ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೊಸ ವರ್ಷ 2023: ಈ ಹೊಸ ವರ್ಷದಲ್ಲಿ ಚಿಂತೆ ಅಳಿಸಿ - ಚಿಂತನೆ ಬೆಳೆಸಿ

By ರೇಖಾ ಬೆಳವಾಡಿ, ಆಪ್ತ ಸಲಹೆಗಾರರು
|
Google Oneindia Kannada News

ಬೆಂಗಳೂರು, ಜ. 01: ಒಂದು ಊರಿನಲ್ಲಿ ಒಬ್ಬ ರೈತನಿದ್ದ. ಊರಿನಲ್ಲೇ ಬಹಳ ದೊಡ್ಡ ತೋಟ ಹಾಗು ಹೊಲವನ್ನು ಹೊಂದಿದ್ದ. ಅನೇಕ ವರುಷಗಳು ಮಳೆಯಾಗದೆ ಬೆಳೆ ಅಷ್ಟು ಚೆನ್ನಾಗಿ ಬೆಳೆಯದೆ ಇದ್ದ ಕಾರಣ ಚಿಂತೆ ಆವರಿಸಿತ್ತು. ಕೆಲವು ವರುಷಗಳ ನಂತರ ಸೂಕ್ತ ಸಮಯಕ್ಕೆ ಚೆನ್ನಾಗಿ ಮಳೆ ಆಯಿತು. ರೈತನ ತೋಟ ಹೊಲ ಗದ್ದೆಗಳಲ್ಲಿ ಬೆಳೆಯೂ ಚೆನ್ನಾಗಿ ಬಂದಿತು.

ಸಂಪದ್ಭರಿತವಾದ ತೋಟವನ್ನ ಕಂಡು ಮನೆಯವರೆಲ್ಲಾ ಸಂತೋಷ ಪಟ್ಟರೆ ರೈತನು ಚಿಂತೆಯಲ್ಲಿರುವಂತೆ ಕಂಡನು. ರೈತನ ಪತ್ನಿ ಸದಾ ಚಿಂತೆಯಲ್ಲಿರುವ ಗಂಡನನ್ನು ಕಂಡು ಏಕೆ ಹೀಗೆ..? ಎಂದು ಕೇಳಿದರೂ ರೈತ ಏನೂ ಹೇಳಲಿಲ್ಲ. ಸಂದರ್ಭ ಯಾವುದೇ ಇರಲಿ ದಿನಬೆಳಗಾದರೂ ಈ ರೀತಿ ಸದಾ ಚಿಂತಾ ಮಗ್ನನಾಗಿರುವ ಗಂಡನ ಸಮಸ್ಯೆಗೆ ಹೇಗಾದರೂ ಮಾಡಿ ಪರಿಹಾರ ಕಂಡುಕೊಳ್ಳಬೇಕು ಎಂಬ ಪ್ರಯತ್ನದಲ್ಲಿ ಪತ್ನಿ ಸನ್ಯಾಸಿಯೊಬ್ಬರ ಮೊರೆ ಹೋಗುತ್ತಾಳೆ.

Psychology: ಕೆಲಸದ ಒತ್ತಡ ಹಾಗೂ ನಿರ್ವಹಣಾ ಕ್ರಮಗಳುPsychology: ಕೆಲಸದ ಒತ್ತಡ ಹಾಗೂ ನಿರ್ವಹಣಾ ಕ್ರಮಗಳು

ರೈತನು ಸನ್ಯಾಸಿಯನ್ನು ಭೇಟಿಯಾಗಿ ತನ್ನ ಚಿಂತೆಗೆ ಪರಿಹಾರ ಸೂಚಿಸಬೇಕಾಗಿ ಕೇಳುತ್ತಾನೆ. ಸನ್ಯಾಸಿಗಳು ರೈತನನ್ನು ಕುರಿತು ಸಮಸ್ಯೆಯನ್ನು ಸವಿಸ್ತಾರವಾಗಿ ವಿವರಿದುವಂತೆ ಹೇಳುತ್ತಾರೆ.

New Year 2023: Some new thoughts in new year

ಆಗ ರೈತನು ತಾನು ಬಹಳ ಕಷ್ಟ ಪಟ್ಟು ತೋಟ ಹೊಲಗಳಲ್ಲಿ ಕೆಲಸ ಮಾಡುತ್ತಿದ್ದೇನೆ,

*ಮಳೆ ಆಗುವುದೋ ಇಲ್ಲವೋ..??

