Rain: ಭೀಕರ ಬರ! ಸೋಮಾರಿತನ ಬೇಡ, ರೈತರಿಗೆ ನೆರವಾಗಿ: ಅಧಿಕಾರಿಗಳ ವಿರುದ್ಧ ಜಿ.ಪರಮೇಶ್ವರ ತರಾಟೆ

ಚಿಕ್ಕಬಳ್ಳಾಪುರ/ಕೋಲಾರ: ಬೆಳೆ ವಿಮೆ ಎಂಬುದು ರೈತರಿಗೆ ವರದಾನ. ಬೆಳೆ ನಷ್ಟ ಆದ ಸಂದರ್ಭದಲ್ಲಿ ವಿಮೆಯಿಂದ ರೈತರಿಗೆ ಒಂದಷ್ಟು ಅನುಕೂಲವಾಗುತ್ತದೆ. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 80 ಸಾವಿರ ನೋಂದಣಿಗೆ ಗುರಿ ನೀಡಲಾಗಿದೆ. ಈವರೆಗೆ 24 ಸಾವಿರ ಮಾತ್ರ ನೋಂದಣಿಯಾಗಿದ್ದು, ರೈತರನ್ನು ವಿಮೆ ಕಟ್ಟುವಂತೆ ಪ್ರೋತ್ಸಾಹಿಸಬೇಕು. ಬಾಕಿ ಕಂದಾಯ ಹಕ್ಕುಪತ್ರ ವಿತರಿಸಬೇಕು. ಬರ ನಿರ್ವಹಣೆಗೆ ಸರ್ಕಾರದ ಬಳಿ ಹಣ ಇಲ್ಲವೆಂಬ ವದಂತಿಗೆ ಕಿವಿಕೊಡದೇ ಸಮರ್ಥವಾಗಿ ಕಾರ್ಯ ನಿರ್ವಹಿಸುವಂತೆ ಉಪ ಮುಖ್ಯಮಂತ್ರಿ ಹಾಗೂ ಕಂದಾಯ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದರು.

ಇಂದು ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆ ಬರ ಪರಿಶೀಲನೆ ನಡೆಸಿದ ಸಚಿವರು ಸರ್ಕಾರಿ ಅಧಿಕಾರಿಗಳೊಂದಿಗೆ ಸರಣಿ ಸಭೆ ನಡೆಸಿದರು. 'ಬರ ಪರಿಸ್ಥಿತಿ ಹಾಗೂ ಕಂದಾಯ ವಿಷಯ'ಗಳ ಕುರಿತು ಪ್ರಗತಿ ಪರಿಶೀಲಿಸಿದರು.

Karnataka

ರೈತರಿಗೆ ಸಹಾಯ ಮಾಡಲು ಅವಕಾಶ ಇದೆ. ನಿಮ್ಮ ಸೋಮಾರಿತನದಿಂದ ರೈತರು ಕಷ್ಟ ಅನುಭವಿಸಬೇಕೆ? ನಿಮ್ಮ ಅನಗತ್ಯ ಉತ್ತರಗಳು ನನಗೆ ಬೇಕಿಲ್ಲ. ಬೆಳೆ ವಿಮೆ ಕಟ್ಟಿಸುವ ಗುರಿಯನ್ನು ಪೂರ್ಣಗೊಳಿಸಬೇಕು ಎಂದು ಸೂಚಿಸಿದರು.

ಬೆಳೆ ವಿಮೆ ಕಟ್ಟಿಸುವಲ್ಲಿ ಅಧಿಕಾರಿಗಳು ಯಾವುದೇ ರೀತಿಯಲ್ಲೂ ನಿರ್ಲಕ್ಷಿಸುವುದು ಬೇಡ. ನಷ್ಟ ಅನುಭವಿಸಿದ ರೈತರಿಗೆ ವಿಮೆ ಹಣ ಸಿಗುವಂತೆ ನೋಡಿಕೊಳ್ಳಬೇಕು. ಇದರಲ್ಲಿ ಲೋಪ, ನಿರ್ಲಕ್ಷ್ಯ ಕಂಡು ಬಂದರೆ ಸಹಿಸುವುದಿಲ್ಲ ಎಂದು ಎಚ್ಚರಿಸಿದರು.

ಜಿಲ್ಲೆಯಲ್ಲಿ 1.86 ಲಕ್ಷ ಜಾನುವಾರು, 10 ಲಕ್ಷ ಕುರಿ-ಮೇಕೆಗಳಿವೆ. ‌3 ಲಕ್ಷ ಟನ್ ಮೇವು ಸಂಗ್ರಹವಿದೆ ಎಂದು ಮಾಹಿತಿ ನೀಡಿದ್ದೀರಿ. ಮೇವು ಸಂಗ್ರಹ ಯಾವ ಆಧಾರದ‌ ಮೇಲೆ ಮಾಹಿತಿ ನೀಡಿದ್ದೀರಿ. ರೈತರ ಬಳಿ ಮೇವು ಇರುವುದನ್ನು ಖಾತ್ರಿ‌ ಪಡಿಸಿಕೊಳ್ಳಿ ಎಂದರು.

