ಕಾಂಗ್ರೆಸ್ - ಅದೇ ಹಳೆಯ ವರಸೆ... ಕೇರಳದಲ್ಲೂ: ರಾಜಾರಾಂ ತಲ್ಲೂರು ಬರಹ

ಕಾಂಗ್ರೆಸ್ - ಅದೇ ಹಳೆಯ ವರಸೆ... ಕೇರಳದಲ್ಲೂ: ಹಿರಿಯ ಪತ್ರಕರ್ತ ರಾಜಾರಾಂ ತಲ್ಲೂರು ಅವರ ಬರಹ ಇಲ್ಲಿದೆ.

ಕೇರಳ ಚುನಾವಣೆಯ ಫಲಿತಾಂಶ ಬಂದ ದಿನ, ಮಾಧ್ಯಮವೊಂದರಲ್ಲಿ ಪ್ರಕಟಗೊಂಡ ನನ್ನ ಚುನಾವಣೋತ್ತರ ವಿಶ್ಲೇಷಣೆಯಲ್ಲಿ ಹೀಗೆ ಬರೆದಿದ್ದೆ: ಕೇರಳದಲ್ಲಿ ಗೆದ್ದಿರುವ ಕಾಂಗ್ರೆಸ್, ತನ್ನ ಸಾಂಪ್ರದಾಯಿಕ ರಾಜಕೀಯ ವರಸೆಗಳನ್ನು ಮರೆತು ಮುನ್ನಡೆಯದಿದ್ದರೆ, ಮುಂದಿನ ಬಾರಿ LDFಗಿಂತ UDF, ಬಿಜೆಪಿಗೆ ಹೆಚ್ಚು ಸುಲಭ ತುತ್ತಾಗಬಲ್ಲ ಎದುರಾಳಿ.

Kerala

ಈಗ ಫಲಿತಾಂಶ ಬಂದು ವಾರ ದಾಟಿದೆ. ಕಾಂಗ್ರೆಸ್ ನಾನು ಊಹಿಸಿದಲ್ಲಿಗೇ ತಲುಪಿದೆ. 80-90ರ ದಶಕದ ತನ್ನ ರಾಜಕೀಯ ಮೇಲಾಟಗಳನ್ನು ಈಗ 2026ರಲ್ಲೂ ಮುಂದುವರಿಸಿರುವ ಕಾಂಗ್ರೆಸ್ಸಿಗರು ಚರಿತ್ರೆಯಿಂದ ಪಾಠ ಕಲಿಯುವುದೇ ಇಲ್ಲ. ಆ ಕಾರಣಕ್ಕಾಗಿಯೇ ಅವರು ಪ್ರಸ್ತುತವಾಗಿ ಉಳಿಯುವುದೂ ದಿನೇ ದಿನೇ ದುಸ್ತರವಾಗುತ್ತಿದೆ. ಮೂಲ ಕಾಂಗ್ರೆಸ್ ಒಡೆದು ಇಂದಿರಾ ಕಾಂಗ್ರೆಸ್ ಆದ ಬಳಿಕ, ಅಧಿಕಾರದಲ್ಲಿ ದೀರ್ಘಕಾಲ ಇದ್ದ ಅವಧಿಯಲ್ಲಿ ಕಾಂಗ್ರೆಸ್ ಎರಡು ಪದರಗಳಲ್ಲಿ ಬಿರುಕು ಬಿಟ್ಟಿದೆ. ಮೊದಲ ಬಿರುಕಿನಲ್ಲಿ ಮಮತಾ ಬ್ಯಾನರ್ಜಿ, ಶರದ್ ಪವಾರ್, ಜಿ.ಕೆ. ಮೂಪನಾರ್... ಹೀಗೆ ಅಂದಿನ ಪ್ರಾದೇಶಿಕ ಶಕ್ತಿವಂತರು ಹೊರಬಿದ್ದರು. ಅದು "ಕೊಯೆಲಿಷನ್‌ಗಳ ಯುಗ" ಆದ್ದರಿಂದ ಆ ಹಂತದಲ್ಲಿ ಅವರಿಗೆ ಲಾಭವೇ ಆಯಿತು. ಆದರೆ ಅದು ದೀರ್ಘಕಾಲಿಕವಾಯಿತೇ.

