ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

5 ನೇ'ಅಕ್ಕ' ವಿಶ್ವ ಕನ್ನಡಸಮ್ಮೇಳನದಲ್ಲಿ ಸಿಎಂ ಭಾಷಣ

By Staff
|
Google Oneindia Kannada News

Yeddyurappa at WKC-5, Chicagoಶಿಕಾಗೋ ದಲ್ಲಿ ಐದನೇ ಅಕ್ಕ ವಿಶ್ವ ಕನ್ನಡ ಸಮ್ಮೇಳನಕ್ಕೆ ಭಾರತೀಯ ಕಾಲಮಾನ ಪ್ರಕಾರ ಆ.29ರ ರಾತ್ರಿ 9 ಗಂಟೆಗೆ ಸರಿಯಾಗಿ ವಿದ್ಯುಕ್ತವಾಗಿ ಚಾಲನೆ ಸಿಕ್ಕಿತು. 'ಅಮೆರಿಕದಲ್ಲಿ ನೆಲೆಸಿರುವ ಪ್ರೀತಿಯ ಕನ್ನಡ ಸೋದರ ಸೋದರಿಯರೆ, ಬಂಧುಗಳೆ', ಎಂದು ಸಂಬೋಧಿಸಿ ಭಾರಿ ಕರತಾಡನ ಗಿಟ್ಟಿಸಿಕೊಂಡ ಕರ್ನಾಟಕದ ಮುಖ್ಯಮಂತ್ರಿ ಯಡಿಯೂರಪ್ಪನವರು ಕುವೆಂಪು, ಸ್ವಾಮಿ ವಿವೇಕಾನಂದರ ಚಿಂತನೆಗಳ ನೆನಪು ಮಾಡಿಕೊಟ್ಟು, ಧನ್ಯತಾ ಭಾವದಿಂದ ಭಾಷಣ ಮುಂದುವರೆಸಿದರು

(ಭಾಷಣದ ವರದಿ ಮೂರು ಭಾಗಗಳಾಗಿ ಪ್ರಕಟಗೊಳ್ಳಲಿದೆ...ಪ್ರಸ್ತಾವನೆ, ಆರೋಗ್ಯ ಶಿಕ್ಷಣ, ಕೈಗಾರಿಕಾ ಅಭಿವೃದ್ಧಿಗೆ ಎನ್ನಾರೈಗಳ ಪಾತ್ರ..ಇತ್ಯಾದಿ ಮುಖ್ಯಾಂಶಗಳೊಂದಿಗೆ ಶಿಕಾಗೋನಿಂದ ದಟ್ಸ್ ಕನ್ನಡಕ್ಕೆ ತ್ರಿವೇಣಿ ಶ್ರೀನಿವಾಸ್ ರಾವ್ ಅವರು ನೇರ ವರದಿ ನೀಡುತ್ತಿದ್ದಾರೆ -ಸಂಪಾದಕ)

*ತ್ರಿವೇಣಿ ಶ್ರೀನಿವಾಸ್ ರಾವ್, ಶಿಕಾಗೋ

ಅಮೆರಿಕದಲ್ಲಿ ನೆಲೆಸಿರುವ ಪ್ರೀತಿಯ ಕನ್ನಡ ಸೋದರ ಸೋದರಿಯರೆ, ಬಂಧುಗಳೆ,

My dear brothers and sisters of Kannada Origin who are the residents of America at the same time non-resident Kannadigas of India. I am delighted and thrilled to be amidst you. I have brought greetings from five and a half crore native kannadigas to you.

ನಾನು ಒಬ್ಬ ಕನ್ನಡಿಗನಾಗಿ, ಭಾರತೀಯನಾಗಿ ಹಾಗೂ ಕರ್ನಾಟಕದ ಮುಖ್ಯಮಂತ್ರಿಯಾಗಿ ಹೀಗೆ ಮೂರು ನೆಲೆಗಳಲ್ಲಿ ಆಲೋಚಿಸಿ ಕೆಲವು ಆಲೋಚನೆಗಳನ್ನು ಮತ್ತು ಗಂಭೀರ ಚಿಂತನೆಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಅಪೇಕ್ಷಿಸಿದ್ದೇನೆ. ಅಮೆರಿಕದ ಕನ್ನಡ ಕೂಟ 'ಅಕ್ಕ' ಅಕ್ಕರೆಯಿಂದ ಆಯೋಜಿಸಿರುವ ವಿಶ್ವ ಕನ್ನಡ ಸಮ್ಮೇಳನವನ್ನು ಉದ್ಘಾಟಿಸುವ ಸೌಭಾಗ್ಯವನ್ನು ನೀವು ನನಗೆ ಎರಡನೇ ಬಾರಿಗೆ ಕರುಣಿಸಿದ್ದೀರಿ. ನಾನು ಪುಳಕಿತನಾಗಿದ್ದೇನೆ. ಇದಕ್ಕೆ ಎರಡು ಕಾರಣಗಳಿವೆ.

