ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅನಿವಾಸಿ ಕನ್ನಡಿಗರೇ, ರಾಜ್ಯದ ಪ್ರಗತಿಗೆ ಕೈಜೋಡಿಸಿ

By Staff
|
Google Oneindia Kannada News

Chicago WKC5 Yeddyurappa speech part 2ಶಿಕಾಗೋ ದಲ್ಲಿ ಐದನೇ ಅಕ್ಕ ವಿಶ್ವ ಕನ್ನಡ ಸಮ್ಮೇಳನದಲ್ಲಿ ಕರ್ನಾಟಕದ ಮುಖ್ಯಮಂತ್ರಿ ಯಡಿಯೂರಪ್ಪನವರು ರಾಜ್ಯದ ಉಜ್ವಲ ಭವಿಷ್ಯದ ದೃಷ್ಟಿಕೋನ, ಅಭಿವೃದ್ಧಿ ಮಂತ್ರ ಹಾಡಿದರು. ರಾಜ್ಯದ ಅಭಿವೃದ್ಧಿಯಲ್ಲಿ ಅನಿವಾಸಿ ಕನ್ನಡಿಗರ ಪಾತ್ರ ಹಾಗೂ ಜವಾಬ್ದಾರಿಯ ಬಗ್ಗೆ ಮಾತಾಡಿದರು....

(ಭಾಷಣದ ವರದಿ ಮೂರು ಭಾಗಗಳಾಗಿ ಪ್ರಕಟಗೊಳ್ಳಲಿದೆ...ಪ್ರಸ್ತಾವನೆ, ಕೈಗಾರಿಕಾ ಅಭಿವೃದ್ಧಿ , ಆರೋಗ್ಯ ಶಿಕ್ಷಣಕ್ಕೆ ಎನ್ನಾರೈಗಳ ಪಾತ್ರ..ಇತ್ಯಾದಿ ಮುಖ್ಯಾಂಶಗಳೊಂದಿಗೆ ಶಿಕಾಗೋನಿಂದ ದಟ್ಸ್ ಕನ್ನಡಕ್ಕೆ ತ್ರಿವೇಣಿ ಶ್ರೀನಿವಾಸ್ ರಾವ್ ಅವರು ನೇರ ವರದಿ ನೀಡುತ್ತಿದ್ದಾರೆ -ಸಂಪಾದಕ)

*ತ್ರಿವೇಣಿ ಶ್ರೀನಿವಾಸ್ ರಾವ್, ಶಿಕಾಗೋ

ಉಜ್ವಲ ಭವಿಷ್ಯದ ಕನಸು
ಅಮೇರಿಕಾದಲ್ಲಿ ಗಳಿಸಿದ ಸಂಪತ್ತನ್ನು ಮಾತ್ರ ತನ್ನಿ - ಎಂದು ನಾನು ಹೇಳುತ್ತಿಲ್ಲ. ಇಲ್ಲಿ ನೀವು ಪಡೆದ ಅನುಭವದ ಸಾರವನ್ನು ಕರ್ನಾಟಕಕ್ಕೆ ಧಾರೆ ಎರೆಯಿರಿ. ನಾವು - ನೀವು ಸೇರಿ ಭವ್ಯ ಕರ್ನಾಟಕವನ್ನು, ಸಮೃದ್ಧ ಕರ್ನಾಟಕವನ್ನು ಕಟ್ಟೋಣ. ಉಜ್ವಲ ಭವಿಷ್ಯಕ್ಕೆ ಹೊಸ ಭಾಷ್ಯ ಬರೆಯೋಣ.

ಅಕ್ಕ ಸಮ್ಮೆಳನದಲ್ಲಿ ಇದು ನನ್ನ ಅಕ್ಕರೆಯ ಕರೆ. ನನ್ನ ಈ ಪ್ರಾಂಜಲ ಕರೆಯನ್ನು ಇಂದು ಇಲ್ಲಿ ಉಪಸ್ಥಿತರಿಲ್ಲದ ಕನ್ನಡಿಗರಿಗೂ ನೀವು ತಿಳಿಸಿರಿ. ಇದು ನನ್ನ ವಿನಂತಿ. ಇಲ್ಲಿರುವ ನಮ್ಮಲ್ಲಿ ಬಹುತೇಕ ಮಂದಿ ರೈತ ಕುಟುಂಬದಿಂದ ಬಂದವರು. ಅನ್ನದಾತ ರೈತನ ನೋವು ನಲಿವನ್ನು ಹತ್ತಿರದಿಂದ ಬಲ್ಲವರು.

