ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸರ್ವರಿಗೆ ಸಮಬಾಳು, ಸರ್ವರಿಗೆ ಸಮಪಾಲು: ಸಿಎಂ

By Staff
|
Google Oneindia Kannada News

Yeddyurappa speech at WKC-5, Chicago'ಸರ್ವರಿಗೆ ಸಮಬಾಳು, ಸರ್ವರಿಗೆ ಸಮಪಾಲು,' ಎಂಬ ಕನಸು ಅವಾಸ್ತವ ಅಲ್ಲ.ಇದನ್ನು ಕಾರ್ಯರೂಪಕ್ಕೆ ತರಲು ಇಚ್ಛಾಶಕ್ತಿ, ಸಂಕಲ್ಪಶಕ್ತಿ ಬೇಕೇಬೇಕು ಎಂದು ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರಗಳಲ್ಲಿ ಹಾಕಿಕೊಂಡಿರುವ ಯೋಜನೆಗಳನ್ನು ವಿವರಿಸಿದರು. ಶಿಕಾಗೋ ದಲ್ಲಿ ಐದನೇ ಅಕ್ಕ ವಿಶ್ವ ಕನ್ನಡ ಸಮ್ಮೇಳನದಲ್ಲಿ ಕರ್ನಾಟಕದ ಮುಖ್ಯಮಂತ್ರಿ ಯಡಿಯೂರಪ್ಪನವರ ಭಾಷಣದ ಕೊನೆಯ ಭಾಗದ ಪ್ರಮುಖಾಂಶಗಳು ಇಲ್ಲಿವೆ

(ಭಾಷಣದ ವರದಿ ಮೂರು ಭಾಗಗಳಾಗಿ ಪ್ರಕಟಗೊಳ್ಳಲಿದೆ...ಪ್ರಸ್ತಾವನೆ , ಕೈಗಾರಿಕಾ ಅಭಿವೃದ್ಧಿ , ಆರೋಗ್ಯ ಶಿಕ್ಷಣಕ್ಕೆ ಎನ್ನಾರೈಗಳ ಪಾತ್ರ..ಇತ್ಯಾದಿ ಮುಖ್ಯಾಂಶಗಳೊಂದಿಗೆ ಶಿಕಾಗೋನಿಂದ ದಟ್ಸ್ ಕನ್ನಡಕ್ಕೆ ತ್ರಿವೇಣಿ ಶ್ರೀನಿವಾಸ್ ರಾವ್ ಅವರು ನೇರ ವರದಿ ನೀಡುತ್ತಿದ್ದಾರೆ -ಸಂಪಾದಕ)

*ತ್ರಿವೇಣಿ ಶ್ರೀನಿವಾಸ್ ರಾವ್, ಶಿಕಾಗೋ

ಶಿಕ್ಷಣ, ಆರೋಗ್ಯ ಅಭಿವೃದ್ಧಿಗೆ ಒತ್ತು

ಪ್ರಾಥಮಿಕ ಶಿಕ್ಷಣದಿಂದ ಹಿಡಿದು ಉನ್ನತ ಶಿಕ್ಷಣದವರೆಗೆ ಎಲ್ಲೆಡೆ ಗಮನ, ಆರೋಗ್ಯ ಮತ್ತು ನೈರ್ಮಲ್ಯಕ್ಕೆ ವಿಶೇಷ ಆಸಕ್ತಿ ಮುಂತಾದವು ನಮ್ಮ ಆದ್ಯತೆಗಳಾಗಿವೆ. ಈಗಾಗಲೇ ಕರ್ನಾಟಕವು ವೃತ್ತಿಶಿಕ್ಷಣಕ್ಕೆ ಪ್ರಶಸ್ತ ಕೇಂದ್ರವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದನ್ನು ಮತ್ತುಷ್ಟು ಔನತ್ಯಕ್ಕೆ ಏರಿಸುವುದು ನಮ್ಮ ಗುರಿಯಾಗಿದೆ.ಈ ಚಿಂತನೆಯ ಫಲವಾಗಿ ದೇಶದಲ್ಲಿಯೇ ಮೊದಲ ಬಾರಿಗೆ ರಾಜ್ಯದಲ್ಲಿ ಕರ್ನಾಟಕ ಜ್ಞಾನ ಮತ್ತು ಉನ್ನತ ಶಿಕ್ಷಣ ಆಯೋಗವನ್ನು ರಚಿಸಲು ಸಂಕಲ್ಪಿಸಲಾಗಿದೆ.