ಒಂದೂವರೆ ಶತಮಾನದ ಬಳಿಕ ಬರ, ಬಿತ್ತನೆ ಕುಂಠಿತ

150 ವರ್ಷದ ಹಿಂದಿನ ಬರದ ಪರಿಸ್ಥಿತಿ ರಾಜ್ಯದಲ್ಲಿ ಈ ವರ್ಷ ಎದುರಾಗಿದೆ. ಕುಡಿಯುವ ನೀರಿಗೆ ಸಂಚಕಾರ ಬರುವ ಸಾಧ್ಯತೆ ಇದೆ. ವಾಡಿಕೆಯಷ್ಟು ಮಳೆಯಾಗಿಲ್ಲ. ರಾಜ್ಯದಾದ್ಯಂತ ಕೇವಲ ಶೇ. 40ಕ್ಕಿಂತ ಕಡಿಮೆ ಬಿತ್ತನೆಯಾಗಿದ್ದು, ಇರುವ ಬೆಳೆ ಕೂಡ ಒಣಗಿದೆ. ಕರಾವಾಳಿ, ಮಲೆನಾಡು ಪ್ರದೇಶದಲ್ಲಿ ಸ್ವಲ್ಪ‌ ಪ್ರಮಾಣದಲ್ಲಿ ಮಳೆಯಾಗುತ್ತಿದೆ‌. ಹೀಗಾಗಿ ಆ ಭಾಗದಲ್ಲಿ ಕುಡಿಯುವ ನೀರಿಗೆ ಸಮಸ್ಯೆ ಆಗುವುದಿಲ್ಲ‌. ಹೊಸದುರ್ಗದಿಂದ ಅನಂತರಪುರ ಜಿಲ್ಲೆವರೆಗೆ ರೈನ್‌ ಶ್ಯಾಡೋ ಏರಿಯಾ ಎಂದು ಕರೆಯಲಾಗಿದೆ.‌ ಕುಡಿಯುವ ನೀರಿಗೆ ಆದ್ಯತೆಯಾಗಿ ಪರಿಗಣಿಸಲಾಗಿದೆ‌. ಬೋರ್‌ವೆಲ್ ಕೊರೆಸುವ ಅಗತ್ಯತೆ ಇದ್ದರೆ ಅಧಿಕಾರಿಗಳು ಕೂಡಲೇ ಕ್ರಮ ವಹಿಸಬೇಕು. ಮೋಟರ್ ಪಂಪ್‌, ವಿದ್ಯುತ್ ಸಂಪರ್ಕವನ್ನು ತ್ವರಿತವಾಗಿ ಕಲ್ಪಿಸಬೇಕು. ಈ ವಿಚಾರದಲ್ಲಿ ಅಧಿಕಾರಿಗಳು ಯಾವುದೇ ರೀತಿಯ ಸಬೂಬು ಹೇಳುವಂತಿಲ್ಲ ಎಂದು ತಾಕೀತು ಮಾಡಿದರು.

1.9 ಲಕ್ಷ ಕಂದಾಯ ಹಕ್ಕು ಪತ್ರ ವಿತರಣೆ

ರಾಜ್ಯದಲ್ಲಿ 1.9 ಲಕ್ಷ ಕಂದಾಯ ಫಲಾನುಭವಿಗಳಿಗೆ ಹಕ್ಕು ಪತ್ರ ನೀಡಬೇಕಿದೆ. ಎರಡು ತಿಂಗಳೊಳಗಾಗಿ 35 ಸಾವಿರ ಬಾಕಿ ಪ್ರಕರಣಗಳನ್ನು ಪೂರ್ಣಗೊಳಿಸಬೇಕು. ಜಿಲ್ಲೆಯಲ್ಲಿ ದೊಡ್ಡಮಟ್ಟದ ಕಾರ್ಯಕ್ರಮ ಮಾಡಬೇಕು. ಇದಕ್ಕೆ ಸಿಎಂ ಅವರು ಬರುತ್ತಾರೆ. 700ಕ್ಕೂ ಹೆಚ್ಚು ಭೂಮಾಪಕರ ನೇಮಕಾತಿಗೆ ಸರ್ಕಾರ ಮುಂದಾಗಿದೆ. ಕೆಇಎಗೆ ಜವಾಬ್ದಾರಿ ವಹಿಸಲಾಗಿದೆ ಎಂದರು.

