ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಸ್‌ಪಿಬಿ ದೇವರಂಥ ಮನುಷ್ಯ!

By Staff
|
Google Oneindia Kannada News

ಈಟೀವಿಯ 'ಎದೆ ತುಂಬಿ ಹಾಡುವೆನು" ಕಾರ್ಯಕ್ರಮದಲ್ಲಿ ರಾಜಕೀಯಗಳೇನೂ ಇಲ್ಲ... ಬಾಲುರಂಥ ಕನ್ನಡಪ್ರೇಮಿ ವಿರುದ್ಧ ಸುಳ್ಳುಸುಳ್ಳೆ ಆರೋಪ ಮಾಡುವುದು ಶುದ್ಧ ತಪ್ಪು... ನನ್ನ ಅನುಭವ ಕೇಳಿ...

ರಾಮಪ್ರಸಾದ್‌

SP Balasubramanyam is not biased towards Telaguಆತ್ಮೀಯ ಓದುಗರೇ,

ಇದು ಹಲವಾರು ವಾರಗಳ ಹಿಂದೆ ಪ್ರಕಟವಾದ 'ಕನ್ನಡಿಗರ ಕೋಮಲ ಭಾವನೆ ಕೆಣಕದಿರಿ ಎಸ್‌.ಪಿ.ಬಿ" ಎಂಬ ಲೇಖನದ ಬಗ್ಗೆ ನನ್ನ ಅಭಿಪ್ರಾಯ.

ಈ ಲೇಖನವನ್ನು ಓದಿದ ಮೇಲೆ 'ಹೌದಲ್ಲ... ಎದೆ ತುಂಬಿ ಹಾಡುವೆನು ಕಾರ್ಯಕ್ರಮದ ತೀರ್ಪು ಎಷ್ಟರ ಮಟ್ಟಿಗೆ ಸರಿ ಇರಬಹುದು..?" ಎಂದು ಮನಸಿನಲ್ಲೇ ಪ್ರಶ್ನಿಸಿಕೊಂಡವರಲ್ಲಿ ನಾನು ಒಬ್ಬ. ಆದರೆ ಈಗ ಆ ಕಾರ್ಯಕ್ರಮದಲ್ಲಿ ಒಂದೆರಡು ಗಂಟೆಗಳ ಕಾಲ ಭಾಗವಹಿಸುವ ಸದಾವಕಾಶ ದೊರೆತಮೇಲೆ ನನ್ನ ಅಭಿಪ್ರಾಯ ಬರೆಯುತ್ತಿದ್ದೇನೆ.

ಇತ್ತೀಚೆಗೆ ಈಟೀವಿಯರವರು ಫೋನ್‌ ಮಾಡಿ 'ಎದೆ ತುಂಬಿ ಹಾಡುವೆನು ಕಾರ್ಯಕ್ರಮ"ದ ತೀರ್ಪುಗಾರನಾಗುವಂತೆ ನನ್ನನ್ನು ಆಹ್ವಾನಿಸಿದಾಗ ಬಹಳ ಉತ್ಸಾಹದಿಂದ ಒಪ್ಪಿಕೊಂಡು ಹೋದೆ. ಹೋಗುವ ತನಕ ದಟ್ಸ್‌ ಕನ್ನಡದಲ್ಲಿ ನಾನು ಓದಿದ ಲೇಖನ ಹಾಗು ಅದರ ಬಗ್ಗೆ ಓದುಗರು ಬರೆದ ಅಭಿಪ್ರಾಯಗಳೇ ನನ್ನ ತಲೆಯ ತುಂಬಾ ತುಂಬಿಕೊಂಡಿದ್ದವು.