ಒಂದು, ಯಾವ ಮಣ್ಣಿನಿಂದ ತಮ್ಮ ದಿವ್ಯ ಸಂದೇಶದಿಂದ ಇಡೀ ಜಗತ್ತನ್ನು ಸ್ವಾಮಿ ವಿವೇಕಾನಂದರು ಮಂತ್ರಮುಗ್ಧರನ್ನಾಗಿಸಿದ್ದರೋ, ಆ ನೆಲದಲ್ಲಿ ನಿಂತು ನಿಮ್ಮೊಡನೆ ಸಂವಹನ ನಡೆಸುವ ಅವಕಾಶ ನನ್ನದಾಗಿದೆ.ಎರಡನೆಯದು, ಕರ್ನಾಟಕದ ಉಪ ಮುಖ್ಯಮಂತ್ರಿಯಾಗಿ 2006ರ ಸೆಪ್ಟೆಂಬರ್ ಒಂದರಂದು ಅಕ್ಕ ಆಯೋಜಿಸಿದ್ದ ಸಮ್ಮೇಳವನ್ನು ಬಾಲ್ಟಿಮೋರ್‌ನಲ್ಲಿ ಉದ್ಘಾಟಿಸಿದ್ದ ನನಗೆ ಮುಖ್ಯಮಂತ್ರಿಯಾಗಿ ಮತ್ತೆ ಇದೇ ಸಮ್ಮೇಳನವನ್ನು ಉದ್ಘಾಟಿಸುವ ಗೌರವವನ್ನು ನೀವೆಲ್ಲಾ ಒದಗಿಸಿಕೊಟ್ಟಿದ್ದೀರಿ.

ಸಹಜವಾಗಿ ನಾನು ಪುಳಕಗೊಂಡಿದ್ದೇನೆ. ನೆನಪಿನ ನಾವೆಯಲ್ಲಿ ತೇಲುತ್ತಿದ್ದೇನೆ. "ಕನ್ನಡಕ್ಕೆ ಕೈ ಎತ್ತು - ನಿನ್ನ ಕೈ ಕಲ್ಪವೃಕ್ಷವಾಗುವುದು" ಎಂಬ ಕುವೆಂಪು ಅವರ ಕವನ ನನಗೆ ನೆನಪಾಗುತ್ತಿದೆ. ದೂರದ ನಾಡಿನಲ್ಲಿ ಕನ್ನಡಕ್ಕಾಗಿ ಕೈ ಎತ್ತಿ ಕೃತಾರ್ಥರಾದ ಭಾವ ನಮ್ಮನ್ನೀಗ ಆವರಿಸಿಕೊಂಡಿದೆ. ಇದೇ ಶಿಕಾಗೋ ನಗರದಲ್ಲಿ, 1893ರ ಸೆಪ್ಟೆಂಬರ್ 11ರಂದು ಭಾರತ ಮಾತೆಯ ಶ್ರೇಷ್ಠ ಪುತ್ರ, ಆಧುನಿಕ ಯುಗದ ಸರ್ವಶ್ರೇಷ್ಠ ದಾರ್ಶನಿಕ ಸ್ವಾಮಿ ವಿವೇಕಾನಂದರು ಇಡೀ ಮನುಕುಲವನ್ನು ಎಚ್ಚರಿಸುವಂಥ ಸಂದೇಶ ನೀಡಿದ್ದರು.

