ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಟಿ ರುದ್ರೇಶ್ ಮಕ್ಕಳಿಲ್ಲದವರ ಪಾಲಿನ 'ಅಶ್ವಿನಿ' ದೇವತೆ

By 'ಜೀವಿ' ಕುಲಕರ್ಣಿ
|
Google Oneindia Kannada News

ಬಿ.ಟಿ. ರುದ್ರೇಶ್ ಸಹಸ್ರಾರು ಬಂಜೆ ಮಹಿಳೆಯರ ಮಡಿಲ'ಲ್ಲಿ ಸಂತಾನ ಭಾಗ್ಯ ಕಲ್ಪಿಸಿ ಕೊಟ್ಟ ಆಧುನಿಕ ಅಶ್ವಿನಿ' ದೇವತೆ ಇವರಾಗಿದ್ದಾರೆ. ಅದಕ್ಕೆಂದೇ ಇವರ ಕ್ಲಿನಿಕ್ ಅಶ್ವಿನಿ' ಮತ್ತು ಮನೆ ಮಡಿಲು' ಎಂಬ ಅನ್ವರ್ಥಕನಾಮ ಪಡೆದಿವೆ.

Dr. B.T. Rudresh, Homeopathy specialistಪರ್ಯಾಯ ಚಿಕಿತ್ಸಾ ಪದ್ಧತಿಯಾದ ಹೋಮಿಯೋಪತಿಯ ಮಹತ್ವ, ಸಿದ್ಧಿ-ಸಾಧನೆಗಳ ಬಗ್ಗೆ ನಾನು ಬರೆದ ಲೇಖನಗಳನ್ನು ಮೆಚ್ಚಿ ಹಲವು ಪತ್ರಗಳು ಬಂದಿವೆ. ಅದರಲ್ಲಿ ಒಂದು ಪಂಜಾಬಿನ ಗುರ್‌ಗಾಂವ್‌ವಾಸಿ ವೆಂಕಟೇಶ ಎಂಬವರದು. ಬೆಂಗಳೂರಿನ ಪ್ರಸಿದ್ಧ ಹೋಮಿಯೋಪತಿ ವೈದ್ಯ ಡಾ| ರುದ್ರೇಶ್ ಅವರನ್ನು ಕಂಡಿದ್ದೀರಾ?'' ಎಂದು ಕೇಳಿದ್ದರು. ಹೋಮಿಯೋಪತಿಗೆ ಸಂಬಂಧಿಸಿದಂತೆ ಅನೇಕ ವೈದ್ಯರನ್ನು ಸಂದರ್ಶಿದ್ದ ನನಗೆ ರುದ್ರೇಶ್ ಅವರನ್ನು ಭೇಟಿಯಾಗುವ ಸುಯೋಗ ಒದಗಿರಲಿಲ್ಲ. ವೆಂಕಟೇಶ್ ಅವರ ಪತ್ರ ರುದ್ರೇಶ್ ಅವರನ್ನು ಭೇಟಿಯಾಗಲು ಪ್ರೇರೇಪಿಸಿತು. ನನ್ನ ಬೆಂಗಳೂರಿನ ಕೆಲಸ ಮುಗಿದಮೇಲೆ ಡಾ| ರುದ್ರೇಶ್‌ರನ್ನು ಸಂಪರ್ಕಿಸಿದೆ. ತಮ್ಮ ಬಿಡುವಿಲ್ಲದ ಕಾರ್ಯಕ್ರಮದ ಬಗ್ಗೆ ಹೇಳಿದರು. ತಮ್ಮ ಕ್ಲಿನಿಕ್‌ನಲ್ಲಿ ರೋಗಿಗಳನ್ನು ಬಿಟ್ಟು ಯಾರನ್ನೂ ಭೇಟಿಗಾಗದ ಅವರು ತಮ್ಮ ಮನೆಗೆ ಬೆಳಿಗ್ಗೆ ಬರಲು ಆಮಂತ್ರಿಸಿದರು. ಕತ್ರಿಗುಪ್ಪೆಯಲ್ಲಿ ಕವಿ ಚಂದ್ರಶೇಖರ ಕಂಬಾರ ಮತ್ತೆ ನರಸಿಂಹಸ್ವಾಮಿಯವರ ಮನೆಗಳ ಮಧ್ಯದಲ್ಲಿ ಅವರ ಮನೆ "ಮಡಿಲು" ನಿಂತಿದೆ. ಮನೆ ಸುಂದರವಾಗಿದೆ, ಹೆಸರು ಕಾವ್ಯಮಯವಾಗಿದೆ. ನಾನು ಕರೆಗಂಟೆ ಬಾರಿಸಿದಾಗ ಸ್ವತಃ ಡಾಕ್ಟರರೇ ಬಂದು ನನ್ನನ್ನು ಸ್ವಾಗತಿಸಿದರು. ಅವರ ಸಂದರ್ಶನ ಹೋಮಿಯೋಪತಿಯ ಸಮ್ಯಕ್ ದರ್ಶನವೇ ಆಗಿತ್ತು. ಅವರೊಂದಿಗೆ ನಡೆದ ಸಂಭಾಷಣೆಯನ್ನು ನಿರೂಪಿಸುವ ಮೊದಲು ಅವರ ಪರಿಚಯಾತ್ಮಕವಾದ ಕೆಲವು ಸಂಗತಿಗಳನ್ನು ವಾಚಕರ ಗಮನಕ್ಕೆ ತರಬಯಸುವೆ.

