ಮುಂದೆ ತೊಂದ್ರೆ ಆಗುತ್ತೆ, ಈಗಲೇ ಡೆಲ್ಲಿ ಕ್ಯಾಪಿಟಲ್ಸ್ ಬಿಟ್ಬಿಡು: ಕನ್ನಡಿಗ ಕೆಎಲ್ ರಾಹುಲ್‌ಗೆ ಮಾಜಿ ಕ್ರಿಕೆಟರ್ ಸಲಹೆ
KL RahuL: ಈಗಾಗಲೇ ಐಪಿಎಲ್ 2026 ಮುಕ್ತಾಯವಾಗಿದೆ. ಇದೀಗ ಟಿ20 ವಿಶ್ವಕಪ್ ಹಬ್ಬ ನಡೆಯುತ್ತಿದ್ದು, ಈ ನಡುವೆಯೇ ಮುಂದಿನ ವರ್ಷದ ಇಂಡಿಯನ್ ಪ್ರೀಮಿಯರ್ ಲೀಗ್‌ಗೆ ಕೆಲವೊಂದು ತಂಡದಲ್ಲಿ ಈಗಲೇ ಮಹತ್ವದ ಬದಲಾವಣೆಗಳಾಗುತ್ತಿರುವ ವಿಚಾರ ಭಾರಿ ಕುತೂಹಲ ಮೂಡಿಸಿದೆ. ಅದರಲ್ಲೂ ಡೆಲ್ಲಿ ಕ್ಯಾಪಿಟಲ್ಸ್‌ನಲ್ಲಿ ಕನ್ನಡಿಗ ಕೆಎಲ್ ರಾಹುಲ್ ಅವರಿಗೆ ಟೀಮ್ ಇಂಡಿಯಾ ಮಾಜಿ ಕ್ರಿಕೆಟರ್‌ವೊಬ್ಬರು ಮಹತ್ವದ ಸಲಹೆ ನೀಡಿದ್ದಾರೆ. ಇದು ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ.
ಮಂದಿನ ವರ್ಷದ ಐಪಿಎಲ್ ಕ್ರಿಕೆಟ್‌ಗಾಗಿ ಸ್ಟಾರ್ ಆಟಗಾರರ ಟ್ರೆಡಿಂಗ್ ಪ್ರಕ್ರಿಯೆಯೊಂದು ತೆರೆಮರೆಯಲ್ಲಿ ನಡೆಯುತ್ತಿದೆ. ಲಕ್ನೋ ಸೂಪರ್ ಜೈಂಟ್ಸ್ ತಂಡದಲ್ಲಿದ್ದ ರಿಷಭ್ ಪಂತ್ ಮತ್ತೆ ತಮ್ಮ ಹಳೆಯ ಫ್ರಾಂಚೈಸಿಯಾದ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಮರಳಲು ಸಜ್ಜಾಗಿದ್ದಾರೆ. ಈ ಪ್ರಮುಖ ಬೆಳವಣಿಗೆಯ ಬೆನ್ನಲ್ಲೇ ಭಾರತ ತಂಡದ ಮಾಜಿ ವೇಗಿ ದೊಡ್ಡ ಗಣೇಶ್ ಅವರು ಕೆ.ಎಲ್. ರಾಹುಲ್ ಅವರಿಗೆ ಒಂದು ಮಹತ್ವದ ಸಲಹೆ ನೀಡಿದ್ದಾರೆ.