ಭಾರತ ಜನನಿಯ ಹೆಮ್ಮೆಯ ತನುಜಾತೆಯಾದ ಕರ್ನಾಟಕ ಸಕಲ ರೀತಿಯಲ್ಲೂ ಸಂಪನ್ನವಾದ ನಾಡು. ಇಲ್ಲಿ ಚಿಂತನಾಶಕ್ತಿ, ಸಂಘಟನಾಶಕ್ತಿ, ಕ್ರಿಯಾಶಕ್ತಿಗಳಿಗೆ ಕೊರತೆಯೇ ಇಲ್ಲ. 'ಸರ್ವರಿಗೆ ಸಮಬಾಳು, ಸರ್ವರಿಗೆ ಸಮಪಾಲು,' ಎಂಬ ಕನಸು ಅವಾಸ್ತವ ಅಲ್ಲ. ಇದನ್ನು ಕಾರ್ಯರೂಪಕ್ಕೆ ತರಲು ಇಚ್ಛಾಶಕ್ತಿ, ಸಂಕಲ್ಪಶಕ್ತಿ ಬೇಕೇಬೇಕು. ಬಿಜೆಪಿ ಸರ್ಕಾರಕ್ಕೆ ಅವೆಲ್ಲವೂ ಇದೆ.

ಅದಕ್ಕೆ ನಿಮ್ಮೆಲ್ಲರ ಬೆಂಬಲ, ಸಹಕಾರ ಮತ್ತು ಪ್ರೋತ್ಸಾಹ ಮತ್ತಷ್ಟು ಬಲವನ್ನು ತುಂಬುತ್ತದೆ ಅನ್ನುವುದರಲ್ಲಿ ಎರಡು ಮಾತಿಲ್ಲ. ಕರ್ನಾಟಕದ ಮುಖ್ಯಮಂತ್ರಿಯಾಗಿ ನಾನು ನಿಮ್ಮೆಲ್ಲರ ಮುಂದೆ ನಿಂತು ಕೇಳಿಕೊಳ್ಳುವುದು ಇಷ್ಟೇ; ನಮ್ಮ ಸಂಕಲ್ಪಕ್ಕೆ ಇನ್ನಷ್ಟು ಬಲ ತುಂಬಿ! ನಮ್ಮ ಕೆಲಸಕಾರ್ಯಗಳಲ್ಲಿ ಕೈಜೋಡಿಸಿ!

ಯಶಸ್ಸು ಅರಸುತ್ತ ಈ ದೂರದ ನಾಡಿಗೆ ಬಂದು ನೆಲೆ ನಿಂತ ನಿಮ್ಮೆಲ್ಲರ ಸಾಧನೆ ನಮ್ಮ ಹೃದಯ ತುಂಬುತ್ತದೆ. ವಿಜ್ಞಾನಿಗಳು, ಇಂಜಿನಿಯರ್‌ಗಳು, ವೈದ್ಯರು, ವಕೀಲರು, ಕಲಾವಿದರು, ಹೀಗೆ ನಾನಾ ಪರಿಣತರು ಕರ್ನಾಟಕದಿಂದ ಅಮೆರಿಕ್ಕೆ ಬಂದು ಯಶಸ್ಸಿನ ಶಿಖರಗಳನ್ನು ಎರಿರುವುದು ಖಂಡಿತ ನಮಗೆಲ್ಲ ಅತ್ಯಂತ ಹೆಮ್ಮೆಯ ವಿಷಯ. ಹತ್ತಾರು ವರ್ಷಗಳಿಂದ ಅಮೆರಿಕದಲ್ಲಿ ಜೀವನ ಮಾಡುತ್ತಿದ್ದರೂ ನಿಮ್ಮ ಮನದ ಮೂಲೆಯಲ್ಲಿ ಕರ್ನಾಟಕ ಇದ್ದೇ ಇರುತ್ತದೆ ಎಂಬುದನ್ನು ನಾನು ಚೆನ್ನಾಗಿ ಬಲ್ಲೆ.