ಕಂಪೌಂಡರ್‌ನಿಂದ ವೈದ್ಯವೃತ್ತಿಯವರೆಗೆ : ಚಿಕ್ಕಮಗಳೂರು ಜಿಲ್ಲೆಯ ಬೆಳವಾಡಿ ಗ್ರಾಮದಲ್ಲಿ ಜನಿಸಿದ(28.3.1956) ಡಾ| ಬೆಳವಾಡಿ ತಿಪ್ಪೇಸ್ವಾಮಿ ರುದ್ರೇಶ್ ಅವರು ಬೆಂಗಳೂರಿನ ಹಾನಿಮನ್ ಹೋಮಿಯೋಪತಿಕ್ ಮೆಡಿಕಲ್ ಕಾಲೇಜು ಸೇರಿದಾಗ ಬಂಧುಬಳಗದವರಿಗೆ ಅಸಮಾಧಾನವಾಗಿತ್ತು. ಇವರೂ ಉಳ್ಳವರಾಗಿದ್ದರೆ ಅಲೋಪತಿ ಕಾಲೇಜು ಸೇರಬಹುದಾಗಿತ್ತು. ಬಡತನದಲ್ಲೇ ವಿದ್ಯಾಭ್ಯಾಸ ಮುಂದುವರಿಸಿದರು. ವಿದ್ಯಾರ್ಥಿದೆಸೆಯಲ್ಲಿ ಇವರಿಗೆ ಒಂದು ಪಾರ್ಟ್‌ಟೈಂ ಕೆಲಸ ಬೇಕಾಗಿತ್ತು. ಆಗ ಅವರಿಗೆ ದಾರಿ ತೋರಿಸಿದ್ದು ಡಿವಿಜಿ ರಸ್ತೆಯಲ್ಲಿರುವ ಡಾ|ವಿವಿ ಕೃಷ್ಣಮೂರ್ತಿಯವರ ಅಶ್ವಿನಿ ಹೋಮಿಯೋ ಕ್ಲಿನಿಕ್. ಅಲ್ಲಿ ಅವರು ಸೇರಿದ್ದು ಕಂಪೌಂಡರ್ ಆಗಿ! ಮಾಸಿಕ ಸಂಬಳ ನೂರು ರೂಪಾಯಿ. ಅಲ್ಲಿಯ ಅನುಭವದ ಬೀಜ ಇಂದು ಅಲ್ಲಿಯೇ ವಿಶಾಲ ವಟವೃಕ್ಷವಾಗಿ ಬೆಳೆದು ನಿಂತಿದೆ. ಡಿಗ್ರಿ ಪಡೆದ ಮೇಲೆ ಮುಂಬಯಿಗೆ ಪ್ರಯಾಣ. ಅಲ್ಲಿಯ ಪ್ರಸಿದ್ಧ ಅಲೋಪತಿ(ಬಚಾಸ್) ಆಸ್ಪತ್ರೆಯಲ್ಲಿ ಎರಡು ವರ್ಷ ಆರ್ಎಂಓ ಕೆಲಸ, ಹೊಸ ಅನುಭವ. ಮತ್ತೆ ಬೆಂಗಳೂರಿಗೆ ಬಂದು ಡಾ| ಕೃಷ್ಣಮೂರ್ತಿಯವರ ಬಳಿಯಲ್ಲಿ ಸಹಾಯಕ ವೈದ್ಯನಾಗಿ ಹದಿನಾಲ್ಕು ವರ್ಷ ಅನುಭವ ಸಂಪಾದಿಸಿದರು. ತಾವು ಕಲಿತ ಕಾಲೇಜಿನಲ್ಲಿ ಆರು ವರ್ಷ ಪ್ರಾಧ್ಯಾಪಕರಾಗಿ ದುಡಿದರು.

