B-Khata: ಬಿ-ಖಾತಾ ಟು ಎ-ಖಾತಾ: ಪ್ರಾಮಾಣಿಕ ಪಾವತಿದಾರರಿಗೆ ಡಿಸಿಎಂ 'ದಂಡ' ಪ್ರಯೋಗವೇ: ಶ್ರೀನಿವಾಸ ಮಠ ಬರಹ

B-Khata: ಬಿ-ಖಾತಾ ಟು ಎ-ಖಾತಾ: ಪ್ರಾಮಾಣಿಕ ಪಾವತಿದಾರರಿಗೆ ಡಿಸಿಎಂ 'ದಂಡ' ಪ್ರಯೋಗವೇ: ಶ್ರೀನಿವಾಸ ಮಠ ಅವರ ಬರಹ ಇಲ್ಲಿದೆ.

ಬೆಂಗಳೂರಿನ ಸಾವಿರಾರು ಜನರಿಗೆ ನೆಮ್ಮದಿ ನೀಡುವ ನಿಟ್ಟಿನಲ್ಲಿ ಬಿ-ಖಾತಾ ಆಸ್ತಿಗಳನ್ನು ಎ-ಖಾತಾಗೆ ಪರಿವರ್ತಿಸುವ ಶುಲ್ಕವನ್ನು ಶೇಕಡಾ 5ರಿಂದ 2ಕ್ಕೆ ಇಳಿಸಿ, ಘೋಷಣೆ ಮಾಡಿರುವ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರದು ಸ್ವಾಗತಾರ್ಹ ನಿರ್ಧಾರ. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಈ ಕ್ರಮದಿಂದ ಸಾಮಾನ್ಯ ಜನರಿಗೆ ಆರ್ಥಿಕ ಹೊರೆ ಕಡಿಮೆಯಾಗಲಿದೆ. ಆದರೆ ಈ ಆತುರದ ಅಥವಾ ತಡವಾದ ನಿರ್ಧಾರವು ಒಂದು ವರ್ಗದ ಜನರಲ್ಲಿ ತೀವ್ರ ಅಸಮಾಧಾನ ಮೂಡಿಸಿದೆ. ಅವರು ಬೇರಾರೂ ಅಲ್ಲ, ಸರ್ಕಾರದ ಮೇಲೆ ನಂಬಿಕೆಯಿಟ್ಟು ಮೊದಲೇ ಶೇಕಡಾ 5ರಷ್ಟು ದರದಲ್ಲಿ ಲಕ್ಷಾಂತರ ರೂಪಾಯಿ ಪಾವತಿಸಿದ 'ಪ್ರಾಮಾಣಿಕ ನಾಗರಿಕರು'.

B-Khata

ನಂಬಿಕೆಗೆ ಸಿಕ್ಕ ಪ್ರತಿಫಲವೇನು?

ಯಾವುದೇ ಹೊಸ ಯೋಜನೆ ಬಂದಾಗ ತಕ್ಷಣವೇ ಸ್ಪಂದಿಸಿ, ಕಾನೂನುಬದ್ಧವಾಗಿ ವ್ಯವಹಾರ ಮುಗಿಸುವವರು ಸರ್ಕಾರದ ದೊಡ್ಡ ಶಕ್ತಿ. ಆದರೆ ಈಗಿನ ದರ ಇಳಿಕೆಯಿಂದಾಗಿ ಮೊದಲೇ ಹಣ ಕಟ್ಟಿದವರು ಶೇಕಡಾ 60ರಷ್ಟು ಹಣವನ್ನು ಕಳೆದುಕೊಂಡಂತಾಗಿದೆ. ಉದಾಹರಣೆಗೆ, ಒಬ್ಬ ವ್ಯಕ್ತಿ ಬಿ ಖಾತಾದಿಂದ ಎ ಖಾತಾಗೆ ವರ್ಗಾವಣೆ ಮಾಡಿಕೊಳ್ಳಲು 1.67 ಲಕ್ಷ ರೂಪಾಯಿ ಪಾವತಿಸಿದ್ದರೆ, ಇಂದಿನ ದರದಂತೆ ಅವರು ಕೇವಲ 67,000 ರೂಪಾಯಿ ಕಟ್ಟಿದರೆ ಸಾಕು. ಅಂದರೆ ಸುಮಾರು 1 ಲಕ್ಷ ರೂಪಾಯಿಗಳ ವ್ಯತ್ಯಾಸ! ಇದು "ಸಕಾಲಕ್ಕೆ ಯೋಜನೆಗೆ ಅಪ್ಲೈ ಮಾಡುವವರಿಗಿಂತ ಕಾದು ನೋಡುವವರೇ ಜಾಣರು" ಎಂಬ ತಪ್ಪು ಸಂದೇಶವನ್ನು ಸಮಾಜಕ್ಕೆ ರವಾನಿಸುತ್ತದೆ.

