ಬರದ ನಡುವೆಯೇ ಕಲಬುರಗಿ ರೈತರಿಗೆ ಗುಡ್‌ನ್ಯೂಸ್; ₹221 ಕೋಟಿ ಬೆಳೆವಿಮೆ ಬಿಡುಗಡೆ: ಖರ್ಗೆ
ಬೆಂಗಳೂರು: ರಾಜ್ಯದಲ್ಲಿ ಭೀಕರ ಬರಗಾಲ ಆವರಿಸಿದೆ. ಶೇ. 40ರಷ್ಟು ಬಿತ್ತನೆ ಆಗಿದ್ದು, ಬಳೆ ಪೈರು ಮಳೆ ಇಲ್ಲದೇ ಒಣಗಿದೆ. ಈ ಸಂಬಂಧ ರೈತರಿಗೆ ಬೆಳೆವಿಮೆಗೆ ಕಟ್ಟುವಂತೆ ಸರ್ಕಾರ ಉತ್ತೇಜಿಸಿದ ಬೆನ್ನಲ್ಲೇ ಕಲಬುರಗಿ ರೈತರಿಗೆ ಗುಡ್‌ನ್ಯೂಸ್ ಸಿಕ್ಕಿದೆ. ಜಿಲ್ಲೆಯ ರೈತರ ಖಾತೆಗೆ ಸಕಾಲಕ್ಕೆ ಬೆಳೆವಿಮೆ ಪರಿಹಾರ.
'ಬೆಳೆ ವಿಮೆ ಪರಿಹಾರ ಸಕಾಲಕ್ಕೆ ರೈತರ ಖಾತೆಗೆ ಹಾಕುವ ಮೂಲಕ ನುಡಿದಂತೆ ನಡೆದ ಗ್ಯಾರಂಟಿ ಸರ್ಕಾರ' ಎಂದು ಬುಧವಾರ ಗೃಹ ಸಚಿವರೂ ಆಗಿರುವ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಎಕ್ಸ್ ಪೋಸ್ಟ್ ಮೂಲಕ ಮಾಹಿತಿ ನೀಡಿದ್ದಾರೆ.

ಈ ಬಾರಿ ಮಳೆ ಕಡಿಮೆಯಿಂದ ನಾಡಿನ ರೈತರಿಗೆ ಹೆಚ್ಚಿನ ಸಂಕಷ್ಟವಾಗಿದೆ. ಈಗಾಗಲೇ ಮಾನ್ಯ ಮುಖ್ಯಮಂತ್ರಿಗಳು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಹಲವು ನಿರ್ದೇಶನಗಳನ್ನು ನೀಡಿದ್ದಾರೆ. ಬರದ ಛಾಯೆಯನ್ನು ಸಮರ್ಥವಾಗಿ ನಿಭಾಯಿಸುವುದಕ್ಕೆ ಸರ್ಕಾರ ಸರ್ವ ಸನ್ನದ್ಧವಾಗಿದೆ.
221 ಕೋಟಿ ರೂ ಬೆಳವಿಮೆ ಬಿಡುಗಡೆ
ವಿಶೇಷವಾಗಿ ಕಲಬುರಗಿ ಅನ್ನದಾತರಿಗೆ ಒಂದು ಸಂತಸದ ಸುದ್ದಿಯನ್ನು ನೀಡಲಾಗುತ್ತಿದೆ. ಕಳೆದ ಕೆಲವು ದಿನಗಳ ಹಿಂದೆ 2025-26 ನೇ ಸಾಲಿನಲ್ಲಿ ಮಧ್ಯಂತರ ಪರಿಹಾರವಾಗಿ 243.53 ಕೋಟಿ ರೂಪಾಯಿ ಬೆಳೆವಿಮೆಯನ್ನು ಬಿಡುಗಡೆ ಮಾಡುವುದಾಗಿ ಮುಖ್ಯಮಂತ್ರಿಗಳ ಸಮ್ಮುಖದಲ್ಲಿ ಘೋಷಣೆ ಮಾಡಲಾಗಿತ್ತು. ಇದೀಗ ಅಂತಿಮವಾಗಿ 221 ಕೋಟಿ ರೂಪಾಯಿ ಬೆಳೆವಿಮೆ ಹಣವನ್ನು ಸರ್ಕಾರ ಬಿಡುಗಡೆ ಮಾಡಿದ್ದು, ಮುಂದಿನ 10 ದಿನದಲ್ಲಿ ರೈತರ ಖಾತೆಗೆ ಜಮೆಯಾಗಲಿದೆ ಎಂದರು.
