• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮೆರೆಯುವವರ ಮೆರೆದಾಟ ಕ್ಷಣಿಕ, ಬೆರೆಯುವವರ ಬಾಂಧವ್ಯ ಚಿರಕಾಲ

By ಶ್ರೀವತ್ಸ ಜೋಶಿ
|

2008ರಲ್ಲಿ ಶಿಕಾಗೊದಲ್ಲಿ ‘ಅಕ್ಕ' ಸಮ್ಮೇಳನ ನಡೆದಾಗ ಅದರಲ್ಲಿ ಭಾಗವಹಿಸಲು ಕರ್ನಾಟಕದಿಂದ ಬಂದಿದ್ದ ಅತಿಥಿಗಳು ಮತ್ತು ಕಲಾವಿದರಲ್ಲಿ ಚಿತ್ರನಟ ರಮೇಶ್ ಅರವಿಂದ್ ಸಹ ಒಬ್ಬರು. ಸಮ್ಮೇಳನದ ಮೂರೂ ದಿನಗಳಲ್ಲಿ ಅವರು ಒಬ್ಬ ಸಾಮಾನ್ಯ ಕನ್ನಡಿಗನಾಗಿ ಎಲ್ಲರೊಡನೆ ಬೆರೆಯುತ್ತಿದ್ದ ದೃಶ್ಯ ನನಗೆ ಈಗಲೂ ಚೆನ್ನಾಗಿ ನೆನಪಿದೆ. ಚೊಕ್ಕವಾಗಿ ರೇಷ್ಮೆಪಂಚೆ ಉಟ್ಟು ಜುಬ್ಬಾ, ಹೆಗಲ ಮೇಲೊಂದು ಶಾಲು, ತಲೆಗೆ ಮೈಸೂರುಪೇಟ ಧರಿಸಿ ತಮ್ಮ ಎಂದಿನ ನಗುಮುಖದೊಂದಿಗೆ ಓಡಾಡಿಕೊಂಡಿದ್ದರು. ಎಲ್ಲರನ್ನೂ ಪ್ರೀತಿಯಿಂದ ಮಾತನಾಡಿಸುತ್ತಿದ್ದರು. ಎಲ್ಲಿಯವರೆಗೆ ಅವರು ಸಾಮಾನ್ಯರಲ್ಲಿ ಸಾಮಾನ್ಯನಾಗಿ ವರ್ತಿಸಿದ್ದರೆಂದರೆ ಏನಾದರೂ ಸ್ವಯಂಸೇವೆ ಕೆಲಸ ಮಾಡುವುದಕ್ಕೂ ಅವರು ಸಿದ್ಧರಿದ್ದರು!

2014ರಲ್ಲಿ ಸ್ಯಾನ್ ಹೋಸೆ(ಕ್ಯಾಲಿಫೋರ್ನಿಯಾ)ದಲ್ಲಿ 'ಅಕ್ಕ' ಸಮ್ಮೇಳನಕ್ಕೆ ಕರ್ನಾಟಕದಿಂದ ಕರೆಸಲಾದ ಕಲಾವಿದರಲ್ಲಿ ಪುನೀತ್ ರಾಜಕುಮಾರ್ ಪ್ರಮುಖ ಆಕರ್ಷಣೆ. 'ಕೋಟ್ಯಧಿಪತಿ' ಮಾದರಿಯ ‘ಅಕ್ಕ ಅದೃಷ್ಟಾಧಿಪತಿ' ಸ್ಪರ್ಧೆಯನ್ನು ಸಮ್ಮೇಳನದ ಪ್ರಯುಕ್ತ ಆಯೋಜಿಸಿ, ಸ್ಪರ್ಧೆಯ ಅಂತಿಮ ಸುತ್ತನ್ನು ಸಮ್ಮೇಳನದ ಮುಖ್ಯವೇದಿಕೆಯ ಮೇಲೆ, ಸ್ವತಃ ಪುನೀತ್ ನಿರ್ವಹಿಸುವರೆಂದು ಮೊದಲಿಂದ ಸಾಕಷ್ಟು ಪ್ರಚಾರ ಕೊಡಲಾಗಿತ್ತು. ಸಮ್ಮೇಳನದ ಕೊನೆಯ ದಿನ (ಭಾನುವಾರ) ಮಧ್ಯಾಹ್ನ 1:30ಕ್ಕೆ ಆ ಕಾರ್ಯಕ್ರಮ ನಡೆಯಬೇಕಿತ್ತು. ಆದರೆ ಅವತ್ತೇ ಸಂಜೆ, ಸಮಾರೋಪ ಸಮಾರಂಭದಲ್ಲಿ ರಸಮಂಜರಿ ಕಾರ್ಯಕ್ರಮದಲ್ಲೂ ಪುನೀತ್ ಬಂದು ಹಾಡಿ ಕುಣಿಯಬೇಕೆಂದು ಆಯೋಜಕರು ಅಪೇಕ್ಷಿಸಿದರು.

