NEET Re-exam: ನಾಗ್ಪುರದ ವಿದ್ಯಾರ್ಥಿಗೆ ಅಬುಧಾಬಿ ಸೆಂಟರ್! ಎನ್‌ಟಿಎ ಮತ್ತೊಂದು ಯಡವಟ್ಟು, ವಿದ್ಯಾರ್ಥಿಗಳಲ್ಲಿ ಹೆಚ್ಚಿದ ಆತಂಕ
ರಾಷ್ಟ್ರೀಯ ಪರೀಕ್ಷಾ ಪ್ರಾಧಿಕಾರ ನಡೆಸುತ್ತಿರುವ ವೈದ್ಯಕೀಯ ಪ್ರವೇಶ ಪರೀಕ್ಷೆಗಳ ಸುತ್ತಲಿನ ವಿವಾದಗಳು ಸದ್ಯಕ್ಕೆ ಮುಗಿಯುವ ಲಕ್ಷಣಗಳು ಕಾಣುತ್ತಿಲ್ಲ. ಒಂದೆಡೆ ದೇಶಾದ್ಯಂತ ಭಾರೀ ಸಂಚಲನ ಮೂಡಿಸಿರುವ 'ನೀಟ್ ಪ್ರಶ್ನೆಪತ್ರಿಕೆ ಸೋರಿಕೆ' ಹಗರಣದ ಬಿಸಿ ಇನ್ನೂ ಆರಿಲ್ಲ. ಇದರ ಬೆನ್ನಲ್ಲೇ ಇದೀಗ ಜೂನ್ 21 ರಂದು ನಡೆಯಲಿರುವ ನೀಟ್ ಮರು ಪರೀಕ್ಷೆ ಬರೆಯಲು ಸಜ್ಜಾಗಿದ್ದ ನಾಗ್ಪುರದ ವಿದ್ಯಾರ್ಥಿಯೊಬ್ಬನಿಗೆ ಅಬುಧಾಬಿಯಲ್ಲಿ ಪರೀಕ್ಷಾ ಕೇಂದ್ರ ನಿಗದಿಪಡಿಸುವ ಮೂಲಕ ಎನ್‌ಟಿಎ ದೊಡ್ಡ ಯಡವಟ್ಟು ಮಾಡಿದೆ.
ನಾಗ್ಪುರದ ವಿದ್ಯಾರ್ಥಿಗೆ ಅಬುಧಾಬಿ ಸೆಂಟರ್
ಮಹಾರಾಷ್ಟ್ರದ ನಾಗ್ಪುರ ಮೂಲದ 18 ವರ್ಷದ ವಿದ್ಯಾರ್ಥಿ ಅಬ್ದುಲ್ಲಾ ಮೊಹಮ್ಮದ್ ತಾಲಿಬ್ ಎಂಬಾತನೇ ಎನ್‌ಟಿಎಯ ಈ ನಿರ್ಲಕ್ಷ್ಯಕ್ಕೆ ಬಲಿಯಾದ ಅಭ್ಯರ್ಥಿ. ಹೌದು, ಜೂನ್ 21 ರಂದು ನಡೆಯಲಿರುವ ನೀಟ್ ಮರು ಪರೀಕ್ಷೆಗಾಗಿ ಜೂನ್ 14 ರಂದು ಅಬ್ದುಲ್ಲಾ ತನ್ನ ಪ್ರವೇಶ ಪತ್ರವನ್ನು ಡೌನ್‌ಲೋಡ್ ಮಾಡಿಕೊಂಡಿದ್ದಾನೆ. ಆದರೆ, ಅದರಲ್ಲಿ ಆತನ ಪರೀಕ್ಷಾ ಕೇಂದ್ರವನ್ನು 'ಅಬುಧಾಬಿ ಇಂಡಿಯನ್ ಸ್ಕೂಲ್' ಎಂದು ನಮೂದಿಸಲಾಗಿದೆ. ಅಚ್ಚರಿಯೆಂದರೆ, ಈ ವಿದ್ಯಾರ್ಥಿ ತನ್ನ ಪರೀಕ್ಷಾ ಕೇಂದ್ರದ ಆಯ್ಕೆಯಲ್ಲಿ ಕೇವಲ ನಾಗ್ಪುರ ಮತ್ತು ಸುತ್ತಮುತ್ತಲಿನ ಪ್ರದೇಶಗಳನ್ನು ಮಾತ್ರ ಆಯ್ಕೆ ಮಾಡಿದ್ದನು. ಅದಕ್ಕಿಂತಲೂ ಮಿಗಿಲಾಗಿ, ಈ ವಿದ್ಯಾರ್ಥಿಯ ಬಳಿ ಪಾಸ್‌ಪೋರ್ಟ್ ಕೂಡ ಇಲ್ಲ. ಹೀಗಿರುವಾಗ ವಿದೇಶದಲ್ಲಿ ಪರೀಕ್ಷಾ ಕೇಂದ್ರ ನೀಡಿದ್ದು ಹೇಗೆ ಎಂಬುದು ಅಚ್ಚರಿಗೆ ಕಾರಣವಾಗಿದೆ.