ವಿಶ್ವ ಧರ್ಮ ಸಂಸತ್ತಿಗೆ ಅನಾಮಿಕನಂತೆ ಪ್ರವೇಶ ಗಿಟ್ಟಿಸಿದ್ದ ಯುವ ಸನ್ಯಾಸಿ ವಿವೇಕಾನಂದರು ಭಾರತೀಯ ವೇದಾಂತ ಮತ್ತು ಮಾನವತೆಯ ಮರ್ಮವುಳ್ಳ ತಮ್ಮ ಸಂಕ್ಷಿಪ್ತ ಆದರೆ ಅರ್ಥಭರಿತ ಭಾಷಣದಿಂದ ಕೆಲವೇ ಕ್ಷಣಗಳಲ್ಲಿ ಸಮಸ್ತ ಜಗತ್ತಿನ ಆರಾಧ್ಯಮೂರ್ತಿಯಾಗಿ ಬೆಳೆದು ನಿಂತು ಭಗವಾನ್ ಕೃಷ್ಣನ ವಿಶ್ವರೂಪ ದರ್ಶನವನ್ನು ನೆನಪಿಸುವಂತೆ ಭಾರತದ ಆಧ್ಯಾತ್ಮಕ್ಕೆ ಜಾಗತಿಕ ಮನ್ನಣೆ ತಂದಿತ್ತಿದ್ದರು.

ಧನ್ಯತೆಯ ಭಾವ
ಸರಿಯಾಗಿ 115 ವರ್ಷಗಳ ನಂತರ ಸ್ವಾಮಿ ವಿವೇಕಾನಂದರ ಸಂದೇಶ ನಮ್ಮ ನಿಮ್ಮೆಲ್ಲರ ಹೃನ್ಮನಗಳಲ್ಲಿ ರೋಮಾಂಚನದ ಅಲೆಯನ್ನು ಎಬ್ಬಿಸುತ್ತಿರುವ ಸಂದರ್ಭದಲ್ಲಿ ನಿಮ್ಮ ಮುಂದೆ ನಿಂತು ನಾಲ್ಕು ಮಾತುಗಳನ್ನು ಆಡುತ್ತಿರುವ ನನ್ನ ಮನದಲ್ಲಿ ಧನ್ಯತೆಯ ಭಾವ ಮೂಡುತ್ತಿದೆ. ಪ್ರೀತಿಯ ಕನ್ನಡ ಬಂಧುಗಳೇ, ಸಪ್ತಸಾಗರದಾಚೆ ಜೀವನ ಮಾಡುತ್ತಿದ್ದರೂ ಕನ್ನಡ ಭಾಷೆ ಮತ್ತು ಸಂಸ್ಕೃತಿ ನಿಮ್ಮ ಮನಗಳಲ್ಲಿ ಸುಪ್ತಸಾಗರದಂತೆ ಉಳಿದಿದೆ. ಈ ಮಾತನ್ನು ಹೇಳಲು ನನಗೆ ಸಂತೋಷವಾಗುತ್ತಿದೆ.

ಕನ್ನಡಿಗರು ವಿದೇಶಗಳಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ನೆಲೆಸಿದ್ದಾರೆ. ಅವರು ಎಲ್ಲಿ ನೆಲೆಸಿದರು ಅಲ್ಲೊಂದು ಪ್ರತ್ಯೇಕ ದ್ವೀಪವಾಗಿ ಸಿಡಿದಿಲ್ಲ. ಹೊಳೆಯುವ ದೀಪಗಳಾಗಿ ಬೆಳಗಿದ್ದಾರೆ. ಆದ್ದರಿಂದಲೇ ಎಲ್ಲರ ಆದರಕ್ಕೆ ಪಾತ್ರರಾಗಿದ್ದಾರೆ.ಹಾಗೆಯೇ ಅಮೇರಿಕಾದಲ್ಲಿ ನೆಲೆಸಿರುವ ಕನ್ನಡಿಗರೂ ಕೂಡಾ. ಈ ನೆಲಕ್ಕೆ ನೀವು ಒಗ್ಗಿಕೊಂಡಿದ್ದೀರಿ. ಇಲ್ಲಿನ ಪರಿಸರ, ಭಾಷೆ ಮತ್ತು ಸಂಸ್ಕೃತಿಗೆ ಸ್ಪಂದಿಸಿದ್ದೀರಿ. ಜೊತೆಗೆ ತಾಯ್ನಾಡನ್ನೂ ಮರೆತಿಲ್ಲ. ತಾಯ್ನುಡಿಯನ್ನೂ ಮರೆತಿಲ್ಲ. ಕನ್ನಡಕೂಟ ಕಟ್ಟಿ ಸಂಬsಮಿಸುತ್ತಿದ್ದೀರಿ. ವಿಶ್ವಕನ್ನಡ ಮೇಳ ಆಯೋಜಿಸಿ ಆನಂದಿಸುತ್ತಿದ್ದೀರಿ.