ಜನ್ಮ ನೀಡಿದ ಭೂ ತಾಯಿಯ ಮರೆಯದಿರಿ
ನಿಮ್ಮ ಹಳ್ಳಿಯ ಕೆರೆಯ ಏರಿ, ನಿಮ್ಮ ಊರಿನ ಜಾತ್ರೆ, ನಿಮ್ಮ ಮನೆಯ ಹಿತ್ತಲಿನ ಕಾಡು, ನಿಮ್ಮ ನಗರದ ವಿಶೇಷ, ನಿಮ್ಮ ಶಾಲೆಯ ಅಂಗಳ, ನಿಮ್ಮ ತಾಯ ಕೈ ಅಡುಗೆ, ನಿಮ್ಮ ಅಜ್ಜಅಜ್ಜಿಯರ ಮಮತೆಯ ಅಪ್ಪುಗೆ ಮುಂತಾದ ಸಾವಿರಾರು ಸಂಗತಿಗಳನ್ನು ನೀವು ಮರೆಯಲು ಹೇಗೆ ಸಾಧ್ಯ? ಚಿರನೆನಪುಗಳು. ನಿಮ್ಮ ಬಾಲ್ಯದ, ನಿಮ್ಮ ಹದಿಹರೆಯದ, ನಿಮ್ಮ ಯೌವ್ವನದ ಚಿರನೆನಪುಗಳು ನೀವು ಕರೆದಾಗ ಮರುಕಳಿಸಿ ಬರುತ್ತವೆ!

ನಾವೆಲ್ಲ ಮೊದಲು ಭಾರತೀಯರು. ತದನಂತರ ಕನ್ನಡಿಗರು, ತೆಲುಗರು, ಗುಜರಾತಿಗಳು ಇತ್ಯಾದಿ. ಆದರೆ ವಿವಿಧ ಬಗೆಯ ಸುಂದರ ಪುಷ್ಪಗಳ ತೋಟದಂತೆ ನಮ್ಮ ದೇಶ ಕಂಗೊಳಿಸುತ್ತಿದೆ. ಭಾರತೀಯರಾದ ನಮಗೆ ಅನೇಕ ಬಗೆಯ ಋಣಗಳಲ್ಲಿ ನಂಬಿಕೆಯಿದೆ. ದೇವಋಣ, ತಾಯಿಯ ಋಣ, ತಂದೆಯ ಋಣ, ಗುರುವಿನ ಋಣ ಮುಂತಾದುವಲ್ಲದೆ, ಹುಟ್ಟಿದ ನೆಲದ ಋಣವೂ ಇದ್ದೇ ಇರುತ್ತದೆ. ಅದನ್ನು ತೀರಿಸುವ ಬಯಕೆಯೂ ನಮ್ಮ-ನಿಮ್ಮ ಮನಗಳಲ್ಲಿ ಇದ್ದೇ ಇರುತ್ತದೆ.

ನಿಮ್ಮ ಊರಿನ ನೀವು ಓದಿದ ಶಾಲೆಗೆ ಸೂಕ್ತ ಕಟ್ಟಡ ಇಲ್ಲವೆ - ನಾಲ್ಕು ಕೊಠಡಿ ಕಟ್ಟಿಸಿಕೊಡಿ, ಬೇಕಾದರೆ ಅದಕ್ಕೆ ನಿಮ್ಮ ಹಿರಿಯರ ಹೆಸರಿಡಿ, ಶಾಲೆಗೊಂಡು ಪ್ರಯೋಗಶಾಲೆ ರೂಪಿಸಿಕೊಟ್ಟರೆ ಇನ್ನಷ್ಟು ಮಕ್ಕಳು ನಿಮ್ಮಂತೆ ವಿಜ್ಞಾನಿಗಳಾಗಿ ರೂಪುಗೊಳ್ಳಬಹುದು. ನಿಮ್ಮ ಹಳ್ಳಿಗೆ ನಿಮ್ಮಿಂದ ಕುಡಿಯುವ ನೀರಿನ ಯೋಜನೆ ಬಂದರೆ ಇಡೀ ಹಳ್ಳಿಯ ಹೆಣ್ಣುಮಕ್ಕಳು ನಿಮ್ಮನ್ನು ಹರಸುತ್ತಾರೆ. ನಿಮ್ಮ ಊರಿಗೆ ಒಂದು ಸುಸಜ್ಜಿತ ಆಸ್ಪತ್ರೆ ಬಂದರೆ ಎಲ್ಲ ತಲೆಮಾರುಗಳು ಆರೋಗ್ಯ ಪಡೆಯುತ್ತವೆ.