ಕೇಂದ್ರ ಸರ್ಕಾರ ಬರ ಘೋಷಣೆ ಮಾಡಲು 10 ನಿಯಮಗಳನ್ನು ಮಾಡಿದೆ. ಅದರ ಪ್ರಕಾರ ನಾವು ನಡೆಯಬೇಕಿದೆ. ಎಲ್ಲ ತಾಲ್ಲೂಕಿನ ಮಾಹಿತಿಯನ್ನು ಪ್ರತಿದಿನ ಪಡೆಯುತ್ತಿದ್ದೇವೆ. ಆಗಸ್ಟ್ 15ರ ನಂತರ ಬರ ಘೋಷಣೆಯ ಬಗ್ಗೆ ಯೋಚಿಸಲಾಗುವುದು. ಇನ್ನೂ ಕಲುಷಿತ ನೀರು ಸರಬರಾಜು ಆಗುವ ಸಾಧ್ಯತೆ ಇರುತ್ತದೆ. ಇದರಿಂದ ಜನರು ಅನಾರೋಗ್ಯಕ್ಕೆ ತುತ್ತಾಗಬಹುದು. ಇದಕ್ಕೆ ಅವಕಾಶ ಕಲ್ಪಿಸಬಾರದು. ಸಾಂಕ್ರಾಮಿಕ ರೋಗಗಳು ಬರುತ್ತವೆ. ಈ ಬಗ್ಗೆಯೂ ಎಚ್ಚರಿಕೆ ವಹಿಸಬೇಕು ಎಂದು ಹೇಳಿದರು.

ಜಿಲ್ಲಾಧಿಕಾರಿಗಳ ಪಿಡಿ ಹಣ ಖರ್ಚು ಮಾಡಲು ಸೂಚನೆ

ಕಡಿಮೆ ನೀರಿನಿಂದ ಬೆಳೆ ಬೆಳೆಯಲು ಪ್ರೋತ್ಸಾಹಿಸಬೇಕು. 165 ಮಳೆ ಮಾಪನ ಕೇಂದ್ರಗಳಲ್ಲಿ 105 ಮಳೆ ಮಾಪನ ಕೇಂದ್ರಗಳು ಕಾರ್ಯ ನಿರ್ವಹಣೆಯಲ್ಲಿವೆ. ಸರಿ ಇಲ್ಲದ್ದನ್ನು ಕೂಡಲೇ ದುರಸ್ತಿಗೊಳಿಸಬೇಕು. ಇನ್ನೂ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿಗಳ ಪಿಡಿ ಅಕೌಂಟ್‌ನಲ್ಲಿ 11 ಕೋಟಿ ರೂ. ಇದೆ. ಸಂದರ್ಭಕ್ಕೆ ಅನುಸಾರವಾಗಿ ಜನ ಮತ್ತು ಜಾನುವಾರುಗಳ ಕುಡಿಯುವ ನೀರಿಗಾಗಿ ಹಣ ಖರ್ಚು ಮಾಡುವಂತೆ ಸೂಚಿಸಿದರು. ಜಿಲ್ಲೆಯಲ್ಲಿ ರೈತರಿಗೆ ಸಮರ್ಪಕವಾಗಿ ಮೇವಿನ ಕಿಟ್ ವಿತರಿಸುವ ಕೆಲಸ ಮಾಡಿದ್ದಾರೆ. ರೈತರು ಹೆಚ್ಚು ಮೇವು ಬೆಳೆದರೆ, ಅವರಿಗೆ ಹಣ ಕೊಟ್ಟು ಖರೀದಿಸಲಾಗುವುದು ಎಂದು ತಿಳಿಸಿದರು.

ವಿಬಿ ಜಿ ರಾಮ್ ಜಿ ಯೋಜನೆಗೆ ಹಣ ಕೊಡುತ್ತೇವೆ. ಇದಕ್ಕೆ ಯಾವುದೇ ರೀತಿಯ ಹಣದ ಕೊರತೆ ಇಲ್ಲ. ಜಿಲ್ಲೆಯಲ್ಲಿ ಹೆಚ್ಚಿನ ರೀತಿಯಲ್ಲಿ ರೇಷ್ಮೆ, ಹೂ ತೋಟ ಸೇರಿದಂತೆ ತೋಟಗಾರಿಕೆ ಬೆಳೆ ಇದೆ. ಇದಕ್ಕೆ ಪ್ರೋತ್ಸಾಹಿಸಲು ಸಭೆಯಲ್ಲಿ ತಿಳಿಸಲಾಗಿದೆ. ಸುಮಾರು 80 ಕೆರೆಗಳಿಗೆ ನೀರು ತುಂಬಿಸಲಾಗುತ್ತಿದೆ. ಟರ್ಷಿಯರಿ ಟ್ರೀಟ್ಮೆಂಟ್ ಮಾಡಿ ನೀರು ಪೂರೈಸುವಂತೆ ಶಾಸಕರು ಸಲಹೆ ನೀಡಿದ್ದಾರೆ. ಈ ಬಗ್ಗೆ ಸರ್ಕಾರದ ಹಂತದಲ್ಲಿ ಚರ್ಚೆಯಾಗುತ್ತಿದ್ದು, ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+