ಅಮೇರಿಕಾ ಭಾರತಕ್ಕಿಂತ ಐದು ಪಟ್ಟು ವಿಸ್ತಾರವಿರುವ ರಾಷ್ಟ್ರ. ಆದರೂ ಸಾವಿರಾರು ಕಿಲೋಮೀಟರ್ ದೂರದಿಂದ ಬಂದು ಒಂದು ಕಡೆ ಕಲೆತು ಕನ್ನಡ ಬಾವುಟ ಹಾರಿಸಿ ದೂರದ ದೇಶದಲ್ಲಿ ಕನ್ನಡದ ವಾತಾವರಣ ಮೂಡಿಸಿದ್ದೀರಿ.

'ಎಲ್ಲಾದರು ಇರು ಎಂತಾದರು ಇರು ಎಂದೆಂದಿಗೂ ನೀ ಕನ್ನಡವಾಗಿರು...' ಎಂದ ರಾಷ್ಟ್ರಕವಿ ಕುವೆಂಪು ಅವರ ಸಂದೇಶವನ್ನು ನೀವು ಪಾಲಿಸುತ್ತಿರುವುದರಿಂದ, ಕನ್ನಡ ನಿಮ್ಮ ಮನಗಳಲ್ಲಿ ಬೆಳಗುತ್ತಿದೆ. ನಿಮ್ಮ ಈ ಕನ್ನಡ ಪ್ರೀತಿಗೆ 'ಅಕ್ಕ ಸಮ್ಮೇಳನ' ಏರ್ಪಡಿಸಿ ಆ ಕನ್ನಡ ಪ್ರೀತಿಯನ್ನು ಲೋಕಕ್ಕೆ ಸಾದರಪಡಿಸುತ್ತಿರುವ ರೀತಿಗೆ ನನ್ನ ನಮಸ್ಕಾರ.
ಜಗತ್ತಿನ ಯಾವ ಭಾಗದಲ್ಲೇ ಇರಲಿ, ಕನ್ನಡಿಗ ಎಂದೆಂದಿಗೂ ಕನ್ನಡಿಗನೇ, ನಮ್ಮೆಲ್ಲರಲ್ಲಿ ಹರಿಯುತ್ತಿರುವುದು ಕನ್ನಡದ ರಕ್ತ.ನಮ್ಮ ಬದುಕು, ವೃತ್ತಿ, ವಾಸಸ್ಥಳ, ರುಚಿ-ಅಭಿರುಚಿ, ಜೀವನಶೈಲಿ ಯಾವುದೇ ಆಗಿರಬಹುದು ನಮಗೆಲ್ಲರಿಗೂ ಕನ್ನಡವೇ ಸತ್ಯ, ಕನ್ನಡವೇ ನಿತ್ಯ, ನಾವೆಲ್ಲರೂ ಕನ್ನಡವೆಂಬ ಕುಲಕ್ಕೆ ಸೇರಿದವರು.

ಕನ್ನಡವೆಂಬ ಅಮೃತವಾಹಿನಿ
ಕರ್ನಾಟಕದಿಂದ ಷಿಕಾಗೋವರೆಗೆ ಕನ್ನಡವೆಂಬ ಅಮೃತವಾಹಿನಿ ಎದೆಯಿಂದ ಎದೆಗೆ ಹರಿಯುತ್ತಿದೆ. ಆದ್ದರಿಂದಲೇ ಕನ್ನಡ ನಿಮ್ಮನ್ನೆಲ್ಲಾ ಇಲ್ಲಿಗೆ ಕರೆತಂದಿದೆ. ಕನ್ನಡ ನನ್ನನ್ನೂ ಕೂಡಾ ಇಲ್ಲಿಗೆ ಕರೆತಂದಿದೆ. ಕನ್ನಡಿಗರಾಗಿ ಕರ್ನಾಟಕದ ನಂಟು ಉಳಿಸಿಕೊಂಡಿರುವ ನೀವೆಲ್ಲರೂ ಬಲ್ಲಂತೆ, ಕಳೆದ ಮೇ ತಿಂಗಳಲ್ಲಿ ಕರ್ನಾಟಕದಲ್ಲಿ ನಡೆದ ಮಹಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ ಅಭೂತಪೂರ್ವ ಯಶಸ್ಸನ್ನು ಸಾಧಿಸಿತು.