ದೊಡ್ಡ ಗಣೇಶ್ ಸಲಹೆ ಹಿಂದಿದೆ ಮಹತ್ವದ ಉದ್ದೇಶ
ರಿಷಭ್ ಪಂತ್ ಅವರು ಲಕ್ನೋ ಸೂಪರ್ ಜೈಂಟ್ಸ್‌ನಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಮರಳುವುದು ಬಹುತೇಕ ಖಚಿತವಾಗಿದೆ. ಈ ಸುದ್ದಿ ಎಲ್ಲೆಡೆ ಸದ್ದು ಮಾಡಿದ ಬೆನ್ನಲ್ಲೇ ಸಾಮಾಜಿಕ ಜಾಲತಾಣ ತಮ್ಮ ಟ್ವಿಟರ್ ಖಾತೆ ಮೂಲಕ ಪ್ರತಿಕ್ರಿಯಿಸಿರುವ ಕರ್ನಾಟಕದ ಮಾಜಿ ವೇಗಿ ದೊಡ್ಡ ಗಣೇಶ್ ಅವರು, 'ಒಂದು ವೇಳೆ ರಿಷಭ್ ಪಂತ್ ಡೆಲ್ಲಿ ತಂಡಕ್ಕೆ ವಾಪಸ್ ಬಂದರೆ, ಕೆ.ಎಲ್. ರಾಹುಲ್ ಅವರು ತಾವಾಗಿಯೇ ಫ್ರಾಂಚೈಸಿಯಿಂದ ಬಿಡುಗಡೆ ಮಾಡುವಂತೆ ಕೇಳಬೇಕು. ಬಳಿಕ ಮುಂಬರುವ ಐಪಿಎಲ್ ಹರಾಜಿನಲ್ಲಿ ಭಾಗವಹಿಸಬೇಕು,' ಎಂದು ಸಲಹೆ ನೀಡಿದ್ದಾರೆ.
ರಿಷಭ್ ಪಂತ್ ಸಂಬಳ ಕಡಿತ
ಮೂಲಗಳ ಪ್ರಕಾರ, ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ನಡುವೆ ದೊಡ್ಡ ಮಟ್ಟದ ಟ್ರೇಡ್ ನಡೆಯುತ್ತಿದೆ. ಡೆಲ್ಲಿ ತಂಡವು ತನ್ನ ಸ್ಟಾರ್ ಸ್ಪಿನ್ನರ್ ಕುಲದೀಪ್ ಯಾದವ್ ಅವರನ್ನು ಲಕ್ನೋಗೆ ನೀಡಿ, ಬದಲಾಗಿ ರಿಷಭ್ ಪಂತ್ ಅವರನ್ನು ತನ್ನ ತಂಡಕ್ಕೆ ಸೇರಿಸಿಕೊಳ್ಳುತ್ತಿದೆ. ಈ ಒಪ್ಪಂದದ ಅಧಿಕೃತ ದಾಖಲೆಗಳು ಈಗಾಗಲೇ ಬಿಸಿಸಿಐ ಬಳಿ ಇವೆ ಎಂದು ತಿಳಿದುಬಂದಿದೆ.
ವಿಶೇಷ ಅಂದ್ರೆ ಕಳೆದ ಸೀಸನ್‌ನಲ್ಲಿ ಲಕ್ನೋ ತಂಡದಿಂದ ಬರೋಬ್ಬರಿ 27 ಕೋಟಿ ರೂಪಾಯಿ ಪಡೆದಿದ್ದ ಪಂತ್, ಈಗ ತಮ್ಮ ಹಳೆಯ ತಂಡಕ್ಕೆ ಮರಳಲು ಸುಮಾರು 12 ಕೋಟಿ ರೂಪಾಯಿಗೆ ಬರಲು (ಶೇ. 44.44 ರಷ್ಟು ಇಳಿಕೆ) ಒಪ್ಪಿಕೊಂಡಿದ್ದಾರೆ. ಮತ್ತೊಂದೆಡೆ ಅವರು ಸುಮಾರು 15 ಕೋಟಿ ರೂಪಾಯಿ ಮೊತ್ತಕ್ಕೆ ಡೆಲ್ಲಿ ಕ್ಯಾಪಿಟಲ್ಸ್ ಸೇರಲಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಕೆಎಲ್ ರಾಹುಲ್ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ
ಐಪಿಎಲ್ ಮೆಗಾ ಹರಾಜಿನಲ್ಲಿ 14 ಕೋಟಿ ರೂಪಾಯಿಗೆ ಡೆಲ್ಲಿ ಕ್ಯಾಪಿಟಲ್ಸ್ ಸೇರಿದ್ದ ಕನ್ನಡಿಗ ಕೆ.ಎಲ್. ರಾಹುಲ್ ಕಳೆದ ಎರಡು ಸೀಸನ್‌ಗಳಲ್ಲಿ ತಂಡದ ಪರ ಅದ್ಭುತ ಪ್ರದರ್ಶನ ನೀಡಿದ್ದಾರೆ. ಮೊದಲ ಸೀಸನ್‌ನ 13 ಇನ್ನಿಂಗ್ಸ್‌ಗಳಲ್ಲಿ 53.90 ರ ಸರಾಸರಿಯಲ್ಲಿ 539 ರನ್ ಗಳಿಸಿ ತಂಡದ ಗರಿಷ್ಠ ರನ್ ಸ್ಕೋರರ್ ಆಗಿದ್ದರು. ಇನ್ನು ಕಳೆದ ಸೀಸನ್‌ನಲ್ಲಿ ತಮ್ಮ ಬ್ಯಾಟಿಂಗ್ ಅನ್ನು ಟಿ20 ಶೈಲಿಗೆ ಸಂಪೂರ್ಣ ಬದಲಾಯಿಸಿಕೊಂಡು 174.41 ರ ಸ್ಟ್ರೈಕ್ ರೇಟ್‌ನಲ್ಲಿ 593 ರನ್ ಚಚ್ಚಿದ್ದರು. ಇದರಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧದ ಅಜೇಯ 152 ರನ್‌ಗಳ ಸ್ಫೋಟಕ ಇನ್ನಿಂಗ್ಸ್ ಕೂಡ ಸೇರಿದೆ.
