ಹೀಗೆ ಮಾಡಿದರೆ ಒಂದು ಸಣ್ಣ ಪಾಟ್‌ನಲ್ಲಿ ಕೂಡಾ ಗಿಡ ತುಂಬಾ ಮೆಣಸಿನ ಕಾಯಿ ಬೆಳೆಯಬಹುದು!
ಸ್ವಾವಲಂಬಿ ಬದುಕು ಹಾಗೂ ಸಾವಯವ ಆಹಾರ ಪದ್ಧತಿಯತ್ತ ಜನಸಾಮಾನ್ಯರ ಒಲವು ಹೆಚ್ಚಾಗುತ್ತಿದೆ. ಹಾಗಾಗಿ ಮನೆಯ ಬಾಲ್ಕನಿಯಲ್ಲಿಯೇ ತಮಗೆ ಬೇಕಾದ ತರಕಾರಿಗಳನ್ನು ಬೆಳೆದುಕೊಳ್ಳುವ ಪ್ರವೃತ್ತಿ ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿದೆ. ಇದರಲ್ಲಿ ಅತ್ಯಂತ ಸುಲಭವಾಗಿ ಮತ್ತು ಅತಿ ಕಡಿಮೆ ವೆಚ್ಚದಲ್ಲಿ ಬೆಳೆಯಬಹುದಾದ ಬೆಳೆ ಅಂದರೆ 'ಮೆಣಸಿನಕಾಯಿ'.
ಯಾವುದೇ ಬೆಳೆ ಬೆಳೆಯಬೇಕಾದರೆ ಮನೆ ಅಂಗಳದಲ್ಲಿ ದೊಡ್ಡ ತೋಟವೇ ಇರಬೇಕು ಅಥವಾ ಕೃಷಿ ಬಗ್ಗೆ ಭರಪೂರ ಜ್ಞಾನವಿರಬೇಕು ಎಂದೇನೂ ಇಲ್ಲ. ಕೇವಲ ಒಂದು ಸಣ್ಣ ಪಾಟ್ ಜೊತೆಗೆ ಕನಿಷ್ಠ ಕಾಳಜಿ ಇದ್ದರೆ ಸಾಕು, ತಾಜಾ ಮೆಣಸಿನಕಾಯಿಯನ್ನು ಮನೆಯಲ್ಲೇ ಬೆಳೆಯಬಹುದು.

ಮನೆಯ ಪುಟ್ಟ ಜಾಗದಲ್ಲಿಯೇ ಮೆಣಸಿನಕಾಯಿ ಬೆಳೆಯಬೇಕಾದರೆ ಈ ಕೆಳಗಿನ ೯ ಸರಳ ಸೂತ್ರಗಳನ್ನು ಅನುಸರಿಸಬೇಕಾಗುತ್ತದೆ. ಅವುಗಳೆಂದರೆ..
ಸರಿಯಾದ ಆರಂಭ: ನಿಮ್ಮ ಮನೆಯಲ್ಲಿರುವ ಒಣ ಮೆಣಸಿನಕಾಯಿಯ ಬೀಜಗಳನ್ನೇ ಬಳಸಬಹುದು. ಅಥವಾ ನರ್ಸರಿಯಿಂದ ಒಂದು ಸಣ್ಣ ಸಸಿಯನ್ನು ತಂದು ನೆಟ್ಟರೂ ಸರಿ. ಆರಂಭಿಕ ಹಂತದಲ್ಲಿ ಸಸಿ ತಂದು ನೆಡುವುದು ಹೆಚ್ಚು ಸೂಕ್ತ ಮತ್ತು ಸುಲಭ.
ನೀರು ಹರಿದುಹೋಗುವ ಕುಂಡ: ಮೆಣಸಿನಕಾಯಿ ಗಿಡದ ಬುಡದಲ್ಲಿ ನೀರು ನಿಲ್ಲಬಾರದು. ಹೀಗಾಗಿ, ತಳದಲ್ಲಿ ರಂಧ್ರವಿರುವ 8 ರಿಂದ 10 ಇಂಚು ಆಳದ ಪಾಟ್ ಅನ್ನು ಆಯ್ದುಕೊಳ್ಳಿ. ಇದು ಗಿಡದ ಬೇರುಗಳು ಚೆನ್ನಾಗಿ ಹರಡಲು ಸಹಾಯ ಮಾಡುತ್ತದೆ.
ಫಲವತ್ತಾದ ಮಣ್ಣಿನ ಮಿಶ್ರಣ: ಕೇವಲ ಸಾಮಾನ್ಯ ಮಣ್ಣನ್ನು ಬಳಸುವ ಬದಲು ತೋಟದ ಮಣ್ಣು, ಗೊಬ್ಬರ ಮತ್ತು ಕೋಕೋಪೀಟ್ ಮಿಶ್ರಣವನ್ನು ಬಳಸಿ. ಇದು ಮಣ್ಣಿನಲ್ಲಿ ತೇವಾಂಶವನ್ನು ಕಾಯ್ದುಕೊಳ್ಳಲು ಮತ್ತು ಗಾಳಿಯಾಡಲು ನೆರವಾಗುತ್ತದೆ.
