ಅದಾನಿ ಇಂಟರ್‌ನ್ಯಾಶನಲ್ ಸ್ಕೂಲ್‌ನಲ್ಲಿ 'ISSO ನ್ಯಾಷನಲ್ ಗೇಮ್ಸ್ ಚೆಸ್ ಸ್ಪರ್ಧೆ 2026': 425ಕ್ಕೂ ಹೆಚ್ಚು ಸ್ಪರ್ಧಿಗಳು ಭಾಗಿ
ಅಹಮದಾಬಾದ್: 10ಕ್ಕೂ ಹೆಚ್ಚು ರಾಜ್ಯಗಳ 100ಕ್ಕೂ ಹೆಚ್ಚು ಶಾಲೆಗಳ 425ಕ್ಕೂ ಅಧಿಕ ಯುವ ಚೆಸ್ ಆಟಗಾರರು ಐಎಸ್‌ಎಸ್‌ಒ ನ್ಯಾಷನಲ್ ಗೇಮ್ಸ್ ಚೆಸ್ ಸ್ಪರ್ಧೆ 2026ರಲ್ಲಿ ಭಾಗವಹಿಸಲು ಅಹಮದಾಬಾದ್‌ನಲ್ಲಿ ಸೇರಿದ್ದಾರೆ. ಈ ಬೃಹತ್ ಕ್ರೀಡಾಕೂಟಕ್ಕೆ ಪ್ರತಿಷ್ಠಿತ ಅದಾನಿ ಇಂಟರ್‌ನ್ಯಾಶನಲ್ ಸ್ಕೂಲ್ ಆತಿಥ್ಯ ವಹಿಸಿದೆ.
ಎರಡು ದಿನಗಳ ಕಾಲ ನಡೆಯಲಿರುವ ಈ ರಾಷ್ಟ್ರೀಯ ಚಾಂಪಿಯನ್‌ಶಿಪ್‌ನಲ್ಲಿ 800ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಪೋಷಕರು, ತರಬೇತುದಾರರು ಹಾಗೂ ಶಾಲಾ ಪ್ರತಿನಿಧಿಗಳು ಭಾಗವಹಿಸಿದ್ದರು. ಯುವ ಚೆಸ್ ಆಟಗಾರರಿಗೆ ರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧಿಸಲು ಇದೊಂದು ಸುವರ್ಣಾವಕಾಶವಾಗಿದೆ. ಸ್ಪರ್ಧೆಯು ಅಂಡರ್ 11, ಅಂಡರ್ 14, ಅಂಡರ್ 17 ಹಾಗೂ ಅಂಡರ್ 19 ಎಂಬ ನಾಲ್ಕು ವಯೋಮಾನದ ವಿಭಾಗಗಳಲ್ಲಿ ನಡೆಯುತ್ತಿದೆ. ದೇಶಾದ್ಯಂತ ಇರುವ ವಿವಿಧ ಶಾಲೆಗಳ ವಿದ್ಯಾರ್ಥಿಗಳು ತಮ್ಮ ವಯಸ್ಸಿನ ಸ್ಪರ್ಧಿಗಳೊಂದಿಗೆ ಆಟವಾಡಲಿದ್ದಾರೆ.

ಈ ಪಂದ್ಯಾವಳಿಯು ಕೇವಲ ಚೆಸ್ ಕೌಶಲಗಳ ಮೇಲೆ ಮಾತ್ರವಲ್ಲದೆ, ಏಕಾಗ್ರತೆ, ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ ಹಾಗೂ ಒತ್ತಡದ ನಡುವೆಯೂ ಸಂಯಮ ಕಾಪಾಡಿಕೊಳ್ಳುವ ಕೌಶಲಗಳಿಗೆ ಒತ್ತು ನೀಡುತ್ತದೆ.
