Priti Adani: ಭಾರತದ ಸೆಮಿಕಂಡಕ್ಟರ್, ಎಐ ಕ್ರಾಂತಿಗೆ ಉದ್ಯಮ-ಶಿಕ್ಷಣ ಸಂಸ್ಥೆಗಳ ಪಾಲುದಾರಿಕೆ ಅತ್ಯಗತ್ಯ: ಡಾ. ಪ್ರೀತಿ ಅದಾನಿ
Priti Adani: ಭಾರತದಲ್ಲಿ ಪ್ರಬಲ ಸೆಮಿಕಂಡಕ್ಟರ್ ವ್ಯವಸ್ಥೆಯನ್ನು ನಿರ್ಮಿಸಲು ಹಾಗೂ ನುರಿತ ಮಾನವ ಸಂಪನ್ಮೂಲವನ್ನು ರೂಪಿಸಲು ಉದ್ಯಮ ಕ್ಷೇತ್ರ ಮತ್ತು ಶೈಕ್ಷಣಿಕ ಕ್ಷೇತ್ರಗಳ ನಡುವೆ ಬಲವಾದ ಸಹಯೋಗ ಅಗತ್ಯ ಎಂದು ಅದಾನಿ ವಿಶ್ವವಿದ್ಯಾಲಯದ ಅಧ್ಯಕ್ಷೆ ಡಾ.ಪ್ರೀತಿ ಅದಾನಿ ಅವರು ಹೇಳಿದ್ದಾರೆ.
ಅದಾನಿ ವಿಶ್ವವಿದ್ಯಾಲಯದಲ್ಲಿ ಆಯೋಜಿಸಲಾಗಿದ್ದ 'ಹಾರ್ಡ್‌ವೇರ್, ಇನ್ನೋವೇಶನ್, ಪ್ರೊಸೆಸಿಂಗ್ ಮತ್ತು ಸೆಮಿಕಂಡಕ್ಟರ್ ತಂತ್ರಜ್ಞಾನಗಳ ಸಮಾವೇಶ'ದಲ್ಲಿ (CHIPS 2026) ಮಾತನಾಡಿದ ಅವರು, 'ದೇಶದ ತಾಂತ್ರಿಕ ಆಕಾಂಕ್ಷೆಗಳಿಗೆ ಸಂಶೋಧನೆ, ವಿಶೇಷ ಕೌಶಲ್ಯ ಮತ್ತು ಮಾನವ ಬುದ್ಧಿಮತ್ತೆಯ ಬೆಂಬಲವಿರಬೇಕು,' ಎಂದು ತಿಳಿಸಿದರು.

ಪ್ರೀತಿ ಅದಾನಿ ಹೇಳಿದ್ದೇನು?
'ನಮ್ಮ ತಾಂತ್ರಿಕ ಪ್ರಗತಿಯ ನೈಜ ಅಳತೆಗೋಲು ಯಂತ್ರಗಳು ಎಷ್ಟು ಕೆಲಸ ಮಾಡುತ್ತವೆ ಎಂಬುದರ ಮೇಲಲ್ಲ. ಬದಲಿಗೆ ಉತ್ತಮ ಭವಿಷ್ಯವನ್ನು ನಿರ್ಮಿಸಲು ನಾವು ಮಾನವ ಬುದ್ಧಿಮತ್ತೆಯನ್ನು ಎಷ್ಟು ಜಾಣತನದಿಂದ ಅಭಿವೃದ್ಧಿಪಡಿಸುತ್ತೇವೆ ಮತ್ತು ಬಳಸಿಕೊಳ್ಳುತ್ತೇವೆ ಎಂಬುದರ ಮೇಲೆ ಆಧಾರಿತವಾಗಿರುತ್ತದೆ,' ಎಂದು ಡಾ.ಪ್ರೀತಿ ಅದಾನಿ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕೇವಲ ಅತ್ಯಾಧುನಿಕ ತಯಾರಿಕಾ ಘಟಕಗಳನ್ನು ಸ್ಥಾಪಿಸುವುದರಿಂದ ಮಾತ್ರ ಸೆಮಿಕಂಡಕ್ಟರ್ ಉದ್ಯಮ ಬೆಳೆಯುವುದಿಲ್ಲ. ಬದಲಾಗಿ, ಸಂಕೀರ್ಣ ತಂತ್ರಜ್ಞಾನಗಳನ್ನು ವಿನ್ಯಾಸಗೊಳಿಸುವ, ಅಭಿವೃದ್ಧಿಪಡಿಸುವ ಹಾಗೂ ಸುಧಾರಿಸುವ ಸಾಮರ್ಥ್ಯವನ್ನು ಭಾರತ ಹೆಚ್ಚಿಸಿಕೊಳ್ಳಬೇಕಿದೆ. ಭಾರತದ 'ಸೆಮಿಕಂಡಕ್ಟರ್ ಮಿಷನ್' ಈ ಕ್ಷೇತ್ರಕ್ಕೆ ಹೊಸ ವೇಗ ನೀಡಿದ್ದು, ಗುಜರಾತ್‌ನ ಧೋಲೇರಾ ಮತ್ತು ಸಾನಂದ್‌ನಲ್ಲಿನ ಯೋಜನೆಗಳು ದೊಡ್ಡ ಮಟ್ಟದಲ್ಲಿ ಬದಲಾವಣೆ ತರುತ್ತಿವೆ.