ಎಲ್ಲ ರೋಗಗಳಿಗೆ ಚಿಕಿತ್ಸೆ : ಅಶ್ವಿನಿ ಹೋಮಿಯೋ ಕ್ಲಿನಿಕ್' ಇಂದು ರಾಷ್ಟ್ರೀಯ ಮಟ್ಟದ ದೊಡ್ಡ ಆಸ್ಪತ್ರೆಯಾಗಿ ಬೆಳೆದಿದೆ. ಅಲ್ಲಿ ಚಿಕಿತ್ಸೆ ಪಡೆಯಬೇಕಾದರೆ ಎರಡು ತಿಂಗಳು ಕಾಯಬೇಕು. ಡಾ| ರುದ್ರೇಶ್‌ರ ಬಳಿ ಆರು ಮಹಿಳಾ ಡಾಕ್ಟರರು ಸಹಾಯಕ್ಕಿದ್ದಾರೆ. ದಿನದಲ್ಲಿ 250 ರಿಂದ 300 ಜನ ರೋಗಿಗಳ ಚಿಕಿತ್ಸೆ ನಡೆಯುತ್ತದೆ. ಹಾಗೆ ದುಡ್ಡು ಗಳಿಸಲು ಹೊರಟಿದ್ದರೆ ಅವರೂ ಮಹಲಿನ ಮೇಲೆ ಮಹಲು ಕಟ್ಟಬಹುದಾಗಿತ್ತು. ಬಡವರಿಗೆ, ಕೂಲಿಯವರಿಗೆ, ಸನ್ಯಾಸಿಗಳಿಗೆ, ಸಮಾಜಸೇವಕರಿಗೆ, ಧರ್ಮಪ್ರಚಾರಕರಿಗೆ ಉಚಿತವಾಗಿ ಚಿಕಿತ್ಸೆ ಮಾಡುವ ಹೆಗ್ಗಳಿಗೆ ಇವರದು. ನೆಗಡಿಯಿಂದ ಕ್ಯಾನ್ಸರ್‌ವರೆಗೆ ಇಲ್ಲಿ ಮದ್ದು ಕೊಡಲಾಗುತ್ತದೆ. ಡಯಾಬಿಟಿಸ್, ಹೈಪರ್ಟೆನ್ಶನ್, ಅಸ್ತಮಾ, ಅಲರ್ಜಿ ತೊಂದರೆಗಳಿಗೆ ಪರಿಹಾರ ನೀಡುತ್ತಾರೆ. ಇವರಿಗೆ ಅತ್ಯಧಿಕ ಪ್ರಸಿದ್ಧಿ ತಂದುಕೊಟ್ಟದ್ದು ಸಂತಾನಹೀನರಿಗೆ ನೀಡುವ ವಿಶೇಷ ಚಿಕಿತ್ಸೆ. ಎಲ್ಲ ದಾರಿಗಳು ಮುಚ್ಚಿದಾಗ ಒಂದು ಸಾವಿರ ಅಪತ್ಯಹೀನ ದಂಪತಿಗಳಿಗೆ ಸಂತಾನಭಾಗ್ಯ ಪಡೆಯಲು ಸಹಾಯ ಮಾಡಿದ ವೈದ್ಯರಿವರು. ಇದೊಂದು ರಾಷ್ಟ್ರೀಯ ವಿಕ್ರಮ.

