ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಾಸ್ ಏಂಜಲಿಸ್ ಕನ್ನಡ ಸಮ್ಮೇಳನದ ಸ್ವರೂಪ

By * ಎಸ್ಕೆ ಶಾಮಸುಂದರ
|
Google Oneindia Kannada News

NAVIKA Kannada Convention, Los Angeles
ನಾವಿಕ ತಲೆ ಎತ್ತುವುದಕ್ಕೆ ಪ್ರೇರಣೆ ಏನು ಎಂಬ ಪ್ರಶ್ನೆಯೊಂದಿಗೆ ದಟ್ಸ್ ಕನ್ನಡ ಮತ್ತು ಶ್ರೀಅಯ್ಯಂಗಾರರ ಸಂಭಾಷಣೆ ಆರಂಭವಾಯಿತು. "ಅಮೆರಿಕಾವನ್ನು ಭೌಗೋಳಿಕವಾಗಿ ಮೂರು ಭಾಗವಾಗಿ ವಿಂಗಡಿಸಬಹುದು. ಪೂರ್ವ ಕರಾವಳಿ, ಮಧ್ಯ ಅಮೆರಿಕ ಮತ್ತು ಪಶ್ಚಿಮ ಕರಾವಳಿ ತೀರ. ಇದುವರೆಗೆ ಅಮೆರಿಕಾದಲ್ಲಿ ಜರುಗಿರುವ ಬೃಹತ್ ಪ್ರಮಾಣದ ಕನ್ನಡ ಸಮ್ಮೇಳನಗಳು ಬಹುತೇಕ ಪೂರ್ವ ಮತ್ತು ಮಧ್ಯ ಭಾಗದಲ್ಲೇ ಏರ್ಪಾಟಾಗಿವೆ. ಹೀಗಿರುವುದರಿಂದ, ಸ್ಯಾನ್ ಫ್ರಾನ್ಸಿಕೊ ಬೇ ಏರಿಯಾ ಲಾಸ್ ಏಂಜಲಿಸ್ ಹಾಗೂ ಅದರ ಸುತ್ತಮುತ್ತಲಿನ ಸುಮಾರು ಆರೇಳು ಕನ್ನಡ ಸಂಘಗಳ ಕುಟುಂಬವರ್ಗದವರಿಗೆ ಪ್ರತೀಬಾರಿ ಅಷ್ಟು ದೂರ (2ರಿಂದ 3 ಸಾವಿರ ಮೈಲಿ)ಹೋಗಿಬರುವ ಆಯಾಸವನ್ನು ತಪ್ಪಿಸಿ ಮನೆ ಹಿತ್ತಲಿನಲ್ಲೇ ಶಾಮಿಯಾನ ಹಾಕುವ ಉದ್ದೇಶ ನಾವಿಕದ ಜನನಕ್ಕೆ ಒಂದುಕಾರಣ" ಎಂದರು ಅಯ್ಯಂಗಾರ್.

"ತಾವೇ ಕೈಗೊಂಡ ಒಂದು ಅಧ್ಯಯನದ ಪ್ರಕಾರ ಪಶ್ಚಿಮ ಕರಾವಳಿ ಭಾಗಗಳಿಂದ ಪೂರ್ವ ಕರಾವಳಿಯತ್ತ ಸಮ್ಮೇಳನಕ್ಕೆ ಹೋಗುವ ಕನ್ನಡ ಕುಟುಂಬಗಳ ಸಂಖ್ಯೆ ಯಾವತ್ತೂ ಸಂಖ್ಯೆ 50 ದಾಟಿಲ್ಲ" ಎಂದೂ ವಿವರಿಸಿದ ಅಯ್ಯಂಗಾರ್, ಅಮೆರಿಕೆಯಲ್ಲಿ 60 ಸಾವಿರಕ್ಕೂ ಹೆಚ್ಚು ಕನ್ನಡಿಗರು ನೆಲೆಸಿದ್ದಾರೆ ಎನ್ನುವುದನ್ನು ನೆನಪಿಸಿದರು.

ನಾವಿಕ ಹುಟ್ಟುವುದರ ಹಿಂದೆ ಸ್ಪಷ್ಟವಾದ ಉದ್ದೇಶ, ಪರಿಕಲ್ಪನೆ ಉಂಟು. ಮೊದಲನೆಯದಾಗಿ ಕನ್ನಡಿಗರ ನಡುವಿನ ಸದ್ಭಾವನೆಯನ್ನು ಇಮ್ಮಡಿಗೊಳಿಸುವುದು. ಇದೊಂದು ಸಂಕಲ್ಪ. ಕನ್ನಡ ಬಂಧುಗಳು ಕನ್ನಡ ಪರಿಸರ, ಸಾಂಸ್ಕೃತಿಕ ರಸದೌತಣಗಳನ್ನು ಹೆಚ್ಚೆಚ್ಚು ನಿರೀಕ್ಷಿಸುತ್ತಾರೆ. ಅದಕ್ಕೆ ಕೊರೆಯಾಗದಂತೆ ಒದಗಿಸಲಾಗುವುದು. ಸಮ್ಮೇಳನವನ್ನು ಮೀರಿ ನಿಲ್ಲುವ ಉದ್ದೇಶಗಳಲ್ಲಿ ಕನ್ನಡನಾಡಿನ ನಿರ್ಭಾಗ್ಯ ಕನ್ನಡ ಸಹೋದರ ಸಹೋದರಿಯರ ನೆರವಿಗಾಗಿ ಅನೇಕಾರು ಸ್ವರೂಪದ ದಾನ ದತ್ತಿ ಕಾರ್ಯಕ್ರಮಗಳು ಜಾರಿಗೆ ಬರುತ್ತವೆ. ಸದ್ಯ 'ಕನ್ನಡ ಕಲಿ' ಎನ್ನುವ ಅಕ್ಷರ ಕಲಿಕಾ ಕಾರ್ಯಕ್ರಮ ಅಮೆರಿಕದಲ್ಲಿದೆ. ಅದರ ಕಾರ್ಯ ಬಾಹುಳ್ಯವನ್ನು ವಿಸ್ತರಿಸಿ ವಿಶ್ವವಿದ್ಯಾನಿಲಯದ (ಬರ್ಕೆಲಿ ವಿವಿ) ಅಂಗಳಕ್ಕೆ ಕೊಂಡೊಯ್ಯುವ ಮಹದಾಸೆಯಿದೆ.

ಸಮ್ಮೇಳನಕ್ಕೆ ನಿಧಿ ಸಂಗ್ರಹ ಹೇಗೆ ಎಂಬ ಪ್ರಶ್ನೆಗೆ ಅಯ್ಯಂಗಾರರ ಬಳಿ ಸಿದ್ಧ ಉತ್ತರವಿತ್ತು. ಪ್ರತಿನಿಧಿಗಳು ಸಮ್ಮೇಳನಕ್ಕೆ ಸ್ವೈಪ್ ಮಾಡಿ ನೊಂದಾಯಿಸಿಕೊಳ್ಳುವರು. ಅಮೆರಿಕಾದ ನಾನಾ ಪ್ರಾಂತ್ಯಗಳಲ್ಲಿ ಇರುವ ಸ್ಥಿತಿವಂತರ ಕೊಡುಗೈ ದಾನ, ಸ್ಮರಣ ಸಂಚಿಕೆಯ ಜಾಹಿರಾತು, ವಾಣಿಜ್ಯ ಮಳಿಗೆಗಳ ಬಾಡಿಗೆ ಶುಲ್ಕದ ಆದಾಯ ಸೇರಿ ಒಟ್ಟು 6,00,000 ಡಾಲರು (ಅಂದಾಜು ಮೂರು ಕೋಟಿ ರೂ)ವೆಚ್ಚವಾಗುವ ಪ್ರಸ್ತಾವನೆಯಿದೆ. ಸಮ್ಮೇಳನದಲ್ಲಿ ಮಹಿಳೆಯರಿಗೆ, ಯುವ ಜನತೆಗೆ, ಉದ್ಯಮಿಗಳಿಗೆ, ಧಾರ್ಮಿಕ ಮತ್ತು ಆಧ್ಯಾತ್ಮಿಕದಲ್ಲಿ ಆಸಕ್ತಿ ಇರುವವರಿಗೆ ಪ್ರತ್ಯೇಕ ಸಮಾವೇಶಗಳನ್ನು ಸಜ್ಜುಗೊಳಿಸಲಾಗುತ್ತಿದೆ. ಇದೇ ವೇಳೆ, ಸಮ್ಮೇಳನಕ್ಕೆ ನಾನಾ ಸಮಿತಿಗಳನ್ನು ರಚಿಸಲಾಗಿದ್ದು ಆ ವಿವರಗಳೆಲ್ಲ ನಿಮಗೆ ವೆಬ್ ಸೈಟಿನಲ್ಲಿ ದೊರಕುತ್ತವೆ. ಫ್ಲಾರಿಡಾದ ಡಾ.ರೇಣುಕಾ ರಾಮಪ್ಪ ಅವರು ಸಮ್ಮೇಳನದ ಜಂಟಿ ಸಂಯೋಜನಾಧಿಕಾರಿ ಆಗಿದ್ದಾರೆ. ಅವರ ಪತಿ ಡಾ. ಜಿಎಂ ರಾಮಪ್ಪ ಅವರು ಸಮ್ಮೇಳನ ನಿಧಿ ಸಂಗ್ರಹ ಸಮಿತಿಯ ಮುಖ್ಯಸ್ಥರಾಗಿದ್ದಾರೆ.