ಎಸ್‌.ಪಿ.ಬಿ ಅವರು ಅಮೆರಿಕಾದಲ್ಲಿ ಕಾರ್ಯಕ್ರಮಗಳನ್ನು ಕೊಡಲು ಬಂದಿದ್ದಾಗ, ಹಾಗು ಬಹಳ ಹಿಂದೆ ಬೆಂಗಳೂರಿನಲ್ಲಿ ರೆಕಾರ್ಡಿಂಗ್‌ ಸಮಯದಲ್ಲೂ ಹಲವಾರು ಸಾರಿ ನೋಡಿದ್ದೆ ಹಾಗು ಮಾತನಾಡಿಸಿದ್ದೆ. ಅವರ ಕೆಲವು ಚಿತ್ರಗೀತೆಗಳಲ್ಲಿ ಕೋರಸ್‌ ಕೂಡ ಹಾಡಿದ್ದೆ. ಆಗೆಲ್ಲ ಅವರು ಜನಗಳ ಜೊತೆ ಯಾವುದೆ ಅಹಂಕಾರ ಅಥವ ಜಂಭಗಳಿಲ್ಲದೆ ಎಲ್ಲರ ಜೊತೆ ಪ್ರೀತಿಯಿಂದ ಬೆರೆಯುತ್ತಿದುದು ಇನ್ನು ಚೆನ್ನಾಗಿ ಜ್ಞಾಪಕ ಇದೆ. ಮತ್ತೆ ಹಲವಾರು ವರುಷಗಳ ನಂತರ ಅವರನ್ನು ನೋಡುವ ಹಾಗು ಮಾತನಾಡಿಸುವ ಅವಕಾಶ ಸಿಕ್ಕಿದ್ದುದಕ್ಕೆ ತುಂಬಾ ಖುಷಿ ಸಹ ಆಗಿತ್ತು.

ಅಂದು ಈಟೀವೀ ರೆಕಾರ್ಡಿಂಗ್‌ ದಿನ ನಾನು ಮೊದಲೇ ಹೋಗಿದ್ದುದರಿಂದ ನನ್ನನ್ನು ಮೊದಲು ಒಳಗೆ ಕೂಡಿಸಿದ್ದರು. ಸ್ವಲ್ಪ ಸಮಯದ ನಂತರ ಬಂದ ಎಸ್‌.ಪಿ.ಬಿ ತಾವೇ ನಾನು ಕುಳಿತಿರುವಲ್ಲಿಗೆ ನಡೆದು ಬಂದು, ಕೈಯನ್ನು ಕುಲುಕಿ ಕಾರ್ಯಕ್ರಮಕ್ಕೆ ಬಂದಿರುದಕ್ಕೆ ಕೃತಜ್ಞತೆ ಹೇಳಿದರು. ದಕ್ಷಿಣ ಭಾರತದ ಸಿನಿಮ ಸಂಗೀತ ಕ್ಷೇತ್ರದಲ್ಲಿ ಮೂವತ್ತೈದಕ್ಕೂ ಹೆಚ್ಚು ವರ್ಷಗಳ ಕಾಲ ಅನಭಿಷಿಕ್ತ ದೊರೆ ಎನಿಸಿಕೊಂಡ ಆ ಮಹಾನುಭಾವ ಇವರೇನ ಎನಿಸಿತು. ತುಂಬಿದ ಕೊಡ ತುಳುಕುವುದಿಲ್ಲ ಎಂಬ ಗಾದೆ ನೆನಪಾದುದಂತು ಸುಳ್ಳಲ್ಲ.

ಅಮೇಲೆ ಕಾರ್ಯಕ್ರಮದ ಪ್ರೊಡ್ಯೂಸರ್‌, ಕಾರ್ಯಕ್ರಮ ನಡೆಯುವ ರೀತಿ ರಿವಾಜಿನ ಬಗ್ಗೆ ಕೂಲಂಕಷವಾಗಿ ವಿವರಿಸಿದರು. ಕಾರ್ಯಕ್ರಮದಲ್ಲಿ ಭಾಗವಹಿಸುವ ಮಕ್ಕಳಿಗೆ ಯಾವ ರೀತಿ ಅಂಕಗಳನ್ನು ನೀಡಬೇಕು ಎಂದು ಸಹ ಅವರೇ ವಿವರಿಸಿದರು. ಎಸ್‌.ಪಿ.ಬಿ ಅವರು ಕಾರ್ಯಕ್ರಮ ಶುರು ಆಗುವ ಮುನ್ನ ' ಸಾರ್‌, ಇಂದಿನ ಸ್ಪರ್ಧೆಯಲ್ಲಿ ಮಕ್ಕಳ ಹಾಡುವಿಕೆಯ ತೀರ್ಪುಗಾರರು ನೀವು. ನಾನು ಆಗಾಗ ಮಕ್ಕಳ ಹಾಡುವಿಕೆಯ ಬಗ್ಗೆ ಟೀಕೆಗಳನ್ನು ಮಾಡುತ್ತಿರುತ್ತೇನೆ ಹಾಗು ಪ್ರೋತ್ಸಾಹ ಕೊಡುತ್ತಿರುತ್ತೇನೆ. ಆದರೆ ಕೊನೆಯಲ್ಲಿ ನೀವು ತೀರ್ಪು ನೀಡುವಾಗ, ನನ್ನ ಟೀಕೆಗಳನ್ನು ದಯವಿಟ್ಟು ಪರಿಗಣಿಸಬೇಡಿ" ಎಂದು ಹೇಳಿದರು. ಆಮೇಲೆ ಕಾರ್ಯಕ್ರಮ ಶುರು ಆಯಿತು.