ಡಾ| ರುದ್ರೇಶರು ಉಪನ್ಯಾಸಕರು ಅಷ್ಟೆ ಅಲ್ಲ, ಒಳ್ಳೆಯ ಲೇಖಕರು ಕೂಡ. ಹೂವಿನ ಕಂಪು ಹರಡಿಸಲು ಗಂಧವಾಹಕ ಗಾಳಿ ಬೇಕಾದಂತೆ ಯಾವುದೇ ಒಳ್ಳೆಯ ಕೆಲಸಕ್ಕೆ ಪ್ರಚಾರ ಬೇಕಾಗುತ್ತದೆ. ಈ ಕಾಲದಲ್ಲಿ ಪತ್ರಿಕೆಗಳು ದೂರದರ್ಶನ ಒಳ್ಳೆಯ ಪ್ರಚಾರ ನೀಡುತ್ತವೆ. ರೋಗ ಪರಿಹಾರದ ಹೊಸ ಮಾರ್ಗ ಹಾಗೂ ತಾವು ಪಡೆದ ಆವಿಷ್ಕಾರಗಳ ಬಗ್ಗೆ ಸ್ವಾನುಭವದ ಲೇಖನಗಳನ್ನು ಅಂಕಣಗಳ ಮೂಲಕ ವಾಚಕರಲ್ಲಿ ರುದ್ರೇಶ್ ಹಂಚಿಕೊಂಡಿದ್ದಾರೆ. ಪ್ರಜಾವಾಣಿ, ತರಂಗ, ಕನ್ನಡಪ್ರಭ, ವಿಜಯ ಕರ್ಣಾಟಕ ಮೊದಲಾದ ಪತ್ರಿಕೆಗಳಿಗೆ ಅಂಕಣ ಲೇಖನ ಬರೆದಿದ್ದಾರೆ. ರೇಡಿಯೋದಲ್ಲಿ ಭಾಷಣ ಮಾಡಿದ್ದಾರೆ. ದೂರದರ್ಶನದಲ್ಲಿ ವಿಶೇಷ ಕಾರ್ಯಕ್ರಮ ನೀಡಿ ಹೋಮಿಯೋಪತಿಯ ಬಗ್ಗೆ ಜನ ಮಾನಸದಲ್ಲಿ ಗೌರವಾದರ ಮೂಡುವಂತೆ ಮಾಡಿದ್ದಾರೆ. ಹೆಚ್ಚು ವೆಚ್ಚವಿಲ್ಲದ, ಪಾರ್ಶ್ವಪರಿಣಾಮಗಳಿಲ್ಲದ, ಈ ಔಷಧಪದ್ಧತಿ ಮಾನವಕೋಟಿಗೆ ಒಂದು ವರವಾಗಿ ಹೇಗೆ ಪರಿಣಮಿಸಿದೆ ಎಂಬುದನ್ನು ಇವರು ತರ್ಕಬದ್ಧ, ವೈಜ್ಞಾನಿಕ, ಪ್ರಾಯೋಗಿಕ ಲೇಖನಗಳಿಂದ ಬಿಂಬಿಸಿದ್ದಾರೆ. ಇವರ ಬರವಣಿಗೆ ಕನ್ನಡಕ್ಕೆ ಮಾತ್ರ ಸೀಮಿತವಾಗಿ ಉಳಿಯಲಿಲ್ಲ. ಇವರು ಡೆಕ್ಕನ್ ಹೆರಾಲ್ಡ್ ಪತ್ರಿಕೆಯಲ್ಲಿ ಹೀಲಿಂಗ ಟಚ್' ಎಂಬ ಅಂಕಣವನ್ನು ಬರೆದು ಹೆಚ್ಚು ಕಲಿತ ವರ್ಗವನ್ನೂ ತಲುಪಿದ್ದಾರೆ.