ಎರಡನೇ ಬಿರುಕಿನ ವೇಳೆ, ಮಿಲಿಂದ್ ದೇವರಾ, ಜ್ಯೋತಿರಾದಿತ್ಯ ಸಿಂಧಿಯಾ, ಜಿತಿನ್ ಪ್ರಸಾದ, ಆರ್‌ಪಿಎನ್ ಸಿಂಗ್, ಗುಲಾಂ ನಬೀ ಆಜಾದ್, ಹಿಮಂತ ಬಿಸ್ವ ಸರ್ಮಾ, ಜಗನ್ ರೆಡ್ಡಿ... ಹೀಗೆ ಪಟ್ಟಿ ದೊಡ್ಡದಿದೆ. ಇವರೂ ಪ್ರಾದೇಶಿಕವಾಗಿ ಶಕ್ತಿವಂತರು. ಆದರೆ, ಇವರೆಲ್ಲ ಹೊರತೆರಳಿದ್ದು ಕಾಂಗ್ರೆಸ್ ಉಚ್ಛ್ರಾಯಸ್ಥಿತಿ ತೀರಿದ ಬಳಿಕ, ತಮ್ಮ ಉಳಿವಿನ ಹಾದಿ ಹುಡುಕಿಕೊಂಡು. ಇವರಲ್ಲಿ ಸದ್ಯಕ್ಕೆ ಕೆಲವರಿಗೆ ರಾಜಕೀಯ ಲಾಭ ಸಿಕ್ಕಿದೆ.

ಈ ರೀತಿಯ ಬಿರುಕುಗಳ ಹಿಂದೆ ಇರುವುದು, ಯಾವುದೇ ಸೈದ್ಧಾಂತಿಕ-ತಾತ್ವಿಕ ಬದ್ಧತೆ ಅಲ್ಲ. ರಾಜಕೀಯ ಉಳಿವಿನ ಕುರಿತಾದ ಹಳೆಯ ತಲೆಮಾರಿನ ಚಿಂತನೆ. ಒಂದು ಹಂತದ ತನಕ ಅದೇ ಕಾಂಗ್ರೆಸ್ಸಿನ ಶಕ್ತಿ ಆಗಿತ್ತು. ಆದರೆ ಇಂದು, ಅದು ಕಾಂಗ್ರೆಸ್ಸಿನ ದೌರ್ಬಲ್ಯ ಆಗುತ್ತಿದೆ. ಇದಕ್ಕೆ ಒಳ್ಳೆಯ ಉದಾಹರಣೆ ಕರ್ನಾಟಕದಲ್ಲೇ ಇದೆ. ಹಿಂದೆ AICC ಪ್ರಧಾನ ಕಾರ್ಯದರ್ಶಿಗಳೆಂದರೆ, ಅವರು ಪಕ್ಷದ ಎಲ್ಲ ಚಟುವಟಿಕೆಗಳ ಟ್ರಬಲ್ ಶೂಟರ್ಸ್. ಅವರನ್ನುಆಯ್ದುಕೊಳ್ಳಲು ಪಕ್ಷದ ಹೈಕಮಾಂಡ್ ನೋಡುತ್ತಿದ್ದ ಏಕೈಕ ಅರ್ಹತೆ ಎಂದರೆ ಪಕ್ಷನಿಷ್ಠೆ.

ದಿ|ಆಸ್ಕರ್ ಫೆರ್ನಾಂಡಿಸ್ ಅಂತಹ ಒಬ್ಬ ಪ್ರಭಾವೀ AICC ಪ್ರಧಾನ ಕಾರ್ಯದರ್ಶಿ ಆಗಿದ್ದವರು. ತನ್ನ ವೈಯಕ್ತಿಕ ರಾಜಕೀಯ ಬದುಕನ್ನು ತ್ಯಾಗಮಾಡಿ ಪಕ್ಷ ಕಟ್ಟಲು ಟೊಂಕ ಕಟ್ಟಿದವರು. ಅದರಿಂದಾಗಿ ಅವರು ಲೋಕಸಭೆಯಿಂದ ರಾಜ್ಯಸಭಾ ಸದಸ್ಯರಾಗುವಂತಾಯಿತು, ಸ್ಥಳೀಯವಾಗಿ ಅವರು ಅವರ ಸಾಮರ್ಥ್ಯದ ಬಗ್ಗೆ ಹಲವು ಅನಗತ್ಯ ಅಪವಾದಗಳನ್ನೂ ಕೇಳಬೇಕಾಗಿ ಬಂತು. ಅಷ್ಟಾದರೂ ಅವರು ಪಕ್ಷನಿಷ್ಠೆಯನ್ನು ಬಿಡಲಿಲ್ಲ. ವಿರೋಧಿಗಳು ಅದನ್ನು "ಪರಿವಾರ ನಿಷ್ಠೆ" ಎಂದು ವ್ಯಾಖ್ಯಾನಿಸಿದಾಗಲೂ ನಸುನಕ್ಕು ಮೌನವಾಗಿದ್ದರು. ನನಗೆ ತಿಳಿದಿರುವಂತೆ, ಅವರು KPCC ಅಧ್ಯಕ್ಷ ಗಾದಿಯಲ್ಲಿದ್ದಾಗ ಒಂದು ಹಂತದಲ್ಲಿ ಮುಖ್ಯಮಂತ್ರಿ ಹುದ್ದೆಗೆ ತೀರಾ ಸನಿಹದಲ್ಲಿದ್ದರು. ಆದರೆ, ಅವರದೇ "ರಿಸ್ಟ್ರೇಂಟ್" ಕಾರಣಕ್ಕೆ ಅವರು ಮುಖ್ಯಮಂತ್ರಿ ಆಗಲಿಲ್ಲ ಎಂದು ಕೇಳಿಬಲ್ಲೆ.