ಸಂಗೀತಕ್ಕೆ ಯಾವುದೆ ಭಾಷೆಯ ಬೇಲಿ ಇಲ್ಲ ಎಂಬುದಕ್ಕೆ ಈತ ನಿಜವಾದ ಉದಾಹರಣೆ. ಈತ ನಿಜವಾದ ಸಂಗೀತಗಾರ. ಕನ್ನಡ ಮಾತನಾಡುವುದೇ ಅಲ್ಲ ಓದಿಬರೆಯುವುದನ್ನು ಕಲಿತಿರುವ ಅವರ ವಿಶಾಲ ಹೃದಯ ನಿಜಕ್ಕೂ ಶ್ಲಾಘನೀಯ. ಸಂಗೀತ ಕ್ಷೇತ್ರದಲ್ಲಿ ಅವರಿಗಿರುವ ಸ್ಥಾನದಿಂದಾಗಿ, ಅವರಿಗೆ ತೆಲುಗನ್ನು ಬಿಟ್ಟು ಬೇರೆ ಯಾವುದೇ ಭಾಷೆ ಕಲಿಯುವ ಅಗತ್ಯವಾದರೂ ಏನಿತ್ತು? ಅವರಿಗಿರುವ ಸ್ಥಾನಮಾನಗಳಿಂದಾಗಿ ಅವರು ಮಾಡಿದುದೆಲ್ಲವನ್ನೂ ಸಹಿಸುವ ಜನ ಈ ಸಿನಿಮಾ ರಂಗದಲ್ಲಿ ತುಂಬಿದ್ದಾರೆ. ಜೊತೆಗೆ, ಹೊರಗಿನವರು ಕನ್ನಡ ಮಾತನಾಡದಿದ್ದರೂ ತಾವೇ ಅವರ ಭಾಷೆಯಲ್ಲಿ ಮಾತನಾಡಿ ಅವರನ್ನು ಸಂತೋಷ ಪಡಿಸುವ ಉದಾರಿಗಳಿರುವ ನಮ್ಮ ನಾಡಿನಲ್ಲಿ, ಒಬ್ಬ ಹೊರನಾಡಿನ ವ್ಯಕ್ತಿ ಕನ್ನಡ ಕಲಿತು ಮಾತನಾಡುವುದೇ ಅಲ್ಲದೆ ಓದಿ ಬರೆದು ಮಾಡುವ ಅವಶ್ಯಕತೆಯಾದರು ಏನಿದೆ?

ಕೊನೆಯಲ್ಲಿ ನನ್ನ ತೀರ್ಪನ್ನು ಬರೆದು ಸಹಿ ಮಾಡಿ ಎಸ್‌.ಪಿ.ಬಿಯವರಿಗೆ ಕೊಡಲು ಹೋದಾಗ, ಅವರು 'ದಯವಿಟ್ಟು ಅದನ್ನು ಕಾರ್ಯಕ್ರಮದ ಪ್ರೊಡ್ಯುಸರ್‌ ಅವರಿಗೆ ಕೊಟ್ಟು ಬಿಡಿ" ಎಂದು ವಿನಯದಿಂದ ಕೇಳಿಕೊಂಡರು. ಆಮೇಲೆ ಅಂದಿನ ಸ್ಪರ್ಧೆಯಲ್ಲಿ ಗೆದ್ದ ಮಕ್ಕಳ ಹೆಸರನ್ನು ಘೋಷಿಸಿದಾಗ ಅದರಲ್ಲಿ ಎಲ್ಲವೂ ನಾನು ಕೊಟ್ಟ ತೀರ್ಪಿನಂತೆಯೇ ಇತ್ತು. ಬೇರೆ ಯಾರದೇ ಕೈವಾಡ ಇರಲಿಲ್ಲ. 'ಕನ್ನಡಿಗರ ಕೋಮಲ ಭಾವನೆ ಕೆಣಕದಿರಿ ಎಸ್‌.ಪಿ.ಬಿ" ಎಂಬ ಲೇಖನದಲ್ಲಿ ಹಾಗು ಅದಕ್ಕೆ ಬಂದ ಪ್ರತಿಕ್ರಿಯೆಗಳಲ್ಲಿ ಅನುಮಾನಿಸಿದಂತೆ ಈ ಸ್ಪರ್ಧೆ ಯಾವುದೆ ಪೂರ್ವಾಗ್ರಹ ಪೀಡಿತವಾಗಿಲ್ಲ ಎಂದು ಖಂಡಿತವಾಗಿ ಹೇಳುತ್ತೇನೆ.