ರಮೇಶ್‌ಬಾಬು ಪ್ರಜ್ಞಾನಂದ ಅವರಿಂದ ಐಎಸ್‌ಎಸ್‌ಒ ನ್ಯಾಷನಲ್ ಗೇಮ್ಸ್ ಉದ್ಘಾಟನೆ
ಈ ಚಾಂಪಿಯನ್‌ಶಿಪ್ ಅನ್ನ ಭಾರತದ ಹೆಮ್ಮೆಯ ಚೆಸ್ ಗ್ರ್ಯಾಂಡ್‌ಮಾಸ್ಟರ್ ರಮೇಶ್‌ಬಾಬು ಪ್ರಜ್ಞಾನಂದ ಹಾಗೂ ಐಎಸ್‌ಎಸ್‌ಒ ಸಲಹಾ ಮಂಡಳಿ ಸದಸ್ಯೆ ಮತ್ತು ಅದಾನಿ ಇಂಟರ್‌ನ್ಯಾಶನಲ್ ಸ್ಕೂಲ್‌ನ ಪ್ರವರ್ತಕಿಯಾದ ನಮ್ರತಾ ಅದಾನಿ ಅವರ ಸಮ್ಮುಖದಲ್ಲಿ ಉದ್ಘಾಟಿಸಲಾಯಿತು. ಸ್ಪರ್ಧೆಯಲ್ಲಿ ಭಾಗವಹಿಸುವ ವಿದ್ಯಾರ್ಥಿಗಳೊಂದಿಗೆ ಅವರು ನಡೆಸಿದ ಸಂವಾದವು ಉದ್ಘಾಟನಾ ಸಮಾರಂಭಕ್ಕೆ ಮೆರುಗು ತಂದಿತಲ್ಲದೆ, ರಾಷ್ಟ್ರೀಯ ಚಾಂಪಿಯನ್‌ಶಿಪ್‌ನ ಕ್ರೀಡಾ ಮನೋಭಾವವನ್ನ ಮತ್ತಷ್ಟು ಹೆಚ್ಚಿಸಿತು. ಗುಜರಾತ್ ಉಪ ಮುಖ್ಯಮಂತ್ರಿ ಹರ್ಷ ಸಾಂಘವಿ ಕೂಡ ಈ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ನಮ್ರತಾ ಅದಾನಿ, ಚೆಸ್ ಹಾಗೂ ಸ್ಪರ್ಧಾತ್ಮಕ ಕ್ರೀಡೆಗಳ ಮೂಲಕ ವಿದ್ಯಾರ್ಥಿಗಳು ಕಲಿಯಬಹುದಾದ ಪಾಠಗಳ ಬಗ್ಗೆ ಬೆಳಕು ಚೆಲ್ಲಿದರು. "ಮುಂದೇನಾಗಬಹುದು ಎಂದು ಆಲೋಚಿಸುವುದು, ಚಿಂತನಾಶೀಲ ನಿರ್ಧಾರಗಳನ್ನ ತೆಗೆದುಕೊಳ್ಳುವುದು ಹಾಗೂ ಫಲಿತಾಂಶ ಅನಿಶ್ಚಿತವಾಗಿರುವಾಗಲೂ ಸಂಯಮದಿಂದ ಇರುವುದನ್ನ ಚೆಸ್ ಕಲಿಸುತ್ತದೆ. ಈ ಗುಣಗಳು ಚೆಸ್ ಬೋರ್ಡ್‌ನ ಆಚೆಗೂ ಅವರ ಜೀವನದಲ್ಲಿ ಬಹುದೂರದವರೆಗೆ ಸಹಾಯ ಮಾಡುತ್ತವೆ," ಎಂದು ಅವರು ತಿಳಿಸಿದರು. ಫಲಿತಾಂಶ ಏನೇ ಇರಲಿ, ಇಂತಹ ರಾಷ್ಟ್ರೀಯ ಚಾಂಪಿಯನ್‌ಶಿಪ್‌ಗಳು ವಿದ್ಯಾರ್ಥಿಗಳಿಗೆ ಶಿಸ್ತಿನಿಂದ ಸಿದ್ಧರಾಗಲು, ಆತ್ಮವಿಶ್ವಾಸದಿಂದ ಸ್ಪರ್ಧಿಸಲು ಮತ್ತು ಪ್ರತಿಯೊಂದು ಆಟದಿಂದ ಪಾಠ ಕಲಿಯಲು ಅನುವು ಮಾಡಿಕೊಡುತ್ತವೆ ಎಂದು ಅವರು ಹೇಳಿದರು.
ಯುವ ಆಟಗಾರರಿಗೆ ರಾಷ್ಟ್ರೀಯ ವೇದಿಕೆ ಒದಗಿಸಿದ ಚೆಸ್ ಸ್ಪರ್ಧೆ 2026
ವಿಭಿನ್ನ ಶಾಲೆ ಹಾಗೂ ರಾಜ್ಯಗಳ ವಿದ್ಯಾರ್ಥಿಗಳನ್ನ ಒಗ್ಗೂಡಿಸುತ್ತಿರುವ ಈ ಚಾಂಪಿಯನ್‌ಶಿಪ್, ಸ್ಪರ್ಧಿಗಳಿಗೆ ಪರಸ್ಪರ ಕಲಿಯಲು ಹಾಗೂ ಚೆಸ್ ಮೇಲಿನ ತಮ್ಮ ಹಂಚಿಕೆಯ ಆಸಕ್ತಿಯ ಮೂಲಕ ಹೊಸ ಸಂಪರ್ಕಗಳನ್ನ ಬೆಳೆಸಿಕೊಳ್ಳಲು ಅವಕಾಶ ಕಲ್ಪಿಸಿದೆ. ಯುವ ಆಟಗಾರರ ಪಾಲಿಗೆ ಈ ಅನುಭವ ಕೇವಲ ವೈಯಕ್ತಿಕ ಫಲಿತಾಂಶವನ್ನ ಮೀರಿ ನಿಲ್ಲುತ್ತದೆ. ಸ್ಪರ್ಧಾತ್ಮಕ ಕ್ರೀಡೆಗೆ ಬೇಕಾದ ಬೇಡಿಕೆ ಹಾಗೂ ಬಾಂಧವ್ಯವನ್ನ ಅನುಭವಿಸಲು ಈ ರಾಷ್ಟ್ರೀಯ ಮಟ್ಟದ ವೇದಿಕೆ ನೆರವಾಗುತ್ತಿದೆ.