ವಿಶಾಖಪಟ್ಟಣಂನಲ್ಲಿ ಎಐ ಹಬ್ ಸ್ಥಾಪನೆ..
ಕೃತಕ ಬುದ್ಧಿಮತ್ತೆಗೆ (AI) ಅಗತ್ಯವಿರುವ ಅಡ್ವಾನ್ಸ್ಡ್ ಚಿಪ್‌ಗಳು, ಸರ್ವರ್‌ಗಳು, ಡೇಟಾ ಸೆಂಟರ್‌ಗಳು ಮತ್ತು ನಿರಂತರ ವಿದ್ಯುತ್ ಪೂರೈಕೆಯಂತಹ ಮೂಲಸೌಕರ್ಯಗಳ ಪ್ರಾಮುಖ್ಯತೆಯನ್ನು ಅವರು ಪ್ರಸ್ತಾಪಿಸಿದರು. ಈ ನಿಟ್ಟಿನಲ್ಲಿ ಅದಾನಿ ಗ್ರೂಪ್‌ನ ಅಧ್ಯಕ್ಷ ಗೌತಮ್ ಅದಾನಿ ಅವರು 2035ರ ವೇಳೆಗೆ ನವೀಕರಿಸಬಹುದಾದ ಇಂಧನ ಚಾಲಿತ ಎಐ ಮೂಲಸೌಕರ್ಯಕ್ಕಾಗಿ 100 ಬಿಲಿಯನ್ ಡಾಲರ್ ಹೂಡಿಕೆ ಮಾಡುವುದಾಗಿ ಘೋಷಿಸಿದ್ದಾರೆ. ವಿಶಾಖಪಟ್ಟಣಂನಲ್ಲಿ ಎಐ ಹಬ್ ಸ್ಥಾಪಿಸಲು ಗೂಗಲ್ ಜೊತೆಗಿನ ಸಹಯೋಗವೂ ಈ ಯೋಜನೆಯ ಭಾಗವಾಗಿದೆ.
ಅದಾನಿ ವಿಶ್ವವಿದ್ಯಾಲಯದ ಕಾರ್ಯಯೋಜನೆಯ ಪ್ರಮುಖ ಆಂಶಗಳು
ಅಹಮದಾಬಾದ್‌ನಲ್ಲಿ ಆರಂಭವಾಗಲಿರುವ ಅದಾನಿ ವಿಶ್ವವಿದ್ಯಾಲಯದ ಜಾಗತಿಕ ಕ್ಯಾಂಪಸ್‌ನಲ್ಲಿ ಸೆಮಿಕಂಡಕ್ಟರ್ ಡಿಸೈನಿಂಗ್, ಮ್ಯಾನುಫ್ಯಾಕ್ಚರಿಂಗ್ ಮತ್ತು ಪ್ಯಾಕೇಜಿಂಗ್ ಕುರಿತು ವಿಶೇಷ ತರಬೇತಿ ನೀಡಲಾಗುವುದು. ಈ ಕುರಿತ ಪ್ರಮುಖ ಅಂಶಗಳು ಕೆಳಗೆ ನೀಡಲಾಗಿದೆ ಗಮನಿಸಿ.
