ನ್ಯೂಜೆರ್ಸಿ ಬೃಂದಾವನ ಕನ್ನಡ ಕೂಟದ ಕಾರ್ಯಕ್ರಮಗಳು
ಆಗಸ್ಟ್ 29ರಿಂದ ಮೂರುದಿನಗಳ ಕಾಲ ಶಿಕಾಗೋದಲ್ಲಿ ನಡೆಯಲಿರುವ ವಿಶ್ವ ಕನ್ನಡ ಸಮ್ಮೇಳನದಲ್ಲಿ ಅಮೆರಿಕದಲ್ಲಿನ ವಿವಿಧ ಕನ್ನಡ ಕೂಟಗಳು ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೀಡಲಿವೆ. ವಿವಿಧ ಕೂಟಗಳ ಮೆರವಣಿಗೆ, ಹಾಡು, ನರ್ತನ, ನಾಟಕ ಪ್ರದರ್ಶನ, ಫ್ಯಾಷನ್ ಶೋ ಮೊದಲಾದ ಪ್ರದರ್ಶನ ತೋರ್ಪಡಿಸಲು ಸಮ್ಮೇಳನ ವೇದಿಕೆ ಕಲ್ಪಿಸಿಕೊಟ್ಟಿದೆ. ಒಬ್ಬರಿಗೊಬ್ಬರು ಪೈಪೋಟಿಗೆ ಬಿದ್ದಂತೆ ಸ್ಥಳೀಯ ಕಲಾವಿದರು ಪ್ರತಿಭಾ ಪ್ರದರ್ಶನ ಮಾಡುತ್ತಾರೆ.
2 ವರ್ಷಕ್ಕೊಮ್ಮೆ ನಡೆಯುವ 'ಅಕ್ಕ' ಸಮ್ಮೇಳನದಲ್ಲಿ ಈ ಬಾರಿಯೂ ಕೂಡ ನ್ಯೂಜೆರ್ಸಿಯ ಬೃಂದಾವನದ ಸ್ಫೂರ್ತಿ ತಂಡದಿಂದ ಸಂಭ್ರಮದಿಂದ ಪಾಲ್ಗೊಳ್ಳುತ್ತಿದೆ. 200ಕ್ಕು ಹೆಚ್ಚು ಕನ್ನಡಿಗರು ಸಮ್ಮೇಳನದಲ್ಲಿ ಭಾಗವಹಿಸಲು ನ್ಯೂಜೆರ್ಸಿಯಿಂದ ಚಿಕಾಗೋಗೆ ಹೊರಟಿದ್ದಾರೆ. ಸಮ್ಮೇಳನದಲ್ಲಿ ಬೃಂದಾವನ ಪ್ರಸ್ತುತ ಪಡಿಸುವ ಮೂರು ಕಾರ್ಯಕ್ರಮಗಳ ವಿವರ ಈ ರೀತಿ ಇದೆ.
ನಾಟಕ : ಡ್ಯಾಂಡಿಮ್ಯಾನ್ ರಿಟ್‌ರ್ನ್ಸ್ : ಪಾರ್ಕಲ್ಲಿ ಸ್ಪಾರ್ಕ್
2006ರ ಬಾಲ್ಟಿಮೋರ್ ಸಮ್ಮೇಳನದಲ್ಲಿ ಪ್ರಸ್ತುತ ಪಡಿಸಿದ ಡ್ಯಾಂಡಿಮ್ಯಾನ್ ಶೊ ಕಾರ್ಯಕ್ರಮದ ಯಶಸ್ಸಿನಿಂದ ಉತ್ತೇಜಿತವಾಗಿರುವ ನ್ಯೂಜೆರ್ಸಿಯ ಬೃಂದಾವನ ಕನ್ನಡ ಕೂಟ 'ಡ್ಯಾಂಡಿಮ್ಯಾನ್' ತಂಡ ಮತ್ತೆ ಈ ವರ್ಷ ಎಲ್ಲರನ್ನು ಮನರಂಜಿಸಲು ಸಜ್ಜಾಗಿದೆ. ಈ ಬಾರಿ, ಬೆಂಗಳೂರಿನಲ್ಲಿ ಅಲ್ಲಿ ಇಲ್ಲಿ ಬೆರಳೆಣಿಕೆಯಷ್ಟು ಇರುವ ಉದ್ಯಾನವನದಲ್ಲಿ ಈ ನಗೆನಾಟಕವನ್ನು ಕಲ್ಪಿಸಲಾಗಿದೆ. ಮುಂಚಿನಂತೆ, ವಿಧ ವಿಧವಾದ ಪಾತ್ರಧಾರಿಗಳು, ತಮ್ಮ ವಿಭಿನ್ನ ವಿಚಾರಗಳನ್ನು, ಅದರಲ್ಲೂ ಕನ್ನಡ, ಕರ್ನಾಟಕ ಹಾಗು ವಿಶೇಷವಾಗಿ ಬೆಂಗಳೂರಿನ ಇಂದಿನ ಸಮಸ್ಯೆಗಳ ಮೇಲೆ ಬೆಳಕನ್ನು ಹಾಸ್ಯರೂಪದಲ್ಲಿ ಬೀರಲು ಮುಂದಾಗಿದ್ದಾರೆ. ಸೀಮ ಹಾಗು ವಿಜಯ್ ಮೂರ್ತಿ ದಂಪತಿಗಳು ಈ ನಾಟಕದ ಸೂತ್ರವನ್ನು ಹಿಡಿದಿದ್ದರೆ, ಮಿಕ್ಕೆಲ್ಲ ಪಾತ್ರಧಾರಿಗಳು ನಾಟಕದ ಸಾಹಿತ್ಯ ಹಾಗು ಇನ್ನಿತರ ವಿಭಾಗಗಳಲ್ಲಿ ತಮ್ಮ ಅಮೂಲ್ಯ ಸಹಾಯವನ್ನು ನೀಡಿದ್ದಾರೆ. ಹಲವಾರು ವೈಶಿಷ್ಟ್ಯತೆಗಳನ್ನು ಒಳಗೊಂಡ ಈ ನಾಟಕದಲ್ಲಿ, ಪಾತ್ರ ಪರಿಚಯವನ್ನು ನವೀನ ಪ್ರ್ರಾಯೋಗಾತ್ಮಕ ಶೈಲಿಯಲ್ಲಿ ಪ್ರಸ್ತುತಿಪಡಿಸಿರುವುದು ವಿಶೇಷ
