ಟಿಕೆಟ್ ರಹಿತ ಪ್ರಯಾಣಿಕರಿಗೆ ಶಾಕ್: ಇಂದಿನಿಂದ ₹250 ಬದಲು ₹500 ದಂಡ
ರೈಲು ಟಿಕೆಟ್ ಇಲ್ಲದೇ ಪ್ರಯಾಣಿಸುವವರಿಗೆ ಭಾರತೀಯ ರೈಲ್ವೆ ಇಂದಿನಿಂದ ಕಠಿಣ ಎಚ್ಚರಿಕೆ ನೀಡಿದೆ. ಇನ್ನು ಮುಂದೆ ಟಿಕೆಟ್ ಇಲ್ಲದೇ ರೈಲಿನಲ್ಲಿ ಪ್ರಯಾಣಿಸಿದರೆ ಕನಿಷ್ಠ 500 ದಂಡ ಪಾವತಿಸಬೇಕಾಗುತ್ತದೆ. ಈ ಮೊದಲು ಕನಿಷ್ಠ ದಂಡ ₹250 ಆಗಿದ್ದು, ಇದೀಗ ಅದನ್ನು ದ್ವಿಗುಣಗೊಳಿಸಲಾಗಿದೆ.
ಕೇಂದ್ರ ರೈಲ್ವೆ ಸಚಿವಾಲಯ ಜೂನ್ 19ರಂದು ಈ ಕುರಿತು ಅಧಿಸೂಚನೆ ಹೊರಡಿಸಿದ್ದು, ಹೊಸ ನಿಯಮ ಜೂನ್ 20ರಿಂದ ಜಾರಿಗೆ ಬಂದಿದೆ. ಜನ ವಿಶ್ವಾಸ್ ಕಾಯ್ದೆ(Jan Vishwas Act, 2026) -2026ರ ಅಡಿಯಲ್ಲಿ ಈ ಬದಲಾವಣೆ ಜಾರಿಗೆ ತರಲಾಗಿದೆ. ಟಿಕೆಟ್ ರಹಿತ ಪ್ರಯಾಣವನ್ನು ತಡೆಗಟ್ಟುವುದು ಮತ್ತು ರೈಲುಗಳಲ್ಲಿ ಶಿಸ್ತು ಕಾಪಾಡುವುದು ಈ ಕ್ರಮದ ಪ್ರಮುಖ ಉದ್ದೇಶವಾಗಿದೆ.

ಯಾವ ಸಂದರ್ಭಗಳಲ್ಲಿ ದಂಡ ವಿಧಿಸಲಾಗುತ್ತದೆ?
ರೈಲ್ವೆ ನಿಯಮಗಳ ಪ್ರಕಾರ, ಕೆಳಗಿನ ಸಂದರ್ಭಗಳಲ್ಲಿ ಪ್ರಯಾಣಿಕರು ದಂಡಕ್ಕೆ ಒಳಗಾಗಬಹುದು:
ಮಾನ್ಯವಾದ ಟಿಕೆಟ್ ಅಥವಾ ಪಾಸ್ ಇಲ್ಲದೇ ರೈಲಿನಲ್ಲಿ ಪ್ರಯಾಣಿಸುವುದು.
ಟಿಕೆಟ್ ಇಲ್ಲದೇ ಪ್ರಯಾಣಿಸಲು ಪ್ರಯತ್ನಿಸುವುದು.
ಈಗಾಗಲೇ ಬಳಸಿರುವ ಟಿಕೆಟ್ ಅಥವಾ ಪಾಸ್ ಅನ್ನು ಮತ್ತೊಮ್ಮೆ ಬಳಸುವುದು.
ಎಷ್ಟು ದಂಡ ಪಾವತಿಸಬೇಕು?
ನಿಯಮ ಉಲ್ಲಂಘನೆ ಮಾಡಿದ ಪ್ರಯಾಣಿಕರು ಎರಡು ರೀತಿಯಲ್ಲಿ ಮೊತ್ತವನ್ನು ಪಾವತಿಸಬೇಕಾಗುತ್ತದೆ.
ಅವರು ಪ್ರಯಾಣಿಸಿದ ದೂರಕ್ಕೆ ಅನ್ವಯವಾಗುವ ರೈಲು ಪ್ರಯಾಣ ದರ.
ಹೆಚ್ಚುವರಿ ದಂಡವಾಗಿ ಕನಿಷ್ಠ 500.
ಅಂದರೆ, ಕೇವಲ 500 ದಂಡ ಮಾತ್ರವಲ್ಲದೆ, ಪ್ರಯಾಣ ದರವನ್ನೂ ಸೇರಿಸಿ ಪಾವತಿಸಬೇಕಾಗುತ್ತದೆ.
ದಂಡ ಪಾವತಿಸಲು ನಿರಾಕರಿಸಿದರೆ?
