ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ : ವ್ಯಕ್ತಿ ಪರಿಚಯ

By Super
|
Google Oneindia Kannada News

Bookanakere Siddlingappa Yeddyurappa
ಆಂತರಿಕ ಒಳಜಗಳಗಳು, ನಾಯಕತ್ವದಲ್ಲಿನ ಅಪನಂಬಿಕೆ, ಮುಂದೆ ಹಲ್ಲು ಕಿರಿದು ಹಿಂದಿನಿಂದ ಚೂರಿ ಹಾಕುವ ಖಾದಿಖದರಿನ ನಾಯಕರು, ಎರಡನೇ ಸಾಲಿನ ನಾಯಕರನ್ನೆಲ್ಲ ಬದಿಗೊತ್ತಿ ಇನ್ಯಾರನ್ನೋ ಎತ್ತಿಕಟ್ಟುತ್ತಿದ್ದಾರೆಂಬ ಆರೋಪಗಳನ್ನೆಲ್ಲ ಮೆಟ್ಟಿನಿಂತು ಸ್ವಂತ ಬಲದಿಂದ ರಾಜ್ಯದ ಜನತೆಯ ನಂಬಿಕೆಯನ್ನು ಗಳಿಸಿದ ಛಲಗಾರ ಬಿ.ಎಸ್.ಯಡಿಯೂರಪ್ಪ.

ಈಗ ಹದಿಮೂರನೇ ವಿಧಾನಸಭೆ ಚುನಾವಣೆಯಲ್ಲಿ ರಾಜಕೀಯ ವಿರೋಧಿಗಳ, ಹಿತಶತ್ರುಗಳ ನಿರೀಕ್ಷೆಗೆ ವಿರುದ್ಧವಾಗಿ ಮತ್ತು ಸಮಸ್ತ ಕನ್ನಡಿಗರ ನಿರೀಕ್ಷೆಗೂ ಮೀರಿ ರಾಜ್ಯದ 25ನೇ ಮುಖ್ಯಮಂತ್ರಿಯಾಗಿ ರಾಜ್ಯದ ಚುಕ್ಕಾಣಿ ಹಿಡಿಯಲು ಗರಿಗರಿ ಸಫಾರಿಯಲ್ಲಿ ನಿಂತಿದ್ದಾರೆ.

ಕಾಂಗ್ರೆಸ್‌ನ ಭದ್ರಕೋಟೆಯನ್ನು ಭೇದಿಸಿ ಪ್ರಪ್ರಥಮ ಬಾರಿಗೆ ದಕ್ಷಿಣ ಭಾರತದಲ್ಲಿ ಭಾರತೀಯ ಅಧಿಪತ್ಯ ಸ್ಥಾಪಿಸಲು ಯಡಿಯೂರಪ್ಪ ಯಶಸ್ವಿಯಾಗಿದ್ದು ಸಣ್ಣ ಮಾತಲ್ಲ. ಈಗ ಬಿಜೆಪಿಯ ರಾಷ್ಟ್ರ ನಾಯಕರಷ್ಟೆಯೇಕೆ ಇಡೀ ರಾಷ್ಟ್ರದ ಜನತೆ ಅಚ್ಚರಿಯಿಂದ ಕರ್ನಾಟಕದೆಡೆಗೆ ನೋಡುತ್ತಿದ್ದಾರೆ. ಹಿಂದೆ ಯಾವ ರೀತಿ ಇತರ ಪಕ್ಷಗಳೊಡನೆ ಅಧಿಕಾರ ಹಂಚಿಕೊಂಡರು, ಮುಂದೆ ಯಾವ ರೀತಿ ರಾಜ್ಯವನ್ನು ಆಡಳಿತ ನಡೆಸಲಿದ್ದಾರೆ ಎಂಬುದು ಒತ್ತಟ್ಟಿಗಿಟ್ಟು ನೋಡಿದರೆ, ಸದ್ಯದ ಪರಿಸ್ಥಿತಿಯಲ್ಲಿ ಯಡಿಯೂರಪ್ಪನವರೇ ಹೀರೋ.

