ನವರಾತ್ರಿ ಪ್ರಯುಕ್ತ ಗುಜರಾತ್‌ನ ಶ್ರೀಮದ್ ರಾಜಚಂದ್ರ ಆಶ್ರಮಕ್ಕೆ ಗೌತಮ್ ಅದಾನಿ, ಡಾ. ಪ್ರೀತಿ ಅದಾನಿ ಭೇಟಿ
ನವರಾತ್ರಿ ಹಬ್ಬದ ಪ್ರಯುಕ್ತ, ಅದಾನಿ ಗ್ರೂಪ್ ಅಧ್ಯಕ್ಷರಾದ ಗೌತಮ್ ಅದಾನಿ ಹಾಗೂ ಅದಾನಿ ಫೌಂಡೇಶನ್‌ನ ಅಧ್ಯಕ್ಷೆ ಡಾ. ಪ್ರೀತಿ ಅದಾನಿ ಅವರು ದಕ್ಷಿಣ ಗುಜರಾತ್‌ನಲ್ಲಿರುವ ಪ್ರಸಿದ್ಧ ಶ್ರೀಮದ್ ರಾಜಚಂದ್ರ ಮಿಷನ್ ಧರಮ್‌ಪುರ್ ಆಶ್ರಮಕ್ಕೆ ಭಾನುವಾರ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಅವರು ಗುರುದೇವಶ್ರೀ ರಾಕೇಶ್‌ಜಿ ಅವರನ್ನ ಭೇಟಿಯಾಗಿ ವಿಶೇಷ ಆಶೀರ್ವಾದ ಪಡೆದರು. ಈ ಭೇಟಿಯು ಕೇವಲ ಆಧ್ಯಾತ್ಮಿಕತೆಗಷ್ಟೇ ಸೀಮಿತವಾಗಿರದೆ, ನಿಸ್ವಾರ್ಥ ಸೇವೆ ಹಾಗೂ ಸಮಾಜ ಕಲ್ಯಾಣ ಕಾರ್ಯಕ್ರಮಗಳಲ್ಲಿ ಉಭಯ ಸಂಸ್ಥೆಗಳ ಸಹಯೋಗ ಸಾಧಿಸುವ ಪ್ರಮುಖ ಉದ್ದೇಶವನ್ನ ಹೊಂದಿತ್ತು. ಮುಖ್ಯವಾಗಿ ಆರೋಗ್ಯ ಕಾಳಜಿ, ಮಹಿಳಾ ಸಬಲೀಕರಣ ಮತ್ತು ಯುವಜನರ ಅಭಿವೃದ್ಧಿ ಕುರಿತು ಇಲ್ಲಿ ಮಹತ್ವದ ಚರ್ಚೆಗಳು ನಡೆದವು.
ಗೌತಮ್ ಅದಾನಿ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಈ ಭೇಟಿಯ ಅನುಭವವನ್ನು ಹಂಚಿಕೊಂಡಿದ್ದಾರೆ. "ನಾನು ಮತ್ತು ಪ್ರೀತಿ ಅದಾನಿ ಅವರು ಪೂಜ್ಯ ಗುರುದೇವಶ್ರೀ ರಾಕೇಶ್‌ಜಿ ಅವರೊಂದಿಗೆ ಶ್ರೀಮದ್ ರಾಜಚಂದ್ರ ಆಶ್ರಮದಲ್ಲಿ ಉತ್ತಮ ಸಮಯ ಕಳೆದೆವು ಮತ್ತು ಅವರ ಆಶೀರ್ವಾದ ಪಡೆದೆವು" ಎಂದು ಬರೆದುಕೊಂಡಿದ್ದಾರೆ.

ವಿಶ್ವದ ಅತಿ ಎತ್ತರದ ಶ್ರೀಮದ್ ರಾಜಚಂದ್ರಜಿ ಅವರ ಪ್ರತಿಮೆಗೆ ಚರಣ ಪ್ರಕ್ಷಾಲನ ಮಾಡಿದ್ದು ಅತ್ಯಂತ ಭಾವುಕ ಹಾಗೂ ಮರೆಯಲಾಗದ ಅನುಭವ ಎಂದು ಅವರು ಬಣ್ಣಿಸಿದ್ದಾರೆ. ಸಭೆಯಲ್ಲಿ ಪೂಜ್ಯ ಗುರುದೇವಶ್ರೀ ಅವರು 'ಸಾಧನೆ' (ಆಧ್ಯಾತ್ಮಿಕ ಅಭ್ಯಾಸ) ಮತ್ತು 'ಸೇವೆ' (ನಿಸ್ವಾರ್ಥ ಸೇವೆ) ನಡುವಿನ ಅವಿನಾಭಾವ ಸಂಬಂಧವನ್ನು ವಿವರಿಸಿದರು.
