಾಗಿ ಮಾಡಿ, ವಿಶ್ವೇಶ್ವರ ಹೆಗಡೆ ಕಾಗೇರಿಯವರೂ ಸಂಘದ ಸ್ವಯಂಸೇವಕರೇ, ಅವರೇನೂ ಬಿಜೆಪಿ ಬಿಟ್ಟುಹೋಗುವುದಿಲ್ಲ. ಹಾಗೆಯೇ ಅರವಿಂದ ಲಿಂಬಾವಳಿಯರಿಗೂ ತ್ಯಾಗ ಮಾಡುವ ಅವಕಾಶ ಮಾಡಿಕೊಡಿ. ಆ ಜಾಗಕ್ಕೆ ಬರುವುದಾದರೆ ಜಿ.ಪರಮೇಶ್ವರ್ ಅವರನ್ನು ಮಾತನಾಡಿಸಿ. ಸುರೇಶ್‌ಕುಮಾರ್ ಅವರನ್ನು ಮಂತ್ರಿ ಮಂಡಲದಿಂದ ಕೈಬಿಡಿ, ಅವರೇನೂ ಮಂತ್ರಿ ಕೆಲಸ ಮಾಡುವುದೇನು ಬೇಡ, ಹಾಯಾಗಿ(?) ಹಗಲೂ ರಾತ್ರಿ ಪಕ್ಷದ ಕೆಲಸ ಮಾಡಿಕೊಂಡಿರಲಿ.
ಸಿ.ಎಂ.ಇಬ್ರಾಹಿಂರವರನ್ನು ಪಕ್ಷಕ್ಕೆ ಕರೆತಂದು ಮಂತ್ರಿ ಮಾಡಿ, ಬೈಠಕ್‌ನಲ್ಲಿ ಸಂಘದ ಪ್ರಚಾರಕರಿಂದಲೇ ಸಂಸ್ಕೃತ ಶ್ಲೋಕಗಳನ್ನು ಕೇಳಿ ಕೇಳಿ ಬಿಜೆಪಿ ಕಾರ್ಯಕರ್ತರಿಗೆ ಬೇಜಾರಾಗಿದೆ. ಅವರಿಗೆ ಜಾಗ ಮಾಡಿಕೊಡಲು ಮಮ್ತಾಜ್ ಅಲಿಖಾನ್‌ರವರಿಂದ ರಾಜೀನಾಮೆ ಕೊಡಿಸಿದರೆ ಆಯಿತು. ಹೇಗಿದ್ದರೂ ಮಂತ್ರಿಯಾದ ಮೇಲೆ ಅವರಿಗೆ ಲೇಖನ ಬರೆಯಲು ಪುರುಸೊತ್ತಿಲ್ಲವಂತೆ. ಗೊಬ್ಬರದ ಕಾರಣ ಹೇಳಿ ರವೀಂದ್ರನಾಥರನ್ನು ದಾವಣಗೆರೆಗೆ ಕಳಿಸಿ, ಆ ಜಾಗಕ್ಕೆ ಶ್ಯಾಮನೂರು ಶಿವಶಂಕರಪ್ಪನವರನ್ನು ತಂದರೆ ಇಡೀ ದಾವಣಗೆರೆ ಬಿಜೆಪಿಯದಾಯಿತು. ಅವರು ಬರದಿದ್ದರೆ ಚಿತ್ರದುರ್ಗದ ಎಸ್.ಕೆ.ಬಸವರಾಜನ್ ರೆಡಿಯಿದ್ದಾರೆ.
ಬೆಳ್ಳುಬ್ಬಿಯವರಂತಹ ಪ್ರಾಮಾಣಿಕರೇನು ಬೇಡ, ದೇಶಪಾಂಡೆಯವರಾದರೆ ಅನುಕೂಲವಾದೀತು. ಬಿಜೆಪಿಗೆ ಹೊಸದಾಗಿ ಬಂದ ಶಾಸಕರ ಬಗ್ಗೆ ಹೆಚ್ಚಿನ ಗಮನವಿರಲಿ ಅವರ ಕೆಲಸಗಳಿಗೆ, ಕ್ಷೇತ್ರಗಳಿಗೆ ಹೆಚ್ಚಿನ ಆದ್ಯತೆ ನೀಡಿ, ಸೊಗಡು ಶಿವಣ್ಣ, ಶಂಕರಲಿಂಗೇಗೌಡ, ಸಿ.ಟಿ.ರವಿ, ನಾರಾಯಣಸ್ವಾಮಿಯವರಂತಹವರ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ. ಕಟ್ಟಾ ವಿರೋಧಿಯಾಗಬೇಡಿ, ಸಚಿವ ಆರ್. ಅಶೋಕ ಅವರ ಆಪರೇಷನ್ ಕಮಲಕ್ಕೆ ತಡೆಯೊಡ್ಡಬೇಡಿ, ರೆಡ್ಡಿ ಅಂಡ್ ಕಂ ತಂಟೆಗೆ ಹೋಗಬೇಡಿ.