ಮತ್ತೇನು ವಿಶೇಷ ಅಯ್ಯಂಗಾರ್?

ಲಾಸ್ ಏಂಜಲಿಸ್ ನಲ್ಲಿರುವ ಪಸಡೊನ ಸಭಾಂಗಣಕ್ಕೆ ಅಧ್ಬುತವಾದ ವಿನ್ಯಾಸವಿದೆ. ಅಪ್ಪಟ ಇಟಾಲಿಯನ್ ಶಿಲ್ಪಕಲಾ ವಿನ್ಯಾಸದಿಂದ ಕಂಗೊಳಿಸುವ ಪಸಡೊನದಲ್ಲಿ ತಂಗುವುದೇ ಒಂದು ಅಪೂರ್ವ ಅನುಭವ. ಸಮ್ಮೇಳನದ ಮೊದಲ ದಿನ ಶುಕ್ರವಾರ ಇಡೀ ಸಂಜೆ ಸ್ವಾಗತಕೋರುವ ನಾಂದಿ ಶಾಸ್ತ್ರ, ಸಂಗೀತ ಮತ್ತು ಔತಣ. ಶನಿವಾರ ಭಾನುವಾರ ಉದ್ಘಾಟನೆ, ಸಮಾನಾಂತರ ಸಮಾವೇಶಗಳು ಹಾಗೂ ಆ ಎರಡು ಸಂಜೆ 6ರಿಂದ 12ರವರೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳ ಸರಮಾಲೆ ಇರುವವು.

ಕನ್ನಡಿಗರ ನಾಲಗೆ ತಣಿಸುವ ಖಾದ್ಯಗಳು, ಊಟೋಪಚಾರಕ್ಕೆ ಅಗತ್ಯವಾದ ಎಲ್ಲ ವ್ಯವಸ್ಥೆ ಮಾಡಲಾಗುತ್ತದೆ. ಆದರೆ, ಇಡೀ ಸಭಾಂಗಣದ ಯಾವುದೇ ಭಾಗದಲ್ಲೂ ಧೂಮಪಾನ, ಮದ್ಯಪಾನ ನಿಷೇಧ. ಈ ವಿಚಾರದಲ್ಲಿ ನಾನು ಕಟ್ಟುನಿಟ್ಟು ಎಂದರು ಸಸ್ಯಾಹಾರಿ, ಥೊರಾಸಿಕ್ ಸರ್ಜನ್ ಶ್ರೀಅಯ್ಯಂಗಾರ್.

ಕರ್ನಾಟಕದಿಂದ ನಾವಿಕ ಸಮ್ಮೇಳನಕ್ಕೆ ಆಗಮಿಸುವಂತೆ ಆಹ್ವಾನ ಕೊಡಲು ತಾವು ಇಚ್ಛಿಸಿರುವ ಹೆಸರು ಪಟ್ಟಿಯನ್ನು ಶ್ರೀ ಅಯ್ಯಂಗಾರ್ ಹೇಳುತ್ತಾ ಹೋದರು. ಆದರೆ, ಆಹ್ವಾನಿತರ ಸಮಯಾನುಕೂಲ ಮತ್ತು ಒಪ್ಪಿಗೆ ದೊರೆಯದತನಕ ಏನನ್ನೂ ಖಚಿತವಾಗಿ ಹೇಳುವಂತಿಲ್ಲ. ಫೆಬ್ರವರಿ 5ಕ್ಕೆ ವಾಪಸ್ಸು ಅಮೆರಿಕಾ ಹೋಗುವೆನು. ಅಷ್ಟು ಹೊತ್ತಿಗೆ ಒಂದು ಚಿತ್ರ ಸಿಕ್ಕಿರುತ್ತದೆ. ದಟ್ಸ್ ಕನ್ನಡ ಮತ್ತೆ ಭೇಟಿಯಾದಾಗ ಪಕ್ಕಾ ವಿವರಗಳನ್ನು ತಿಳಿಸುವುದಾಗಿ ಹೇಳಿದರು.

ನಾವಿಕ ಅಧ್ಯಕ್ಷರ ಸಂದರ್ಶನದ ವೇಳೆ ಸಮ್ಮೇಳನದ ಭಾರತೀಯ ಸಂಯೋಜನಾಧಿಕಾರಿ, ಬೆಂಗಳೂರು ವಾಸಿ ಎಂ.ಕೃಷ್ಣಮೂರ್ತಿ ಉಪಸ್ಥಿತರಿದ್ದರು. ಅವರ ಈಮೇಲ್ ವಿಳಾಸ : [email protected]

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X