*ಮಳೆಯಾಗದಿದ್ದರೆ..?

*ಹೆಚ್ಚು ಮಳೆಯಾದರೂ ತೊಂದರೆ!!

* ಕೆಲಸಗಾರರು ಸಿಗುತ್ತಾರೋ ಇಲ್ಲವೋ..?

*ಬೆಳೆಗಳಿಗೆ ನುಸಿ ಕೀಟ ಹತ್ತಿಬಿಟ್ಟರೆ, ಏನು ಮಾಡುವುದು..?

*ಅತಿಯಾದ ಬಿಸಿಲಾದರೆ!!

* ಬೆಳೆದ ಬೆಳೆಯನ್ನು ದನಕರುಗಳು ತಿಂದುಬಿಟ್ಟರೆ!!

* ಉತ್ತಮ ಬೆಳೆಯನ್ನು ನೋಡಿ ಯಾರಾದರೂ ಹಾಳು ಮಾಡಿದರೆ..?

*ಈ ವರುಷ ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಗುವುದೋ ಇಲ್ಲವೋ..?

* ಈ ಬಾರಿ ಬೆಳೆ ಚೆನ್ನಾಗಿ ಬಂದಿದೆ ಮುಂದಿನ ಬಾರಿ ಏನಾಗುವುದೋ ಏನೋ..?

*ಪ್ರತಿ ವರುಷದಂತೆ ಮುಂದಿನ ವರುಷವೂ ತನ್ನ ತೋಟದ ತೆಂಗಿಗೆ ಹೆಚ್ಚಿನ‌ ಬೇಡಿಕೆ ಇರುವುದೋ ಇಲ್ಲವೋ..?

* ಮಕ್ಕಳಿಗೆ ತಾನು ಅಂದುಕೊಂಡಂತೆ ಸರ್ಕಾರಿ ಕೆಲಸ‌ ಸಿಗುತ್ತದೋ ಇಲ್ಲವೋ..?

ಹೀಗೇ ಒಂದೇ ಎರಡೇ ಸ್ವಾಮಿಗಳೆ, ನೂರಾರು ಚಿಂತೆಗಳು ನನ್ನನ್ನು ಕಾಡುತ್ತದೆ. ಕಣ್ಣಿಗೆ ನಿದ್ರೆ ಇಲ್ಲ. ಸಮಾಧಾನವಿಲ್ಲ. ತನ್ನಿಂದ ಮನೆಯವರಿಗೂ ಒಂದು ರೀತಿಯ ಕಿರಿಕಿರಿ. ದಯವಿಟ್ಟು ಪರಿಹಾರ ಸೂಚಿಸಿ ಎಂದು ಕೇಳಿಕೊಳ್ಳುತ್ತಾನೆ.

ರೈತನ ಮಾತುಗಳನ್ನು ಆಲಿಸಿದ ಸನ್ಯಾಸಿಯು ಈ ದಿನ ತುರ್ತು ಕಾರ್ಯಗತ ಬೇರೊಂದು ಊರಿಗೆ ಹೋಗುತ್ತಿರುವ ಕಾರಣ ಮರುದಿನ ಬಂದು ಭೇಟಿಯಾಗುವಂತೆ ದಂಪತಿಗಳಿಗೆ ಹೇಳುತ್ತಾರೆ.

New Year 2023: Some new thoughts in new year

ಅಂತೆಯೇ ಮರುದಿನ ರೈತ ದಂಪತಿಗಳು ಸನ್ಯಾಸಿಯನ್ನು ನೋಡಲು ಬಂದಾಗ ಬಹಳ ಹೊತ್ತು ಹೊರಗೆ ಕಾಯಬೇಕಾಗುತ್ತದೆ. ಸನ್ಯಾಸಿಗಳನ್ನು ಭೇಟಿ ಮಾಡಲು ಬಹಳ ದೂರದಿಂದ ಬಂದ ಅನೇಕ ಜನರು ಹೊರಗೆ ಕಾಯುತ್ತಿರುತ್ತಾರೆ. ಹಸಿವು ಬಾಯಾರಿಕೆ ಕಾರಣ ಕೆಲವರು ಎದ್ದೂ ಸಹ ಹೋಗುತ್ತಾರೆ.