ನಿಮ್ಮ ಹಳ್ಳಿಗೆ ವಿದ್ಯುತ್ ದೀಪಗಳ ವ್ಯವಸ್ಥೆ ಬಂದರೆ ಎಲ್ಲರ ಬಾಳು ಬೆಳಗುತ್ತದೆ.ನಿಮ್ಮಲ್ಲಿ ಅನೇಕರು ರೈತ ಕುಟುಂಬದಿಂದ ಬಂದವರು, ಕೃಷಿ ತರಬೇತಿ ಕೇಂದ್ರಗಳ ಸ್ಥಾಪನೆಗೆ ನೀವು ನೆರವಾದರೆ ನಿಮ್ಮ ಹಳ್ಳಿಯ ತರುಣ ರೈತರಲ್ಲಿ ಪ್ರಗತಿಯ ಕನಸು ಬಿತ್ತಿದಂತಾಗುತ್ತದೆ. ಕರ್ನಾಟಕ ರಾಜ್ಯ ಕೈಗಾರಿಕೆ ಬೆಳವಣಿಗೆಯಲ್ಲಿ ಎಂದೂ ಹಿಂದೆ ಬಿದ್ದಿಲ್ಲ. ಆದರೆ ಅಭಿವೃದ್ಧಿಯ ವೇಗ ಹೆಚ್ಚಿಸಲು ಆಗಬೇಕಾದ್ದು ಇನ್ನೂ ಬಹಳ ಉಳಿದಿದೆ.

ಆಧುನಿಕ ಕಾಲದ ಉದ್ಯಮಗಳು ಸಾಹಸಿಗಳನ್ನು ಕೈಬೀಸಿ ಕರೆಯುತ್ತಿವೆ. ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಬೆಂಗಳೂರು ಅತ್ಯಂತ ಪ್ರಸಿದ್ಧವಾಗಿದೆ. ಜೈವಿಕ ತಂತ್ರಜ್ಞಾನ ಕ್ಷೇತ್ರವೂ ಬೆಂಗಳೂರನ್ನೇ ಮೆಚ್ಚಿದೆ. ಅತಿ ಹೆಚ್ಚು ಜ್ಞಾನ ಪೀಠ ಪ್ರಶಸ್ತಿಗಳನ್ನು ಪಡೆದಿರುವ ಕನ್ನಡ ಸಾಹಿತ್ಯ, ಪ್ರಸಿದ್ಧ ಕಲಾವಿದರನ್ನು ಕೊಟ್ಟ ನಮ್ಮ ಸಂಗೀತ, ಹೊಸ ಆಯಾಮಗಳಿಗೆ ಹಾತೊರೆದ ನಮ್ಮ ಶಿಲ್ಪಕಲೆ-ಚಿತ್ರಕಲೆ ಎಲ್ಲದರ ಬಗ್ಗೆ ನಮ್ಮ ಹಾಗೆ ನಿಮಗೂ ಅತೀವ ಅಭಿಮಾನ ಇರುವುದನ್ನು ನಾನು ಬಲ್ಲೆ.

ಅನಿವಾಸಿಗಳಿಗೆ ದಸರೆಗೆ ಆಹ್ವಾನ
ಈ ವರ್ಷ ಮೈಸೂರು ದಸರೆಯನ್ನು ಅಧಿಕೃತವಾಗಿ ನಾಡಹಬ್ಬವೆಂದು ನಮ್ಮ ಸರ್ಕಾರ ಘೋಷಿಸಿದೆ. ಅಕ್ಟೋಬರ್‌ನಲ್ಲಿ ನಡೆಯುವ ಈ ನಾಡಹಬ್ಬದಲ್ಲಿ ತಾವೆಲ್ಲರೂ ಭಾಗಿಗಳಾಗಬೇಕೆಂದು ಸರ್ಕಾರದ ಪರವಾಗಿ ಆಹ್ವಾನ ನೀಡುತ್ತಿದ್ದೇನೆ.