ಅದಕ್ಕೆ ಪುನೀತ್ (ಅಥವಾ ಅವರ ಆಪ್ತಕಾರ್ಯದರ್ಶಿ ಇರಬಹುದು) ಕೊಟ್ಟ ಉತ್ತರ: "ಹೋಟೆಲ್ ರೂಮ್‌ನಿಂದ ಎರಡೆರಡು ಸರ್ತಿ ಸಮ್ಮೇಳನಸಭಾಂಗಣಕ್ಕೆ ಬಂದುಹೋಗುವುದು ನಮ್ಮ ಘನತೆಗೆ ಕಮ್ಮಿಯಾಗುತ್ತದೆ. ಒಂದೇ ಸಲ ಬಂದುಹೋಗ್ತೇವೆ, ಏನೇನು ಕಾರ್ಯಕ್ರಮಗಳಿವೆಯೋ ಅವನ್ನೆಲ್ಲ ಆಗಲೇ ಮಾಡಿಸಿ." ಸರಿ, ಆಯೋಜಕರು ತಲೆಕೆಡಿಸ್ಕೊಂಡು ಭಾನುವಾರದ ಪೂರ್ವನಿಗದಿತ ಕಾರ್ಯಕ್ರಮಗಳ ವೇಳಾಪಟ್ಟಿಯನ್ನು ಆಕಡೆ ಈಕಡೆ ಬದಲಾಯಿಸಿ ಪುನೀತ್‌ಗೋಸ್ಕರ 'ಅದೃಷ್ಟಾಧಿಪತಿ' ಫೈನಲ್ಸ್‌ ಅನ್ನು ಸಂಜೆ 7ಕ್ಕೆ ನಡೆಯುವಂತೆ ಮುಂದೂಡಿದರು.

ಅದರ ನಂತರ ರಸಮಂಜರಿಯಲ್ಲಿ ಒಂದಿಷ್ಟು ಕುಣಿದು ಒಂದೆರಡು ಹಾಡುಗಳನ್ನು ಕೆಟ್ಟದಾಗಿ ಅರ್ಧಂಬರ್ಧ ಹಾಡಿ ಪುನೀತ್ ಹೊಟೆಲ್ ರೂಮಿಗೆ ಹಿಂತೆರಳಿದರು. ಅಂದರೆ, ಮೂರು ದಿನಗಳ ‘ಅಕ್ಕ' ಸಮ್ಮೇಳನಕ್ಕೆಂದು ವಿಶೇಷವಾಗಿ ಕರೆಸಿದ್ದ ಪುನೀತ್ (ಅಕ್ಕ ಬ್ರಾಂಡ್ ಅಂಬಾಸಡರ್), ಬರೀ ಒಂದೆರಡು ಗಂಟೆ ಕಾಲ ಸಮ್ಮೇಳನದ ವೇದಿಕೆಯ ಮೇಲೆ ಕಾಣಿಸಿಕೊಳ್ಳಲು ಹೋಟೆಲ್ ರೂಮಿನಿಂದ ಹೊರಬಿದ್ದರು ಎಂದಾಯ್ತು.