ಪರಿಹಾರವೇನು? ಆಸ್ತಿ ತೆರಿಗೆಗೆ ಹೊಂದಾಣಿಕೆ (Adjustment) ಸೂಕ್ತ

ಸರ್ಕಾರ ಈಗಾಗಲೇ ಸಂಗ್ರಹಿಸಿದ ಹಣವನ್ನು ವಾಪಸ್ (Refund) ನೀಡುವುದು ಆಡಳಿತಾತ್ಮಕವಾಗಿ ಕಷ್ಟವಿರಬಹುದು. ಆದರೆ ಈಗಿನ ಹೊಸ ಲಾಭದಿಂದ ವಂಚಿತರಾದ ನಾಗರಿಕರಿಗೆ ನ್ಯಾಯ ಒದಗಿಸಲು ಒಂದು ಸುಲಭ ಮಾರ್ಗವಿದೆ:

1. ಹೆಚ್ಚುವರಿ ಹಣದ ಕ್ರೆಡಿಟ್: ಶೇ. 5ರ ದರದಲ್ಲಿ ಪಾವತಿಸಿದ ಹಣ ಮತ್ತು ಈಗಿನ ಶೇ. 2ರ ದರದ ನಡುವಿನ ವ್ಯತ್ಯಾಸದ ಮೊತ್ತವನ್ನು ಆಯಾ ಆಸ್ತಿ ಮಾಲೀಕರ 'ತೆರಿಗೆ ಖಾತೆ'ಗೆ (Property Tax Account) ಜಮಾ ಮಾಡಬೇಕು.

2. ವಾರ್ಷಿಕ ಹೊಂದಾಣಿಕೆ: ಈ ಹೆಚ್ಚುವರಿ ಮೊತ್ತವನ್ನು ಮುಂದಿನ ವರ್ಷಗಳ ಆಸ್ತಿ ತೆರಿಗೆಗೆ ಹಂತಹಂತವಾಗಿ ಹೊಂದಾಣಿಕೆ ಮಾಡಿಕೊಳ್ಳಲು ಅವಕಾಶ ನೀಡಬೇಕು. ಉದಾಹರಣೆಗೆ, ಒಬ್ಬರ ವಾರ್ಷಿಕ ತೆರಿಗೆ 10,000 ರೂಪಾಯಿ ಆಗಿದ್ದರೆ, ಅವರ ಹೆಚ್ಚುವರಿ ಪಾವತಿಯಿಂದ ಆ ತೆರಿಗೆಯನ್ನು ಕಡಿತಗೊಳಿಸುತ್ತಾ ಬರಬೇಕು.

ನಾಗರಿಕರ ಧ್ವನಿ

"ನಾವು ಶುಲ್ಕ ಇಳಿಸಬೇಡಿ ಎನ್ನುತ್ತಿಲ್ಲ. ಎಲ್ಲರಿಗೂ ಅನುಕೂಲವಾಗಲಿ. ಆದರೆ ಕಾನೂನು ಪಾಲಿಸಿದ ನಮಗೆ ದಂಡವಾದಂತೆ ಆಗಬಾರದು. ನಾವು ಕಟ್ಟಿದ ಹೆಚ್ಚಿನ ಹಣವನ್ನು ನಮ್ಮದೇ ಆಸ್ತಿಯ ಮುಂದಿನ ತೆರಿಗೆಗೆ ಬಳಸಿಕೊಳ್ಳಲು ಸರ್ಕಾರ ಅನುವು ಮಾಡಿಕೊಡಬೇಕು" ಎಂಬುದು ನೊಂದ ಮಾಲೀಕರ ಅಳಲು.

B Khata Update: 6ನೇ ಗ್ಯಾರಂಟಿ ಘೋಷಿಸಿದ ಡಿಸಿಎಂ ಡಿ.ಕೆ ಶಿವಕುಮಾರ್, ಆಸ್ತಿದಾರರಿಗೆ ಬಂಪರ್
B Khata Update: 6ನೇ ಗ್ಯಾರಂಟಿ ಘೋಷಿಸಿದ ಡಿಸಿಎಂ ಡಿ.ಕೆ ಶಿವಕುಮಾರ್, ಆಸ್ತಿದಾರರಿಗೆ ಬಂಪರ್