ಈ ಉದಾಹರಣೆ ಈಗ ಯಾಕೆ, ಎಂದರೆ, ಕೇರಳದಲ್ಲಿ ಕೆ.ಸಿ. ವೇಣುಗೋಪಾಲ್ ಇಂದು ಅಂತಹದೇ ಆಯಕಟ್ಟಿನ ಜಾಗದಲ್ಲಿದ್ದು (AICC ಪ್ರಧಾನಕಾರ್ಯದರ್ಶಿ), ಮುಖ್ಯಮಂತ್ರಿ ಹುದ್ದೆಗೆ ದಾವೇದಾರರಾಗಿದ್ದಾರೆ. ಇದು ಸಹಜವಾಗಿಯೇ ತಳಮಟ್ಟದಲ್ಲಿ ಕೆಲಸ ಮಾಡಿರುವ ಮತ್ತು ಪಕ್ಷವನ್ನು ಮುನ್ನಡೆಸಿ, ಅಧಿಕಾರಕ್ಕೆ ತಂದಿರುವ ವಿ.ಡಿ. ಸತೀಶನ್ ಬಣಕ್ಕೆ ಹಿತವೆನ್ನಿಸುತ್ತಿಲ್ಲ. ಹೈಕಮಾಂಡ್ ಅನ್ನಿಸಿಕೊಂಡವರು, ಯಾವುದನ್ನೂ ತಮ್ಮ ಮೂಗಿನ ನೇರಕ್ಕೆ ನಿರ್ಧರಿಸುವ ಸ್ಥಿತಿಯಲ್ಲಿ ಇಂದು ಇಲ್ಲ. ಹಾಗಾಗಿ, ಕೇರಳದಲ್ಲಿ ಬಹುಮತಕ್ಕೆ ಬಂದೂ UDF ಸರ್ಕಾರ ರಚನೆಗೆ ಮುಹೂರ್ತ ಕಾಯುತ್ತಿದೆ. ಕೇರಳ ಜನತೆ ಇದನ್ನು ಗಮನಿಸುತ್ತಿದ್ದಾರೆ.

ಕಾಂಗ್ರೆಸ್ಸಿಗೆ ದೀರ್ಘಕಾಲಿಕ ನೆಲೆಯಲ್ಲಿ ಆಧುನಿಕ ರಾಜಕಾರಣಕ್ಕೆ ತಾನು ಪ್ರಸ್ತುತ ಎನ್ನಿಸಿಕೊಂಡು ಉಳಿಯಬೇಕಿದ್ದರೆ, ತಕ್ಕಡಿ ಹಿಡಿದು ಲಾಭ-ನಷ್ಟ ಲೆಕ್ಕಾಚಾರದಲ್ಲಿ ಸಮಯ ಕಳೆಯುವ ಬದಲು ನೈಸರ್ಗಿಕ ನ್ಯಾಯ ಯಾವುದೋ ಅದನ್ನು ತಕ್ಷಣ ತೀರ್ಮಾನಿಸಿಕೊಳ್ಳುವುದು ಅನಿವಾರ್ಯ. ಈ ವಿಚಾರದಲ್ಲಿ ಪ್ರತೀ ದಿನದ ವಿಳಂಬ ಕೂಡ ವಿರೋಧ ಪಕ್ಷವಾಗಿ ಕಾಂಗ್ರೆಸ್ಸಿನ ಮೇಲಿನ ನಂಬಿಕೆಗೆ ಮಾಡಲಿರುವ ಹಾನಿ ಅಪಾರ. ಇದೀಗ ಡಿಜಿಟಲ್ ಯುಗ ಮಾರಾಯ್ರೆ! (ಕರ್ನಾಟಕದಲ್ಲೂ ಇಂತಹದೇ ಸ್ಥಿತಿ - ಸ್ಟೇಲ್‌ಮೇಟ್ ಎಷ್ಟು ಕಾಲದಿಂದ ಮುಂದುವರಿಯುತ್ತಿದೆ ಎಂಬುದನ್ನು ಕೂಡ ಗಮನಿಸಿ!).

ಚುಟುಕು: ಸುದೀರ್ಘ 11 ದಿನಗಳ ನಂತರ ಕಾಂಗ್ರೆಸ್ ಪಕ್ಷವೂ ಕೊನೆಗೂ ಎಚ್ಚೆತ್ತುಕೊಂಡಂತೆ ಕೇರಳದ ನೂತನ ಮುಖ್ಯಮಂತ್ರಿಯನ್ನಾಗಿ ವಿ.ಡಿ ಸತೀಶನ್ ಅವರನ್ನು ಆಯ್ಕೆ ಮಾಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+