Ambati Rayudu: ಆರ್ಸಿಬಿ ಯಶಸ್ಸಿಗೆ ನಾವು ಕಾರಣ, ಆ ಕ್ರೆಡಿಟ್ ನನಗೆ ಸಿಗಬೇಕು: ಅಂಬಟ್ಟಿ ರಾಯುಡು ಅಚ್ಚರಿ ಹೇಳಿಕೆ
Ambati Rayudu: ರಾಯ್ಪುರ್ನಲ್ಲಿ ನಡೆದ ಹೈವೋಲ್ಟೇಜ್ ಐಪಿಎಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ 6 ವಿಕೆಟ್ಗಳ ಭರ್ಜರಿ ಗೆಲುವು ದಾಖಲಿಸಿದೆ. ಇದರ ಬೆನ್ನಲ್ಲೇ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಾಜಿ ಆಟಗಾರ ಅಂಬಾಟಿ ರಾಯುಡು ಅವರು ಆರ್ಸಿಬಿ ಯಶಸ್ಸಿಗೆ ತಾವೇ ಕಾರಣ ಎನ್ನುವ ರೀತಿಯಲ್ಲಿ ಅಚ್ಚರಿ ಹೇಳಿಕೆ ನೀಡಿ ಮತ್ತೆ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಕುರಿತು ತಾವು ಮಾಡುತ್ತಿದ್ದ ಟೀಕೆಗಳೇ ಆ ತಂಡವು ಐಪಿಎಲ್ನಲ್ಲಿ ಯಶಸ್ಸು ಕಾಣಲು ಸಹಾಯ ಮಾಡಿದೆ ಎಂದು ಹೇಳಿದ್ದಾರೆ. ರಾಯ್ಪುರದಲ್ಲಿ ನಡೆದ 57ನೇ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಗೆದ್ದು ಆರ್ಸಿಬಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ ಬೆನ್ನಲ್ಲೇ ರಾಯುಡು ಈ ಕುತೂಹಲಕಾರಿ ಹೇಳಿಕೆ ನೀಡಿದ್ದಾರೆ.

ಆರ್ಸಿಬಿ ಯಶಸ್ಸಿಗೆ ತಾವೇ ಕಾರಣ ಎಂದ ರಾಯುಡು
"ಕಳೆದ ಎರಡು ಸೀಸನ್ಗಳಿಂದ ತಾವು ಆರ್ಸಿಬಿ ಬಗ್ಗೆ ಮಾಡುತ್ತಿದ್ದ ಟೀಕೆಗಳು ತಂಡದ ಮೇಲೆ ಧನಾತ್ಮಕ ಪರಿಣಾಮ ಬೀರಿವೆ. ತಮ್ಮ ಟೀಕೆಗಳು ಕೇವಲ ಟೀಕೆಗಳಾಗಿರದೆ, ಆರ್ಸಿಬಿ ತಂಡವು ತನ್ನ ತಪ್ಪುಗಳನ್ನು ತಿದ್ದಿಕೊಂಡು ಯಶಸ್ಸಿನ ಹಾದಿಗೆ ಮರಳಲು ನೆರವಾಗಿವೆ," ಎಂದು ಆಟಗಾರ ಅಂಬಾಟಿ ರಾಯುಡು ಅಚ್ಚರಿ ಹೇಳಿಕೆ ನೀಡಿ ಗಮನ ಸೆಳೆದಿದ್ದಾರೆ. ಅಲ್ಲದೆ "ಐಪಿಎಲ್ನಲ್ಲಿ 2025ರವರೆಗೆ ಆರ್ಸಿಬಿ ತಂಡವು ಯಶಸ್ಸು ಕಾಣದಿರಲು ಇದ್ದ ಕೊರತೆಗಳ ಬಗ್ಗೆ ತಾವು ಸೇರಿದಂತೆ ಸಿಎಸ್ಕೆಯ ಹಲವು ಮಾಜಿ ಕ್ರಿಕೆಟಿಗರು ಟೀಕೆಗಳನ್ನು ಮಾಡಿದ್ದರು," ಅಂತಲೂ ರಾಯುಡು ಹೇಳಿದ್ದಾರೆ.
"ಆರ್ಸಿಬಿ ಟ್ರೋಫಿ ಗೆದ್ದಿದ್ದು ತಮ್ಮ ಸಲಹೆಯಿಂದ"
"ಪಂದ್ಯದ ನಂತರದ ವಿಶ್ಲೇಷಣೆಗಳು ಮತ್ತು ಸಾಮಾಜಿಕ ಜಾಲತಾಣಗಳ ಮೂಲಕ ತಾವು ನೀಡುತ್ತಿದ್ದ ನಿರಂತರ ಪ್ರತಿಕ್ರಿಯೆಗಳು ಉತ್ತಮ ತಂಡ ಕಟ್ಟಲು ಪ್ರೇರೇಪಿಸಿತು. ಇದರ ಫಲವಾಗಿಯೇ ರಾಯಲ್ ಚಾಲೆಂಜರ್ಸ್ ಬೆಂಗಳೂರು 2025ರಲ್ಲಿ ದೀರ್ಘಕಾಲದಿಂದ ಕಾಯುತ್ತಿದ್ದ ಚೊಚ್ಚಲ ಐಪಿಎಲ್ ಪ್ರಶಸ್ತಿಯನ್ನು ಗೆಲ್ಲಲು ಸಾಧ್ಯವಾಯಿತು," ಎಂದು ರಾಯುಡು ಹೇಳಿದ್ದಾರೆ.
"ಆರ್ಸಿಬಿ ಚೆನ್ನಾಗಿ ಆಡಬೇಕೆಂದು ಬಯಸಿದ್ದೆವು"
"ಆರ್ಸಿಬಿ ಚೆನ್ನಾಗಿ ಆಡಬೇಕು ಎಂದು ಬಯಸಿದ್ದವರು ನಾವು. ಅವರು ಉತ್ತಮವಾಗಿ ಪ್ರದರ್ಶನ ನೀಡದಿದ್ದಾಗ ಹಲವರಿಗೆ ಸತ್ಯವನ್ನು ಹೇಳಲು ಸಾಧ್ಯವಾಗುತ್ತಿರಲಿಲ್ಲ. ಆದರೆ ನಾವು ಯಾವಾಗಲೂ ಸತ್ಯವನ್ನೇ ಮಾತನಾಡುತ್ತಿದ್ದೆವು. ನಮ್ಮಂತಹವರು ನೀಡಿದ ಆ ವಿಮರ್ಶೆಗಳಿಂದಲೇ ಅವರು ಇಂತಹದೊಂದು ಬಲಿಷ್ಠ ತಂಡವನ್ನು ಕಟ್ಟಬೇಕು ಎಂಬ ಸತ್ಯವನ್ನು ಅರಿತುಕೊಂಡರು. ಅಂತಿಮವಾಗಿ ಅವರು ಉತ್ತಮ ತಂಡವನ್ನು ಕಟ್ಟಿ ಯಶಸ್ಸು ಕಾಣುತ್ತಿದ್ದಾರೆ. ಹಾಗಾಗಿ ಅವರು ನಮಗೆ ಧನ್ಯವಾದ ಹೇಳಬೇಕು," ಎಂದು ರಾಯುಡು ತಿಳಿಸಿದ್ದಾರೆ.
ರಾಯುಡು ಹೇಳಿಕೆಗೆ ನೆಟ್ಟಿಗರ ತಿರುಗೇಟು
ನಮ್ಮ ಟೀಕೆಗಳಿದಂಲೇ ಅವರು ಇಷ್ಟು ದೊಡ್ಡ ಮಟ್ಟಕ್ಕೆ ಬೆಳೆಯಲು ಕಾರಣ. ಆರ್ಸಿಬಿ ತಂಡವು ಮಧ್ಯಮ ಕ್ರಮಾಂಕದಲ್ಲಿ ಉತ್ತಮ ಆಟಗಾರರನ್ನು ಹೊಂದಿರಲಿಲ್ಲ. ಅವರ ಬಳಿ ಹೇಳಿಕೊಳ್ಳುವಂತಹ ಫಿನಿಶರ್ಗಳಿರಲಿಲ್ಲ ಮತ್ತು ಅನುಭವಿ ಬೌಲಿಂಗ್ ಪಡೆಯೂ ಇರಲಿಲ್ಲ. ನಮ್ಮ ಸಲಹೆಯಿಂದ ಬಳಿಕ ಅವರು ಉತ್ತಮ ತಂಡ ಕಟ್ಟಿ ಯಶಸ್ಸು ಕಾಣುತ್ತಿದ್ದಾರೆ. ಇದರ ಕ್ರೆಡಿಟ್ ನಮಗೆ ಸಲ್ಲಬೇಕು ಎನ್ನುವ ರೀತಿಯಲ್ಲಿ ಮಾತನಾಡಿದ್ದಾರೆ. ಇವರ ಈ ಹೇಳಿಕೆಗೆ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
"ಯಾವಾಗಲೂ ಆರ್ಸಿಬಿ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಿದ್ದ ನಿಮಗೆ ಎಲ್ಲಿಂದ ಕೊಡಬೇಕು ಕ್ರೆಡಿಟ್. ಆರ್ಸಿಬಿ ತಂಡದಲ್ಲೇ ಕ್ರಿಕೆಟ್ ದಿಗ್ಗಜರಿದ್ದಾರೆ. ನೀವು ಅವರಿಂದ ಕಲಿಯುವುದು ತುಂಬಾ ಇದೆ. ನಿಮ್ಮಿಂದ ಅವರು ಕಲಿಯಬೇಕಿಲ್ಲ," ಎಂದು ಆಕ್ರೋಶ ಹೊರಹಾಕಿದ್ದಾರೆ. ಇನ್ನೂ ಕೆಲವರು ನಿಮ್ಮ ಮಾತನ್ನ ಕೇಳಿ ನಗಬೇಕೋ.. ಅಳಬೇಕೋ ಗೊತ್ತಿಲ್ಲ.. ಯಶಸ್ಸನ್ನ ಸಹಿಸಲಾರದ ನೀವು ಒಳ್ಳೆಯದನ್ನ ಬಹಿಸಲು ಸಾಧ್ಯವೇ?," ಎಂದು ಪ್ರಶ್ನಿಸುತ್ತಾ ತಮಾಷೆಯ ಮೂಲಕವೇ ತಿರುಗೇಟು ನೀಡಿದ್ದಾರೆ.












Click it and Unblock the Notifications