ನೀವು ದೂರದ ದೇಶದಲ್ಲಿದ್ದರೂ ನಿಮ್ಮ ಬಂಧುಗಳೊಡನೆ ಸಂಪರ್ಕದಲ್ಲಿರುತ್ತೀರಿ. ಭಾರತದಲ್ಲಿ ಇಂದು ರೈತರು ಅನುಭವಿಸುತ್ತಿರುವ ಕಷ್ಟನಷ್ಟಗಳ ಪರಿಚಯ ನಿಮಗಿದೆ. ಅಧಿಕಾರಕ್ಕೆ ಬಂದಕೂಡಲೇ ನಮ್ಮ ಸರ್ಕಾರ ಚಿಂತನೆ ನಡೆಸಿದ್ದು ರೈತರ ಕಲ್ಯಾಣದ ಬಗ್ಗೆ. ರಾಜ್ಯದಲ್ಲಿ ನಾಲ್ಕಾರು ಕಡೆ ನೇರವಾಗಿ ರೈತರೊಡನೆ ಸಂವಾದ ನಡೆಸಿ ಬಜೆಟ್ ರೂಪಿಸುವಾಗ ಸಂವಾದದ ಸಂದಬsದಲ್ಲಿ ಮೂಡಿಬಂದ ಅಭಿಪ್ರಾಯಗಳಿಗೆ ಸ್ಪಷ್ಟ ಯೋಜನೆಗಳ ರೂಪ ಕೊಟ್ಟಿದ್ದೇನೆ.

ಬಿಜೆಪಿ ಎಂದಿಗೂ ರೈತಪರ
ರೈತರ ಕಣ್ಣೀರು ಒರೆಸುವ ಹಲವಾರು ಕ್ರಮಗಳು ಅವರ ಬದುಕಿನಲ್ಲಿ ಸುಧಾರಣೆಯ ಬೀಜಗಳನ್ನು ಬಿತ್ತಲಿವೆ.ರೈತರು, ಗ್ರಾಮೀಣ ಜನ, ಹೆಣ್ಣುಮಕ್ಕಳು, ಶೋಷಿತ ವರ್ಗಗಳು ಈ ಎಲ್ಲಾ ಸ್ಥರದ ಜನರ ಕಲ್ಯಾಣಕ್ಕೆ ಪೂರಕವಾದ ಕಾರ್ಯಕ್ರಮಗಳನ್ನು ನಮ್ಮ ಸರ್ಕಾರ ರೂಪಿಸಿ ಅನುಷ್ಠಾನಗೊಳಿಸುತ್ತಿದೆ.

ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ನಂತರ ನಮ್ಮ ಆದ್ಯತೆ ಮೂಲ ಸೌಕರ್ಯ ಸುಧಾರಣೆ. ಉತ್ತಮ ರಸ್ತೆಗಳು, ವಿಮಾನ ನಿಲ್ದಾಣಗಳು, ಬಂದರುಕಟ್ಟೆಗಳು, ನಿರಂತರ ವಿದ್ಯುತ್ ಪೂರೈಕೆ ಇವೆಲ್ಲಕ್ಕೆ ವಿಶೇಷ ಕ್ರಮಗಳನ್ನು ನಾವು ಕೈಗೊಳ್ಳುತ್ತಿದ್ದೇವೆ.

ಜಿಲ್ಲೆಗಳಲ್ಲಿ ವಿಮಾನ ನಿಲ್ದಾಣ
ರಾಜ್ಯದ ಎಲ್ಲಾ ಜಿಲ್ಲೆಗಳಿಗೂ ವಿಮಾನಯಾನ ಸೌಲಭ್ಯ ಕಲ್ಪಿಸಲು ನಮ್ಮ ಸರ್ಕಾರ ಯೋಜನೆ ರೂಪಿಸಿದೆ. 12 ಜಿಲ್ಲೆಗಳಲ್ಲಿ ವಿಮಾನ ನಿಲ್ದಾಣಗಳ ನಿರ್ಮಾಣ ಕೈಗೊಂಡಿದ್ದು ಜೊತೆಗೆ ಇನ್ನೂ 10 ಜಿಲ್ಲೆಗಳಲ್ಲಿ ವಿಮಾನ ಇಳಿದಾಣ (ಏರ್‌ಸ್ಟ್ರಿಪ್ಸ್) ನಿರ್ಮಿಸಲು ನಿರ್ಧರಿಸಲಾಗಿದೆ.