ಆಘಾತದಲ್ಲಿ ಪೋಷಕರು: ಎನ್‌ಟಿಎ ಸಹಾಯವಾಣಿಗೆ ದೂರು
ಈ ಘಟನೆಯಿಂದ ವಿದ್ಯಾರ್ಥಿ ಹಾಗೂ ಆತನ ಕುಟುಂಬ ತೀವ್ರ ಆಘಾತಕ್ಕೊಳಗಾಗಿದೆ. ಈ ಕುರಿತು ಪ್ರತಿಕ್ರಿಯಿಸಿರುವ ವಿದ್ಯಾರ್ಥಿಯ ತಂದೆ ಮೊಹಮ್ಮದ್ ತಾಲಿಬ್, "ನಿನ್ನೆ ಸಂಜೆ 4 ಗಂಟೆಗೆ ಅಡ್ಮಿಟ್ ಕಾರ್ಡ್ ಡೌನ್‌ಲೋಡ್ ಮಾಡಿದಾಗ ನಮಗೆ ಅಬುಧಾಬಿಯ ಶಾಲೆಯ ಹೆಸರು ಕಂಡುಬಂತು. ನಾವು ನಮ್ಮ ಆಯ್ಕೆಗಳಲ್ಲಿ ಅಂತಹ ಯಾವುದೇ ಕೇಂದ್ರವನ್ನು ನೀಡಿರಲಿಲ್ಲ. ಇದನ್ನು ನೋಡಿ ನಮಗೆ ನಿಜಕ್ಕೂ ಆಘಾತವಾಯಿತು," ಎಂದು ತಮ್ಮ ಅಳಲು ತೋಡಿಕೊಂಡಿದ್ದಾರೆ.
ಕೂಡಲೇ ಎನ್‌ಟಿಎ ಸಹಾಯವಾಣಿಯನ್ನು ಸಂಪರ್ಕಿಸಿ ದೂರು ನೀಡಲಾಗಿದೆ. ಸಮಸ್ಯೆಯನ್ನು ಆಲಿಸಿರುವ ಎನ್‌ಟಿಎ ಅಧಿಕಾರಿಗಳು, ಇಂದು ಸಂಜೆ 4 ಗಂಟೆಯೊಳಗೆ ಹೊಸ ಅಡ್ಮಿಟ್ ಕಾರ್ಡ್ ನೀಡುವುದಾಗಿ ಭರವಸೆ ನೀಡಿದ್ದಾರೆ. ಪರೀಕ್ಷೆಗೆ ಇನ್ನು ಒಂದು ದಿನ ಬಾಕಿ ಇರುವುದರಿಂದ, ಬೇರೆ ಯಾವುದೇ ಜಿಲ್ಲೆಗೆ ಹೋಗಲು ಸಮಯವಿಲ್ಲ. ಹೀಗಾಗಿ ನಾಗ್ಪುರದಲ್ಲೇ ಪರೀಕ್ಷಾ ಕೇಂದ್ರ ನೀಡಬೇಕು ಎಂದು ಕುಟುಂಬಸ್ಥರು ಪಟ್ಟು ಹಿಡಿದಿದ್ದಾರೆ.