ಸನ್ಯಾಸಿಗಳು ಬಹಳ ಹೊತ್ತಾದರೂ ಯಾರನ್ನೂ ಭೇಟಿ ಮಾಡದೆ ಒಂದು ಕೋಣೆಯಲ್ಲಿ ಒಬ್ಬರೇ ಕುಳಿತಿದ್ದಾರೆ ಎಂಬ ವಿಷಯ ತಿಳಿದು ರೈತ ದಂಪತಿಗಳಿಗೆ ಏಕೆ ಹೀಗೆ ಎಂಬ ಪ್ರಶ್ನೆ ಕಾಡುತ್ತದೆ.

ಸಂಜೆಯ ಹೊತ್ತಿಗೆ ರೈತ ದಂಪತಿಗಳಿಗೆ ಸನ್ಯಾಸಿಗಳನ್ನು ಭೇಟಿಯಾಗುವ ಅವಕಾಶ ದೊರೆತಾಗ , ಸನ್ಯಾಸಿಗಳು ಮೌನವಾಗಿದ್ದು ತಮ್ಮೆದುರಿಗಿದ್ದ ಹಾಲು ತುಂಬಿದ ಗಾಜಿನ ಲೋಟವನ್ನೇ ದಿಟ್ಟಿಸಿ ನೋಡುತ್ತಿರುತ್ತಾರೆ. ಏನಾಯಿತು ಎಂದು ರೈತನು ಕೇಳಿದಾಗ,

ಸನ್ಯಾಸಿಗಳು

* ಹಾಲಿಗೆ ಧೂಳು ಬಿದ್ದರೆ..?

* ಈ ಹಾಲು ಹಾಳಾಗಿಬಿಟ್ಟರೆ?

* ಈ ಹಾಲನ್ನು ಬೆಕ್ಕು‌ ಕುಡಿದುಬಿಟ್ಟರೆ..?

* ಓಡಾಡುವಾಗ ಕಾಲು ತಾಕಿ ಹಾಲು ಚೆಲ್ಲಿಬಿಟ್ಟರೆ..?

* ಯಾರಾದರೂ ಕುಡಿಯಲು ಹಾಲು ಕೊಡಿ ಎಂದು ಕೇಳಿಬಿಟ್ಟರೆ..?

* ತಾನು ಅತ್ತ ಇತ್ತ ಹೋದಾಗ ಯಾರಾದರೂ ಈ ಹಾಲು ‌ಕುಡಿದುಬಿಟ್ಟರೆ..? ಏನು‌ ಮಾಡುವುದು

ಎಂದು ಬಹಳ ಚಿಂತೆಯಾಗಿದೆ ಎನ್ನುತ್ತಾರೆ. ಸನ್ಯಾಸಿಗಳ ಮಾತಿಗೆ ರೈತನು ಜೋರಾಗಿ ಫಳ್ಳ್.... ಎಂದು ನಕ್ಕುಬಿಡುತ್ತಾನೆ. ನಗುತ್ತಲೇ ಅಲ್ಲಾ ಸ್ವಾಮಿಗಳೇ, ಇದರಲ್ಲಿ ಚಿಂತೆ ಮಾಡುವುದೇನಿದೆ...?

* ಹಾಲಿನ ಲೋಟವನ್ನು ತಟ್ಟೆಯಿಂದ ಮುಚ್ಚಬಹುದು

* ಹಾಲು ಹಸಿ ಇದ್ದರೆ ಕಾಯಿಸಿಟ್ಟರೆ ಹಾಲು‌ ಕೆಡದು

* ಹಾಲನ್ನು ಸ್ವಲ್ಪ ಹೊತ್ತು ನೋಡಿಕೋ ಎಂದರೆ ಯಾರಾದರೂ ನಿಗಾವಹಿಸುತ್ತಾರೆ.

* ಹಾಲನ್ನು ಕಪಾಟಿನೊಳಗಿಟ್ಟು ಬಾಗಿಲು ಹಾಕಿದರೆ ಎಲ್ಲಿ ಚೆಲ್ಲುವುದೋ, ಬೆಕ್ಕಾಗಲೀ , ಜನರೇ ಆಗಲಿ‌ ಕುಡಿಯುತ್ತಾರೋ ಎಂಬ ಭಯವಿರುವುದಿಲ್ಲ.