ಇನ್ನು ತೆಲುಗು ಹುಡುಗಿಯಾಬ್ಬಳು ಭಾಗವಹಿಸಿ ಗೆದ್ದ ಆ ದಿನ ಎಸ್‌.ಪಿ.ಬಿ ಅವರಾಗಲಿ ಅಥವ ಅಂದಿನ ತೀರ್ಪುಗಾರರಾಗಲಿ ಏಕೆ ಆ ತೆಲುಗು ಹುಡುಗಿಯ ಕನ್ನಡವನ್ನು ಸರಿಪಡಿಸಲಿಲ್ಲ ಎಂದು ಹಲವು ಓದುಗರು ಕೇಳಿದ್ದಾರೆ. ನಾನು ಆ ದಿನ ಅಲ್ಲಿ ಇರಲಿಲ್ಲವಾದುದರಿಂದ ನನ್ನಲ್ಲಿ ಈ ಪ್ರಶ್ನೆಗೆ ಖಡಾ ಖಂಡಿತವಾದ ಉತ್ತರ ಇಲ್ಲ. ಆದರೆ ಕೆಲವು ಬಾರಿ ಅಲ್ಲಿ ನಡೆಯುವ ಹಲವಾರು ಅಂಶಗಳು, ಸಮಯದ ಅಭಾವದಿಂದಲೊ ಅಥವ ಇನ್ನಾವುದೊ ಸಮಂಜಸವಾದ ಕಾರಣಗಳಿಂದಾಗಿ ಕತ್ತರಿಸಲ್ಪಡುವ ಸಂಭವಗಳೂ ಇರುವುದು ಸುಳ್ಳಲ್ಲ. ಅದೇ ರೀತಿ ಅಂದಿನ ತೀರ್ಪುಗಾರರು ಹಾಗು ಎಸ್‌.ಪಿ.ಬಿ ಅವರು ಆ ದಿನ ಹೇಳಿದ ಹಲವು ವಿಷಯಗಳಿಗೆ ಕತ್ತರಿ ಬಿದ್ದಿದ್ದರೂ ಆಶ್ಚರ್ಯವಿಲ್ಲ. ಹಾಗಾಗಿ ಅಲ್ಲಿ ಏನೋ ರಾಜಕೀಯ ನಡೆದಿದೆ ಎನ್ನುವುದು ಸರಿಯಲ್ಲ.

ಒಟ್ಟಿನಲ್ಲಿ ಕಾರ್ಯಕ್ರಮ ಯಾವುದೆ ತಡೆ ಇಲ್ಲದೆ ತುಂಬಾ ಚೆನ್ನಾಗಿ ನಡೆಯಿತು. ಮಕ್ಕಳು ತುಂಬ ಉತ್ಸಾಹದಿಂದ ಭಾಗವಹಿಸಿದರು. ನಾನು ಕೂಡ ನನ್ನ ಮನಸಾಕ್ಷಿ ಒಪ್ಪುವಂತೆ ಮಕ್ಕಳಿಗೆ ಅಂಕಗಳನ್ನು ಕೊಟ್ಟೆ.

ಪ್ರತ್ಯಕ್ಷವಾಗಿ ಕಂಡರೂ ಪ್ರಮಾಣಿಸಿ ನೋಡು ಎಂಬ ಗಾದೆಯನ್ನು ನೆನೆಪಿಸಿಕೊಳ್ಳುತ್ತಾ ಎಸ್‌.ಪಿ.ಬಿ ಹಾಗು ಈಟೀವಿಯ ಇತರರಿಗೆ ನಮಸ್ಕಾರ ಹೇಳಿ ಹೊರಬಂದರೂ ಎಸ್‌.ಪಿ.ಬಿ ಅವರ ಧೀಮಂತ ವ್ಯಕ್ತಿತ್ವವೇ ಮನಸಿನಲ್ಲೆಲ್ಲಾ ಆವರಿಸಿತ್ತು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X