ಸಾಲು ಸಾಲು ಮುಖ್ಯಮಂತ್ರಿಗಳನ್ನು ನೋಡಿರುವ ಪಂಚಕೋಟಿ ಕನ್ನಡಿಗರು ಯಡಿಯೂರಪ್ಪನವರ ಮೇಲೆ ಅಪಾರ ಭರವಸೆಯಿಟ್ಟು ಚುನಾಯಿಸಿ ಕಳಿಸಿದ್ದಾರೆ. ಪ್ರಥಮ ಬಾರಿಗೆ ಅಧಿಕಾರದ ಚುಕ್ಕಾಣಿ ಹಿಡಿದಿರುವ ಒಬ್ಬ ನಾಯಕ, 'ಉತ್ತಮವಾಗಿ ಆಡಲೇಬೇಕು' ಎಂಬ ವಿಶ್ವಾಸ, ಜವಾಬ್ದಾರಿಯಿರುವ ರಣಜಿ ಆಟಗಾರನಂತೆ ರಾಜ್ಯವನ್ನು ಮುನ್ನಡೆಸುತ್ತಾರೆಂಬ ಭರವಸೆಯನ್ನು ಯಡಿಯೂರಪ್ಪನವರ ಮೇಲೆ ಜನತೆ ಹೇರಿದ್ದಾರೆ. ರಾಜನಂತಲ್ಲ ಒಬ್ಬ ಸೇವಕನಂತೆ ಜನತೆಯ ಸೇವೆ ಮಾಡುವುದಾಗಿ ಯಡಿಯೂರಪ್ಪನವರೂ ನಮ್ರತೆಯಿಂದ ಹೇಳಿದ್ದಾರೆ. ಚುನಾವಣಾ ಪ್ರಣಾಳಿಕೆಯಲ್ಲಿ ನಮೂದಿಸಿರುವ ಎಲ್ಲ ಭರವಸೆಗಳನ್ನು ಈಡೇರಿಸುವುದಾಗಿ ವಾಗ್ದಾನ ಮಾಡಿದ್ದಾರೆ.

ಹುಟ್ಟು ಹೋರಾಟಗಾರ : ಬಿ.ಎಸ್. ಯಡಿಯೂರಪ್ಪನವರ ರಾಜಕೀಯ ಜೀವನ ಹುಟ್ಟಿಕೊಂಡಿದ್ದೇ ರೈತ ಹೋರಾಟದಿಂದ. ಯಡಿಯೂರಪ್ಪ ಸವೆಸಿದ ಹಾದಿ ಹೋರಾಟದಿಂದ ಕೂಡಿದೆ. ಸತತ ಮೂರು ದಶಕಗಳಲ್ಲಿ ಅನೇಕ ಏಳು ಬೀಳುಗಳನ್ನು ಕಂಡಿದ್ದಾರೆ. ಮಂಡ್ಯ ಜಿಲ್ಲೆಯ ಬೂಕನಕೆರೆ ಎಂಬ ಕುಗ್ರಾಮದ ಬಡ ರೈತ ಕುಟುಂಬದಲ್ಲಿ ಜನಸಿದ ಯಡಿಯೂರಪ್ಪ ದಿಢೀರ್ ನಾಯಕರಾದವರಲ್ಲ. ಯಾವುದೇ ಗಾಡ್ ಫಾದರ್ ಇಲ್ಲದೇ ಸ್ವಂತ ಪರಿಶ್ರಮ ಮೇಲೆ ಹಂತಹಂತವಾಗಿ ಬೆಳೆದು ಬಂದ ಧೀಮಂತ ನಾಯಕ. ಹಳ್ಳಿಯಿಂದಲೇ ಹೋರಾಟ ಆರಂಭಿಸಿ ರಾಜಕೀಯ ನೆಲೆಗಟ್ಟನ್ನು ಕಂಡುಕೊಂಡವರು.