* ಹಾಗೊಮ್ಮೆ ಯಾರಾದರೂ ಕುಡಿದರೂ ಅಂಥ ನಷ್ಟವೇನಿಲ್ಲ. ಹಾಲಿರುವುದೇ ಹಸಿದಾಗ ಕುಡಿಯಲೆಂದು. ಸದ್ವಿನಿಯೋಗವೇ ಆಗುತ್ತದೆ.

* ಒಂದು ಲೋಟ ಹಾಲು ಮತ್ತೂ ಸಿಗುವುದು.

ಎಲ್ಲಕ್ಕಿಂತ ಹೆಚ್ಚಾಗಿ ನೀವು ಯೋಚಿಸಿತ್ತಿರುವಂತಹ ಯಾವುದೇ ಸಂದರ್ಭಗಳು ಈಗ ನಡದೇ ಇಲ್ಲ. ಮುಂದೆ ಹೀಗೆ ನಡೆಯಬಹುದೇನೋ , ಹೀಗಾಗಬಹುದೇನೋ ಹಾಗಾಗಬಹುದೇನೋ ಎಂದು ಯೋಚಿಸುತ್ತಾ ವೃತಾ ಚಿಂತಾಕ್ರಾಂತರಾಗಿದ್ದೀರಿ. ಅನೇಕ ಅನುಯಾಯಿಗಳು ನಿಮ್ಮನ್ನು ಕಾಣಲಾಗದೇ ನಿರಾಶರಾಗಿ ಹಾಗೆಯೇ ಹೊರಟು ಹೋದರು. ಸಮಯ ಹಾಗು ಶಕ್ತಿಯ ಸರಿಯಾದ ಬಳಕೆ ಸರಿಯಾಗಿ ಆಗಲೇ ಇಲ್ಲ. ಮುಂದಾಗುವುದು ಈಗಲೇ ಹೇಗೆ ತಿಳಿಯುತ್ತದೆ? ಒಂದು ವೇಳೆ ನೀವು ಅಂದುಕೊಂಡಂತಹ ಸಂದರ್ಭಗಳು ಎದುರಾದರೂ ಚಿಂತಿಸುವ ಬದಲು ಅದಕ್ಕೆ ತಕ್ಕುದಾದ ಸಿದ್ಧತೆಗಳು , ಪರಿಹಾರ ಹಾಗು ಮಾರ್ಗೋಪಾಯಗಳ ಬಗ್ಗೆ ಯೋಚಿಸುವುದು ಉತ್ತಮ ಅಲ್ಲವೇ..? ಇಷ್ಟು ದೊಡ್ಡ ಸನ್ಯಾಸಿಗಳಾದ ನಮಗೆ ಇಷ್ಟು ಸಣ್ಣವಿಷಯ ಅರ್ಥವಾಗದೇ ಹೋಯಿತಲ್ಲಾ ಎಂದು ನಗು ಬರುತ್ತಿದೆ ಎನ್ನುತ್ತಾನೆ.

ತನ್ನ ಮಾತುಗಳನ್ನು ಕೇಳುತ್ತಾ ಕೇಳುತ್ತಾ ಸನ್ಯಾಸಿಗಳು ನಗುತ್ತಿರುವುದನ್ನು ಕಂಡ, ರೈತನಿಗೆ ಆ ನಗೆಯ ಹಿಂದಿನ ವ್ಯಾಖ್ಯಾನ ಅರ್ಥ ತಿಳಿಯುತ್ತದೆ. ರೈತನಿಗೆ ತನ್ನ ಚಿಂತೆಗೆ ಪರಿಹಾರ ತನ್ನಲ್ಲೇ ಇದೆ ಎಂದು ಅರಿವಾಗುತ್ತದೆ.

ಕಥೆ ಓದುವಾಗ ಹಲವರು ತಮ್ಮನ್ನು ತಾವು ರೈತನ ಪಾತ್ರದಲ್ಲಿ ಕಾಣಬಹುದು ಅಥವಾ ರೈತನ ಸ್ಥಿತಿಯಲ್ಲಿ ಅನೇಕರನ್ನು ನಮ್ಮ ಸುತ್ತಮುತ್ತ ಇರಬಹುದು. ಸದಾ ಚಿಂತೆ, ಮುಖದಲ್ಲಿ ಒಂದು ಪ್ರಶ್ನಾರ್ಥಕ ಚಿನ್ಹೆ ಇಟ್ಟುಕೊಂಡೇ ಇರುತ್ತಾರೆ. ಯಾವಾಗಲೂ ಮುಂದೆ ಹೀಗಾಗಬಹುದು ಹಾಗಾಗಬಹುದು ಎಂದು ಚಿಂತಿಸುತ್ತಾ ವರ್ತಮಾನಕ್ಕೆ ಸ್ಪಂದಿಸದೇ ಹೋಗುತ್ತಾರೆ.