ಮನುಷ್ಯನ ಜೀವನ, ಸಂಪನ್ಮೂಲಗಳು ಹಾಗೂ ಸಿಗುವ ಅವಕಾಶಗಳನ್ನ ಸಮಾಜದ ಒಳಿತಿಗಾಗಿ ಬಳಸುವ ಮಹತ್ವವನ್ನ ಅವರು ಒತ್ತಿ ಹೇಳಿದರು. ಇದೇ ವೇಳೆ ಅದಾನಿ ದಂಪತಿಗಳು ಎಸ್‌ಆರ್‌ಎಂಡಿಯ ರಾಜ್ ಸಭಾಗೃಹ ನಡೆದ ಸತ್ಸಂಗದಲ್ಲೂ ಪಾಲ್ಗೊಂಡರು.
ಆಸ್ಪತ್ರೆಗೆ ಡಾ. ಪ್ರೀತಿ ಅದಾನಿ ಭೇಟಿ
ಈ ಭೇಟಿಯ ಅಂಗವಾಗಿ ಡಾ. ಪ್ರೀತಿ ಅದಾನಿ ಅವರು ಶ್ರೀಮದ್ ರಾಜಚಂದ್ರ ಸರ್ವಮಂಗಲ್ ಮಹಿಳಾ ಉತ್ಕೃಷ್ಟತಾ ಕೇಂದ್ರಕ್ಕೆ ಭೇಟಿ ನೀಡಿದರು. ಅಲ್ಲಿ ಕೌಶಲ್ಯ ಅಭಿವೃದ್ಧಿ, ಜೀವನೋಪಾಯ ಮತ್ತು ಉದ್ಯಮಶೀಲತೆ ಕಾರ್ಯಕ್ರಮಗಳ ಮೂಲಕ ಪ್ರಯೋಜನ ಪಡೆಯುತ್ತಿರುವ ಬುಡಕಟ್ಟು ಮಹಿಳೆಯರೊಂದಿಗೆ ಅವರು ಆತ್ಮೀಯವಾಗಿ ಸಂವಾದ ನಡೆಸಿದರು.
ಬಳಿಕ ಶ್ರೀಮದ್ ರಾಜಚಂದ್ರ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರಕ್ಕೆ ಭೇಟಿ ನೀಡಿದ ಅವರು, ವಿಕಲಚೇತನ ಮಕ್ಕಳಿಗೆ ವೈದ್ಯಕೀಯ ನೆರವು ವಿತರಿಸುವ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಎಸ್‌ಆರ್‌ಎಂಡಿಯ ಜಿನ್ಮಂದಿರದಲ್ಲಿ ಅವರು ಭಗವಾನ್ ಮಹಾವೀರರಿಗೆ ವಿಶೇಷ ಪ್ರಾರ್ಥನೆಯನ್ನ ಸಲ್ಲಿಸಿದರು.
ಅದಾನಿ ಫೌಂಡೇಶನ್ ಮತ್ತು ಎಸ್‌ಆರ್‌ಎಲ್‌ಸಿ ನಡುವೆ ಸಹಯೋಗದ ಚರ್ಚೆ
ಭವಿಷ್ಯದ ಸಮಾಜ ಕಲ್ಯಾಣ ಯೋಜನೆಗಳ ಬಗ್ಗೆಯೂ ಈ ವೇಳೆ ಮಹತ್ವದ ಚರ್ಚೆಗಳು ನಡೆದವು. ಅದಾನಿ ಫೌಂಡೇಶನ್ ಹಾಗೂ ಮಿಷನ್‌ನ ಮಾನವೀಯ ವಿಭಾಗವಾದ 'ಶ್ರೀಮದ್ ರಾಜಚಂದ್ರ ಲವ್ ಅಂಡ್ ಕೇರ್' (SRLC) ನಡುವಿನ ಸಂಭಾವ್ಯ ಸಹಯೋಗದ ಕುರಿತು ವಿಸ್ತೃತ ಮಾತುಕತೆ ನಡೆಸಲಾಯಿತು.