ದಕ್ಷಿಣ ಭಾರತದ ಇತಿಹಾಸದಲ್ಲಿ ಮೊದಲ ಪರಿಪೂರ್ಣ ಬಿಜೆಪಿ ಸರ್ಕಾರ ಎಂಬ ಹೆಗ್ಗಳಿಕೆಯ ಸುವರ್ಣ ಅಧ್ಯಾಯ ಆರಂಭವಾಗಿದೆ. ಕರ್ನಾಟಕಕ್ಕೆ ಹೊಸ ದಿಕ್ಕು ಮತ್ತು ಹೊಸ ಬೆಳಕು ನೀಡುವುದು ನಮ್ಮ ಸರ್ಕಾರದ ದೃಢ ಸಂಕಲ್ಪ. ಪ್ರಗತಿ ಪಥದಲ್ಲಿ ನಮ್ಮ ಪಯಣ. ನಮ್ಮ ಹೆಜ್ಜೆಗಳೀಗ ಸಮೃದ್ಧ ಕರ್ನಾಟಕ ನಿರ್ಮಾಣದ ಹಾದಿಯಲ್ಲಿ. ಇದರಲ್ಲಿ ನಿಮ್ಮ ಸಹಯೋಗ ಅಪೇಕ್ಷಣೀಯ.

ಕರ್ನಾಟಕದ ಸರ್ವಾಂಗೀಣ ಸಮಗ್ರ ಪ್ರಗತಿಗೆ ನೆರವಾಗಲು ನೀವೂ ಮುಂದೆ ಬನ್ನಿ. ವಿಶಾಲ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ನೀವು ಆರಿಸಿಕೊಂಡ ಕಾರ್ಯಕ್ಷೇತ್ರಗಳಿಗೆ ಬೇಕಾದ ಸೌಲಬsಗಳನ್ನು ಕಲ್ಪಿಸಲು ನಮ್ಮ ಸರ್ಕಾರ ಸಿದ್ಧ. ಯಾವ ವಿಳಂಬವೂ ಇಲ್ಲದೆ ಏಕ ಗವಾಕ್ಷಿ ಮೂಲಕ ಸೂಕ್ತ ಹೊಸ ಯೋಜನೆಗಳಿಗೆ ಅಂಗೀಕಾರ ಕೊಡುತ್ತೇವೆ. ನಿಮ್ಮ ಗಳಿಕೆಯನ್ನು ಕರ್ನಾಟಕದಲ್ಲಿ ಬಂಡವಾಳವನ್ನಾಗಿಸಿ ನಿಮ್ಮ ಆಯ್ಕೆಯ ಉದ್ಯಮದಲ್ಲಿ ತೊಡಗಿಸಿ. ನೀವು ಬೆಳೆಯುವುದರ ಜೊತೆಗೆ ಕನ್ನಡಿಗರಿಗೆ ಉದ್ಯೋಗದ ಹೆಬ್ಬಾಗಿಲು ತೆರೆಯಿರಿ. ರಾಜ್ಯ ಹಾಗೂ ರಾಷ್ಟ್ರ ನಿರ್ಮಾಣದ ಪಾಲುದಾರರಾಗುವ ತೃಪ್ತಿ ಮತ್ತು ನೆಮ್ಮದಿ ನಿಮ್ಮದಾಗಲಿ.

ಪೂರಕ ಓದಿಗೆ:
ಭಾಷಣದ ಭಾಗ-2:
ಅನಿವಾಸಿ ಕನ್ನಡಿಗರೇ, ರಾಜ್ಯದ ಪ್ರಗತಿಗೆ ಕೈಜೋಡಿಸಿ
ಭಾಷಣದ ಭಾಗ-3:ಸರ್ವರಿಗೆ ಸಮಬಾಳು, ಸರ್ವರಿಗೆ ಸಮಪಾಲು: ಸಿಎಂ
ಗ್ಯಾಲರಿ-1: 5 ನೇ ಅಕ್ಕ ವಿಶ್ವ ಕನ್ನಡ ಸಮ್ಮೇಳನದ ಉದ್ಘಾಟನೆ ಸಂಭ್ರಮ
ಗ್ಯಾಲರಿ-2: ಅಕ್ಕ ವಿಶ್ವ ಕನ್ನಡ ಸಮ್ಮೇಳನದ ಅಂಗಳದಲ್ಲಿ ಗಣ್ಯರಕೂಟ

ಮುಂದುವರೆವುದು.....

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X