ಉದಾಹರಣೆಗೆ ಊಟ ಮಾಡುವಾಗ , ಊಟದ ನಂತರ ಊರಿಗೆ ಹೋಗುವ ಬಸ್ ಎಲ್ಲಿ ತಪ್ಪಿಹೋಗುವುದೋ ಎಂಬ ಚಿಂತೆ. ಪ್ರವಾಸದಲ್ಲಿರುವಾಗ ಮರುದಿನದ ಕಛೇರಿ ಮೀಟಿಂಗ್ ಅಲ್ಲಿ ಏನಾಗುವುದೋ ಎಂಬ ಚಿಂತೆ.

*ಕಾರಣಗಳು*

* ಉದ್ದೇಶದ ಸ್ಪಷ್ಟತೆಯ ಕೊರತೆ ( lack of clarity)

* ವಾಸ್ತವಕ್ಕೆ ದೂರವಾದ ಫಲಿತಾಂಶ ನಿರೀಕ್ಷೆ

* ನಿರಾಶೆ/ ನಕಾರಾತ್ಮಕ ಯೋಚನೆಗಳು

* ಪರಿಸ್ಥಿತಿ ಎದುರಿಸುವಲ್ಲಿನ ಆತ್ಮವಿಶ್ವಾಸದ ಕೊರತೆ

* ಸವಾಲುಗಳನ್ನು ಸಮಸ್ಯೆ ಎಂದುಕೊಳ್ಳುವುದು

* ಸಿದ್ಧತೆಯ ಕೊರತೆ

*ಪರಿಹಾರ ಕ್ರಮಗಳು*

* ವರ್ತಮಾನದಲ್ಲಿ ಬದುಕಿ

* ದಿನದ ಸಣ್ಣ ಪುಟ್ಟ ಸಂಗತಿಗಳಲ್ಲಿ ಸಂತೋಷ ಕಾಣಿರಿ

* ಮಾಡುವ ಕೆಲಸದ ಗುರಿ/ ಉದ್ದೇಶ ಸ್ವಪ್ಟವಾಗಿರಲಿ

* ನಿರೀಕ್ಷೆಗಳು ವಾಸ್ತವವಾಗಿಟ್ಟುಕೊಂಡಾಗ ನಿರಾಶೆ ಕಡಿಮೆ

* ಸ್ನೇಹವಲಯ ಹಿತಕರವಾಗಿರಲಿ. ಮುಕ್ತ ಮಾತುಕತೆ ಇರಲಿ.

* ಸವಾಲುಗಳನ್ನು ಎದುರಿಸುವಾಗ ಸಾಮರ್ಥ್ಯದ ಅರಿವಾಗುತ್ತದೆ.

*ನಿಮ್ಮಲ್ಲಿ ನಂಬಿಕೆ ಇಡಿ

* ಭವಿಷ್ಯದ ಬಗ್ಗೆ ಆತಂಕ ಬೇಡ ಸಿದ್ದರೆ ಇರಲಿ.

* ಹವ್ಯಾಸ ಬೆಳೆಸಿಕೊಳ್ಳಿ.

ಚಿಂತೆ ಸಮಸ್ಯೆ ಹೆಚ್ಚಿಸಿದರೆ, ಚಿಂತನೆ ಪರಿಹಾರ ಹಾಗು ಧನಾತ್ಮಕತೆ ಕಡೆಗಿನ ದಾರಿದೀಪವಾಗಿದೆ. ಈ ಹೊಸ ವರುಷದ ಸಂಕಲ್ಪಗಳಲ್ಲಿ ಚಿಂತೆ ಅಳಿಸಿ ಚಿಂತನೆ ಬೆಳೆಸುವ ಸಂಕಲ್ಪವನ್ನೂ ನಮ್ಮದಾಗಿಸಿಕೊಳ್ಳೋಣ.

English summary
New Year 2023: Some new thoughts in new year by doctor Rekha Belawadi about stress and the worry . know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X