ಹಾಗೆಯೇ ಈ ವರ್ಷ ಡಿಸೆಂಬರ್ ತಿಂಗಳಿನಲ್ಲಿ ಬೆಳಗಾವಿಯಲ್ಲಿ ರಾಜ್ಯ ಸರ್ಕಾರದ ವತಿಯಿಂದ 2ನೆಯ ಅಧಿಕೃತ "ವಿಶ್ವ ಕನ್ನಡ ಸಮ್ಮೇಳನ"ವನ್ನು ಯೋಜಿಸಲಾಗುತ್ತಿದೆ. ಈ ನುಡಿ ಹಬ್ಬದಲ್ಲಿ ಅನಿವಾಸಿ ಕನ್ನಡಿಗರು ಅಧಿಕ ಸಂಖ್ಯೆಯಲ್ಲಿ ಭಾಗವಹಿಸಬೇಕೆಂಬುದು ನಮ್ಮ ಅಪೇಕ್ಷೆಯಾಗಿದೆ. ನೀವೆಲ್ಲ ಬೆಳಗಾವಿ ವಿಶ್ವ ಕನ್ನಡ ಸಮ್ಮೇಳನದಲ್ಲಿ ಭಾಗಿಯಾಗುವಂತೆ ಆಹ್ವಾನಿಸುತ್ತಿದ್ದೇನೆ.

ಶಿಕಾಗೋದಲ್ಲಿ ಕನ್ನಡ ಅಧ್ಯಯನ ಪೀಠ
ಕನ್ನಡದ ಸಾಹಿತಿಗಳು, ಕಲಾವಿದರ ಬಗ್ಗೆ ನೀವೆಲ್ಲ ತೋರುತ್ತಿರುವ ಅಭಿಮಾನ ನಮಗೆ ತುಂಬ ಮೆಚ್ಚುಗೆಯಾಗಿದೆ. ಸಾಂಸ್ಕೃತಿಕ ರಂಗದಲ್ಲಿ ನೀವು ಮಾಡಬೇಕಾದ ಕೆಲಸವೂ ಬಹಳವಿದೆ. ಮಕ್ಕಳಲ್ಲಿ ಆಸಕ್ತಿ ಬೆಳೆಸಲು, ಯುವಜನರನ್ನು ಪ್ರೋತ್ಸಾಹಿಸಲು ಕಲೆ-ಸಂಗೀತ ತರಬೇತಿ ಕೇಂದ್ರಗಳ ಸ್ಥಾಪನೆ ಅಗತ್ಯವಾಗಿದೆ. ಇದಕ್ಕೆ ನಿಮ್ಮೆಲ್ಲರ ಬೆಂಬಲ, ಧನಸಹಾಯ ಬೇಕು ಎಂಬುದನ್ನು ಹೇಳಬೇಕಿಲ್ಲ. ಇಷ್ಟೇ ಅಲ್ಲ, ಅಮೆರಿಕದಲ್ಲಿ ನೀವು ನಡೆಸುತ್ತಿರುವ ಕನ್ನಡಪರ ಚಟುವಟಿಕೆಗಳಿಗೆ ಸಮರ್ಥ ನಾಯಕತ್ವ ಒದಗಿಸಲು, ಶಿಕಾಗೋ ವಿಶ್ವವಿದ್ಯಾಲಯದಲ್ಲಿ ಕನ್ನಡ ಆಧ್ಯಯನ ಪೀಠವನ್ನು ಸ್ಥಾಪಿಸಲು ನಮ್ಮ ಸರ್ಕಾರ ಸಿದ್ಧವಿದೆ.

ಅದಕ್ಕೆ ಬೇಕಾದ ಅನುಮತಿಯನ್ನು ಈ ವಿಶ್ವವಿದ್ಯಾಲಯದಿಂದ ಕೊಡಿಸಲು ನೀವೆಲ್ಲರೂ ಪ್ರಯತ್ನಿಸಬೇಕೆಂದು ಕೋರುತ್ತೇನೆ.ಒಟ್ಟಿನಲ್ಲಿ ಕನ್ನಡ ನಾಡನ್ನು ಮತ್ತಷ್ಟು ಸಮೃದ್ಧಗೊಳಿಸಲು, ಕರ್ನಾಟಕವನ್ನು ಮಾದರಿ ರಾಜ್ಯವನ್ನಾಗಿ ಮಾಡಲು ನಿಮ್ಮ ಸಹಾಯ ಹಸ್ತ ಬೇಕು.ಬನ್ನಿ ನಾವು-ನೀವು ಒಟ್ಟಿಗೆ ಕೈಜೋಡಿಸಿ ನಾಡಿಗೆ ಅಗತ್ಯವಾದ ಅಭಿವೃದ್ಧಿ ಕೆಲಸಗಳನ್ನು ಮಾಡೋಣ, ಆ ಮೂಲಕ ನಾಡಿನ ಋಣವನ್ನು ತೀರಿಸೋಣ ಎಂದು ಮನವಿ ಮಾಡುತ್ತಿದ್ದೇನೆ.