* ಯುವ ಇಂಜಿನಿಯರ್‌ಗಳಿಗೆ ವಿಶೇಷ ಕೋರ್ಸ್‌ಗಳು, ಶೈಕ್ಷಣಿಕ ತರಬೇತಿ.
* ಉದ್ಯಮದ ವೃತ್ತಿಪರರಿಗೆ ಎಕ್ಸಿಕ್ಯೂಟಿವ್ ಶಿಕ್ಷಣ ಮತ್ತು ಬೋಧಕರಿಗೆ ತರಬೇತಿ ಕಾರ್ಯಕ್ರಮಗಳು.
* ತಾಂತ್ರಿಕ ಜ್ಞಾನದ ಜೊತೆಗೆ ಸ್ವತಂತ್ರ ಆಲೋಚನೆ ಮತ್ತು ಸಮಸ್ಯೆ ಪರಿಹರಿಸುವ ಕೌಶಲ್ಯಕ್ಕೆ ಆದ್ಯತೆ.
CHIPS 2026 ಸಮಾವೇಶದ ಪ್ರಮುಖ ಅಂಶಗಳು
ಅದಾನಿ ವಿಶ್ವವಿದ್ಯಾಲಯವು ಐಐಟಿ ಮಂಡಿ (IIT Mandi), ವಿಎಲ್‌ಎಸ್‌ಐ ಸೊಸೈಟಿ ಆಫ್ ಇಂಡಿಯಾ (VLSI Society of India) ಮತ್ತು ಸಿರಿಲ್ ಅಮರಚಂದ್ ಮಂಗಲದಾಸ್ ಸಂಸ್ಥೆಗಳ ಸಹಯೋಗದೊಂದಿಗೆ ಈ ಸಮಾವೇಶವನ್ನು ಆಯೋಜಿಸಿತ್ತು.
ಕ್ವಾಲ್ಕಾಮ್ (Qualcomm), ಎನ್‌ಎಕ್ಸ್‌ಪಿ ಸೆಮಿಕಂಡಕ್ಟರ್ಸ್ (NXP Semiconductors), ಮೈಕ್ರಾನ್ ಟೆಕ್ನಾಲಜಿ (Micron Technology), ಸಿನೋಪ್ಸಿಸ್ (Synopsys) ಮತ್ತು ಇನ್ಫಿನಿಯಾನ್ ಟೆಕ್ನಾಲಜೀಸ್‌ನಂತಹ ಪ್ರಮುಖ ಜಾಗತಿಕ ಸಂಸ್ಥೆಗಳ ತಜ್ಞರು ಭಾಗವಹಿಸಿ ವೈರ್‌ಲೆಸ್ ತಂತ್ರಜ್ಞಾನ, ಮೆಮೊರಿ ಸ್ಟೋರೇಜ್ ಮತ್ತು ಪವರ್ ಸಿಸ್ಟಮ್‌ಗಳ ಕುರಿತು ಸುದ್ದಿಗೋಷ್ಠಿಗಳನ್ನು ನಡೆಸಿದರು.
ಉದ್ಯಮದ ನಿಜವಾದ ಸವಾಲುಗಳನ್ನು ತರಗತಿ ಹಾಗೂ ಪ್ರಯೋಗಾಲಯಗಳಿಗೆ ತರುವಂತೆ ಕೈಗಾರಿಕಾ ಸಂಸ್ಥೆಗಳಿಗೆ ಡಾ.ಪ್ರೀತಿ ಅದಾನಿ ಆಹ್ವಾನ ನೀಡಿದರು. ದೇಶದ ನಿಜವಾದ ಪ್ರಗತಿಯು ಯುವ ಸಮುದಾಯದ ನಾವೀನ್ಯತೆ ಹಾಗೂ ಮಾನವ ಸಂಪನ್ಮೂಲವನ್ನು ಎಷ್ಟು ಪರಿಣಾಮಕಾರಿಯಾಗಿ ಬೆಳೆಸಿಕೊಳ್ಳುತ್ತೇವೆ ಎಂಬುದರ ಮೇಲೆ ಆಧಾರಿತವಾಗಿದೆ ಎಂದು ಅವರು ತಿಳಿಸಿದರು.


Click it and Unblock the Notifications