ಈ ವರ್ಷ ಬೀದರ್ ಮತ್ತು ಮೈಸೂರಿನಲ್ಲಿ ವಿಮಾನ ನಿಲ್ದಾಣಗಳು ಪೂರ್ಣಗೊಳ್ಳಲಿವೆ. ಹುಬ್ಬಳ್ಳಿ ವಿಮಾನ ನಿಲ್ದಾಣವನ್ನು ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣದ ದರ್ಜೆಗೆ ಏರಿಸಲಾಗುತ್ತಿದೆ. ಮಂಗಳೂರು ವಿಮಾನ ನಿಲ್ದಾಣವನ್ನು ಈಗಾಗಲೇ ಅಂತಾರಾಷ್ಟ್ರೀಯ ದರ್ಜೆಗೆ ಏರಿಸಿದ್ದು ಅಲ್ಲಿಂದ ವಿದೇಶಿ ವಿಮಾನಗಳು ಕಾರ್ಯಾಚರಣೆ ನಡೆಸುತ್ತಿವೆ.

ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಕೆಲವೇ ದಿನಗಳಲ್ಲಿ ಗುಲ್ಬರ್ಗಾ ಮತ್ತು ಶಿವಮೊಗ್ಗ ವಿಮಾನ ನಿಲ್ದಾಣಗಳ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿ ಚಾಲನೆ ನೀಡಲಾಗಿದೆ. ಇನ್ನೆರೆಡು ವರ್ಷಗಳಲ್ಲಿ ಇವು ಪೂರ್ಣಗೊಳ್ಳಲಿವೆ. ರಾಯಚೂರು, ಬಾಗಲಕೋಟೆ, ದಾವಣಗೆರೆ ಮತ್ತು ಕುಶಾಲನಗರದಲ್ಲಿ ಏರ್‌ಸ್ಟ್ರಿಪ್ ನಿರ್ಮಿಸಲು ಮಂಜೂರಾತಿಯನ್ನು ನೀಡಲಾಗಿದೆ.

ಇನ್ನು ಒಂದೆರಡು ವರ್ಷಗಳಲ್ಲಿ ಅಮೆರಿಕ ಅಥವಾ ಯಾವುದೇ ಹೊರದೇಶದಿಂದ ನಿಮ್ಮೂರು ತಲುಪಲು ಬೆಂಗಳೂರಿಗೆ ಬರುವ ಅವಶ್ಯಕತೆಯಿಲ್ಲ. ಮಂಗಳೂರು-ಹುಬ್ಬಳ್ಳಿ ಇತ್ಯಾದಿ ಊರುಗಳಿಂದ ವಿದೇಶಿ ವಿಮಾನ ಹಾರಾಟ ಸಾಧ್ಯವಾಗುವುದರಿಂದ ಆಯಾ ಭಾಗದ ಜನರಿಗೆ ಅನುಕೂಲವಾಗಲಿದೆ.

ಎನ್‌ಆರ್‌ಐ ಸೆಲ್
ಅನಿವಾಸಿ ಕನ್ನಡಿಗರು ಮೊದಲ್ಗೊಂಡು ಅನಿವಾಸಿ ಭಾರತೀಯರ ಅಗತ್ಯಗಳಿಗೆ ಸ್ಪಂದಿಸಲು ಮತ್ತು ಅವರು ಬಂಡವಾಳ ಹೂಡಲು ಇಚ್ಛೆಸಿದರೆ ಸಮನ್ವಯ ಸಾಧಿಸಲು ಮೊಟ್ಟ ಮೊದಲ ಬಾರಿಗೆ "ಅನಿವಾಸಿ ಭಾರತೀಯರ ಕೋಶ" (ಎನ್‌ಆರ್‌ಐ ಸೆಲ್) ಸ್ಥಾಪಿಸಲಾಗಿದೆ.

ಇಂತಹ ಒಂದು ಪ್ರಯತ್ನ ಮಾಡಿದ ಮೊದಲ ರಾಜ್ಯ ಕರ್ನಾಟಕ. ಸ್ವತಃ ಮುಖ್ಯಮಂತ್ರಿಗಳ ಅದsಕ್ಷತೆಯಲ್ಲಿ ಈ ಸ್ವಾಯತ್ತ ಸಂಸ್ಥೆಯನ್ನು ರೂಪಿಸಲಾಗಿದೆ. ವಿಧಾನ ಪರಿಷತ್ ಸದಸ್ಯ ಗಣೇಶ್‌ಕಾರ್ನಿಕ್ ಈ ಸಂಸ್ಥೆಯ ಉಪಾಧ್ಯಕ್ಷರಾಗಿರುತ್ತಾರೆ. ಅನಿವಾಸಿ ಭಾರತೀಯ ಪ್ರತಿನಿಧಿ ಸೇರಿ ರಾಜ್ಯದ ಪ್ರಮುಖ ಉದ್ಯಮಿಗಳು, ಸಾಹಿತ್ಯ, ಕಲೆ ಮತ್ತಿತರ ಸಾಂಸ್ಕೃತಿಕ ರಂಗದ ಪ್ರತಿನಿಧಿಗಳು, ಆರ್ಥಿಕ ಹಾಗೂ ಸಾಮಾಜಿಕ ತಜ್ಞರು ಮತ್ತು ಸರ್ಕಾರದ ಉನ್ನತಾಧಿಕಾರಿಗಳು ಈ ಸಂಸ್ಥೆಯ ಸದಸ್ಯರಾಗಿ ಸಲಹೆಗಳನ್ನು ನೀಡಲಿದ್ದಾರೆ.