ನಾಡು ನನಗೇನು ಕೊಟ್ಟಿತು ಎಂದು ಕೇಳುವುದು ಬೇಡ, ನಾನು ಹುಟ್ಟಿದ ನಾಡಿಗೆ ಏನು ಕೊಟ್ಟೆ ಎಂಬ ಬಗ್ಗೆ ಚಿಂತಿಸೋಣ. ವ್ಯಕ್ತಿಗಿಂತ ರಾಜ್ಯ ದೊಡ್ಡದು, ರಾಷ್ಟ್ರ ದೊಡ್ಡದು ಎಂಬುದನ್ನು ಮತ್ತೆ ಮತ್ತೆ ಹೇಳಬೇಕಿಲ್ಲ. ಇಪ್ಪತ್ತ್ತೊಂದನೇ ಶತಮಾನ ಭಾರತೀಯರ ಶತಮಾನ, ಜಗತ್ತಿನಲ್ಲಿ ಎಲ್ಲಿ ಅಭಿವೃದ್ಧಿ ಆದರೂ ಅದರಲ್ಲಿ ಭಾರತೀಯರ ಕೊಡುಗೆ ಇದ್ದೇ ಇರುತ್ತದೆ ಎಂಬ ಪ್ರಶಂಸೆ ಇದೆ. ಅದು ಅಕ್ಷರಶ: ನಿಜ.

ಕರ್ನಾಟಕವನ್ನು ಅಭಿವೃದ್ಧಿಯ ಮಾದರಿ ರಾಜ್ಯವನ್ನಾಗಿ ಮಾಡಲು ನಿಮ್ಮ ಕೊಡುಗೆ ಇದ್ದೇ ಇರುತ್ತದೆ ಎಂಬ ನಂಬಿಕೆ ನನಗಿದೆ. ಆ ಆಶಯ ನನ್ನ ಹೃದಯದಲ್ಲಿ ಇರುವಂತೆ ನಿಮ್ಮ ಹೃದಯಗಳಲ್ಲೂ ಇದೆ ಎಂಬ ಭರವಸೆಯೊಂದಿಗೆ ನನ್ನ ಮಾತುಗಳನ್ನು ಮುಗಿಸುತ್ತೇನೆ.

I once again thank you for your warm welcome and congratulate you for organizing one of the memorable conferences to hail the Kannada language and Kannada culture.

ಕನ್ನಡಂ ಗೆಲ್ಗೆ, ಕನ್ನಡಂ ಬಾಳ್ಗೆ
ನಮಸ್ಕಾರ

ಪೂರಕ ಓದಿಗೆ:
ಭಾಷಣದ ಭಾಗ-1:
5 ನೇ'ಅಕ್ಕ' ವಿಶ್ವ ಕನ್ನಡಸಮ್ಮೇಳನದಲ್ಲಿ ಸಿಎಂ ಭಾಷಣ
ಭಾಷಣದ ಭಾಗ-2: ಅನಿವಾಸಿ ಕನ್ನಡಿಗರೇ, ರಾಜ್ಯದ ಪ್ರಗತಿಗೆ ಕೈಜೋಡಿಸಿ
ಗ್ಯಾಲರಿ-1: 5 ನೇ ಅಕ್ಕ ವಿಶ್ವ ಕನ್ನಡ ಸಮ್ಮೇಳನದ ಉದ್ಘಾಟನೆ ಸಂಭ್ರಮ
ಗ್ಯಾಲರಿ-2: ಅಕ್ಕ ವಿಶ್ವ ಕನ್ನಡ ಸಮ್ಮೇಳನದ ಅಂಗಳದಲ್ಲಿ ಗಣ್ಯರಕೂಟ

(ಸಶೇಷ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X