ಆಧುನಿಕ ಅಶ್ವಿನಿ ದೇವತೆ : ಇವರ ಇನ್ನೊಂದು ದಿಟ್ಟ ಹಾಗೂ ಅಪೂರ್ವ ಹೆಜ್ಜೆ, ಸಾಧನೆ, ಎಂದರೆ ಸಾಕ್ಷ್ಯಚಿತ್ರಗಳ ನಿರ್ಮಾಣದಲ್ಲಿ ತೊಡಗಿದ್ದು. ಆರು ಸಾಕ್ಷಿ ಚಿತ್ರಗಳ ಪರಿಕಲ್ಪನೆ, ಸಂಶೋಧನೆ, ತಾಂತ್ರಿಕ ನಿರ್ದೇಶನ ಹಾಗೂ ನಿರ್ಮಾಣದಲ್ಲಿ ತಮ್ಮನ್ನೇ ತೊಡಗಿಸಿಕೊಂಡಿದ್ದಾರೆ. ದಿನಕ್ಕೆ 300 ರೋಗಿಗಳ ತಪಾಸಣೆ ನಡೆಸುವ ಅತ್ಯಂತ ಹೆಚ್ಚು ಕಾರ್ಯನಿರತ ಡಾಕ್ಟರರೊಬ್ಬರು ಇಂತಹ ಹವ್ಯಾಸಗಳಲ್ಲಿ ತೊಡಗಿದ್ದು ಆನಂದಾಶ್ಚರ್ಯಗಳನ್ನು ಉಂಟುಮಾಡುವಂತಹುದು. ಒಂದರ್ಥದಲ್ಲಿ ಇವರು ಕಾಯಕವೇ ಕೈಲಾಸ' ಎಂಬ ತತ್ವದಲ್ಲಿ ವಿಶ್ವಾಸ ಇಟ್ಟವರು. ಇವರಿಗೆ ವೃತ್ತಿ ಪ್ರವೃತ್ತಿ ಎರಡೂ ಒಂದೇ. ದಿನಕರ್ಮ ಕರ್ಮಯೋಗವಾಗಿದೆ. ಸಹಸ್ರಾರು ಬಂಜೆ ಮಹಿಳೆಯರ ಮಡಿಲ'ಲ್ಲಿ ಸಂತಾನ ಭಾಗ್ಯ ಕಲ್ಪಿಸಿ ಕೊಟ್ಟ ಆಧುನಿಕ ಅಶ್ವಿನಿ' ದೇವತೆ ಇವರಾಗಿದ್ದಾರೆ. ಅದಕ್ಕೆಂದೇ ಇವರ ಕ್ಲಿನಿಕ್ ಅಶ್ವಿನಿ', ಮನೆ ಮಡಿಲು' ಎಂಬ ಅನ್ವರ್ಥಕನಾಮ ಪಡೆದಿವೆ. ಇವರು ನಿರ್ಮಿಸಿದ ಸಾಕ್ಷಿಚಿತ್ರಗಳು: ಹನಿಮನ್ ಹಾಗೂ ಹೋಮಿಯೋಪತಿ'(1992), ಮಾನವೀಯ ಆರೈಕೆಯಲ್ಲಿ ಮೈಲಿಕಲ್ಲು - ಹೋಮಿಯೋಪತಿ'(1996), ಮಹಾಚೇತನ ಹಾನಿಮನ್'(1997). ಇವರ ಸಾಕ್ಷಿಚಿತ್ರ ಇನ್‌ಫರ್ಟಿಲಿಟಿ ಅಂಡ್ ಹೋಮಿಯೋಪತಿ'(2003) ದೂರದರ್ಶನದ ಅಂತಾರಾಷ್ಟ್ರೀಯ ವಾಹಿನಿಗಾಗಿ ಸಿದ್ಧಪಡಿಸಲಾಗಿತ್ತು.

ಇವರು ರಾಜ್ಯಮಟ್ಟದ ವೈಜ್ಞಾನಿಕ ಕಾರ್ಯಾಗಾರಗಳಲ್ಲಿ ಕೆಮ್ಮಿನಿಂದ ಕ್ಯಾನ್ಸರ್‌ವರೆಗೆ ಪ್ರಬಂಧ ಮಂಡಿಸಿದ್ದಾರೆ. 1999ರಲ್ಲಿ ದೆಹಲಿಯಲ್ಲಿ ನಡೆದ ಡ್ರಾಪ್ಸಿ' ಪ್ರಕರಣಕ್ಕೆ ಸಹಾಯ ಮಾಡಲು ದೆಹಲಿ ಸರಕಾರದ ಅಹ್ವಾನದ ಮೇರೆಗೆ ತಜ್ಞವೈದ್ಯರಾಗಿ ಕೆಲಸ ಮಾಡಿ ಹೋಮಿಯೋಪತಿಯ ಹಿರಿಮೆ ತೋರಿಸಿದ್ದಾರೆ.