ಈ ಸಾಂಸ್ಥಿಕ ವ್ಯವಸ್ಥೆಯಿಂದಾಗಿ ಅನಿವಾಸಿ ಭಾರತೀಯರು ವಿಶೇಷವಾಗಿ ಅನಿವಾಸಿ ಕನ್ನಡಿಗರು ತಾಯ್ನಾಡಿನ ಜೊತೆ ಸುಲಭ ಸಂಪರ್ಕ ಸಾಧಿಸಲು ಮತ್ತು ತಮ್ಮ ಕೆಲಸ ಕಾರ್ಯಗಳನ್ನು ಸುಗಮವಾಗಿ ನಿರ್ವಹಿಸಲು ಸಾಧ್ಯವಾಗುತ್ತದೆ.

ಬೆಂಗಳೂರು ಮಹಾನಗರವೂ ಸೇರಿದಂತೆ ಕರ್ನಾಟಕದ ಅನೇಕ ನಗರಗಳು ಉದ್ಯಮ ವಲಯದ ಪ್ರೀತಿಗೆ ಪಾತ್ರವಾಗಿವೆ. ನಮ್ಮೆಲ್ಲರ ಹೆಮ್ಮೆಯ ನಗರ ಬೆಂಗಳೂರಿನ ಅಭಿವೃದ್ಧಿಗೆ ವಿಶೇಷ ಗಮನ ಕೊಡಲು ನಮ್ಮ ಸರ್ಕಾರ ನಿರ್ಧರಿಸಿದೆ. ಹಳ್ಳಿ, ಪಟ್ಟಣ, ನಗರ, ಮಹಾನಗರ ಎಲ್ಲವೂ ಅಭಿವೃದ್ಧಿಯಾದರೆ, ಇಡೀ ಕರ್ನಾಟಕದ ಚಿತ್ರಣ ಬದಲಾಗುತ್ತದೆ ಎಂಬ ನಂಬಿಕೆ ನಮ್ಮದಾಗಿದೆ.

ಐದು ವರ್ಷಗಳ ಆಡಳಿತದಲ್ಲಿ ಕರ್ನಾಟಕವನ್ನು ಮಾದರಿ ರಾಜ್ಯವನ್ನಾಗಿ ರೂಪಿಸುವ ಛಲ ಮತ್ತು ಬಲ ನಮ್ಮ ಸರ್ಕಾರಕ್ಕಿದೆ ಎಂದು ನಿಮ್ಮ ಮುಂದೆ ಮತ್ತೊಮ್ಮೆ ದೃಢೀಕರಿಸಲು ನಾನು ಸಂತೋಷಪಡುತ್ತೇನೆ.

ಪೂರಕ ಓದಿಗೆ:
ಭಾಷಣದ ಭಾಗ-1:
5 ನೇ'ಅಕ್ಕ' ವಿಶ್ವ ಕನ್ನಡಸಮ್ಮೇಳನದಲ್ಲಿ ಸಿಎಂ ಭಾಷಣ
ಭಾಷಣದ ಭಾಗ-3: ಸರ್ವರಿಗೆ ಸಮಬಾಳು, ಸರ್ವರಿಗೆ ಸಮಪಾಲು: ಸಿಎಂ
ಗ್ಯಾಲರಿ-1: 5 ನೇ ಅಕ್ಕ ವಿಶ್ವ ಕನ್ನಡ ಸಮ್ಮೇಳನದ ಉದ್ಘಾಟನೆ ಸಂಭ್ರಮ
ಗ್ಯಾಲರಿ-2: ಅಕ್ಕ ವಿಶ್ವ ಕನ್ನಡ ಸಮ್ಮೇಳನದ ಅಂಗಳದಲ್ಲಿ ಗಣ್ಯರಕೂಟ

ಮುಂದುವರೆವುದು.....

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X