ಶಿಕಾಗೋದಲ್ಲಿ ವಾಚಕ ಬಂಧುಗಳನ್ನು ಕಾಣುವ ತವಕ

Dr. GV Kulkarniಸಹೃದಯ ವಾಚಕರು ತಮ್ಮ ನಚ್ಚಿನ ಲೇಖನ ಬರೆದ ಲೇಖಕರನ್ನು ಕಾಣಲು ಎಷ್ಟು ಆಸಕ್ತರಾಗಿರುತ್ತಾರೋ ಅಷ್ಟೇ ಲೇಖಕರು ಕೂಡ ತಮ್ಮ ವಾಚಕ ಬಂಧುಗಳನ್ನು ಕಾಣಲು ಆಸಕ್ತರಾಗಿರುತ್ತಾರೆ. ಅಂಥದೊಂದು ಸುಯೋಗ ಶಿಕಾಗೋದಲ್ಲಿ ನಡೆಯುತ್ತಿರುವ 5ನೇ 'ಅಕ್ಕ' ವಿಶ್ವ ಕನ್ನಡ ಸಮ್ಮೇಳನ ಒದಗಿಸಿಕೊಟ್ಟಿದೆ. ಈ ಸಮ್ಮೇಳನದಲ್ಲಿ ಭಾಗವಹಿಸಲು ಓದುಗರ ಒಂದು ಪತ್ರವೇ ಪ್ರೆರೇಪಣೆ. - 'ಜೀವಿ'.

ಅಂಕಣಕಾರ : ಡಾ. 'ಜೀವಿ' ಕುಲಕರ್ಣಿ, ಮುಂಬಯಿ

ಮೊದಲು ನನ್ನ ವಾಚಕ ವರ್ಗ ಕರ್ನಾಟಕಮಲ್ಲ' ಪತ್ರಿಕೆಯಿಂದಾಗಿ ಮುಂಬೈ-ಪುಣೆ-ನಾಸಿಕ-ಬೆಳಗಾವಿಗಳಿಗೆ ಸೀಮಿತವಾಗಿತ್ತು. ಈಗ kannada.oneindia.com ಎಂಬ ಅಂತರ್ಜಾಲ ಪತ್ರಿಕೆಯಿಂದಾಗಿ ವಿಶ್ವದ ತುಂಬೆಲ್ಲ ವಾಸಿಸುವ ಕನ್ನಡಪ್ರೇಮಿಗಳು ನನ್ನ ಲೇಖನ ಓದುತ್ತಾರೆ. ಅವರಿಂದ ನನಗೆ ಪತ್ರಗಳು ಬಂದಾಗ ನನಗೆ ಎಲ್ಲಿಲ್ಲದ ಆನಂದವಾಗುತ್ತದೆ. ಆ ಪತ್ರಗಳಲ್ಲಿ ಕೆಲವನ್ನು ಇಲ್ಲಿ ಪ್ರಸ್ತಾಪಿಸುವೆ.