ಬೀಜ ಬಿತ್ತುವಾಗ ಜಾಗರೂಕತೆ ಇರಲಿ: ಬೀಜಗಳನ್ನು ಮಣ್ಣಿನ ತೀರಾ ಆಳಕ್ಕೆ ಬಿತ್ತಬಾರದು. ಮೇಲ್ಪದರದಲ್ಲೇ ಇರಬೇಕು. ಒಂದೇ ಕುಂಡದಲ್ಲಿ ಹಲವು ಬೀಜಗಳನ್ನು ಹಾಕುವಾಗ ಅವುಗಳ ಮಧ್ಯೆ ಜಾಗವಿರಬೇಕು ಎನ್ನುವುದು ನೆನಪಿರಲಿ. ಇದರಿಂದ ಗಿಡಗಳಿಗೆ ಸಮಾನವಾಗಿ ಪೋಷಕಾಂಶಗಳು ಸಿಗುತ್ತವೆ.
ಸೂರ್ಯನ ಬೆಳಕು ಕಡ್ಡಾಯ: ಮೆಣಸಿನಕಾಯಿ ಗಿಡಗಳಿಗೆ ಪ್ರತಿದಿನ ಕನಿಷ್ಠ 5 ರಿಂದ 6 ಗಂಟೆಗಳ ಕಾಲ ನೇರ ಸೂರ್ಯನ ಬೆಳಕು ಅತ್ಯಗತ್ಯ. ಬೆಳಕಿನ ಕೊರತೆಯಾದರೆ ಗಿಡಗಳು ದುರ್ಬಲಗೊಂಡು, ಇಳುವರಿ ಕಡಿಮೆಯಾಗುತ್ತದೆ.
ನೀರು ಹಾಕುವಾಗ ಎಚ್ಚರಿಕೆ ಅಗತ್ಯ: ಮಣ್ಣಿನ ಮೇಲ್ಪದರ ಒಣಗಿದಾಗ ಮಾತ್ರ ನೀರು ಹಾಕಬೇಕು. ಅತಿಯಾದ ನೀರು ಬೇರು ಕೊಳೆಯುವಂತೆ ಮಾಡುವ ಸಾಧ್ಯತೆ ಇದೆ. ಹಾಗಂತ ತೀರಾ ಕಡಿಮೆ ನೀರು ಹಾಕಿದರೆ ಗಿಡದ ಬೆಳವಣಿಗೆ ಕುಂಠಿತವಾಗಬಹುದು.
ನಿಯಮಿತವಾಗಿ ಪೋಷಕಾಂಶ ನೀಡಿ: ಗಿಡ ಬೆಳೆದು ಹೂ ಬಿಡುವ ಹಂತದಲ್ಲಿ ಅದಕ್ಕೆ ಹೆಚ್ಚಿನ ಪೋಷಕಾಂಶಗಳ ಅಗತ್ಯವಿರುತ್ತದೆ. ಪ್ರತಿ ಕೆಲವು ವಾರಗಳಿಗೊಮ್ಮೆ ಸಾವಯವ ಗೊಬ್ಬರವನ್ನು ಸೇರಿಸುವುದರಿಂದ ನಿರಂತರವಾಗಿ ಮೆಣಸಿನಕಾಯಿಗಳನ್ನು ಪಡೆಯಬಹುದು.
ಗಿಡಕ್ಕೆ ಆಸರೆ ನೀಡಿ: ಗಿಡ ದೊಡ್ಡದಾಗಿ ಮೆಣಸಿನಕಾಯಿ ಬಿಡಲು ಆರಂಭಿಸಿದಾಗ ತೂಕ ತಡೆಯಲಾಗದೆ ಬಾಗಬಹುದು. ಆದ್ದರಿಂದ ಒಂದು ಸಣ್ಣ ಕೋಲಿನ ಸಹಾಯದಿಂದ ಗಿಡಕ್ಕೆ ಆಸರೆ ನೀಡಿದರೆ ಒಳ್ಳೆಯದು.
ಕೀಟಗಳ ಬಾಧೆಯಿಂದ ರಕ್ಷಿಸಿ: ಗಿಡದ ಎಲೆಗಳನ್ನು ನಿರಂತರವಾಗಿ ಗಮನಿಸುತ್ತಿರಬೇಕು. ನುಸಿ ಅಥವಾ ಇತರ ಕೀಟಗಳ ಬಾಧೆ ಕಂಡುಬಂದಲ್ಲಿ ತಕ್ಷಣವೇ ಸೂಕ್ತ ಸಾವಯವ ಕೀಟನಾಶಕ ಸಿಂಪಡಿಸುವುದು ಅಗತ್ಯ.
ಸಕಾಲದಲ್ಲಿ ಕೊಯ್ಲು ಮಾಡಿ:
ಬೀಜ ಬಿತ್ತಿದ ಕೆಲವೇ ತಿಂಗಳುಗಳಲ್ಲಿ ಗಿಡಗಳು ಮೆಣಸಿನಕಾಯಿ ನೀಡಲು ಸಿದ್ಧವಾಗುತ್ತವೆ. ಇಲ್ಲಿ ನಿಮಗೆ ಹಸಿರು ಮೆಣಸಿನಕಾಯಿ ಬೇಕಿದ್ದರೆ ತಕ್ಷಣ ಕೀಳಬಹುದು. ಇಲ್ಲ ಎಂದಾದರೆ ಅದನ್ನು ಗಿಡದಲ್ಲೇ ಹಣ್ಣಾಗಲು ಬಿಡಬಹುದು. ಸರಿಯಾದ ಸಮಯಕ್ಕೆ ಕಾಯಿಗಳನ್ನು ಕೀಳುವುದರಿಂದ ಗಿಡದಲ್ಲಿ ಮತ್ತಷ್ಟು ಹೊಸ ಕಾಯಿ ಬರಲು ಸಹಾಯವಾಗುತ್ತದೆ.
(ಬರಹ: ರಂಜಿತಾ ಆರ್.ಕೆ.)














Click it and Unblock the Notifications