ಎಸ್‌ಆರ್‌ಎಲ್‌ಸಿ ಜೊತೆಗೂಡಿ ಸಮುದಾಯದ ಅಭಿವೃದ್ಧಿಗೆ ಶ್ರಮಿಸುವ ಬಗ್ಗೆ ಗೌತಮ್ ಅದಾನಿ ತೀವ್ರ ಆಸಕ್ತಿ ವ್ಯಕ್ತಪಡಿಸಿದರು. ಡಾ. ಪ್ರೀತಿ ಅದಾನಿ ಅವರು ನೇತ್ರ ಆರೈಕೆ ಉಪಕ್ರಮಗಳ ಮೇಲೆ ಸಹಕಾರ ನೀಡುವ ಬಗ್ಗೆ ಚರ್ಚಿಸಿದರು. ಇದು ಅದಾನಿ ಫೌಂಡೇಶನ್‌ನ ಪ್ರಸ್ತುತ ಕಾರ್ಯಕ್ರಮಗಳಿಗೆ ಸಾಕಷ್ಟು ಪೂರಕವಾಗಿದೆ.
ಶ್ರೀಮದ್ ರಾಜಚಂದ್ರ ಮಿಷನ್ ಧರಮ್‌ಪುರ್ ಹಿನ್ನೆಲೆ
ಸುಮಾರು 355 ಎಕರೆ ಪ್ರದೇಶದಲ್ಲಿ ವಿಸ್ತಾರವಾಗಿರುವ ಶ್ರೀಮದ್ ರಾಜಚಂದ್ರ ಆಶ್ರಮವು, ಶ್ರೀಮದ್ ರಾಜಚಂದ್ರ ಮಿಷನ್ ಧರಮ್‌ಪುರ್‌ನ ಅಂತರಾಷ್ಟ್ರೀಯ ಕೇಂದ್ರ ಕಚೇರಿಯಾಗಿ ಕಾರ್ಯನಿರ್ವಹಿಸುತ್ತಿದೆ. 1994ರಲ್ಲಿ ಪೂಜ್ಯ ಗುರುದೇವಶ್ರೀ ರಾಕೇಶ್‌ಜಿ ಅವರಿಂದ ಸ್ಥಾಪಿಸಲ್ಪಟ್ಟ ಈ ಮಿಷನ್, ಮಹಾತ್ಮ ಗಾಂಧಿಯವರ ಆಧ್ಯಾತ್ಮಿಕ ಗುರುವಾಗಿದ್ದ ಜೈನ ಆಧ್ಯಾತ್ಮಿಕ ಗುರು ಶ್ರೀಮದ್ ರಾಜಚಂದ್ರಜಿ ಅವರಿಂದ ಸ್ಫೂರ್ತಿ ಪಡೆದಿದೆ. ಸಂಸ್ಥೆಯು ಆರು ಖಂಡಗಳಲ್ಲಿ 142ಕ್ಕೂ ಹೆಚ್ಚು ಕೇಂದ್ರಗಳನ್ನ ಹೊಂದಿದೆ.
ಗೌತಮ್ ಅದಾನಿ ಅವರು ಆಧ್ಯಾತ್ಮಿಕ ಒಲವು ಹೊಂದಿದ್ದು, ಈ ವರ್ಷದ ಆರಂಭದಲ್ಲಿ ಅಯೋಧ್ಯೆ, ಕೋಲ್ಕತ್ತಾದ ಕಾಳಿಘಾಟ್ ಮತ್ತು ಉತ್ತರ ಗುಜರಾತ್‌ನ ತರಂಗ ಬೆಟ್ಟಗಳಲ್ಲಿರುವ ಜೈನ ಮಂದಿರಕ್ಕೆ ಭೇಟಿ ನೀಡಿದ್ದರು. ಮೇ 1ರಂದು ತಮ್ಮ 40ನೇ ವಿವಾಹ ವಾರ್ಷಿಕೋತ್ಸವದ ಪ್ರಯುಕ್ತ ಡಾ. ಪ್ರೀತಿ ಅದಾನಿ ಅವರೊಂದಿಗೆ ಕೇದಾರನಾಥಕ್ಕೂ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದರು.


Click it and Unblock the Notifications
