ಐಪಿಎಲ್ 2027: ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ದಾದಾ ಕಮ್‌ಬ್ಯಾಕ್, ಯುವರಾಜ್ ಸಿಂಗ್ ಎಂಟ್ರಿ?
IPL 2026 Dehli Capitals: ಈಗಾಗಲೇ ಐಪಿಎಲ್ 2026 ಮುಕ್ತಾಯವಾಗಿದ್ದು, ರಾಯಲ್ ಚಾಲೆಂಜರ್ಸ್ ಬೆಂಗಳೂರು ಸತತ ಎರಡನೇ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಇದರ ಬೆನ್ನಲ್ಲೇ ಇದೀಗ 2027ರ ಆವೃತ್ತಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಭಾರತೀಯ ದಿಗ್ಗಜ ಯುವರಾಜ್ ಸಿಂಗ್ ಎಂಟ್ರಿ ಕೊಡಲಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಹಾಗಾದ್ರೆ ಈ ಕುರಿತ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ನೋಡಿ.
ಭಾರತೀಯ ಕ್ರಿಕೆಟ್ ಇತಿಹಾಸದ ಸಾರ್ವಕಾಲಿಕ ಶ್ರೇಷ್ಠ ಆಲ್‌ರೌಂಡರ್‌ಗಳಲ್ಲಿ ಒಬ್ಬರಾದ ಯುವರಾಜ್ ಸಿಂಗ್ ಅವರು ಐಪಿಎಲ್ ಮೂಲಕ ತಮ್ಮ ಹೊಸ ಇನ್ನಿಂಗ್ಸ್ ಆರಂಭಿಸಲು ಸಜ್ಜಾಗುತ್ತಿದ್ದಾರೆ. ವರದಿಗಳ ಪ್ರಕಾರ 2027ರ ಐಪಿಎಲ್ ಆವೃತ್ತಿಯಲ್ಲಿ ಯುವರಾಜ್ ಸಿಂಗ್ ಅವರು ಡೆಲ್ಲಿ ಕ್ಯಾಪಿಟಲ್ಸ್ ತಂಡದ ಸಹಾಯಕ ಸಿಬ್ಬಂದಿ ಆಗಿ ಸೇರಿಕೊಳ್ಳುವ ಮೂಲಕ ತಮ್ಮ ಕೋಚಿಂಗ್ ವೃತ್ತಿಜೀವನವನ್ನು ಪ್ರಾರಂಭಿಸಲಿದ್ದಾರೆ.

ದಾದಾ ಮರಳುವಿಕೆ, ಸಿಕ್ಸರ್ ಕಿಂಗ್ ಸೇರ್ಪಡೆ
ಭಾರತ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಅವರು 2027ರ ಐಪಿಎಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಸಹಾಯಕ ಸಿಬ್ಬಂದಿಯ ಮುಖ್ಯಸ್ಥರಾಗಿ ಮರಳುವುದು ಬಹುತೇಕ ಖಚಿತವಾಗಿದೆ. ಗಂಗೂಲಿ ಅವರು ತಂಡದ ಮ್ಯಾನೇಜ್‌ಮೆಂಟ್‌ಗೆ ಮರಳುತ್ತಿದ್ದಂತೆ, ಯುವರಾಜ್ ಸಿಂಗ್ ಅವರನ್ನೂ ಕರೆತರಲು ತೀವ್ರ ಆಸಕ್ತಿ ತೋರಿಸಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಮೂಲಗಳ ಪ್ರಕಾರ, ಯುವರಾಜ್ ಸಿಂಗ್ ಅವರು 2027ರ ಐಪಿಎಲ್ ಸೀಸನ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ನ ಬ್ಯಾಟಿಂಗ್ ತರಬೇತುದಾರರಾಗಿ (ಬ್ಯಾಟಿಂಗ್ ಕೋಚ್) ನೇಮಕಗೊಳ್ಳುವ ಸಾಧ್ಯತೆ ದಟ್ಟವಾಗಿದೆ. ಈ ವಿಷಯವನ್ನು ಡೆಲ್ಲಿ ಫ್ರಾಂಚೈಸಿಯ ಹಿರಿಯ ಅಧಿಕಾರಿಯೊಬ್ಬರು ಖಚಿತಪಡಿಸಿದ್ದಾರೆ ಎಂದು ತಿಳಿದುಬಂದಿದೆ.