#WATCH | Nagpur, Mahrashtra: Family of a NEET aspirant, Abdullah Mohammad Talib, claims that he was allocated a school in Abu Dhabi as his exam center for NEET-UG re-exam scheduled to be held on 21st June.
— ANI (@ANI) June 20, 2026
His father, Mohammad Talib, says, "...After the admit card was downloaded… pic.twitter.com/EmFqhIFVRK
ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ವಿವಾದ
ಈಗಾಗಲೇ ಎನ್‌ಟಿಎ ತೀವ್ರ ಮುಖಭಂಗ ಅನುಭವಿಸುತ್ತಿರುವ ಈ ಸಂದರ್ಭದಲ್ಲಿ ಇಂಥಹುದೊಂದು ಘಟನೆ ನಡೆದಿರುವುದು ಅದರ ಕಾರ್ಯವೈಖರಿಯ ಬಗ್ಗೆ ಇನ್ನಷ್ಟು ಅನುಮಾನಗಳನ್ನು ಹುಟ್ಟುಹಾಕಿದೆ. ಈ ವರ್ಷ ನಡೆದ ನೀಟ್-ಯುಜಿ ಪರೀಕ್ಷೆಯ ಪ್ರಶ್ನೆಪತ್ರಿಕೆಗಳು ಪರೀಕ್ಷೆಗೂ ಮುನ್ನವೇ 'ಟೆಲಿಗ್ರಾಮ್' ಆ್ಯಪ್ ಸೇರಿದಂತೆ ವಿವಿಧ ಸಾಮಾಜಿಕ ಜಾಲತಾಣಗಳ ಮೂಲಕ ಸೋರಿಕೆಯಾಗಿದ್ದವು. ಟೆಲಿಗ್ರಾಮ್ ಗ್ರೂಪ್‌ಗಳಲ್ಲಿ ಲಕ್ಷಾಂತರ ರೂಪಾಯಿಗಳಿಗೆ ಪೇಪರ್ ಮಾರಾಟವಾದ ದೊಡ್ಡ ಜಾಲವೇ ಪತ್ತೆಯಾಗಿತ್ತು. ಇದು ದೇಶಾದ್ಯಂತ ಲಕ್ಷಾಂತರ ಪ್ರತಿಭಾವಂತ ವಿದ್ಯಾರ್ಥಿಗಳ ಭವಿಷ್ಯದ ಜೊತೆ ಚೆಲ್ಲಾಟವಾಡಿದಂತಾಗಿತ್ತು.
ಈ ಭಾರಿ ಅಕ್ರಮ ಮತ್ತು ಗದ್ದಲಗಳ ನಂತರವೇ ಸುಪ್ರೀಂ ಕೋರ್ಟ್ ಮತ್ತು ಸರ್ಕಾರದ ಸೂಚನೆಯ ಮೇರೆಗೆ ಈ ನೀಟ್ ಮರು ಪರೀಕ್ಷೆ ನಡೆಯುತ್ತಿದೆ. ಇಷ್ಟೆಲ್ಲಾ ಎಚ್ಚರಿಕೆ ವಹಿಸಬೇಕಾದ ಸಂದರ್ಭದಲ್ಲೂ ಎನ್‌ಟಿಎ, ಪಾಸ್‌ಪೋರ್ಟ್ ಇಲ್ಲದ ವಿದ್ಯಾರ್ಥಿಗೆ ವಿದೇಶದಲ್ಲಿ ಸೆಂಟರ್ ಕೊಟ್ಟಿರುವುದು ಅದರ ಬೇಜವಾಬ್ದಾರಿತನಕ್ಕೆ ಹಿಡಿದ ಕನ್ನಡಿಯಾಗಿದೆ.














Click it and Unblock the Notifications