ಇದರೊಂದಿಗೆ ಸಚಿವರು ಕಳೆದ ಮೂರು ವರ್ಷದಲ್ಲಿ ಕಲಬುರಗಿ ರೈತರಿಗೆ ಗ್ಯಾರಂಟಿ ಸರ್ಕಾರದಿಂದ ಬಿಡುಗಡೆಯಾದ ಬೆಳೆವಿಮೆ ಪರಿಹಾರದ ಲೆಕ್ಕ ನೀಡಿದ್ದಾರೆ.
ವರ್ಷವಾರು ಬೆಳೆವಿಮೆ ಪರಿಹಾರ ಪಟ್ಟಿ
* 2023-24 ನೇ ಸಾಲಿನಲ್ಲಿ- 189.39 ಕೋಟಿ ರೂಪಾಯಿ
* 2024 -25 ನೇ ಸಾಲಿನಲ್ಲಿ- 656.63 ಕೋಟಿ ರೂಪಾಯಿ
* 2025-26 ನೇ ಸಾಲಿನಲ್ಲಿ- 464.53 ಕೋಟಿ ರೂಪಾಯಿ
ಯಾವುದೇ ಸಂಕಷ್ಟಗಳನ್ನು ಎದುರಿಸಲು ಕಲಬುರಗಿ ರೈತರೊಂದಿಗೆ ನಮ್ಮ ಸರ್ಕಾರವಿದೆ. ಅತಿವೃಷ್ಟಿ ಇರಲಿ, ಅನಾವೃಷ್ಟಿ ಇರಲಿ, ರೈತರ ಬದುಕು ಕುಸಿಯದಂತೆ ನೋಡಿಕೊಳ್ಳಲು ಸರ್ಕಾರದ ಪ್ರಾಮಾಣಿಕ ಪ್ರಯತ್ನ ನಿರಂತರವಾಗಿರಲಿದೆ ಎಂದು ಅವರು ಅಭಯ ನೀಡಿದ್ದಾರೆ.
ಬೆಳೆ ವಿಮೆ ರೈತರಿಗೆ ವರದಾನ: ಡಿಸಿಎಂ
ಡಿಸಿಎಂ ಮತ್ತು ರಾಜ್ಯ ಕಂದಾಯ ಸಚಿವ ಡಾ.ಜಿ.ಪರಮೇಶ್ವರ್ ಅವರು ಇಂದು (ಜುಲೈ 22) ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆ ಬರ ಪರಿಸ್ಥಿತಿ ಪರಿಶೀಲಿಸಿದರು. ರೈತರಿಗೆ ಬೆಳೆ ವಿಮೆ ಕಟ್ಟುವಂತೆ ಅಧಿಕಾರಿಗಳು ಉತ್ತೇಜಿಸಬೇಕೆಂದು ಹೇಳಿದರು. ಬೆಳೆ ವಿಮೆ ಎಂಬುದು ರೈತರಿಗೆ ವರದಾನ. ಬೆಳೆ ನಷ್ಟವಾದ ಸಂದರ್ಭದಲ್ಲಿ ವಿಮೆ ಹಣ ರೈತರಿಗೆ ಸಹಾಯವಾಗುತ್ತದೆ. ಚಿಕ್ಕಬಳ್ಳಾಪುರದಲ್ಲಿ 80 ಸಾವಿರ ರೈತರ ನೋಂದಣಿಗೆ ಗುರಿ ಹೊಂದಲಾಗಿದೆ. ಸದ್ಯ ಕೇವಲ 24,000 ನೋಂದಣಿ ಆಗಿದೆ ಎಂದು ಅವರು ಸಭೆಯಲ್ಲಿ ತಿಳಿಸಿದರು.
ರೈತರಿಗೆ ನೆರವಾಗುವ ನಿಟ್ಟಿನಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ವಹಿಸದೇ ಬೆಳೆ ವಿಮೆ ಕಟ್ಟಿಸುವ ಗುರಿಯನ್ನು ಪೂರ್ಣಗೊಳಿಸಬೇಕು. ಈ ವಿಚಾರದಲ್ಲಿ ಯಾವುದೇ ಕಾರಣಗಳು ನನಗೆ ಬೇಕಿಲ್ಲ. ನಷ್ಟ ಅನುಭವಿಸಿದ ರೈತರಿಗೆ ವಿಮೆ ಹಣ ಸಿಗುವಂತೆ ನೋಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.


Click it and Unblock the Notifications