ಡೆಲ್ಲಿ ಫ್ರಾಂಚೈಸಿಯಲ್ಲಿ ಮಹತ್ವದ ಬದಲಾವಣೆಗೆ ನಿರ್ಧಾರ
ಡೆಲ್ಲಿ ಕ್ಯಾಪಿಟಲ್ಸ್ ತಂಡದ ಒಡೆತನವನ್ನು ಜಿಎಂಆರ್ ಗ್ರೂಪ್ ಮತ್ತು ಜೆಎಸ್ ಡಬ್ಲ್ಯೂ ಗ್ರೂಪ್ ಸಂಸ್ಥೆಗಳು ತಲಾ ಎರಡು ವರ್ಷಗಳ ಒಪ್ಪಂದದ ಆಧಾರದ ಮೇಲೆ ಮುನ್ನಡೆಸುತ್ತವೆ. 2025 ಮತ್ತು 2026ರ ಸೀಸನ್‌ಗಳಲ್ಲಿ ಜಿಎಂಆರ್ ಗ್ರೂಪ್ ತಂಡದ ಜವಾಬ್ದಾರಿ ಹೊತ್ತಿತ್ತು. ಆದರೆ 2027ರಿಂದ ಮುಂದಿನ ಎರಡು ವರ್ಷಗಳ ಕಾಲ ಜೆಎಸ್‌ಡಬ್ಲ್ಯೂ ತಂಡದ ಸಂಪೂರ್ಣ ಜವಾಬ್ದಾರಿಯನ್ನು ವಹಿಸಿಕೊಳ್ಳಲಿದೆ. ಈ ಮಾಲೀಕತ್ವದ ಬದಲಾವಣೆಯೇ ಸೌರವ್ ಗಂಗೂಲಿ ಮತ್ತು ಯುವರಾಜ್ ಸಿಂಗ್ ಅವರ ಆಗಮನಕ್ಕೆ ಪ್ರಮುಖ ಕಾರಣವಾಗಿದೆ ಎಂದು ಹೇಳಲಾಗುತ್ತಿದೆ.
ಬದಲಾವಣೆಗೆ ಪ್ರಮುಖ ಕಾರಣಗಳೇನು?
ಕಳೆದ ಎರಡು ಐಪಿಎಲ್ ಸೀಸನ್‌ಗಳಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದಿಂದ ನಿರೀಕ್ಷಿತ ಪ್ರದರ್ಶನ ಕಂಡುಬರಲಿಲ್ಲ. ನಿರಾಶಾದಾಯಕವಾಗಿತ್ತು. ಅಕ್ಷರ್ ಪಟೇಲ್ ನಾಯಕತ್ವದ ತಂಡದಲ್ಲಿ ಕೆ.ಎಲ್.ರಾಹುಲ್, ಮಿಚೆಲ್ ಸ್ಟಾರ್ಕ್ ಮತ್ತು ಕುಲದೀಪ್ ಯಾದವ್ ಅವರಂತಹ ಸ್ಟಾರ್ ಆಟಗಾರರಿದ್ದರೂ ತಂಡಕ್ಕೆ ಪ್ಲೇಆಫ್ ಹಂತ ತಲುಪಲು ಸಾಧ್ಯವಾಗಲಿಲ್ಲ.