ನೃತ್ಯ ನಾಟಕ : ಉದಯನ ಹಾವಳಿ
2006 ಬಾಲ್ಟಿಮೋರ್ ಅಕ್ಕ ಸಮ್ಮೇಳನದಲ್ಲಿ ಪ್ರದರ್ಶನಗೊಂಡ ಗುರುವಿಗೆ ನಮನ ನೃತ್ಯ ರೂಪಕಕ್ಕೆ ದೊರೆತ ಪ್ರೋತ್ಸಾಹದಿಂದ ಪ್ರೇರೇಪಿತರಾದ ಕುಮಾರಿ ಸ್ನೇಹ ಪ್ರಸನ್ನ ಕುಮಾರ್ ಹಾಗು ಕುಮಾರಿ ವಿವಾಹ್ನಿ ಶಾಸ್ತ್ರಿ, ಈ ಬಾರಿ ನ್ಯೂಜೆರ್ಸಿಯ ಬೃಂದಾವನ ಕನ್ನಡ ಕೂಟ ಹಾಗು ದಕ್ಷಿಣ ಕ್ಯಾಲಿಫೋರ್ನಿಯ ಕನ್ನಡ ಕೂಟದ ಮಕ್ಕಳನ್ನು ಸೇರಿಸಿಕೊಂಡು 'ಉದಯನ ಹಾವಳಿ' ಎಂಬ ನೃತ್ಯ ನಾಟಕವನ್ನು ಪ್ರಸ್ತುತ ಪಡಿಸಲಿದ್ದಾರೆ. ಕರ್ನಾಟಕದಿಂದ ನಮ್ಮ ಉದಯವಾಹಿನಿ ಅಮೇರಿಕಾಗೆ ಬಂದ ನಂತರ ನಮ್ಮ ಕನ್ನಡದ ಮಂದಿ ಅದರಲ್ಲೂ ಹೆಂಗಸರು - ಹೆಣ್ಣುಮಕ್ಕಳು ಹೇಗೆ ಸದಾ ಉದಯ ಟಿವಿ ಮುಂದೆ ಕುಳಿತು ಪ್ರಪಂಚವನ್ನೇ ಮರೆತುಬಿಡುತ್ತಾರೆ, ಆವಾಗ ಮನೆಯ ಮಕ್ಕಳು ಯಾವ ರೀತಿ ಇದರಿಂದ ಪ್ರಭಾವಿತರಾಗುತ್ತಾರೆ ಎಂಬುದನ್ನು ತಿಳಿ ಹಾಸ್ಯ ಲೇಪಿಸಿ ತಿಳಿಸಿರುವ ಪ್ರಯತ್ನ, ಈ ನೃತ್ಯ ರೂಪಕ. 8ರಿಂದ 28 ವರ್ಷದ 16 ಮಕ್ಕಳನ್ನು ಸೇರಿಸಿ ನಡೆಸಿರುವ ಈ ಹಾವಳಿಯನ್ನು ತಪ್ಪದೆ ನೋಡಿರಿ.
ನೃತ್ಯ : ಕೋಲಾಟ
ಹತ್ತು ವರ್ಷದಿಂದ ಹಲವಾರು ಸಮೂಹ ನೃತ್ಯಗಳನ್ನು ನಿರೂಪಿಸಿರುವ ಕುಮಾರಿ ರಶ್ಮಿ ಮೋಹನ್ ಈ ಬಾರಿ ಪ್ರಸ್ತುತ ಪಡಿಸುತ್ತಿರುವುದು ಕೋಲಾಟ. ಹದಿಹರೆಯದ ಹತ್ತು ಹುಡುಗ ಹುಡುಗಿಯರು ತಾಲೀಮು ಮಾಡಲು ಸೇರಿದಾಗಲೆಲ್ಲ Dunkin Donutsನಿಂದ ಸಾಕಷ್ಟು ಬಾರಿ Coffee Coolaata ಕುಡಿದು ಹುರುಪಿನಿಂದ ಅಭ್ಯಾಸ ಮಾಡಿದ್ದಾರೆ. ಕಾಫಿ Coolaata ತಂಡವು 'ಶ್ರೀರಸ್ತು ಶುಭಮಸ್ತು' ಚಿತ್ರದಿಂದ ಆಯ್ದುಕೊಂಡ ಒಂದು ಹಾಡಿಗೆ ಹಲವು ಕ್ಲಿಷ್ಟಕರವಾದ ಹೆಜ್ಜೆಗಳನ್ನು ಹಾಕಿ ಕೋಲಾಟ ರೂಪಿಸಿದೆ.












Click it and Unblock the Notifications