ಪುನೀತ್ ಅಷ್ಟಾದರೂ ಮಾಡಿದರು; 2010ರಲ್ಲಿ ನ್ಯೂಜೆರ್ಸಿಯಲ್ಲಿ 'ಅಕ್ಕ' ಸಮ್ಮೇಳನ ನಡೆದಾಗ ಆಹ್ವಾನಿತಳಾಗಿ ಬಂದಿದ್ದ ಚಿತ್ರನಟಿ ರಮ್ಯಾ ಏನೋ ಮುನಿಸಿಕೊಂಡು ಕೊನೆಗೂ ಹೋಟೆಲ್ ರೂಮಿನಿಂದ ಹೊರಬರಲೇ ಇಲ್ಲ! ಇನ್ನೊಬ್ಬ ನಟಿಯ ಜೊತೆ ತಾನು ವೇದಿಕೆ ಹಂಚಿಕೊಳ್ಳುವುದಿಲ್ಲ ಎಂಬ ತನ್ನ ಪೊಗರಿಗೆ ಬದ್ಧಳಾಗಿ ಹೋಟೆಲ್ ರೂಮಿನಲ್ಲೇ ಸಮ್ಮೇಳನ ನಡೆಸಿ ಸಿಟ್ಟಿನಿಂದಲೇ ಬೆಂಗಳೂರಿಗೆ ಮರಳಿದರು.

ನಿಜ. ರಮೇಶ್ ಅರವಿಂದ್, ಪುನೀತ್, ಮತ್ತು ರಮ್ಯಾ- ಈ ಮೂವರನ್ನು ಹೋಲಿಸುವುದು ಸಮಂಜಸವೆನಿಸಲಿಕ್ಕಿಲ್ಲ. ಅವರವರ ಖ್ಯಾತಿ, ಸ್ಟಾರ್‌ವ್ಯಾಲ್ಯೂ, ಅಭಿಮಾನಿಬಳಗ ಇತ್ಯಾದಿ ಮಾನದಂಡಗಳಿಂದ ಖಂಡಿತ ಹೋಲಿಸುತ್ತಿಲ್ಲ. ಆದರೆ ಸಿನೆಮಾ ಕಲಾವಿದ ಮತ್ತು ಅದಕ್ಕಿಂತ ಮುಖ್ಯವಾಗಿ ಕನ್ನಡ-ಸಂಸ್ಕೃತಿಯನ್ನು-ಪ್ರತಿನಿಧಿಸುವ-ಕನ್ನಡಿಗ ಎಂಬ ಮಾನವೀಯ ಅಂಶ ಮೂವರಿಗೂ ಸಾಮಾನ್ಯವಲ್ಲವೇ? ಅಮೆರಿಕನ್ನಡಿಗರ ದೃಷ್ಟಿಯಲ್ಲಿ ಅವರು ಮೂವರೂ ಒಂದೇಥರ. ಆ ಅಂಶದಿಂದಾದರೂ ಹೋಲಿಸಬಹುದಲ್ಲವೇ?

ಹಾಗೆ ಹೋಲಿಸಿದಾಗಲೇ ನನ್ನ ಮನಸ್ಸಿಗೆ ಹೊಳೆದದ್ದು, ಕೆಲವರು "ಬೆರೆಯುವವರು" ಮತ್ತೆ ಕೆಲವರು "ಮೆರೆಯುವವರು" ಎಂದು. ನನಗೆ, ಮತ್ತು ನನ್ನಂಥ ಜನಸಾಮಾನ್ಯರಿಗೆ, ನಮ್ಮೊಂದಿಗೆ "ಬೆರೆಯುವವರೇ" ಇಷ್ಟವಾಗುತ್ತಾರೆ. ಏಕೆಂದರೆ ಮೆರೆಯುವವರ ಮೆರೆದಾಟ ಕ್ಷಣಿಕ. ಬೆರೆಯುವವರ ಬಾಂಧವ್ಯವಾದರೋ ಚಿರಕಾಲ ಸ್ಮರಣೀಯ!

English summary
Why these cultural ambassadors behave like this in AKKA Sammelana? On one side Ramesh Arvind mingled with other Kannadiga and one among others. On the other hand Puneeth Rajkumar and Ramya behaved like super stars. Srivathsa Joshi points out the difference.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more