ಕೆಎಲ್ ರಾಹುಲ್ ಅವರು ಭರ್ಜರಿ ಫಾರ್ಮ್‌ನಲ್ಲಿದ್ದರೆ, ಮತ್ತೊಂದೆಡೆ ರಿಷಭ್ ಪಂತ್ ಸತತ ವೈಫಲ್ಯ ಅನುಭವಿಸಿದ್ದಾರೆ. ಕಳೆದ ಸೀಸನ್‌ನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ನಾಯಕರಾಗಿದ್ದ ಪಂತ್ ಕೇವಲ 312 ರನ್ ಗಳಿಸಲಷ್ಟೇ ಶಕ್ತರಾಗಿದ್ದರು. ಅವರ ನಾಯಕತ್ವದಲ್ಲಿ ಎಲ್‌ಎಸ್‌ಜಿ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನಕ್ಕೆ ಕುಸಿದಿತ್ತು. ಇದರ ನಂತರ ಪಂತ್ ನಾಯಕತ್ವಕ್ಕೂ ರಾಜೀನಾಮೆ ನೀಡಿದ್ದರು.
ಇನ್ನು ಕನ್ನಡಿಗ ಕೆ.ಎಲ್.ರಾಹುಲ್ ಅವರು ಅಷ್ಟು ಚೆನ್ನಾಗಿ ಆಡಿದ್ದರೂ, ತಂಡದ ಹಳೆಯ ಆಟಗಾರ ಹಾಗೂ ಬ್ರ್ಯಾಂಡ್ ವ್ಯಾಲ್ಯೂ ಹೊಂದಿರುವ ಪಂತ್ ಅವರನ್ನು ಮರಳಿ ತರಲು ಡೆಲ್ಲಿ ಮಾಲೀಕರು ಮುಂದಾಗಿದ್ದಾರೆ. ಪಂತ್ ಬಂದರೆ ತಂಡದ ಬ್ಯಾಟಿಂಗ್ ಕ್ರಮಾಂಕ ಮತ್ತು ವಿಕೆಟ್ ಕೀಪಿಂಗ್ ಜವಾಬ್ದಾರಿಯಲ್ಲಿ ಗೊಂದಲ ಉಂಟಾಗಬಹುದು. ಇದೇ ಕಾರಣದಿಂದ ರಾಹುಲ್ ತಮ್ಮ ಉತ್ತಮ ಭವಿಷ್ಯಕ್ಕಾಗಿ ಹರಾಜಿಗೆ ಹೋಗುವುದೇ ಒಳಿತು ಎಂಬುದು ದೊಡ್ಡ ಗಣೇಶ್ ಸೇರಿದಂತೆ ಹಲವು ಕ್ರಿಕೆಟ್ ದಿಗ್ಗಜರ ಅಭಿಪ್ರಾಯವಾಗಿದೆ. ಹಾಗಾದ್ರೆ ಕೆಎಲ್ ರಾಹುಲ್ ಅವರ ಮುಂದಿನ ನಡೆ ಏನು ಎನ್ನುವುದನ್ನ ಕಾದುನೋಡಬೇಕಿದೆ.












Click it and Unblock the Notifications