ಡಾ| ವ್ಯಾಸನಕೆರೆ ಪ್ರಭಂಜನಾಚಾರ್ಯರ ಪೂರ್ಣಪ್ರಜ್ಞ ದರ್ಶನ'' ಪುಸ್ತಕದ ಸಾರವನ್ನು ನಾನು ಹದಿನಾರು ಕಂತುಗಳಲ್ಲಿ ಸಂಗ್ರಹಿಸಿ ಬರೆದಾಗ ಸ್ವತಃ ಅದರ ಲೇಖಕರೇ ಬಹುವಾಗಿ ಮೆಚ್ಚಿದ್ದರು. (ಅದನ್ನು ಪುಸ್ತಕರೂಪದಲ್ಲಿ ಮಿತ್ರ ಎನ್.ಆರ್.ರಾವ್ ಅವರು ನಾರಾಯಣಾಮೃತ ಫೌಂಡೇಶನ್ ಮುಖಾಂತರ ಪ್ರಕಟಿಸಿದರು). ವಾಚಕರಿಂದ ನನಗೆ ಅಸಂಖ್ಯ ಪತ್ರಗಳು ಬಂದವು ಅವುಗಳಲ್ಲಿ ಎರಡನ್ನು ನಾನು ಮರೆಯಲಾರೆ. ಡಾ| ಉಮೇಶ್ ಎಂಬ ವಿಜ್ಞಾನಿ ಆಸ್ಟ್ರೇಲಿಯಾದಿಂದ ಪತ್ರ ಬರೆದಿದ್ದರು. ಒಂದು ರವಿವಾರ ನೀವು ಮಧ್ವಾಚಾರ್ಯರ ಬಗ್ಗೆ ಬರೆದ ಲೇಖನ ನೋಡಿದೆ. ಅದು ಹದಿನಾರನೆಯ ಕಂತಾಗಿತ್ತು. ಅಂದು ರವಿವಾರ ನಿಮ್ಮ ಎಲ್ಲ ಲೇಖನಗಳನ್ನು ತೆರೆದು ಓದಿದೆ. ಅಂದಿನ ದಿನ ಸಾರ್ಥಕವಾಯಿತೆಂದು ಭಾವಿಸಿದೆ. ಲೇಖನ ಬರೆದ ನಿಮಗೆ ಧನ್ಯವಾದಗಳು'' ಎಂದಿದ್ದರು. ಇನ್ನೊಬ್ಬರು, ನಾಗರಾಜ ಎಂಬವರು, ಕೆನಡಾದಿಂದ ಪತ್ರ ಬರೆದರು. ನನ್ನ ಲೇಖನಗಳನ್ನು ಮೆಚ್ಚಿದರು ಅಷ್ಟೇ ಅಲ್ಲ, ನನಗೆ ಶ್ರೀಮಧ್ವಾಚಾರ್ಯರ ಬಗ್ಗೆ ಸಂಸ್ಕೃತದಲ್ಲಿ ಒಂದು ತಾಸಿನ ನಾಟಕ ಬರೆದುಕೊಡಲು ಬಿನ್ನಹಿಸಿದರು. ಅಂಥ ಕಾರ್ಯಕ್ಕೆ ನೀವು ರಾಷ್ಟ್ರಪತಿ ಪ್ರಶಸ್ತಿ ವಿಜೇತ ಡಾ| ಪ್ರಭಂಜನಾಚಾರ್ಯರನ್ನು, ಇಲ್ಲವೆ ವಿದ್ಯಾವಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರನ್ನು ಕೇಳಿರಿ''- ಎಂದು ಉತ್ತರಿಸಿದೆ. ಅಡಿ ಟಿಪ್ಪಣಿ ಬರೆಯುತ್ತ, ಕನ್ನಡದಲ್ಲಿ ಬರೆಯುವುದಾದರೆ ನಾನು ಪ್ರಯತ್ನಿಸಬಹುದು' ಎಂದೂ ಬರೆದೆ. ಅವರಿಂದ ಉತ್ತರ ಬಂತು. ಒಂದು ತಾಸಿನ ನಾಟಕ ನೀವೇ ಬರೆಯಿರಿ'' ಎಂದು. ನಂತರ 3-4 ನೆನಪಿನ ಓಲೆ ಬರೆದರು. ನನ್ನಿಂದ ಈ ಕೆಲಸ ಆಗುತ್ತಿಲ್ಲ, ನೀವು ಬೇರೆ ನಾಟಕ ಪ್ರಯೋಗಿಸಿರಿ'' ಎಂದು ಬರೆಯುತ್ತ, ನಾನು ಹಿಂದೆ ಬರೆದು ಮುಂಬೈಯಲ್ಲಿ ಪ್ರಯೋಗಿಸಿದ ಕಾದಿರುವಳು ಶಬರಿ" ಮತ್ತು ವಿವೇಕ ಚೂಡಾಮಣಿ'' ಎಂಬ ನಾಟಕಗಳನ್ನು ಅವರಿಗೆ ಕಳಿಸಿದೆ. ತಮಗೆ ಮಧ್ವರ ಬಗ್ಗೆ ನಾಟಕವೇ ಬೇಕೆಂದು ಪಟ್ಟು ಹಿಡಿದರು. ಬಹಳ ಕಷ್ಟಪಟ್ಟು 11 ದೃಶ್ಯಗಳುಳ್ಳ ಎರಡು ತಾಸಿನ ನಾಟಕ ಬರೆದು ಕಳಿಸಿದೆ. ಅವರಿಗೆ ಬೇಕಾದದ್ದು ಒಂದು ತಾಸಿನ ನಾಟಕ. ಆದ್ದರಿಂದ, ಇದನ್ನು ಒಂದು ತಾಸಿಗೆ ಅಳವಡಿಸಿ ನಾಟಕ ಪ್ರಯೋಗಿಸಿರಿ ಎಂದು ಬರೆದೆ. ನಂತರ ಆ ನಾಟಕವನ್ನು ಮಧ್ವರ ಜನ್ಮಸ್ಥಳವಾದ ಪಾಜಕದಲ್ಲಿ ಕಾಣೆಯೂರು ಮಠದ ಸ್ವಾಮಿಗಳ ಉಪಸ್ಥಿತಿಯಲ್ಲಿ ವಾಚಿಸಿದೆ. ಅದರ ಒಂದು ಪ್ರತಿಯನ್ನು ಪರ್ಯಾಯ ಪೀಠಸ್ಥ ಸುಗುಣೇಂದ್ರತೀರ್ಥರ ಅವಗಾಹನೆಗೆ ಕೊಟ್ಟೆ. ಅವರು ಓದಿ ಮೆಚ್ಚಿಗೆ ವ್ಯಕ್ತಪಡಿಸಿದರು.

ನಾನು ಯೋಗದ ಬಗ್ಗೆ ಬರೆದ ಲೇಖನಗಳನ್ನು ಓದಿ ವಾಚಕರು ಮಾರ್ಗದರ್ಶನ ಪಡೆದಿದ್ದಾರೆ. ಯೋಗಶಿಬಿರ ನಡೆಸಲು ಅನೇಕರು ಬಿನ್ನಹಿಸಿದ್ದೂ ಉಂಟು. ಬೆಂಗಳೂರಿನ ಬಳಿ ಒಂದು ಹಳ್ಳಿಯಲ್ಲಿ ಆಯುರ್ವೇದ ಚಿಕಿತ್ಸೆ ಮಾಡುತ್ತಿರುವ ಒಬ್ಬ ಡಾಕ್ಟರರು ನನ್ನಿಂದ ನೇತಿ-ಪಾಟ್ ತರಿಸಿಕೊಂಡಿದ್ದಾರೆ. ಹೋಮಿಯೋಪತಿ ಡಾಕ್ಟರ್ ರಹಾಳಕರರ ಬಗ್ಗೆ ಲೇಖನ ಓದಿ ಅಮೇರಿಕೆಯಿಂದ ಅಸಂಖ್ಯ ಜನ ತಮ್ಮ ಮಕ್ಕಳ ಎತ್ತರ ಬೆಳವಣಿಗೆಗಾಗಿ ಔಷಧ ತರಿಸಿಕೊಂಡಿದ್ದಾರೆ. ಹೋಮಿಯೋಪತಿ ತಜ್ಞ ಡಾಕ್ಟರ್ ಬಿ.