2025ರ ಸೀಸನ್ ಆರಂಭದಲ್ಲಿ ಉತ್ತಮ ಪ್ರದರ್ಶನ ನೀಡಿದರೂ, ಬಳಿಕ ಮಧ್ಯದಲ್ಲಿ ಸತತ ಸೋಲುಗಳನ್ನು ಕಂಡು 5ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು. ಮತ್ತೊಂದೆಡೆ 2026ರ ಸೀಸನ್ ಅಂದರೆ ಈ ವರ್ಷವೂ ಕೂಡ ಅದೇ ಪ್ರದರ್ಶನ ಮುಂದುವರೆದಿದ್ದು, ಅಂಕಪಟ್ಟಿಯಲ್ಲಿ 6ನೇ ಸ್ಥಾನಕ್ಕೆ ತೃಪ್ತಿಪಡಬೇಕಾಯಿತು. ಈ ಕಳಪೆ ಫಲಿತಾಂಶಗಳಿಂದಾಗಿ ಪ್ರಸ್ತುತ ಮುಖ್ಯ ತರಬೇತುದಾರರಾಗಿರುವ ಹೇಮಂಗ್ ಬದಾನಿ ಅವರ ಸ್ಥಾನಕ್ಕೆ ಕುತ್ತು ಬಂದಿದೆ. ಅವರ ಜಾಗಕ್ಕೆ ಬೇರೆಯವರನ್ನು ತರಲು ಅಥವಾ ದೊಡ್ಡ ಮಟ್ಟದ ಬದಲಾವಣೆ ಮಾಡಲು ಜೆಎಸ್‌ಡಬ್ಲ್ಯೂ ಗ್ರೂಪ್ ನಿರ್ಧರಿಸಿದೆ ಎಂದು ತಿಳಿದುಬಂದಿದೆ.
ಗಂಗೂಲಿ ಅವರ ಆಯ್ಕೆ ನಿರ್ಧಾರ ಯಾಕೆ?
ಸೌರವ್ ಗಂಗೂಲಿ ಅವರು ಈ ಹಿಂದೆ ಜೆಎಸ್‌ಡಬ್ಲ್ಯೂ ಗ್ರೂಪ್ ಅಡಿಯಲ್ಲಿ ಕ್ರಿಕೆಟ್ ನಿರ್ದೇಶಕರಾಗಿ ಕೆಲಸ ಮಾಡಿದ್ದರು. ಇತ್ತೀಚೆಗಷ್ಟೇ ನಡೆದ ಎಸ್‌ಎ20 (SA20) ಲೀಗ್‌ನಲ್ಲಿ ಇದೇ ಫ್ರಾಂಚೈಸಿಯ ಪ್ರಿಟೋರಿಯಾ ಕ್ಯಾಪಿಟಲ್ಸ್ ತಂಡದ ಮುಖ್ಯ ತರಬೇತುದಾರರಾಗಿದ್ದ ಗಂಗೂಲಿ ಆ ತಂಡವನ್ನು ಫೈನಲ್‌ವರೆಗೆ ಯಶಸ್ವಿಯಾಗಿ ಮುನ್ನಡೆಸಿದ್ದರು. ಇದೇ ನಂಬಿಕೆಯಿಂದಾಗಿ ಅವರಿಗೆ ಡೆಲ್ಲಿ ಐಪಿಎಲ್ ತಂಡದ ಜವಾಬ್ದಾರಿಯನ್ನು ಮರಳಿ ನೀಡಲಾಗುತ್ತಿದ್ದು,ಯುವರಾಜ್ ಸಿಂಗ್ ಬ್ಯಾಟಿಂಗ್ ವಿಭಾಗವನ್ನು ಬಲಪಡಿಸಲಿದ್ದಾರೆ ಎಂದು ಎನ್ನುವ ಮಾಹಿತಿ ಲಭ್ಯವಾಗಿದೆ. ಒಟ್ಟಿನಲ್ಲಿ ಹೇಳುವುದಾದರೆ ಸಿಕ್ಸರ್ ಕಿಂಗ್ ಅಂತಲೇ ಹೆಸರುವಾಸಿಯಾಗಿರುವ ಯುವರಾಜ್ ಸಿಂಗ್ ಮತ್ತು 'ದಾದಾ' ಸೌರವ್ ಗಂಗೂಲಿ ಅವರ ಜೋಡಿ 2027ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಅದೃಷ್ಟವನ್ನು ಬದಲಾಯಿಸುತ್ತದೆಯೇ ಎಂಬುದನ್ನು ಕಾದುನೋಡಬೇಕಿದೆ.












Click it and Unblock the Notifications