ಅರಸಿಬಂದ ಪ್ರಶಸ್ತಿಗಳು : ಹೋಮಿಯೋಪತಿ ಕ್ಷೇತ್ರದಲ್ಲಿ ರುದ್ರೇಶ್ ಸಲ್ಲಿಸಿರುವ ಸೇವೆಗಾಗಿ ಅನೇಕ ಪ್ರಶಸ್ತಿಗಳು ಅರಸಿಕೊಂಡು ಬಂದಿವೆ. ಕರ್ನಾಟಕ ರಾಜ್ಯೋತ್ಸವ ಪಶಸ್ತಿ ಪಡೆದ ಪ್ರಥಮ ಹೋಮಿಯೋಪತಿ ಡಾಕ್ಟರರೆಂಬ ಹೆಗ್ಗಳಿಕೆ ಇವರದಾಗಿದೆ(1996). ಅದಲ್ಲದೆ ಹಾನಿಮನ್ ಚಿನ್ನದ ಪದಕ(1996), ಸಾಹಿತ್ಯಶ್ರೀ ರಾಷ್ಟ್ರೀಯ ಪ್ರಶಸ್ತಿ (1994), ಕೆಂಪೇಗೌಡ ಪ್ರಶಸ್ತಿ(1999) ಮೊದಲಾದವನ್ನು ಪಡೆದಿದ್ದಾರೆ.

2006 ಡಾ| ರುದ್ರೇಶ ಅವರ ಬಾಳಿನಲ್ಲಿ ಮಹತ್ವದ ವರ್ಷ. ಅವರ ಜೀವನದ ಸುವರ್ಣ ವರ್ಷ, ವೃತ್ತಿ ಜೀವನದ ರಜತ ವರ್ಷ. ನೋವು ನೀಗುವ ಕಾಯಕದಲ್ಲಿ ಕಂಡ ಬದುಕು- ಬೆಳಕು' ಪುಸ್ತಕ ಪ್ರಕಟಗೊಂಡಿತು. ಇಲ್ಲಿ ಅವರು ಬರೆದ ಲೇಖನಗಳಿವೆ. ಬೆಳ್ಳಿ ಬೆಳಕು, ಸುವರ್ಣ ಬದುಕು' ಎಂಬ ಪುಸ್ತಕದಲ್ಲಿ ಅವರ ಬಗ್ಗೆ ಬಂದ ಪತ್ರಿಕಾ ವರದಿ ಹಾಗೂ ಲೇಖನಗಳು ಪ್ರಕಟವಾಗಿವೆ. ಅವರ ಜೀವನದಲ್ಲಿಯ ಅವಿಸ್ಮರಣೀಯ ಛಾಯಾಚಿತ್ರಗಳೂ ಇಲ್ಲಿವೆ.

ಇವರು ಕನ್ನಡಿಗರೆಂಬುದೇ ಹೆಮ್ಮೆಯ ವಿಷಯ. ಅವರನ್ನು ಸಂದರ್ಶಿಸುವುದೂ ಒಂದು ಸುಯೋಗವೆಂದೇ ನಾನು ಭಾವಿಸುತ್ತೇನೆ. ಮುಂದಿನ ಸಂಚಿಕೆಯಲ್ಲಿ ರುದ್ರೇಶ್ ಅವರೊಂದಿಗೆ ನಡೆಸಿದ ಸಂದರ್ಶನ ಪ್ರಕಟವಾಗಲಿದೆ.

ಪೂರಕ ಓದಿಗೆ

ಹೋಮಿಯೋಪಥಿ ಲೇಖನ ಮಾಲಿಕೆಗೆ ಪತ್ರಗಳ ಮಹಾಪೂರ
ಹೋಮಿಯೋಪತಿ ಸಾಧಕ ಡಾ| ಎಂ.ಬಿ.ರಹಾಳಕರ್
ಶಸ್ತ್ರಚಿಕಿತ್ಸೆ ಬೇಡವೆಂದರೆ ಹೋಮಿಯೋಪಥಿಗೆ ಶರಣಾಗಿ
ಪರ್ಯಾಯ ಚಿಕಿತ್ಸೆ ಮತ್ತು ಹೋಮಿಯೋಪತಿ(1)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X