ಕಾರ್ಯಕರ್ತರ ಅಪನಂಬಿಕೆ, ಹಿಂದಿನಿಂದ ಚೂರಿ ಹಾಕುವ ನಾಯಕರ ಧೋರಣೆಗೆ ಬೇಸತ್ತು ಒಮ್ಮೆ ಪಕ್ಷ ತೊರೆಯಲೂ ಸಿದ್ಧರಾಗಿದ್ದರು. ಆದರೆ, ವರಿಷ್ಠರು ಅವರ ನಾಯಕತ್ವಕ್ಕೆ ಮನ್ನಣೆ ನೀಡುವುದಾಗಿ ವಾಗ್ದಾನ ನೀಡಿದ್ದರಿಂದ ಮತ್ತೆ ಪಕ್ಷದತ್ತ ಮುಖ ತಿರುಗಿಸಿದರು. ಸಂಘ ಪರಿವಾರದ ಶಿಸ್ತಿನ ಸಿಪಾಯಿಯಾದ ಇವರು, ಅಂದಿನಿಂದ ಇಂದಿನವರೆಗೂ ಪರಿವಾರದ ವಿಶ್ವಾಸವನ್ನು ಉಳಿಸಿಕೊಂಡು ಬಂದಿದ್ದಾರೆ. ಪಕ್ಷ ಸಂಘಟನೆಯಲ್ಲಿ ನಿಪುಣರಾದ ಯಡಿಯೂರಪ್ಪ, ಹೋರಾಟದಲ್ಲಿ ಎತ್ತಿದ ಕೈ. ಭಾಷಣಕ್ಕೆ ನಿಂತರೆ ಗುಡುಗು ಸಿಡಿಲುಗಳ ಮೇಳೈಕೆ. ಇಂತಹ ಯಡಿಯೂರಪ್ಪ ಧೃತಿಗೆಡದೆ 80ರ ದಶಕದಲ್ಲಿ ಎರಡು ಶಾಸಕರಿದ್ದ ಪಕ್ಷವನ್ನು ಹಂತಹಂತವಾಗಿ ಬೆಳೆಸುತ್ತಾ ಇಂದು 110 ಶಾಸಕರ ಪಕ್ಷವಾಗಿ ಮಾಡಿದ್ದಾರೆ.

ಬ್ಲೆಸಿಂಗ್ ಇನ್ ಡಿಸ್ಗೈಸ್ : ಕಳೆದ ಚುನಾವಣೆಯಲ್ಲಿ ರಾಜ್ಯದಲ್ಲಿ ಅತಂತ್ರ ಸ್ಥಿತಿ ನಿರ್ಮಾಣ ಉಂಟಾದಾಗ ಸಮ್ಮಿಶ್ರ ಸರ್ಕಾರ ರಚಿಸುವ ಅನಿವಾರ್ಯತೆ ಎದುರಾಯಿತು. ಕ್ಷಿಪ್ರ ಬೆಳವಣಿಗೆಯಲ್ಲಿ ಬಿಜೆಪಿ ಜತೆಗೆ ಜೆಡಿಎಸ್ ಸರ್ಕಾರ ರಚಿಸಲು ಮುಂದಾಯಿತು. ಈ ಅಪವಿತ್ರ ಮೈತ್ರಿ ಯಡಿಯೂರಪ್ಪ ಜೀವನದಲ್ಲಿ ಕಪ್ಪುಚುಕ್ಕೆಯೂ ಹೌದು, ಬ್ಲೆಸಿಂಗ್ ಇನ್ ಡಿಸ್ಗೈಸ್ ಕೂಡ ಹೌದು. ಜೆಡಿಎಸ್ ಬಿಜೆಪಿಗೆ ಕೈಕೊಡದಿದ್ದರೆ ಬಿಜೆಪಿ ಪರ ಗಾಳಿ ಬೀಸುತ್ತಲೂ ಇರಲಿಲ್ಲ ಎಂಬುದು ಕೂಡ ಅಷ್ಟೇ ಸತ್ಯ. ಆದರೆ, ಆ ಸಮ್ಮಿಶ್ರ ಸರ್ಕಾರದಲ್ಲಿ ಉಪಮುಖ್ಯಮಂತ್ರಿಯಾಗಿ, ಹಣಕಾಸು ಸಚಿವರಾಗಿ ನೀಡಿದ ಅನೇಕ ಜನಪರ ಕಾರ್ಯಕ್ರಮಗಳಿಂದ ಯಡಿಯೂರಪ್ಪ ಮತ್ತಷ್ಟು ಜನಪ್ರಿಯತೆ ಪಡೆದುಕೊಂಡರು. ಮೈತ್ರಿ ಸರ್ಕಾರ ಮುರಿದುಬಿದ್ದ ನಂತರ ವಿಧಾನಸಭೆ ಮಹಾಸಮರದ ಸಾರಥಿ ಸ್ಥಾನವನ್ನು ಅಲಂಕರಿಸಿದ ಅವರು, ಪಕ್ಷವನ್ನು ಅಧಿಕಾರಿದ ಹೊಸ್ತಿಲಿನಲ್ಲಿ ತಂದು ನಿಲ್ಲಿಸಿದ್ದಾರೆ.