ಟಿ. ರುದ್ರೇಶರ ಬಗ್ಗೆ ಬರೆದ ಪರಿಚಯ ಲೇಖನ ಓದಿ, ಅವರನ್ನು ಕಾಣಲು ಎರಡು ತಿಂಗಳು ಕಾಯುವ ವ್ಯವಧಾನವಿಲ್ಲದ ಕೆಲಮಿತ್ರರು ನನ್ನಿಂದ ಶಿಫಾರಸು ಪತ್ರವನ್ನು ತರಿಸಿಕೊಂಡಿದ್ದಾರೆ. ಉತ್ತಮ ಸಾಹಿತಿ, ಕವಿ, ಸಂಘಟರಾದ ಡಾ| ನಾ ಮೊಗಸಾಲೆಯವರು ತಮ್ಮ ಪುಸ್ತಕದ ಬಗ್ಗೆ ನಾನು ಬರೆದ ಲೇಖನವನ್ನು ಮೆಚ್ಚಿ, ತಮ್ಮ ಪುಸ್ತಕದ ಎರಡನೆಯ ಸಂಸ್ಕರಣಕ್ಕೆ ಮುನ್ನುಡಿಯಾಗಿ ಬಳಸಿದ್ದಾರೆ. ಡಾ| ರುದ್ರೇಶರು ನನ್ನ ಲೇಖನವನ್ನು ತಮ್ಮ ಪುಸ್ತಕದ ಹಿನ್ನುಡಿಯಾಗಿ ಬಳಸಿದ್ದಾರೆ. ಲೇಖನ ಉದ್ಯೋಗ (ಬೇಂದ್ರೆಯವರ ಮಾತಿನಲ್ಲಿ ಉತ್+ಯೋಗವಾದಾಗ) ನಮ್ಮ ಮುಂದೆ ಅದ್ಭುತ ಪ್ರಪಂಚವನ್ನೇ ತೆರೆಯುತ್ತದೆ. ಈಗ ನಾನು ಕೈಕೊಳ್ಳಲಿರುವ ಮೂರನೆಯ ಅಮೇರಿಕಾ ಪ್ರಯಾಣ ವಿದೇಶದ ವಾಚಕರನ್ನು ಸಂದರ್ಶಿಸುವ ಅವಕಾಶವನ್ನು ಕಲ್ಪಿಸುತ್ತಿದೆ ಎಂಬ ಸಂತಸ ನನಗೆ.

ಮೊದಲು ನಾನು ಅಮೇರಿಕೆಯ ಪ್ರವಾಸ ಕೈಕೊಂಡದ್ದು 2000 ಇಸ್ವಿಯಲ್ಲಿ. ಸಹಸ್ರಮಾನ ವರ್ಷದ ನೆನಪಿನ ಪ್ರಥಮ ಕನ್ನಡ ವಿಶ್ವ ಸಮ್ಮೇಳನವು ಅಮೇರಿಕೆಯ ಹ್ಯೂಸ್ಟನ್ ನಗರದಲ್ಲಿ ನಡೆಯಿತು. ಕವಿಗೋಷ್ಠಿಯಲ್ಲಿ ಭಾಗವಹಿಸಲು ನಾನು ಆಮಂತ್ರಿತನಾಗಿದ್ದೆ. ನನ್ನ ಅನುಭವಗಳನ್ನು ಜೀವಿ ಕಂಡ ಅಮೇರಿಕಾ'' ಎಂಬ 280 ಪುಟಗಳ ಪುಸ್ತಕದಲ್ಲಿ ವಾಚಕರೊಡನೆ ಹಂಚಿಕೊಂಡಿರುವೆ. ಅಮೇರಿಕೆಯಲ್ಲಿ ಕನ್ನಡದ ಕೈಂಕರ್ಯವನ್ನು ವಹಿಸಿ ದಶಕಗಳ ಕಾಲ ಅಮೇರಿಕೆಯಲ್ಲಿ ವಾಸಿಸಿ, ಅಮೆರಿ-ಕನ್ನಡ' ಎಂಬ ಪತ್ರಿಕೆಯನ್ನು