ಇನ್ನೊಂದು ಆಯ್ಕೆ ಇದೆ

ಈಗಾಗಲೇ ಕಟ್ಟಡ ಕಟ್ಟಿಯಾಗಿದೆ, ಆ ನಿರ್ಮಾಣವು ಜಿಬಿಎ ನಿಯಮಾವಳಿಗೆ ಅನುಸಾರವಾಗಿಯೂ ಇದೆ ಎಂದಾದಲ್ಲಿ ಈ ಹಿಂದೆ 'ಬಿ' ಖಾತಾ ಇದ್ದಾಗ ನಕ್ಷೆ, ಕಟ್ಟಡ ಲೈಸೆನ್ಸ್ ತೆಗೆದುಕೊಳ್ಳದೆ ಕಟ್ಟಿದ್ದಕ್ಕೆ 'ದಂಡ'ದ ಹಣ ಎಂದು ಈಗಿನ ಮೊತ್ತವನ್ನು ಪರಿಗಣಿಸಿ, ಬಾಕಿ ಮೊತ್ತದ ಲೆಕ್ಕಾಚಾರ ಮಾಡಿ, ಕಟ್ಟಡವನ್ನು ಸಕ್ರಮ ಮಾಡಿಕೊಡುವುದು. ಹೀಗೆ ಮಾಡುವುದರಿಂದ ಹೆಚ್ಚುವರಿ ಹಣ ಪಾವತಿ ಮಾಡಿದವರಿಗೆ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಮನೆ ಮೇಲೆ ಸಾಲ ಪಡೆದುಕೊಳ್ಳಲು ಸಹಾಯ ಆಗುತ್ತದೆ.

ಈಗ ನಿವೇಶನವನ್ನು ಮಾತ್ರ ಎ ಖಾತಾ ಎಂದು ಮಾಡಿಕೊಟ್ಟಿರುವುದರಿಂದ ಆಗುವುದಕ್ಕಿಂತ ಹೆಚ್ಚಿನ ಅನುಕೂಲ ಅದು. ಸೆಟ್ ಬ್ಯಾಕ್ ನಿಯಮಾವಳಿ, ಕಟ್ಟಡದ ಎತ್ತರ ಮತ್ತಿತರ ನಿರ್ಮಾಣಕ್ಕೆ ಸಂಬಂಧಿಸಿದ ನಿಯಮಾವಳಿಗಳನ್ನು ಶೇಕಡಾ ಹದಿನೈದಕ್ಕಿಂತ ಹೆಚ್ಚು ಮೀರದವರಿಗೆ 'ಕಟ್ಟಡವನ್ನು ಸಕ್ರಮ' ಮಾಡಿಕೊಟ್ಟರೆ ಅದು ಸಹ ಒಂದು ಗ್ಯಾರಂಟಿಯೇ. ಅದನ್ನು ಮಾನ್ಯ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಆಲೋಚಿಸಬೇಕು.

B Khata to A Khata: ಬಿ ಖಾತಾದಿಂದ ಎ ಖಾತಾ ಪರಿವರ್ತನೆ: ಗೈಡ್‌ಲೈನ್ಸ್‌ ವ್ಯಾಲ್ಯೂ ಇಳಿಕೆ - ಡಿ.ಕೆ ಶಿವಕುಮಾರ್‌ ಗುಡ್‌ನ್ಯೂಸ್
B Khata to A Khata: ಬಿ ಖಾತಾದಿಂದ ಎ ಖಾತಾ ಪರಿವರ್ತನೆ: ಗೈಡ್‌ಲೈನ್ಸ್‌ ವ್ಯಾಲ್ಯೂ ಇಳಿಕೆ - ಡಿ.ಕೆ ಶಿವಕುಮಾರ್‌ ಗುಡ್‌ನ್ಯೂಸ್

ಕೊನೆಮಾತು

ಸರ್ಕಾರವು ಜನಸ್ನೇಹಿ ಆಡಳಿತ ನೀಡುವ ಭರವಸೆ ನೀಡಿದೆ. ಈ ಭರವಸೆ ನಿಜವಾಗಬೇಕಾದರೆ, ಮೊದಲು ಈ ಬಿಖಾತೆಯಿಂದ ಎ ಖಾತೆಗೆ ವರ್ಗಾವಣೆ ಮಾಡಿಕೊಳ್ಳಲು ಸ್ಪಂದಿಸಿದ ನಾಗರಿಕರ ಹಿತರಕ್ಷಣೆಯೂ ಮುಖ್ಯ. ಡಿ.ಕೆ. ಶಿವಕುಮಾರ್ ಅವರು ಈ ತಾಂತ್ರಿಕ ಮತ್ತು ನೈತಿಕ ಅಂಶವನ್ನು ಪರಿಗಣಿಸಿ, ಹೆಚ್ಚುವರಿ ಶುಲ್ಕವನ್ನು ಪ್ರಾಪರ್ಟಿ ಟ್ಯಾಕ್ಸ್‌ನಲ್ಲಿ ಅಡ್ಜಸ್ಟ್ ಮಾಡುವ ಆದೇಶ ಹೊರಡಿಸಲಿ ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.

ಬರಹ: ಶ್ರೀನಿವಾಸ ಮಠ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+