ಪ್ರಸ್ತುತ ಚುನಾವಣೆಗೆ ಮೊದಲು ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿಯೆಂದು ಘೋಷಿಸಿದಾಗಲೇ ಅವರ ಸುತ್ತಲೂ ಕಾಲೆಳೆಯುವ ಜನ ಹುಟ್ಟಿಕೊಂಡಿದ್ದರು. ಅವರೇ ನಾಯಕತ್ವದಡಿ ಕೆಲಸ ಮಾಡುವುದಿಲ್ಲವೆಂದು ಕ್ಯಾತೆ ತೆಗೆದರು. ಮುಖ್ಯಮಂತ್ರಿ ಆಗೇ ಆಗುತ್ತೇನೆ ಎಂದು ಸ್ವತಃ ಯಡಿಯೂರಪ್ಪನವರೇ ಗರ್ಜಿಸಿದಾಗ ಪಕ್ಷದ ಕಾರ್ಯಕರ್ತರೇ ಗಹಗಹಿಸಿ ನಕ್ಕರು. ಶಿಕಾರಿಪುರ ಕ್ಷೇತ್ರದಲ್ಲಿ ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಇತರ ಪಕ್ಷಗಳೊಡಗೂಡಿ ಸೆಡ್ಡು ಹೊಡೆದಾಗಲೂ ಧೃತಿಗೆಡಲಿಲ್ಲ ಯಡಿಯೂರಪ್ಪ. ಅವರಲ್ಲಿದ್ದ ಎಲ್ಲವನ್ನೂ ಮೆಟ್ಟಿನಿಲ್ಲುವ ವಿಶ್ವಾಸ, ಜನತೆಯ ಮೇಲಿದ್ದ ನಂಬಿಕೆ ಅವರನ್ನು ಈಗ ಈ ಸ್ಥಾನಕ್ಕೆ ತಂದು ನಿಲ್ಲಿಸಿದೆ.

ಯಡಿಯೂರಪ್ಪ ಅಲಂಕರಿಸಿದ ಹುದ್ದೆಗಳು :

1975 : ಶಿಕಾರಿಪುರ ಪುರಸಭೆ ಸದಸ್ಯರಾಗಿ ಆಯ್ಕೆ, 1977ರಲ್ಲಿ ಅಧ್ಯಕ್ಷ.
1980 : ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ.
1983 : ಮಾಜಿ ಸಚಿವ ವೆಂಕಟಪ್ಪ ಅವರನ್ನು ಸೋಲಿಸಿ ಮೊದಲ ಬಾರಿಗೆ ವಿಧಾನಸಭೆ ಪ್ರವೇಶ
1985 : 88 ವರೆಗೆ ಬಿಜೆಪಿ ಜಿಲ್ಲಾಧ್ಯಕ್ಷ, 1988 ರಲ್ಲಿ ರಾಜ್ಯಾಧ್ಯಕ್ಷ, 1992 ರಲ್ಲಿ ರಾಷ್ಟ್ರೀಯ ಕಾರ್ಯದರ್ಶಿ ಸ್ಥಾನ ನಿರ್ವಹಣೆ
1994 : ವಿಧಾನಸಭೆ ಪ್ರತಿಪಕ್ಷದ ನಾಯಕ
1999 : ಮತ್ತೆ ರಾಜ್ಯಾಧ್ಯಕ್ಷ, 2000 ರಲ್ಲಿ ಮೇಲ್ಮನೆ ಸದಸ್ಯ
2004 : ಐದನೇ ಬಾರಿಗೆ ವಿಧಾನಸಭೆ ಪ್ರವೇಶ, ಇನ್ನೊಮ್ಮೆ ಪ್ರತಿಪಕ್ಷದ ನಾಯಕ
2006 : ಸಮ್ಮಿಶ್ರ ಸರ್ಕಾರ ರಚನೆ, ಉಪಮುಖ್ಯಮಂತ್ರಿ, ಹಣಕಾಸು ಮತ್ತು ಅಬಕಾರಿ ಖಾತೆಗಳ ನಿರ್ವಹಣೆ
2007 : ನವೆಂಬರ್ 12 ರಿಂದ 17ರ ವರೆಗೆ 7 ದಿನ ಮಾತ್ರ ಮುಖ್ಯಮಂತ್ರಿಯಾಗಿ ಪದವಿ ಅಲಂಕರಿಸಿದ್ದರು.
2008 : ಮೇ 30ರ ಶುಕ್ರವಾರ 25ನೇ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿಲು ಅಣಿ.