ಒಂದು ವೇಳೆ ಪ್ರಯಾಣಿಕರು ಸ್ಥಳದಲ್ಲೇ ದಂಡ ಮತ್ತು ಪ್ರಯಾಣ ದರ ಪಾವತಿಸಲು ನಿರಾಕರಿಸಿದರೆ, ರೈಲ್ವೆ ಅಧಿಕಾರಿಗಳು ನ್ಯಾಯಾಲಯದ ಮೊರೆ ಹೋಗಬಹುದು. ಅಂತಹ ಸಂದರ್ಭಗಳಲ್ಲಿ ನ್ಯಾಯಾಲಯವು ಕಠಿಣ ಕ್ರಮ ಕೈಗೊಳ್ಳುವ ಅಧಿಕಾರ ಹೊಂದಿದೆ.
ನ್ಯಾಯಾಲಯವು ಪ್ರಕರಣದ ಆಧಾರದ ಮೇಲೆ,
ಗರಿಷ್ಠ ಆರು ತಿಂಗಳವರೆಗೆ ಜೈಲು ಶಿಕ್ಷೆ ವಿಧಿಸಬಹುದು,
ಅಥವಾ 500ವರೆಗೆ ಹೆಚ್ಚುವರಿ ದಂಡ ವಿಧಿಸಬಹುದು,
ಅಥವಾ ಜೈಲು ಶಿಕ್ಷೆ ಮತ್ತು ದಂಡ ಎರಡನ್ನೂ ವಿಧಿಸಬಹುದು.
ಸಾರ್ವಜನಿಕರಿಗೆ ರೈಲ್ವೆ ಇಲಾಖೆ ಮನವಿ
ಮಾನ್ಯ ಟಿಕೆಟ್ ಪಡೆದು ಮಾತ್ರ ಪ್ರಯಾಣಿಸುವಂತೆ ಭಾರತೀಯ ರೈಲ್ವೆ ಇಲಾಖೆ ಸಾರ್ವಜನಿಕರಿಗೆ ಮನವಿ ಮಾಡಿದೆ. ಹೊಸ ನಿಯಮದ ಉದ್ದೇಶ ಟಿಕೆಟ್ ರಹಿತ ಪ್ರಯಾಣವನ್ನು ತಡೆದು, ರೈಲು ಪ್ರಯಾಣದಲ್ಲಿ ಶಿಸ್ತು ಮತ್ತು ನಿಯಮ ಪಾಲನೆಯನ್ನು ಉತ್ತೇಜಿಸುವುದಾಗಿದೆ.
ಏಕೆ ಈ ಬದಲಾವಣೆ?
ಪ್ರತಿವರ್ಷ ಸಾವಿರಾರು ಮಂದಿ ಟಿಕೆಟ್ ಇಲ್ಲದೇ ಪ್ರಯಾಣಿಸುತ್ತಿರುವುದು ಭಾರತೀಯ ರೈಲ್ವೆ ಇಲಾಖೆಗೆ ಇದು ದೊಡ್ಡ ಸವಾಲಾಗಿ ಪರಿಣಮಿಸಿದೆ. ಇದರಿಂದ ಆದಾಯ ನಷ್ಟವಾಗುವುದರ ಜೊತೆಗೆ ಪ್ರಾಮಾಣಿಕವಾಗಿ ಟಿಕೆಟ್ ಖರೀದಿಸಿ ಪ್ರಯಾಣಿಸುವವರಿಗೆ ಅನ್ಯಾಯವಾಗುತ್ತದೆ. ಇದೇ ಕಾರಣಕ್ಕೆ ಟಿಕೆಟ್ ರಹಿತ ಪ್ರಯಾಣಿಕರ ವಿರುದ್ಧದ ಕ್ರಮವನ್ನು ಇನ್ನಷ್ಟು ಕಠಿಣಗೊಳಿಸಲಾಗಿದೆ.
ಇನ್ನು ಮುಂದೆ "ಒಂದು ಸಲ ಟಿಕೆಟ್ ಇಲ್ಲದೇ ಹೋದರೆ ಏನಾಗುತ್ತದೆ?" ಎಂಬ ನಿರ್ಲಕ್ಷ್ಯ ದಂಡ ಕಟ್ಟುವಂತೆ ಆಗಬಾರದು. ಕೆಲವೇ ರೂಪಾಯಿ ಉಳಿಸಿಕೊಳ್ಳುವ ಭರದಲ್ಲಿ ನೂರಾರು ರೂಪಾಯಿ ದಂಡ ಹಾಗೂ ಕಾನೂನು ಕ್ರಮಕ್ಕೆ ಎದುರಿಸುವ ಸಾಧ್ಯತೆ ಇರುತ್ತದೆ. ಆದ್ದರಿಂದ ರೈಲು ಪ್ರಯಾಣಕ್ಕೂ ಮುನ್ನ ಮಾನ್ಯ ಟಿಕೆಟ್ ಖರೀದಿಸಿ, ನಿಯಮಬದ್ಧವಾಗಿ ಪ್ರಯಾಣಿಸುವುದು ಸುರಕ್ಷಿತ ಮತ್ತು ಜವಾಬ್ದಾರಿಯುತ ಪ್ರಜೆಗಳ ಕರ್ತವ್ಯವಾಗಿದೆ.














Click it and Unblock the Notifications