ಸಂಪಾದಿಸಿ, ಅಮೇರಿಕೆಯಲ್ಲಿ ಅರಳಿ ಮೈಸೂರಿಗೆ ಮರಳಿದ ಅನಿವಾಸಿ ಕನ್ನಡಿಗರಾದ ಶಿಕಾರಿಪುರ ಹರಿಹರೇಶ್ವರು ಈ ಪುಸ್ತಕಕ್ಕೆ ಮುನ್ನುಡಿ ಬರೆದಿರುವುದು ಈ ಪುಸ್ತಕದ ಶೋಭೆಯನ್ನು ಹೆಚ್ಚಿಸಿದೆ. ಅವರು ನನ್ನ ಪುಸ್ತಕವನ್ನು ಎಷ್ಟು ಮೆಚ್ಚಿದ್ದರೆಂದರೆ ಅಮೇರಿಕೆಗೆ ಪ್ರಥಮ ಸಲ ಹೋಗುವ ತಮ್ಮ ಮಿತ್ರರಿಗೆಲ್ಲ ನನ್ನ ಪುಸ್ತಕ ಓದಲು ಶಿಫಾರಸು ಮಾಡುತ್ತಿದ್ದರು. ಅವರು ಕೊಂಡು ಹಂಚಿದ ಪುಸ್ತಕಗಳಿಗೆ ಲೆಕ್ಕವಿಲ್ಲ. 2002ರಲ್ಲಿ ನನ್ನ ಪ್ರಥಮ ಪ್ರವಾಸದ ಪುಸ್ತಕವು ಡೆಟ್ರಾಯಿಟ್‌ನಲ್ಲಿ ನಡೆದ ದ್ವಿತೀಯ ವಿಶ್ವ ಕನ್ನಡ ಸಮ್ಮೇಳನದಲ್ಲಿ ಬಿಡುಗಡೆಗೊಂಡಿತು. ಅದನ್ನು ಹರಿಹರೇಶ್ವರರೇ ಬಿಡುಗಡೆಗೊಳಿಸಿದ್ದು ಇನ್ನೊಂದು ವೈಶಿಷ್ಟ್ಯ. ಮೂರನೆಯ ಸಮ್ಮೇಳನ ಅರ್ಲೆಂಡೋದಲ್ಲಿ ನಡೆಯಿತು (2004). ಅಲ್ಲಿ ಪ್ರಕಟವಾದ ಸ್ಮರಣ ಸಂಚಿಕೆಯಲ್ಲಿ ನನ್ನಿಂದ ವರಕವಿ ಬೇಂದ್ರೆಯವರ ಮೇಲೆ ಒಂದು ಮಹತ್ವದ ಲೇಖನ ಬರೆಸಿದ್ದರು. ನಾಲ್ಕನೆಯ ಸಮ್ಮೇಳನ ಬಾಲ್ಟಿಮೋರ್ ‌ದಲ್ಲಿ (2006) ನಡೆಯಿತು.

ನನ್ನ ಎರಡು ಸಲದ ಪ್ರವಾಸದಲ್ಲಿ ಅಮೇರಿಕೆಯ ಎಲ್ಲ ಮಹತ್ವದ ಸ್ಥಳಗಳನ್ನು ಸಂದರ್ಶಿಸಿರುವೆ, ಅವುಗಳ ಬಗ್ಗೆ ಸಚಿತ್ರವಾಗಿ ಬರೆದಿರುವೆ. ನನ್ನನ್ನು ಈ ಸಲ ಅಮೆರಿಕೆಗೆ ಕರೆಸಿದವರಿಗೆ ನಾನು ಬರೆದೆ, ನನ್ನನ್ನು ಅಮೇರಿಕೆಯ ಬದಲು ಇಂಗ್ಲಡಿಗೆ ಕಳಿಸಿರಿ. ಅಲ್ಲಿ ನನಗೆ ನೋಡುವುದಿದೆ, ಬರೆಯುವುದೂ ಇದೆ'' ಎಂದು. ನನಗೆ ಇಂಗ್ಲಂಡ್ ಪ್ರವಾಸ ಮಾಡಲು ಎರಡು ಕಾರಣಗಳಿವೆ. ನನ್ನ ನಚ್ಚಿನ ಲೇಖಕ ಶೇಕ್ಸಪಿಯರನ ಹುಟ್ಟಿದ ಸ್ಥಳ ನೋಡಬೇಕಾಗಿದೆ, ಅಲ್ಲಿ ಅವನ ನಾಟಕ ನೋಡಬೇಕಾಗಿದೆ. ಈ ವರ್ಷ ನಮ್ಮ ಗುರುಗಳಾದ ವಿನಾಯಕ ಕೃಷ್ಣ ಗೋಕಾಕರ ಜನ್ಮಶತಾಬ್ದಿ ವರುಷ. ಅವರು ಕಲಿತ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ ಸಂದರ್ಶಿಸಬೇಕಾಗಿದೆ. ಅವರು 1936-38ರಲ್ಲಿ ಆಕ್ಸ್‌ಫರ್ಡಿನಲ್ಲಿ ಕಲಿಯುತ್ತಿದ್ದಾಗ ಒಂದು ಮಹತ್ವದ ಘಟನೆ ನಡೆಯಿತು. ಅವರ ಆತ್ಮೀಯರೊಬ್ಬರು ಅದರ ಬಗ್ಗೆ ನನಗೆ ಹೇಳಿದರು. ಅದನ್ನು ನಾ ಕಂಡ ಗೋಕಾಕ' ಪುಸ್ತಕದಲ್ಲಿ ಬರೆದೆ. ಆ ಮಾಹಿತಿ ಕೊಟ್ಟವರ ಹೆಸರೂ ಹಾಕಿದೆ. ನನ್ನ ಪುಸ್ತಕದ ಕರಡು ಪ್ರತಿ ನೋಡಿದ ಮಿತ್ರರು ಆ ಸಂಗತಿಯನ್ನು ತೆಗೆದುಹಾಕಲು ಹೇಳಿದರು. ಕಾರಣ ಕೇಳಿದರೆ, ತಾವು ಬರೆಯಲಿರುವ ಪುಸ್ತಕದಲ್ಲಿ ಆ ವಿಷಯದ ದಾಖಲೆಯಾಗಲಿದೆ, ಅದರ ಕ್ರೆಡಿಟ್ ತಮಗೆ ಬೇಕು ಅಂದಿದ್ದರು. ಆ ಮಾತಿಗೆ ಈಗ ಒಂಭತ್ತು ವರ್ಷಗಳಾದವು. ಇನ್ನೂವರೆಗೆ ಆ ಮಿತ್ರರು ಗೋಕಾಕರ ಮೇಲೆ ಪುಸ್ತಕ ಬರೆದಿಲ್ಲ. ನನಗೆ ಗೋಕಾಕರ ಬಗ್ಗೆ ಬರೆಯುವ ಅವಕಾಶ ಮಾಡಿಕೊಡಲು ಇಂಗ್ಲಂಡಿಗೆ ಕಳಿಸಿರಿ ಎಂದಾಗ, ಅಮೇರಿಕೆಗೆ ಕರೆಸಿದವರು ಅಂದರು, ಈಗಂತೂ ಅಮೇರಿಕೆಗೆ ಬನ್ನಿರಿ, ನಂತರ ನಿಮ್ಮನ್ನು ಇಂಗ್ಲಂಡಿಗೂ ಕಳಿಸುವೆವು.'' ಎಂದು. ಈ ಸಾಲುಗಳನ್ನು ಬರೆಯುವಾಗ ನನ್ನ ಮಿತ್ರರ ನೆನಪಾಯ್ತು. ಹಿನ್ನೆಲೆಯಲ್ಲಿ, ಟಿವಿಯಲ್ಲಿ, ಒಂದು ಹಿಂದಿ ಹಾಡು ಕೇಳಿಸಿತು, ದೋಸ್ತ ದೋಸ್ತ ನಾ ರಹಾ. . .'

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+