ಕೌಟುಂಬಿಕ ಹಿನ್ನೆಲೆ : ಬಿ.ಎಸ್. ಯಡಿಯೂರಪ್ಪ ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲ್ಲೂಕಿನ ಬೂಕನಕೆರೆ ಗ್ರಾಮದ ಬಡ ರೈತ ಕುಟುಂಬದ ಸಿದ್ಧಲಿಂಗಪ್ಪ ಪುಟ್ಟಮ್ಮ ದಂಪತಿಗಳಿಗೆ 1943ರಲ್ಲಿ ಜನಿಸಿದರು. ತಾಯಿ ಪುಟ್ಟಮ್ಮ ಅವರನ್ನು ತಮ್ಮ ನಾಲ್ಕನೇ ವಯಸ್ಸಿನಲ್ಲಿಯೇ ಕಳೆದುಕೊಂಡ ಯಡಿಯೂರಪ್ಪ ತಂದೆಯ ಮಮತೆಯಲ್ಲಿ ಬೆಳೆದವರು. ಬಿ.ಎ. ಪದವಿಯನ್ನು ಮಂಡ್ಯದಲ್ಲಿ ಪೂರೈಸಿದರು. ಕೆಲಸ ಅರಸಿ ಶಿಕಾರಿಪುರಕ್ಕೆ ಬಂದು ವೀರಭದ್ರ ಶಾಸ್ತ್ರೀ ಅವರ ರೈಸ್ ಮಿಲ್ ನಲ್ಲಿ ಗುಮಾಸ್ತನ ಕೆಲಸಕ್ಕೆ ಸೇರಿಕೊಂಡರು. ಕೊನೆಗೆ ಶಾಸ್ತ್ರೀ ಅವರ ಪುತ್ರಿ ಮೈತ್ರಾದೇವಿ ಅವರನ್ನು ವರಿಸಿ ಮಾವನ ಮನೆಯಲ್ಲಿ ನೆಲೆಸಿದರು.

ಯಡಿಯೂರಪ್ಪ ಅವರಿಗೆ ಇಬ್ಬರು ಪುತ್ರರು(ರಾಘವೇಂದ್ರ, ವಿಜಯೇಂದ್ರ), ಹಾಗೂ ಮೂವರು ಪುತ್ರಿಯರು (ಅರುಣಾದೇವಿ, ಪದ್ಮಾವತಿ ಮತ್ತು ಉಮಾದೇವಿ). 2004ರಲ್ಲಿ ಪತ್ನಿ ಮೈತ್ರಾದೇವಿಯವರು ಆಕಸ್ಮಿಕವಾಗಿ ನೀರಿನ ತೊಟ್ಟಿಯಲ್ಲಿ ಬಿದ್ದು ತೀರಿಕೊಂಡರು.

English summary
Bookanakere Sidalingappa Yeddyurappa celebrating 70th birthday on Feb.27,2012. Here is flashback on this golden days of Political tenure. BSY is a born fighter. Consistently struggled both within the party and outside to rise from the ranks of the Rashtriya Swayam Sewak Sangh (RSS) to lead the Bharatiya Janata Party (BJP) to power in Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X