ಶಿಕ್ಷಣದಲ್ಲಿ ಕ್ರೀಡೆಯನ್ನ ಅಳವಡಿಸುವ ದೃಷ್ಟಿಕೋನದ ಭಾಗವಾಗಿ ಅದಾನಿ ಇಂಟರ್‌ನ್ಯಾಶನಲ್ ಸ್ಕೂಲ್ ಈ ಸ್ಪರ್ಧೆಗೆ ಆತಿಥ್ಯ ವಹಿಸಿದೆ. ವಿದ್ಯಾರ್ಥಿಗಳಿಗೆ ಸ್ಪರ್ಧಿಸಲು ಅರ್ಥಪೂರ್ಣ ಅವಕಾಶಗಳನ್ನು ಒದಗಿಸುವ ಜೊತೆಗೆ ಶಿಸ್ತು, ಆತ್ಮವಿಶ್ವಾಸ, ಸ್ಥೈರ್ಯ, ನಾಯಕತ್ವ ಹಾಗೂ ಕ್ರೀಡಾ ಮನೋಭಾವವನ್ನ ಬೆಳೆಸುವುದು ಶಾಲೆಯ ಗುರಿಯಾಗಿದೆ. ಈಗಾಗಲೇ ಪಂದ್ಯಾವಳಿ ಭರದಿಂದ ಸಾಗುತ್ತಿದ್ದು, ಪ್ರತಿಯೊಂದು ಆಟದಲ್ಲೂ ಆಟಗಾರರ ಸಿದ್ಧತೆ, ತೀರ್ಪು ಮತ್ತು ಸಂಯಮವನ್ನ ಪರೀಕ್ಷಿಸಲಾಗುತ್ತಿದೆ.
ಅದಾನಿ ಇಂಟರ್‌ನ್ಯಾಶನಲ್ ಸ್ಕೂಲ್ ಕುರಿತು
ಅದಾನಿ ಇಂಟರ್‌ನ್ಯಾಶನಲ್ ಸ್ಕೂಲ್ ಭವಿಷ್ಯಕ್ಕೆ ಸಿದ್ಧವಾದ ಶೈಕ್ಷಣಿಕ ಅನ್ವಯಗಳೊಂದಿಗೆ ಜಾಗತಿಕ ಕಲಿಕೆಯ ಅನುಭವವನ್ನ ಒದಗಿಸುತ್ತಿದೆ. ಇದರ ಪಠ್ಯಕ್ರಮವು ತಂತ್ರಜ್ಞಾನದೊಂದಿಗೆ ಪ್ರಾಯೋಗಿಕ ಬೋಧನೆಯನ್ನ ಸಂಯೋಜಿಸುತ್ತದೆ ಮತ್ತು ಶೈಕ್ಷಣಿಕ ಕಲಿಕೆಯ ಜೊತೆಗೆ ವಿದ್ಯಾರ್ಥಿಗಳ ಜೀವನ ಕೌಶಲಗಳನ್ನ ಅಭಿವೃದ್ಧಿಪಡಿಸುವತ್ತ ಗಮನಹರಿಸುತ್ತದೆ. ಸಮಗ್ರ ಶಿಕ್ಷಣವನ್ನ ಒದಗಿಸುವುದು ಹಾಗೂ ವಿದ್ಯಾರ್ಥಿಗಳನ್ನ ಪ್ರಜ್ಞಾವಂತ, ಜವಾಬ್ದಾರಿಯುತ, ಸಂತೋಷದಾಯಕ ಹಾಗೂ ಒಳ್ಳೆಯ ನಾಗರಿಕರನ್ನಾಗಿ ರೂಪಿಸುವುದು ಶಾಲೆಯ ಪ್ರಮುಖ ಉದ್ದೇಶವಾಗಿದೆ.


Click it and Unblock the Notifications