ಇದರ ಜತೆಗೆ ಕಾರ್ಯಕರ್ತರ ನಾಮಿನೇಷನ್ ಸಧ್ಯಕ್ಕೆ ಬೇಡ, ಏಕೆಂದರೆ ಈಗಲೇ ನಾಮಿನೇಷನ್ ಮೂಲಕ ಬಿಜೆಪಿಯವರನ್ನು ಭರ್ತಿ ಮಾಡಿದರೆ ನಂತರ ಅವರಿಂದಲೂ ರಾಜೀನಾಮೆ ಪಡೆಯಬೇಕಾಗುತ್ತದೆ. ಬರುತ್ತಿರುವ ನಾಯಕರ ಬೆಂಬಲಿಗರಿಗೆ ಮೊದಲು ಆದ್ಯತೆ ನೀಡಿ. 110 ಸೀಟು ಗೆಲ್ಲಿಸಿ ಇನ್ನೈದನ್ನು ಗೆಲ್ಲಿಸದ ತಪ್ಪಿಗೆ ಬಿಜೆಪಿ ಕಾರ್ಯಕರ್ತರು ಇನ್ನಷ್ಟು ದಿವಸ ಕಾಯಲಿ, ಮುಂದಿನ ಚುನಾವಣೆಯವರೆಗೂ ಅವರ ಅಗತ್ಯವೂ ಇಲ್ಲ, ಮುಂದೆ ಚುನಾವಣೆ ಬಂದರೂ ನಿಮ್ಮ ಸರಕಾರದ ಪ್ರಯೋಜನ ಪಡೆದು ಇನ್ನೆರೆಡು ವರ್ಷ ಸರಕಾರಿ ವೇತನ ಪಡೆದ ನೌಕರರು ಅಷ್ಟೊತ್ತಿಗೆ ನಿವೃತ್ತರಾಗಿ ನಿಮ್ಮ ಜತೆ ಇರುತ್ತಾರೆ. ವೇತನ ಏರಿಕೆಯಿಂದಾಗಿ ಇನ್ನಿತರ ಸರಕಾರಿ ನೌಕರರೂ ನಿಮ್ಮ ಹಿಂದೆ ಇರುತ್ತಾರೆ. ಚುನಾವಣೆ ಬರುವ ವೇಳೆಗೆ ಬೈಸಿಕಲ್ ಪಡೆದ ಹೈಸ್ಕೂಲ್ ವಿದ್ಯಾರ್ಥಿಗಳಿಗೆ 17 ವರ್ಷ ತುಂಬಿರುತ್ತದೆ. ಇವರು ಮತ ಹಾಕದಿದ್ದರೂ ಪ್ರಚಾರಕಾರ್ಯದಲ್ಲಿ ಸಕ್ರಿಯರಾಗುತ್ತಾರೆ.
ಇನ್ನು ಸದಾನಂದಗೌಡರಿಗೆ ಒಂದು ಮಾತು ಹೇಳಿ ರಾಜ್ಯ ವಕ್ತಾರರನ್ನು ಬದಲಿಸಿ, ಸಿ.ಟಿ.ರವಿಯರು ಬೆಂಗಳೂರಿನಲ್ಲಿದ್ದರೆ ಅಲ್ಲಿ ದತ್ತಪೀಠಕ್ಕೆ ಹೋರಾಡುವವರು ಯಾರು? ಅದಕ್ಕೆ ಅವರನ್ನು ದತ್ತಪೀಠಕ್ಕೆ ಕಳಿಸಿ, ವೈ.ಎಸ್.ವಿ. ದತ್ತರನ್ನು ವಕ್ತಾರರನ್ನಾಗಿ ಮಾಡಿ, ಇನ್ನು ನಿಮ್ಮ ಮನೆಯ ಮುಂದಿನ ವ್ಯವಸ್ಥೆಗಳು ಇದೇ ರೀತಿಯಲ್ಲಿ ಇರಲಿ. ವಿಜಯದ ಹಾದಿಯ ಮೂಲಕ ಇಂದ್ರನ ದರ್ಬಾರಿಗೆ ಅನುಕೂಲವಾಗುತ್ತದೆ. ನಿಮ್ಮ ಶೋಭಾಯಾತ್ರೆ ಹೀಗೆ ಮುಂದುವರೆಯಲಿ, ಶುಭವಾಗಲಿ.
ವಂದನೆಗಳೊಂದಿಗೆ, ನಿಮ್ಮ ಹಿತಚಿಂತಕ
ಬಿದರೆ ಪ್ರಕಾಶ್
ಪೂರಕ ಓದಿಗೆ












Click it and Unblock the Notifications